More

    ಸಮಗ್ರ ನೀರಾವರಿಗಾಗಿ ಶೀಘ್ರ ಸಿಎಂ ಬಳಿ ನಿಯೋಗ: ಶಾಸಕ ಬಿ. ದೇವೇಂದ್ರಪ್ಪ ಭರವಸೆ

    ಜಗಳೂರು: ಕ್ಷೇತ್ರದ ಸಮಗ್ರ ನೀರಾವರಿಗೆ ಅಧಿಕಾರ ತ್ಯಾಗ ಮಾಡಲು ಸಿದ್ಧ. ಚುನಾವಣೆಯ ಮುಗಿದ ನಂತರ ಪಕ್ಷತೀತವಾಗಿ ತಾಲೂಕಿನಿಂದ ನಿಯೋಗ ಕರೆದೊಯ್ದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದಾಗಿ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಭರವಸೆ ನೀಡಿದರು.

    ಪಟ್ಟಣದಲ್ಲಿ ಜಗಳೂರು ಬಂದ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾನುವಾರ ಕರೆದಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ನೀರಾವರಿಗಾಗಿ ಹೋರಾಟ ಸಮಿತಿ ನಿರಂತರವಾಗಿ ಸರ್ಕಾರಗಳನ್ನು ಎಚ್ಚರಿಸುತ್ತಾ ಬಂದಿದೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೇ ಸ್ವಯಂಪ್ರೇರಿತ ಶಾಂತಿಯುತ ಬಂದ್ ಮಾಡಿರುವುದು ಶ್ಲಾಘನೀಯ ಎಂದರು.

    ಶಾಸಕನಾದ ನಂತರ ಮೊದಲ ಬಾರಿ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಸಿಕ್ಕಾಗ ಮೊದಲು 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ದನಿ ಎತ್ತಿದ್ದರಿಂದ ಕಾಮಗಾರಿ ಚುರುಕುಗೊಂಡಿದೆ. ಬಹುತೇಕ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಈ ಭಾರಿ ವರ್ಷಧಾರೆ ಹರಿದರೆ ಎಲ್ಲ ಕೆರೆಗಳಿಗೆ ನೀರು ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಾಷ್ಟ್ರೀಯ ಯೋಜನೆಯಿಂದ ವಂಚಿತ:

    ತಾಲೂಕು ಸೇರಿದಂತೆ ವಿವಿಧ ತಾಲೂಕನ್ನು ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಿದೆ ಎಂದು ಕೇಂದ್ರ ಸರ್ಕಾರ ಚುನಾವಣೆ ಮುನ್ನ ಘೋಷಣೆ ಮಾಡಿ ಅಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಸಿಹಿ ಹಂಚಿ ಸಂಭ್ರಮಿಸಿದ್ದರು. ಚಿತ್ರದುರ್ಗದ ಕೇಂದ್ರ ಸಚಿವ ನಾರಾಯಣಸ್ವಾಮಿ ಕೂಡ 5300 ಕೋಟಿ ರೂ. ಬಿಡುಗಡೆಯಾಗುತ್ತದೆ ಎಂದು ಭರವಸೆ ನೀಡಿ ನಂತರ ತಾಂತ್ರಿಕ ತೊಂದರೆಯಾಗಿದೆ ಎಂದು ಜನರಿಗೆ ತಪ್ಪು ಸಂದೇಶ ನೀಡಿದ್ದರು. ಕೇಂದ್ರ ಸರ್ಕಾರದ ತಪ್ಪು ನಿರ್ಧಾರದಿಂದ ಜಗಳೂರು ಈ ಯೋಜನೆಯಿಂದ ವಂಚಿತವಾಗಿದೆ ಎಂದು ದೂರಿದರು.

    ರಾಜ್ಯದಲ್ಲಿ ಬಿಜೆಪಿಯಿಂದ 26 ಸಂಸದರು, ಕಾಂಗ್ರೆಸ್ಸಿನ ಇಬ್ಬರು ಸಂಸದರು ಆಯ್ಕೆಯಾಗಿದ್ದರು ಕೂಡ ಒಬ್ಬರೂ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಧ್ವನಿ ಎತ್ತಿಲ್ಲ ಎಂದರು.

    ಹೋರಾಟಗಾರ ದೊಣೆಹಳ್ಳಿ ಗುರುಮೂರ್ತಿ ಮಾತನಾಡಿ, ನೀರಾವರಿ ಯೋಜನೆ ಪಡೆಯಲು ಹೋರಾಟ, ಚಳವಳಿಯಿಂದ ಮಾತ್ರ ಸಾಧ್ಯ. ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ಗ್ರಾಮಗಳಿಂದ ಮಂಡಲ್ ಸಮಿತಿ ರಚನೆ ಮಾಡಿ ಹಳ್ಳಿ ಹಳ್ಳಿಗಳಿಂದ ಸಂಘಟಿಸಿ, ಹೋರಾಟ ನಿರಂತರವಾಗಿ ನಡೆಸಲಾಗುವುದು ಎಂದರು.

    ಭದ್ರಾ ಮೇಲ್ದಂಡೆ ಹೋರಾಟಗಾರ ಯಾದವರೆಡ್ಡಿ ಮಾತನಾಡಿ, ರಾಜಕಾರಣಿಗಳ ಇಚ್ಛಾಶಕ್ತಿಯಿಂದ ಉತ್ತರ ಕರ್ನಾಟಕದಲ್ಲಿ 37 ಸಾವಿರ ಎಕರೆ ಪ್ರದೇಶ ನೀರಾವರಿಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ 11 ಸಾವಿರ ಎಕರೆ ನೀರಾವರಿಯಾಗಿದೆ. ಆದರೆ, ಮಧ್ಯಕರ್ನಾಟಕದಲ್ಲಿ ನೀರಾವರಿ ಯೋಜನೆಗಳಿಗೆ ಚಾಲನೆ ಸಿಗದಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.

    ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್, ಕೆ.ಪಿ. ಪಾಲಯ್ಯ, ಬಿ.ಟಿ. ತಿಮ್ಮಾರೆಡ್ಡಿ, ತಿಪ್ಪೇಸ್ವಾಮಿ, ಪ್ರಾಚಾರ್ಯ ನಾಗಲಿಂಗಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಭದ್ರಾ ಮೇಲ್ದಂಡೆ ಯೋಜನೆ ತಾಲೂಕು ಕಾರ್ಯದರ್ಶಿ ಆರ್. ಓಬಳೇಶ್, ಬಿ. ಮಹೇಶ್ವರಪ್ಪ, ಇಂದಿರಮ್ಮ,ಷಂಶುದ್ಧೀನ್, ಸತ್ಯಮೂರ್ತಿ, ಮಹಾಲಿಂಗಪ್ಪ, ಜೀವಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts