More

    ಸುಸ್ತಿ ಕೃಷಿ ಸಾಲದ ಬಡ್ಡಿ ಮನ್ನಾ: ಆರ್‌ಎಂಎಂ ವಿವರಣೆ

    ಶಿವಮೊಗ್ಗ: ಮಧ್ಯಮಾವಧಿ ಹಾಗೂ ದೀರ್ಘಾವಧಿ ಯೋಜನೆಯಡಿ ಪಡೆದ ಕೃಷಿ ಸಾಲ ಸುಸ್ತಿಯಾಗಿದ್ದರೆ, ಸುಸ್ತಿ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಫೆಬ್ರವರಿ ಅಂತ್ಯದೊಳಗೆ ಸಾಲ ಮರುಪಾವತಿ ಮಾಡುವ ರೈತರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.

    ರಾಜ್ಯ ಸರ್ಕಾರದ ಈ ಆದೇಶದಿಂದ ಸುಮಾರು ಒಂದು ಸಾವಿರ ಕೋಟಿ ರೂ. ಆರ್ಥಿಕ ಹೊರೆ ಉಂಟಾಗಬಹುದು. ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಇದರ ಪ್ರಯೋಜನ ಸಿಗಲಿದೆ ಎಂಬುದನ್ನು ಇನ್ನಷ್ಟೇ ಪರಿಶೀಲಿಸಬೇಕಿದೆ. ಹಲವು ಮಂದಿ ದೀರ್ಘ ಅವಧಿಯಿಂದ ಸಾಲ ಮರುಪಾವತಿಸದ ಕಾರಣ ಸುಸ್ತಿ ಬಡ್ಡಿ ಮಿತಿಮೀರಿ ಬೆಳೆದಿದೆ. ಸರ್ಕಾರದ ಯೋಜನೆಯಿಂದ ಜಿಲ್ಲೆಯಲ್ಲೂ ನೂರಾರು ಮಂದಿಗೆ ಅನುಕೂಲವಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಪ್ರಾಥಮಿಕ ಸಹಕಾರ ಸಂಘ, ಡಿಸಿಸಿ ಬ್ಯಾಂಕ್‌ನಿಂದ ಪಡೆದ ಕೃಷಿ ಹಾಗೂ ಕೃಷಿ ಸಂಬಂಧಿತ ಅಲ್ಪಾವಧಿ, ಮಧ್ಯಮಾವದಿ ಸಾಲಗಳ 2023ರ ಡಿಸೆಂಬರ್ ಅಂತ್ಯಕ್ಕೆ ಸುಸ್ತಿಯಾಗಿರುವ ಕಂತಗುಳ ಅಸಲನ್ನು ಫೆ.29ರೊಳಗೆ ಪಾವತಿಸಿದರೆ ಬಡ್ಡಿ ಮನ್ನಾ ಪ್ರಯೋಜನ ಸಿಗಲಿದೆ ಎಂದರು.
    ಕೃಷಿಯೇತರ ಹಾಗೂ ಅನುತ್ಪಾದಕ ಸಾಲಗಳ ಪಾವತಿ ಬಾಕಿ ಉಳಿದಿದ್ದು ಇವುಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ಸಾಲ ಸುಸ್ತಿಯಾಗಿ ಮೂರು ವರ್ಷಗಳಾಗಿರಬೇಕು. 2023ರ ಮಾರ್ಚ್ ಅಂತ್ಯಕ್ಕೆ ಅದನ್ನು ಅನುತ್ಪಾದಕ ಎಂದು ಘೋಷಿಸಿರಬೇಕು. ಪ್ರಕರಣ ಕೋರ್ಟ್‌ನಲ್ಲಿದ್ದರೆ ನ್ಯಾಯಾಲಯದ ಒಪ್ಪಿಗೆ ಪಡೆದುಕೊಳ್ಳಬೇಕು. ರಾಜಿ ಸಂಧಾನಕ್ಕೆ ಮುಂದಾಗುವವರು ಸಾಲ ಬಾಕಿಯ ಶೇ.50 ಶಾಖೆಯ ಅಮಾನತು ಖಾತೆಗೆ ಜಮೆ ಮಾಡಬೇಕೆಂದು ನಿಬಂಧನೆಗಳನ್ನು ವಿವರಿಸಿದರು.
    ಬ್ಯಾಂಕ್‌ನ ನಿರ್ದೇಶಕರಾದ ಜೆ.ಪಿ.ಯೋಗೇಶ್, ಕೆ.ಪಿ.ದುಗ್ಗಪ್ಪ ಗೌಡ, ಜಿ.ಎನ್.ಸುಧೀರ್, ಪ್ರಭಾರ ವ್ಯವಸ್ಥಾಪಕ ವಾಸುದೇವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts