More

    Web Exclusive | ಮಲೆನಾಡಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್; ಯೋಜನಾ ವೆಚ್ಚ 220ರಿಂದ 384 ಕೋಟಿ ರೂ.ಗೆ ಏರಿಕೆ

    | ಅರವಿಂದ ಅಕ್ಲಾಪುರ ಶಿವಮೊಗ್ಗ

    ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಕೂಲವಾಗುವಂತೆ ನಿರ್ವಿುಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಹೀಗಾಗಿ ಶಿವಮೊಗ್ಗದಲ್ಲಿ ದೇಶದ 35ನೇ ಹಾಗೂ ರಾಜ್ಯದ 3ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುವುದು ನಿಶ್ಚಿತ.

    ಎಟಿಆರ್-72 ಮಾದರಿಯಲ್ಲಿ ಹಗಲು ವೇಳೆಯಲ್ಲಿ ಮಾತ್ರ ಸಂಚರಿಸುವ ವಿಮಾನ ನಿಲ್ದಾಣಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ಏರ್​ಪೋರ್ಟ್ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿತ್ತು. ಈ ಯೋಜನೆಯನ್ನು ಈಗ ಪರಿಷ್ಕರಣೆ ಮಾಡಲಾಗಿದ್ದು, ಹೊಸ ಯೋಜನೆ ಪ್ರಕಾರ ಎಟಿಆರ್-72 ಮಾದರಿ ಬದಲು ಏರ್​ಬಸ್ 320 ವಿಮಾನಗಳು ಲ್ಯಾಂಡ್ ಹಾಗೂ ಟೇಕಾಫ್​ಗೆ ಪೂರಕವಾಗಿ ರನ್​ವೇ ನಿರ್ಮಾಣ ಮಾಡಲಾಗುತ್ತದೆ. ಹೀಗಾಗಿ ರನ್​ವೇ ವಿಸ್ತೀರ್ಣ 2,200 ಮೀಟರ್​ನಿಂದ 3 ಸಾವಿರ ಮೀ.ಗೆ ವಿಸ್ತರಣೆಯಾಗಲಿದೆ.

    ಪ್ಯಾಕೇಜ್-2 ಟೆಂಡರ್ ರದ್ದು

    ಹಿಂದಿನ ಯೋಜನೆ ಪ್ರಕಾರ 2 ಪ್ಯಾಕೇಜ್​ಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಪ್ಯಾಕೇಜ್-1ರಲ್ಲಿ ರನ್​ವೇ ನಿರ್ವಣ, ಕಾಂಪೌಂಡ್, ಸಂಪರ್ಕ ರಸ್ತೆ ನಿರ್ಮಾಣ ಕಾರ್ಯ ಸೇರಿಸಲಾಗಿತ್ತು. ಈ ಕಾಮಗಾರಿಗಳು ಪ್ರಗತಿಯಲ್ಲಿವೆ. 133.02 ಕೋಟಿ ರೂ. ಮೊತ್ತದ ಟೆಂಡರ್ ಕಾಮಗಾರಿ ಪೈಕಿ ಇದುವರೆಗೆ 25.57 ಕೋಟಿ ರೂ. ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ.

    ಯೋಜನೆ ಪರಿಷ್ಕೃತಗೊಂಡ ಕಾರಣ ಈಗಾಗಲೇ ಪೂರ್ಣಗೊಳಿಸಿರುವ ಪ್ಯಾಕೇಜ್-2 ಟೆಂಡರ್​ನ್ನು ಸರ್ಕಾರ ರದ್ದುಗೊಳಿಸಿ ಮರು ಟೆಂಡರ್ ಕರೆಯಲು ನಿರ್ದೇಶನ ನೀಡಿದೆ. ಇದರಲ್ಲಿ ಹೆಚ್ಚುವರಿ ವಿಸ್ತೀರ್ಣಕ್ಕೆ ರನ್​ವೇ, ಟ್ಯಾಕ್ಸಿವೇ, ಏಫ್ರಾನ್​ಗಳನ್ನು ವಿಸ್ತರಿಸಲು ಅನುಕೂಲವಾಗುವಂತೆ 71.87 ಕೋಟಿ ರೂ. ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಆದೇಶಿಸಿದೆ.

    ರಾಜ್ಯದಲ್ಲಿ ಪ್ರಸ್ತುತ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಮಾತ್ರ ಇಂಟರ್ ನ್ಯಾಷನಲ್ ಏರ್​ಪೋರ್ಟ್​ಗಳಿವೆ. ಶಿವಮೊಗ್ಗದ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡರೆ ಅಂತಾರಾಷ್ಟ್ರೀಯ ಮಾನದಂಡ ಹೊಂದಿರುವ ರಾಜ್ಯದ 3ನೇ ನಿಲ್ದಾಣ ಎಂಬ ಕೀರ್ತಿ ಶಿವಮೊಗ್ಗ ಏರ್​ಪೋರ್ಟ್​ನದ್ದಾಗಲಿದೆ.

    ಐಎಲ್​ಎಸ್ ವ್ಯವಸ್ಥೆ

    ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್ ಆಗುವಂತೆ ನೋಡಿಕೊಳ್ಳುವುದು ಅಂತಾರಾಷ್ಟ್ರೀಯ ಮಾನದಂಡಗಳಲ್ಲಿ ಪ್ರಮುಖ. ಅಂತಹ ವ್ಯವಸ್ಥೆಯನ್ನು ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಅಳವಡಿಸಲು ತೀರ್ವನಿಸಲಾಗಿದೆ. ಐಎಲ್​ಎಸ್(ಇನ್​ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಂ) ವ್ಯವಸ್ಥೆಯನ್ನು ರನ್​ವೇಯುದ್ದಕ್ಕೂ ಅಳವಡಿಸಲಾಗುತ್ತದೆ. ತೀವ್ರ ಮಳೆ, ಮಂಜಿನ ವಾತಾವರಣದಲ್ಲಿ ಐಎಲ್​ಎಸ್ ಮೂಲಕ ಬೆಳಕು ಕಾಣಿಸಿಕೊಳ್ಳುತ್ತದೆ. ಇದನ್ನು ಆಧರಿಸಿ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಇಲ್ಲವೇ ಟೇಕಾಫ್ ಮಾಡುತ್ತಾರೆ.

    384 ಕೋಟಿ ರೂ.ಗೆ ಹೆಚ್ಚಳ

    ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿಗೆ 220 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಅದೀಗ 384 ಕೋಟಿ ರೂ.ಗೆ ಏರಿಕೆಯಾಗಿದೆ. ಆರಂಭದಲ್ಲಿ 70 ಆಸನಗಳ ವಿಮಾನ ಸಂಚಾರ(ಎಟಿಆರ್-70)ಕ್ಕೆ ಪೂರಕವಾಗಿ 2,200 ಮೀ. ಉದ್ದ ಹಾಗೂ 30 ಮೀ.ಅಗಲದ ರನ್​ವೇ ನಿರ್ವಣಕ್ಕೆ ತೀರ್ವನಿಸಲಾಗಿತ್ತು. ಈಗ 300 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಏರ್​ಬಸ್-320 ಸಂಚಾರಕ್ಕೆ ಅನುಕೂಲವಾಗುವಂತೆ ರನ್​ವೇಯನ್ನು 3 ಸಾವಿರ ಮೀ. ಉದ್ದ ಹಾಗೂ 45 ಮೀ. ಅಗಲಕ್ಕೆ ಹೆಚ್ಚಿಸಲಾಗುವುದು.

    Web Exclusive | ಮಲೆನಾಡಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್; ಯೋಜನಾ ವೆಚ್ಚ 220ರಿಂದ 384 ಕೋಟಿ ರೂ.ಗೆ ಏರಿಕೆ
    ಸೋಗಾನೆ ಸಮೀಪ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿರುವುದು.

    ಏರ್​ಪೋರ್ಟ್ ಕಾಮಗಾರಿಯ ಏಳುಬೀಳುಗಳು ಬೆಳವಣಿಗೆಗಳು

    • ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ವಣಕ್ಕೆ 2007 ಮಾ.23ರಂದು ರಾಜ್ಯ ಸರ್ಕಾರದ ಆದೇಶ
    • 2007ರಲ್ಲಿ ಡಿಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಂದ ಶಂಕುಸ್ಥಾಪನೆ
    • 662.32 ಎಕರೆ ಭೂಮಿ ಸ್ವಾಧಿನ ಪಡಿಸಿಕೊಂಡು, 25.98 ಕೋಟಿ ರೂ. ವೆಚ್ಚದ ಅಂದಾಜುಪಟ್ಟಿ ಸಿದ್ಧಪಡಿಸಿದ್ದ ಅಧಿಕಾರಿಗಳು
    • ವಿಮಾನ ನಿಲ್ದಾಣ ನಿರ್ವಣಕ್ಕೆ 2008ರ ಏ.2ರಂದು ಎಸ್​ಎಡಿಪಿಎಲ್ ಜತೆ ಒಪ್ಪಂದ
    • ಕಾಮಗಾರಿ ಪೂರ್ಣಗೊಳಿಸಲು ಹಲವು ಬಾರಿ ಅವಕಾಶ ನೀಡಿದರೂ ಸಹಕರಿಸದ ಎಸ್​ಎಡಿಪಿಎಲ್
    • ಯೋಜನಾ ಅಭಿವೃದ್ಧಿ ಒಪ್ಪಂದ ರದ್ದುಪಡಿಸಿದ ರಾಜ್ಯ ಸರ್ಕಾರ
    • ಅಭಿವೃದ್ಧಿದಾರರು ನೀಡಿದ್ದ 12.37 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿ ಸರ್ಕಾರದಿಂದ ಮುಟ್ಟುಗೋಲು
    • 2015ರ ಆ.13ರಂದು ವಿಮಾನ ನಿಲ್ದಾಣವನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧಾರ
    • 2016ರ ಏ.26ರಂದು ಟೆಂಡರ್ ಆಹ್ವಾನಿಸಲು ಪ್ರಾಧಿಕಾರ ನೇಮಕ
    • 19-8-2016 ಮತ್ತು 7-9-2016ರಲ್ಲಿ 2 ಬಾರಿ ಟೆಂಡರ್ ಸಲ್ಲಿಕೆ ಅವಧಿ ವಿಸ್ತರಿಸಿದರೂ ಸಿಗದ ಸ್ಪಂದನೆ
    • 2019ರ ಬಿ.ಎಸ್.ಯಡಿಯೂರಪ್ಪ ಸಿಎಂ ಆದ ಬಳಿಕ ಏರ್​ಪೋರ್ಟ್ ಯೋಜನೆಗೆ ಮರುಜೀವ
    • 2020ರ ಜೂ.15ರಂದು ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಬಿಎಸ್​ವೈ

    ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಗತ್ಯ ಭೂಮಿ ಇರುವುದರಿಂದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಏರ್​ಬಸ್-320 ವಿಮಾನ ಸಂಚಾರಕ್ಕೆ ಅನುಕೂಲವಾಗುವಂತೆ ಏರ್​ಪೋರ್ಟ್ ನಿರ್ವಿುಸಲಾಗುತ್ತಿದೆ. ಹಲವು ಏರ್​ಪೋರ್ಟ್​ಗಳನ್ನು ಈಗ ಮೇಲ್ದರ್ಜೆಗೇರಿಸಲು ಭೂಮಿ ಕೊರತೆಯಿದೆ. ಸುದೈವದಿಂದ ಶಿವಮೊಗ್ಗದಲ್ಲಿ ಅಂತಹ ಸಮಸ್ಯೆ ಇಲ್ಲ.

    | ಬಿ.ವೈ.ರಾಘವೇಂದ್ರ ಲೋಕಸಭಾ ಸದಸ್ಯ

    ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

    ಬೀದಿನಾಯಿ ಕಚ್ಚಿದ್ರೂ ಸುಮ್ನಿರ್ಬೇಕಂತೆ; ಇಲ್ಲಂದ್ರೆ ಮೇನಕಾ ಗಾಂಧಿ ಫೋನ್​ ಮಾಡಿ ಬೆದರಿಕೆ ಹಾಕ್ತಾರೆ!

    ತಪ್ಪೇ ಮಾಡದಿದ್ದರೂ ರತನ್​ ಟಾಟಾಗೆ ನೋಟಿಸ್​ ಕಳಿಸಿದ ಪೊಲೀಸರು; ಪ್ರಕರಣದ ಹಿಂದಿದ್ದಳು ಒಬ್ಬಳು ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts