More

    ‘ಇಂಜುರಿ’ ಪ್ರೀಮಿಯರ್​ ಲೀಗ್​! ಶ್ರೀಮಂತ ಟಿ20 ಟೂರ್ನಿಗೆ ಮುನ್ನ ಕಾಡುತ್ತಿದೆ ಗಾಯ

    ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿ ಇಂಡಿಯನ್​ ಪ್ರೀಮಿಯರ್​ ಲೀಗ್​ನ (ಐಪಿಎಲ್​) 16ನೇ ಆವೃತ್ತಿಗೆ ವೇದಿಕೆ ಸಜ್ಜಾಗುತ್ತಿದೆ. ಆದರೆ ಇದರ ನಡುವೆ ಐಪಿಎಲ್​ನ ವಿಸ್ತ್ರತ ರೂಪ “ಇಂಜುರಿ ಪ್ರೀಮಿಯರ್​ ಲೀಗ್​” ಇರಬಹುದೇ ಎಂದು ಅನುಮಾನ ಮೂಡಿಸುವಷ್ಟು ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಹುತೇಕ ತಂಡಗಳ ಪ್ರಮುಖ ಆಟಗಾರರೇ ಗಾಯದಿಂದ ಬಳಲುತ್ತಿದ್ದಾರೆ. ಈಗಾಗಲೆ ಕೆಲವರು ಗಾಯದಿಂದಾಗಿ ಸಂಪೂರ್ಣ ಟೂರ್ನಿ ತಪ್ಪಿಸಿಕೊಳ್ಳುವುದು ಖಚಿತವಾಗಿದ್ದರೆ, ಇನ್ನು ಕೆಲವರು ಟೂರ್ನಿಯಲ್ಲಿ ಆಡುವ ಬಗ್ಗೆ ಅನುಮಾನಗಳಿವೆ. ಒಟ್ಟಾರೆ ಗಾಯದ ಸಮಸ್ಯೆ ಕೆಲ ತಂಡಗಳ ಲೆಕ್ಕಾಚಾರ ಬದಲಾಯಿಸಿದೆ.

    ಜಸ್​ಪ್ರೀತ್​ ಬುಮ್ರಾ (ಮುಂಬೈ ಇಂಡಿಯನ್ಸ್​)

    ಕಳೆದ ವರ್ಷ ಸೆಪ್ಟೆಂಬರ್​ನಿಂದ ಟೀಮ್​ ಇಂಡಿಯಾಗೆ ಅಲಭ್ಯರಾಗಿರುವ ವೇಗಿ ಜಸ್​ಪ್ರೀತ್​ ಬುಮ್ರಾ, ಬೆನ್ನುನೋವಿನ ಶಸ್ತ್ರಚಿಕಿತ್ಸೆಯಿಂದಾಗಿ ಸಂಪೂರ್ಣ ಐಪಿಎಲ್​ ತಪ್ಪಿಸಿಕೊಳ್ಳಲಿದ್ದಾರೆ. ಇದರಿಂದ ಮುಂಬೈ ದೊಡ್ಡ ಹೊಡೆತ ಎದುರಿಸಿದೆ. ಮತ್ತೋರ್ವ ವೇಗಿ ಆಸ್ಟ್ರೆಲಿಯಾದ ಜೇ ರಿಚರ್ಡ್​ ಸನ್​ ಕೂಡ ಮುಂಬೈಗೆ ಅಲಭ್ಯರಾಗಿದ್ದಾರೆ. ಇವರಿಬ್ಬರ ಸ್ಥಾನಕ್ಕೆ ಮುಂಬೈ ಬದಲಿ ಆಟಗಾರರನ್ನು ಇನ್ನಷ್ಟೇ ಹೆಸರಿಸಬೇಕಾಗಿದೆ.

    ಪ್ರಸಿದ್ಧ ಕೃಷ್ಣ (ರಾಜಸ್ಥಾನ ರಾಯಲ್ಸ್​)

    ಯುವ ವೇಗಿ ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣ ಕಳೆದ ಕೆಲ ಸಮಯದಿಂದ ಕ್ರಿಕೆಟ್​ನಿಂದ ಸಂಪೂರ್ಣ ದೂರವಿದ್ದಾರೆ. ಬೆನ್ನು ನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣ, ಐಪಿಎಲ್​ನಲ್ಲೂ ವಾಪಸಾತಿ ಕಾಣುತ್ತಿಲ್ಲ. ಅವರ ಬದಲು, ಕಳೆದ ಹರಾಜಿನಲ್ಲಿ ಮಾರಾಟವಾಗದ ಅನುಭವಿ ವೇಗಿ ಸಂದೀಪ್​ ಶರ್ಮ ಮೂಲಬೆಲೆ 50 ಲಕ್ಷ ರೂ.ಗೆ ರಾಜಸ್ಥಾನ ರಾಯಲ್ಸ್​ ತಂಡ ಸೇರಿಕೊಂಡಿದ್ದಾರೆ. ಸಂದೀಪ್​ 10 ಐಪಿಎಲ್​ ಆವೃತ್ತಿಗಳಲ್ಲಿ ಆಡಿ 100ಕ್ಕೂ ಅಧಿಕ ವಿಕೆಟ್​ ಕಬಳಿಸಿದ ಅನುಭವ ಹೊಂದಿದ್ದಾರೆ. ವಿಂಡೀಸ್​ ಆಟಗಾರ ಒಬೆಡ್​ ಮೆಕ್​ಕಾಯ್​ ಕೂಡ ಗಾಯದಿಂದಾಗಿ ರಾಯಲ್ಸ್​ಗೆ ಲಭ್ಯರಾಗುವುದು ಅನುಮಾನವೆನಿಸಿದೆ.

    ಶ್ರೇಯಸ್​ ಅಯ್ಯರ್​ (ಕೆಕೆಆರ್​)

    ಕೆಕೆಆರ್​ ತಂಡಕ್ಕೆ ನಾಯಕ ಶ್ರೇಯಸ್​ ಅಯ್ಯರ್​ ಲಭ್ಯತೆ ಇನ್ನೂ ಗೊಂದಲದಲ್ಲಿದೆ. ಬೆನ್ನುನೋವು ಮರುಕಳಿಸಿದ ಕಾರಣ ಆಸೀಸ್​ ವಿರುದ್ಧ ಟೆಸ್ಟ್​ ಸರಣಿಯಿಂದ ಹೊರಬಿದ್ದ ಶ್ರೇಯಸ್​, ಐಪಿಎಲ್​ ಮೊದಲಾ ರ್ಧಕ್ಕೆ ಅಲಭ್ಯರಾಗಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದರೆ ಸಂಪೂರ್ಣ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ. ಅವರ ಬದಲಿಗೆ ಕೆಕೆಆರ್​, ನಿತೀಶ್​ ರಾಣಾರನ್ನು ಹಂಗಾಮಿ ನಾಯಕರನ್ನಾಗಿ ನೇಮಿಸಿದೆ.

    ರಿಷಭ್​ ಪಂತ್​ (ಡೆಲ್ಲಿ ಕ್ಯಾಪಿಟಲ್ಸ್​)

    ಕಳೆದ ವರ್ಷದ ಕೊನೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದರೂ, ಗಂಭೀರ ಗಾಯಗೊಂಡಿರುವ ಕಾರಣ ರಿಷಭ್​ ಪಂತ್​ ಸಂಪೂರ್ಣ ಟೂರ್ನಿ ತಪ್ಪಿಸಿಕೊಳ್ಳಲಿದ್ದಾರೆ. ಇದರಿಂದಾಗಿ ಡೆಲ್ಲಿ ತಂಡ ಈಗಾಗಲೆ ಡೇವಿಡ್​ ವಾರ್ನರ್​ರನ್ನು ಹಂಗಾಮಿ ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರೂ, ಪಂತ್​ ಸ್ಥಾನಕ್ಕೆ ಸೂಕ್ತ ಬದಲಿ ವಿಕೆಟ್​ ಕೀಪರ್​ಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ.

    ಜಾನಿ ಬೇರ್​ಸ್ಟೋ (ಪಂಜಾಬ್​ ಕಿಂಗ್ಸ್​)

    ಭರ್ಜರಿ ಬ್ಯಾಟಿಂಗ್​ ಫಾಮ್​ರ್ನಲ್ಲಿದ್ದ ನಡುವೆ ಕಳೆದ ವರ್ಷ ಗಾಲ್ಫ್​ ಆಟದ ವೇಳೆ ಕಾಲಿಗೆ ಆದ ಗಾಯದಿಂದ ಇನ್ನೂ ಸಂಪೂರ್ಣ ಚೇತರಿಕೆ ಕಾಣದ ಕಾರಣ ಬ್ಯಾಟರ್​ ಜಾನಿ ಬೇರ್​ಸ್ಟೋಗೆ ಎನ್​ಒಸಿ ನೀಡಲು ಇಂಗ್ಲೆಂಡ್​ ನಿರಾಕರಿಸಿದೆ. ಅವರ ಬದಲಿಗೆ ಬಿಗ್​ ಬಾಷ್​ ಲೀಗ್​ನಲ್ಲಿ ಮಿಂಚಿದ್ದ ಆಸೀಸ್​ ಆಲ್ರೌಂಡರ್​ ಮ್ಯಾಥ್ಯೂ ಶಾರ್ಟ್​ರನ್ನು ಪಂಜಾಬ್​ ಕಿಂಗ್ಸ್​ ತಂಡಕ್ಕೆ ಸೇರಿಸಲಾಗಿದೆ.

    ರಜತ್​ ಪಾಟಿದಾರ್​ (ಆರ್​ಸಿಬಿ)

    ಕಳೆದ ವರ್ಷ ಎಲಿಮಿನೇಟರ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಆರ್​ಸಿಬಿ ಬ್ಯಾಟರ್​ ರಜತ್​ ಪಾಟಿದಾರ್​ ಟೂರ್ನಿಯ ಮೊದಲಾರ್ಧಕ್ಕೆ ಅಲಭ್ಯರಾಗುವ ಸಾಧ್ಯತೆಗಳಿವೆ. ಆಸೀಸ್​ ವೇಗಿ ಜೋಶ್​ ಹ್ಯಾಸಲ್​ವುಡ್​ ಕೂಡ ಆರ್​ಸಿಬಿಗೆ ಲಭ್ಯರಾಗುವುದು ಅನುಮಾನವೆನಿಸಿದೆ. ಕಳೆದ ಹರಾಜಿನಲ್ಲಿ 3.20 ಕೋಟಿ ರೂ.ಗೆ ಆರ್​ಸಿಬಿ ತಂಡ ಸೇರಿದ್ದ ಇಂಗ್ಲೆಂಡ್​ ಬ್ಯಾಟರ್​ ವಿಲ್​ ಜಾಕ್ಸ್​ ಗಾಯದಿಂದಾಗಿ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ನ್ಯೂಜಿಲೆಂಡ್​ ಆಲ್ರೌಂಡರ್​ ಮೈಕೆಲ್​ ಬ್ರೇಸ್​ವೆಲ್​ ಆರ್​ಸಿಬಿ ತಂಡ ಸೇರಿಕೊಂಡಿದ್ದಾರೆ.

    ಕೈಲ್​ ಜೇಮಿಸಲ್​ (ಸಿಎಸ್​ಕೆ)

    ನ್ಯೂಜಿಲೆಂಡ್​ ವೇಗಿ ಕೈಲ್​ ಜೇಮಿಸನ್​ರನ್ನು ಕಳೆದ ಹರಾಜಿನಲ್ಲಿ ಸಿಎಸ್​ಕೆ <1 ಕೋಟಿಗೆ ಖರೀದಿಸಿತ್ತು. ಆದರೆ ತಂಡ ಸೇರಿಕೊಳ್ಳುವ ಮೊದಲೇ ಜೇಮಿಸನ್​ ಗಾಯದಿಂದಾಗಿ ಹೊರ ಬಿದ್ದಿದ್ದಾರೆ. ಅವರ ಬದಲಿಗೆ ದಣ ಆಫ್ರಿಕಾದ ಸಿಸಂಡ ಮಗಲಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇನ್ನು ದೇಶೀಯ ಎಡಗೈ ವೇಗಿ ಮುಕೇಶ್​ ಚೌಧರಿ ಕೂಡ ಗಾಯದಿಂದಾಗಿ ಸಿಎಸ್​ಕೆಗೆ ಲಭ್ಯರಾಗುವುದು ಅನುಮಾನವೆನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts