More

    ಐಪಿಎಲ್​ಗೆ ಶುರುವಾಯಿತು ಸಂಕಷ್ಟ; ಈ ಬಾರಿ ಭಾರತದಲ್ಲಿ ನಡೆಯುವುದು ಡೌಟ್​!

    ನವದೆಹಲಿ: ಇತ್ತೀಚಿಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ-20 ಆಡುತ್ತಿದ್ದು, ಇದಾದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸ ಸೇರಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಿಡುವಿಲ್ಲದ ವೇಳಾಪಟ್ಟಿ ಭಾರತಕ್ಕಿದೆ. ಇದರ ಐಪಿಎಲ್​ಗೆ ಸಿದ್ದತೆ ಆರಂಭಿಸಿರುವ ಬಿಸಿಸಿಐಗೆ ಹೊಸ ತೊಡಕೊಂದು ಎದುರಾಗಿದೆ.

    ಡಿಸೆಂಬರ್ 19 ರಂದು ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇಲ್ಲಿ ಸುಮಾರು 70 ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. ಒಂದು ಅಂದಾಜಿನ ಪ್ರಕಾರ, ಈ 70 ಸ್ಥಾನಗಳನ್ನು ತುಂಬಲು 700 ಕ್ಕೂ ಹೆಚ್ಚು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದಾಗ್ಯೂ, ಶಾರ್ಟ್‌ಲಿಸ್ಟ್ ಮಾಡಿದ ಆಟಗಾರರು ಮಾತ್ರ ಹರಾಜಿಗೆ ಪ್ರವೇಶಿಸಲು ಸಾಧ್ಯ ಎಂದು ಹೇಳಲಾಗಿದೆ.

    ಮಿನಿ ಹರಾಜಿನ ನಡುವೆಯೇ ಐಪಿಎಲ್​ ಬಗ್ಗೆ ಮಹತ್ವದ ಸುದ್ದಿಯೊಂದು ಹೊರಬಿದಿದ್ದು, ಈ ಬಾರಿ ಭಾರತದಲ್ಲಿ ಟೂರ್ನಿ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ಏಕೆಂದರೆ ಮುಂದಿನ ವರ್ಷ ದೇಶದಲ್ಲಿ ಸಾರ್ವತ್ರಿಕ ಚುವಾವಣೆ ನಡೆಯಲಿದ್ದು, ಆಯೋಗ ಚುನಾವಣಾ ದಿನಾಂಕವನ್ನು ಘೋಷಿಸಿದ ಬಳಿಕ ಐಪಿಎಲ್​ ವೇಳಾಪಟ್ಟಿಯ ತಯಾರಿಯನ್ನು ಆರಂಭಿಸಲಿದ್ದಾರೆ.

    ಇದನ್ನೂ ಓದಿ: ಬಾಂಬ್ ಬೆದರಿಕೆ ಪ್ರಕರಣ; ಕಾಂಗ್ರೆಸ್ ಸರ್ಕಾರ ಬಂದ ಆರು ತಿಂಗಳಲ್ಲಿ ಮತಾಂಧರ ಸಂಖ್ಯೆ ಸಹ ಏರಿದೆ ಎಂದ ಬಿಜೆಪಿ

    ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸುವವರೆಗೆ, ಐಪಿಎಲ್ 2024 ಪಂದ್ಯಗಳ ದಿನಾಂಕ, ಸಮಯ ಮತ್ತು ಸ್ಥಳವನ್ನು ದೃಢೀಕರಿಸಲಾಗುವುದಿಲ್ಲ. ಸಾರ್ವತ್ರಿಕ ಚುನಾವಣೆಗೆ ಭದ್ರತೆಯೇ ದೊಡ್ಡ ಸಮಸ್ಯೆಯಾಗಲಿದೆ. ಹಾಗಾಗಿ ಐಪಿಎಲ್ ಭಾರತದಲ್ಲಿ ನಡೆಯಬೇಕೋ ಅಥವಾ ದೇಶದ ಹೊರಗೆ ನಡೆಯಬೇಕೋ ಎಂಬುದನ್ನು ಐಪಿಎಲ್ ಆಡಳಿತ ಮಂಡಳಿ ಸಾರ್ವತ್ರಿಕ ಚುನಾವಣೆಯ ದಿನಾಂಕ ಪಟ್ಟಿ ಸಿದ್ಧಪಡಿಸಿದ ನಂತರವೇ ನಿರ್ಧರಿಸಲಿದೆ.

    ಮಾರ್ಚ್​ ತಿಂಗಳ ಕೊನೆಯ ವಾರದಲ್ಲಿ ಶುರುವಾಗುವ ಐಪಿಎಲ್​ ಮೇ ಅಂತ್ಯದವರೆಗೂ ನಡೆಯಲಿದೆ. ಇದಾದ ಬಳಿಕ ಜೂನ್​ 04ರಿಂದ ವೆಸ್ಟ್​ ಇಂಡೀಸ್​ ಹಾಗೂ ಯುಎಸ್​ಎ ಆತಿಥ್ಯದಲ್ಲಿ ಟಿ-20 ವಿಶ್ವಕಪ್​ ನಡೆಯಲಿದ್ದು, ಆಟಗಾರರು ತಮ್ಮ ರಾಷ್ಟ್ರೀಯ ತಂಡಗಳೊಂದಿಗೆ ಸೇರಲು ಮತ್ತು ಮಹತ್ವದ ಟೂರ್ನಿಗೆ ತಯಾರಾಗಲು ಸಮಯವನ್ನು ಕೇಳುವ ಸಾಧ್ಯತೆ ಇದೆ. ಹೀಗಾಗಿ ನಿಗದಿತ ಅವಧಿಗೂ ಮುನ್ನವೇ ಐಪಿಎಲ್​ ಮುಗಿಸುವ ಗುರಿಯನ್ನು ಬಿಸಿಸಿಐ ಮುಂದಿದ್ದು, ಚುನಾವಣಾ ಆಯೋಗ ಪ್ರಕಟಿಸುವ ದಿನಾಂಕಗಳ ಮೇಲೆ ಐಪಿಎಲ್​ ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts