More

    ಕ್ಯಾಪ್ಟನ್ಸ್ ಚಾಲೆಂಜ್; ಐಪಿಎಲ್‌ನಲ್ಲಿ ನಾಯಕರ ಮುಂದಿವೆ ಹೊಸ ಸವಾಲುಗಳು…

    ಬೆಂಗಳೂರು: ಈ ಸಲದ ಐಪಿಎಲ್ 15ನೇ ಆವೃತ್ತಿ ಸಾಕಷ್ಟು ಹೊಸತನಗಳಿಂದ ಕೂಡಿದೆ. 2 ಹೊಸ ತಂಡ, ಹೊಸ ಸ್ವರೂಪ, ಹೊಸ ನಿಯಮಾವಳಿಗಳ ಜತೆಗೆ ಕೆಲ ಹೊಸ ನಾಯಕರೂ ಕಣಕ್ಕಿಳಿಯಲಿದ್ದು, ಹೊಸ ಸವಾಲುಗಳನ್ನೂ ಎದುರಿಸಲಿದ್ದಾರೆ. ಐಪಿಎಲ್‌ನಲ್ಲಿ ಮೊದಲ ಬಾರಿಗೆ ಇಬ್ಬರು ಕನ್ನಡಿಗರು (ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್) ನಾಯಕತ್ವ ನಿರ್ವಹಿಸಲಿದ್ದಾರೆ. ಕೆಲವರು ಹಿಂದೆ ನಾಯಕರಾಗಿದ್ದರೂ, ಅವರು ಮುನ್ನಡೆಸುವ ತಂಡಗಳು ಬದಲಾಗಿವೆ. ಈ ಬಾರಿ ಹಳೆ-ಹೊಸ ನಾಯಕರು ಎದುರಿಸುತ್ತಿರುವ ಸವಾಲುಗಳ ಸಂಕ್ಷಿಪ್ತ ವಿವರ ಇಲ್ಲಿದೆ.

    ಎಂಎಸ್ ಧೋನಿ (ಚೆನ್ನೈ ಸೂಪರ್‌ಕಿಂಗ್ಸ್)
    ಭಾರತೀಯ ಕ್ರಿಕೆಟ್ ಮತ್ತು ಐಪಿಎಲ್ ಇತಿಹಾಸದ ಯಶಸ್ವಿ ನಾಯಕರಲ್ಲೊಬ್ಬರು. ಮೊದಲ ಆವೃತ್ತಿಯಿಂದಲೂ ನಾಯಕರಾಗಿರುವ ಏಕೈಕ ಆಟಗಾರ. ಬಹುಶಃ ಇದೇ ಅವರಿಗೆ ಕೊನೇ ಐಪಿಎಲ್ ಟೂರ್ನಿಯಾದರೂ ಅಚ್ಚರಿ ಇಲ್ಲ. ಹೀಗಾಗಿ, ತಂಡದ ಭವಿಷ್ಯದ ನಾಯಕ ಎನಿಸಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಮುಂಬರುವ ಆವೃತ್ತಿಗಳಿಗೆ ಪಳಗಿಸುವ ಸವಾಲು ಧೋನಿ ಮುಂದಿದೆ. ಕಳೆದ ವರ್ಷ ಗೆದ್ದಿದ್ದ ಪ್ರಶಸ್ತಿ ಉಳಿಸಿಕೊಳ್ಳುವ ಮೂಲಕ 5 ಬಾರಿ ಚಾಂಪಿಯನ್ ಪಟ್ಟವೇರಿದ ಮುಂಬೈ ಸಾಧನೆ ಸರಿಗಟ್ಟುವ ಅವಕಾಶವೂ ಇದೆ.

    ಫಾಫ್​ ಡು ಪ್ಲೆಸಿಸ್ (ಆರ್‌ಸಿಬಿ-ಬೆಂಗಳೂರು)
    ವಿರಾಟ್ ಕೊಹ್ಲಿ ಉತ್ತರಾಧಿಕಾರಿ ಆಗಿರುವ ಪ್ಲೆಸಿಸ್, ‘ಈ ಸಲ ಕಪ್ ನಮ್ದೇ’ ಎಂಬ ಘೋಷವಾಕ್ಯವನ್ನು ನಿಜವಾಗಿಸುವ ಅತಿದೊಡ್ಡ ಸವಾಲು ಹೊಂದಿದ್ದಾರೆ. ಆರ್‌ಸಿಬಿ ತಂಡಕ್ಕೆ ಕಳೆದ 14 ವರ್ಷಗಳಿಂದಲೂ ಕೈಗೆಟುಕದ ಐಪಿಎಲ್ ಕಿರೀಟವನ್ನು ತೊಡಿಸುವ ಹೊಣೆ ಪ್ಲೆಸಿಸ್ ಮೇಲೇರಿದೆ. ರಾಷ್ಟ್ರೀಯ ತಂಡದ ನಾಯಕರಾಗಿ ಉತ್ತಮ ಯಶಸ್ಸನ್ನೇ ಕಂಡಿದ್ದ ಪ್ಲೆಸಿಸ್, ದಕ್ಷಿಣ ಆಫ್ರಿಕಾ ಕಂಡ ಯಶಸ್ವಿ ನಾಯಕ ಗ್ರೇಮ್ ಸ್ಮಿತ್ ಮತ್ತು ಸಿಎಸ್‌ಕೆ ತಂಡದಲ್ಲಿ ಧೋನಿ ನಾಯಕತ್ವದಡಿಯಲ್ಲಿ 10 ವರ್ಷ ಆಡಿದ ಅನುಭವವನ್ನೂ ಹೊಂದಿದ್ದಾರೆ. ಹೀಗಾಗಿ ಆರ್‌ಸಿಬಿ ಫ್ಯಾನ್ಸ್‌ಗೆ ಇವರ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.

    ರೋಹಿತ್ ಶರ್ಮ (ಮುಂಬೈ ಇಂಡಿಯನ್ಸ್)
    ಮುಂಬೈ ಇಂಡಿಯನ್ಸ್ ನಾಯಕರಾಗಿ 5 ಬಾರಿ ಪ್ರಶಸ್ತಿ ಗೆದ್ದುಕೊಟ್ಟ ಬಲದಿಂದಲೇ ಟೀಮ್ ಇಂಡಿಯಾದ ನಾಯಕರಾಗಿಯೂ ಬಡ್ತಿ ಪಡೆದಿರುವ ರೋಹಿತ್ ಶರ್ಮ, ಐಪಿಎಲ್‌ನಲ್ಲೂ ಲಯ ಕಾಯ್ದುಕೊಳ್ಳಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಮುಂಬೈ ತಂಡದ ಪ್ರಮುಖ ಬಲ ಎನಿಸಿದ್ದ ಪಾಂಡ್ಯ ಸಹೋದರರು, ಕ್ವಿಂಟನ್ ಡಿಕಾಕ್, ಟ್ರೆಂಟ್ ಬೌಲ್ಟ್ ಮುಂತಾದ ಆಟಗಾರರು ಈ ಬಾರಿ ಬೇರೆ ತಂಡಗಳಲ್ಲಿದ್ದಾರೆ. ಹೀಗಾಗಿ ಪೊಲ್ಲಾರ್ಡ್, ಇಶಾನ್ ಕಿಶನ್, ಸೂರ್ಯಕುಮಾರ್, ಬುಮ್ರಾ ಹೊರತಾಗಿ ಬಹುತೇಕ ಹೊಸ ಆಟಗಾರರನ್ನೇ ಹೊಂದಿರುವ ತಂಡವನ್ನು ಮತ್ತೆ ಬಲಿಷ್ಠವಾಗಿ ಕಟ್ಟುವ ಸವಾಲಿದೆ.

    ಕೇನ್ ವಿಲಿಯಮ್ಸನ್ (ಸನ್‌ರೈಸರ್ಸ್‌)
    ಫಿಟ್ನೆಸ್ ಸಮಸ್ಯೆಯ ನಡುವೆ ಸನ್‌ರೈಸರ್ಸ್‌ ತಂಡವನ್ನು ಮುನ್ನಡೆಸುವ ಸವಾಲು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೇಲಿದೆ. ವಾರ್ನರ್‌ರನ್ನು ಕೈಬಿಟ್ಟು ತಮಗೆ ಮಣೆ ಹಾಕಿದ್ದಕ್ಕೆ ನ್ಯಾಯವನ್ನು ಸಲ್ಲಿಸಬೇಕಿದೆ ಮತ್ತು ಐಸಿಸಿ ಟೂರ್ನಿಗಳ ಯಶಸ್ಸನ್ನೂ ಐಪಿಎಲ್‌ನಲ್ಲೂ ಕಾಣಬೇಕಿದೆ. ಕಳೆದ ಮೆಗಾ ಹರಾಜಿನಲ್ಲಿ ಸನ್‌ರೈಸರ್ಸ್‌ ಸಮರ್ಥರಲ್ಲದ ಕೆಲ ಆಟಗಾರರ ಮೇಲೆ ಹೆಚ್ಚಿನ ಹಣ ಸುರಿದಿದೆ ಎಂಬ ದೂರಿದೆ. ಹೀಗಾಗಿ ಈ ಆಟಗಾರರಿಂದ ಸೂಕ್ತ ನಿರ್ವಹಣೆ ಹೊರಹೊಮ್ಮಿಸಿ ಟೀಕಾಕಾರರ ಬಾಯಿ ಮುಚ್ಚಿಸಬೇಕಿದೆ.

    ಸಂಜು ಸ್ಯಾಮ್ಸನ್ (ರಾಜಸ್ಥಾನ ರಾಯಲ್ಸ್)
    ನಾಯಕನ ಹೊರತಾಗಿ ರಾಜಸ್ಥಾನ ತಂಡ ಈ ಬಾರಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಅಂದರೆ ತಮ್ಮ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದ ಸವಾಲು ಸಂಜು ಸ್ಯಾಮ್ಸನ್ ಮೇಲಿದೆ. ಅಶ್ವಿನ್, ಬೌಲ್ಟ್, ಚಾಹಲ್ ಅವರಂಥ ಅನುಭವಿಗಳು ಮತ್ತು ಪಡಿಕಲ್, ಪ್ರಸಿದ್ಧಕೃಷ್ಣ, ಪರಾಗ್ ಮುಂತಾದ ಯುವ ಆಟಗಾರರಿಂದ ಕೂಡಿರುವ ತಂಡ ಸಾಕಷ್ಟು ಬಲಿಷ್ಠವಾಗಿಯೇ ಕಾಣಿಸುತ್ತಿದೆ. ಹೀಗಾಗಿ ಸ್ಯಾಮ್ಸನ್ ಮೈದಾನದಲ್ಲಿ ತಂಡದಿಂದ ಯಾವ ರೀತಿಯ ನಿರ್ವಹಣೆ ಹೊರತರುವರು ಎಂಬುದು ಕುತೂಹಲ ಕೆರಳಿಸಿದೆ.

    ಕೆಎಲ್ ರಾಹುಲ್ (ಲಖನೌ ಸೂಪರ್‌ಜೈಂಟ್ಸ್)
    ಕಳೆದೆರಡು ವರ್ಷಗಳಿಂದ ಪಂಜಾಬ್ ಕಿಂಗ್ಸ್ ನಾಯಕರಾಗಿದ್ದರೂ, ತಂಡವನ್ನು ಪ್ಲೇಆಫ್​ ಹಂತಕ್ಕೇರಿಸಲು ವಿಫಲರಾಗಿದ್ದರು. ಈ ಬಾರಿ ಹೊಸ ತಂಡದ ಜವಾಬ್ದಾರಿ ಲಭಿಸಿದೆ. ಟೀಮ್ ಇಂಡಿಯಾದಲ್ಲಿ ಉಪನಾಯಕತ್ವವನ್ನೂ ನಿಭಾಯಿಸುತ್ತಿದ್ದು, ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್, ಏಕದಿನ ತಂಡವನ್ನು ಮುನ್ನಡೆಸುವ ಅವಕಾಶವನ್ನೂ ಪಡೆದಿದ್ದರು. ಆದರೆ ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಭವಿಷ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಪೂರ್ಣಪ್ರಮಾಣದ ನಾಯಕರಾಗಲು ಐಪಿಎಲ್ ನಿರ್ವಹಣೆ ನಿರ್ಣಾಯಕವಾಗಲಿದೆ.

    ಹಾರ್ದಿಕ್ ಪಾಂಡ್ಯ (ಗುಜರಾತ್ ಟೈಟಾನ್ಸ್)
    ಫಿಟ್ನೆಸ್ ಸಮಸ್ಯೆಯಿಂದ ತಾನೇ ವೃತ್ತಿಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಿ, ಟೀಮ್ ಇಂಡಿಯಾದಲ್ಲೂ ಸ್ಥಾನ ಭದ್ರಪಡಿಸಿಕೊಳ್ಳಲಾಗದೆ ಪರದಾಡುತ್ತಿರುವ ಸಮಯದಲ್ಲಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಜವಾಬ್ದಾರಿ ಒಲಿದಿದೆ. ಇದು ಅವರಿಗೆ ವರ ಅಥವಾ ಶಾಪವೂ ಆಗಬಹುದು. ಆಲ್ರೌಂಡರ್ ಸಾಮರ್ಥ್ಯದಿಂದಾಗಿ ‘ಕಪಿಲ್ ದೇವ್’ ಜತೆಗೆ ಹೋಲಿಕೆ ಪಡೆದಿದ್ದ ಪಾಂಡ್ಯ, ನಾಯಕತ್ವದಲ್ಲೂ ದಿಗ್ಗಜನ ನಿರ್ವಹಣೆಯನ್ನೇ ತೋರಿಸುವರೇ ಎಂಬುದನ್ನು ಕಾದುನೋಡಬೇಕಿದೆ. ಇದಲ್ಲದೆ ಐಪಿಎಲ್‌ನಲ್ಲಿ ಅವರು ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ಹೊರತಾದ ತಂಡವನ್ನು ಪ್ರತಿನಿಧಿಸಲಿದ್ದಾರೆ.

    ಮಯಾಂಕ್ ಅಗರ್ವಾಲ್ (ಪಂಜಾಬ್ ಕಿಂಗ್ಸ್)
    ಗೆಳೆಯ ಕೆಎಲ್ ರಾಹುಲ್ ಉತ್ತರಾಧಿಕಾರಿಯಾಗಿರುವ ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ನಾಯಕತ್ವ ಹೊಸ ಸವಾಲು. ಈ ಸಲದ ಐಪಿಎಲ್ ನಾಯಕರಲ್ಲಿ ಪಾಂಡ್ಯ ಜತೆಗೆ ಇವರೂ ಅತ್ಯಂತ ಕಡಿಮೆ ಅನುಭವಿ. ದೇಶೀಯ ಕ್ರಿಕೆಟ್‌ನಲ್ಲೂ ಕರ್ನಾಟಕ ತಂಡವನ್ನು ಮುನ್ನಡೆಸಿದ ಅನುಭವಿಯಲ್ಲ. ಆದರೆ ಕೋಚ್ ಅನಿಲ್ ಕುಂಬ್ಳೆ ಮಾರ್ಗದರ್ಶನದ ಬಲ ಇರುವುದರಿಂದ ಈ ಅನನುಭವ ಹಿನ್ನಡೆಯಾಗದು.

    ಶ್ರೇಯಸ್ ಅಯ್ಯರ್ (ಕೋಲ್ಕತ ನೈಟ್‌ರೈಡರ್ಸ್‌)
    2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿ ತಂಡವನ್ನು ಮೊಟ್ಟಮೊದಲ ಬಾರಿ ಫೈನಲ್‌ಗೇರಿಸುವಲ್ಲಿ ಯಶಸ್ವಿಯಾಗಿದ್ದ ಮುಂಬೈ ಬ್ಯಾಟರ್ ಶ್ರೇಯಸ್ ಅಯ್ಯರ್‌ಗೆ ಕಳೆದ ವರ್ಷದ ಗಾಯದ ಸಮಸ್ಯೆ ನಾಯಕತ್ವ ಕೈತಪ್ಪುವಂತೆ ಮಾಡಿತ್ತು. ಐಪಿಎಲ್‌ನಲ್ಲಿ ನಾಯಕತ್ವದ ಸವಾಲಿನ ತುಡಿತದಿಂದಾಗಿ ಈ ಬಾರಿ ಡೆಲ್ಲಿ ತಂಡದಲ್ಲಿ ರಿಟೇನ್ ಆಗಿರಲಿಲ್ಲ. ಬಳಿಕ ನಾಯಕತ್ವವನ್ನೂ ವಹಿಸಬಲ್ಲ ಆಟಗಾರರಾಗಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಅದರಂತೆ ಹೊಸ ನಾಯಕನ ಹುಡುಕಾಟದಲ್ಲಿದ್ದ ಕೆಕೆಆರ್ ತಂಡ ಶ್ರೇಯಸ್ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಮತ್ತು ನಿರೀಕ್ಷೆಯಂತೆಯೇ ನಾಯಕತ್ವ ವಹಿಸಿದೆ. ಇನ್ನೀಗ ಕೆಕೆಆರ್‌ಗೆ ಗೌತಮ್ ಗಂಭೀರ್ ಕಾಲದ ಯಶಸ್ಸನ್ನು ಮರಳಿ ತಂದುಕೊಡುವ ಸವಾಲು ಶ್ರೇಯಸ್ ಮುಂದಿದೆ.

    ರಿಷಭ್ ಪಂತ್ (ಡೆಲ್ಲಿ ಕ್ಯಾಪಿಟಲ್ಸ್)
    ಟೀಮ್ ಇಂಡಿಯಾದ ಭವಿಷ್ಯ ನಾಯಕ ಎನಿಸುವ ಪೈಪೋಟಿಯಲ್ಲಿರುವ ರಿಷಭ್ ಪಂತ್‌ಗೆ ಐಪಿಎಲ್ ನಿರ್ವಹಣೆ ಚಿಮ್ಮುಹಲಗೆ ಆಗಬಲ್ಲುದು. ಕೆಟ್ಟ ಹೊಡೆತಗಳಿಗೆ ವಿಕೆಟ್ ಕಳೆದುಕೊಳ್ಳುವ ಚಾಳಿಯಿಂದಾಗಿ ಇತ್ತೀಚೆಗೆ ಟೀಮ್ ಇಂಡಿಯಾದ ಉಪನಾಯಕ ಪಟ್ಟದ ರೇಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದರು. ಹೀಗಾಗಿ ನಾಯಕನಾಗಿ ಜವಾಬ್ದಾರಿಯುತ ಆಟ ಆಡಬಲ್ಲೆ ಎಂಬ ಸಂದೇಶವನ್ನು ಪಂತ್ ಸಾರಬೇಕಿದೆ. ಕಳೆದ ಆವೃತ್ತಿಯಲ್ಲಿ ಪಂತ್ ನಾಯಕತ್ವ ಕೌಶಲ ಸಾಕಷ್ಟು ಗಮನ ಸೆಳೆದಿತ್ತು ಮತ್ತು ಮೆಚ್ಚುಗೆಗೂ ಪಾತ್ರವಾಗಿತ್ತು. ಅದನ್ನು ಈ ಬಾರಿ ಅವರು ಇನ್ನಷ್ಟು ಎತ್ತರಕ್ಕೆ ಏರಿಸಬೇಕಿದೆ ಮತ್ತು ಡೆಲ್ಲಿ ತಂಡದ ಚೊಚ್ಚಲ ಪ್ರಶಸ್ತಿ ಕನಸನ್ನೂ ನನಸಾಗಿಸಬೇಕಿದೆ.

    ಜನಪ್ರಿಯ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಐಪಿಎಲ್‌ನಲ್ಲಿ ಪುನರಾಗಮನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts