More

    ಸಂಯೋಜಿತ ಚಿಕಿತ್ಸೆಯ ಕುರಿತ ಸಂಶೋಧನೆಯ ಅಗತ್ಯ

    ಬೆಂಗಳೂರು: ಭಾರತೀಯ ಪಾರಂಪರಿಕ ಚಿಕಿತ್ಸಾ ಪದ್ಧತಿ ಕುರಿತು ಸಾಧ್ಯವಾದಷ್ಟು ವೈಜ್ಞಾನಿಕ ರೀತಿಯಲ್ಲಿ ದೃಢೀಕರಿಸಿ ಮುಖ್ಯವಾಹಿನಿಗೆ ತರುವ ಅಗತ್ಯವಿದೆ ಎಂದು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ವೈದ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯ ಸಂಯೋಜಿತ ಚಿಕಿತ್ಸಾ ಘಟಕವು ಹಮ್ಮಿಕೊಂಡಿದ್ದ ಯೋಗ, ಆಯುರ್ವೇದ ಮತ್ತು ನರ ವಿಜ್ಞಾನ: ಚಿಕಿತ್ಸೆ ಮತ್ತು ಸಂಶೋಧನೆಯ ಕುರಿತ ‘ಯಂತ್ರ-2023’ ಅಂತರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಮಾನಸಿಕ ಮತ್ತು ನರವಿಜ್ಞಾನ ಚಿಕಿತ್ಸೆಯಲ್ಲಿ ಸಂಯೋಜಿತ ಚಿಕಿತ್ಸೆ ಅಳವಡಿಸಿಕೊಂಡಿರುವ ದೇಶದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ನಿಮ್ಹಾನ್ಸ್ ಪಾತ್ರವಾಗಿದೆ. ಈ ಸಂಯೋಜಿತ ಚಿಕಿತ್ಸಾ ಘಟಕದ ಮೂಲಕ ಇದರ ವೈಶಿಷ್ಟ್ಯತೆ ಹಾಗೂ ಉಪಯೋಗಗಳ ಕುರಿತು ನಿಖರ ದಾಖಲೆಗಳನ್ನು ಒದಗಿಸುವ ಮೂಲಕ ಈ ಚಿಕಿತ್ಸಾ ಪದ್ಧತಿಯನ್ನು ಮುನ್ನೆಲೆಗೆ ತರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಪ್ರಕೃತಿ ಉಳಿಸುವ ಅಗತ್ಯವಿದೆ: ಭಾರತೀಯ ವೈದ್ಯ ಪದ್ಧತಿ ಪ್ರಕೃತಿ ಅವಲಂಬಿತವಾಗಿರುತ್ತದೆ. ಹಾಗಾಗಿ ಪ್ರಕೃತಿಯನ್ನು ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ. ಇದರಿಂದ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಾಣವಾಗಲಿದೆ. ಜತೆಗೆ ರೋಗಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಗಿಡಮೂಲಿಕೆಗಳು ಪ್ರಕೃತಿಯನ್ನು ಉಳಿಸುವುದರಿಂದ ಮಾತ್ರ ಪಡೆಯಲು ಸಾಧ್ಯ ಎಂದು ಪ್ರಕೃತಿಯ ಮಹತ್ವ ತಿಳಿಸುತ್ತ ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವಜನರು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

    ಸಂಯೋಜಿತ ಚಿಕಿತ್ಸೆಯ ಸಂಶೋಧನೆ: ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮಾತನಾಡಿ, ಯೋಗದಲ್ಲಿ ಬರುವ ಯಮ ಮತ್ತು ನಿಯಮ ಚಿಕಿತ್ಸಾ ವಿಧಾನ ಹಾಗೂ ಆಯುರ್ವೇದ ಚಿಕಿತ್ಸೆಯಲ್ಲಿ ಬರುವ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಈ ಎರಡೂ ವಿಧಾನಗಳ ಅಳವಡಿಕೆಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ನರ ರೋಗ ಹಾಗೂ ಮನಾಸಿಕ ಅಸ್ವಸ್ಥತೆಗಳನ್ನು ಇದು ಉತ್ತಮ ಚಿಕಿತ್ಸಾ ವಿಧಾನವಾಗಿದೆ. ಹಾಗಾಗಿ ಈ ಸಂಯೋಜಿತ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದಂತೆ ಪೂರಕ ಸಾಕ್ಷಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ ಎಂದರು.

    ಭಾರತೀಯ ಔಷಧ ಪದ್ಧತಿಗಾಗಿ ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಬೋರ್ಡ್ (ಎಂಎಆರ್‌ಬಿಐಎಸ್‌ಎಂ) ಅಧ್ಯಕ್ಷ ಡಾ. ರಘುರಾಮ್ ಭಟ್ ಮಾತನಾಡಿ, ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಸಂಯೋಜಿತವಾಗಿರಬೇಕು ಎಂದು ಚರಕ ಹಾಗೂ ಸುಶೃತ ಹೇಳಿದ್ದಾರೆ. ಅದೇ ರೀತಿ ಇಂದಿನ ಆಧುನಿಕ ವೈದ್ಯಪದ್ಧತಿಯಲ್ಲೂ ಸಂಯೋಜಿತ ಚಿಕಿತ್ಸೆಯ ಅಗತ್ಯವಿದೆ. ಯಾವ ಕಾಯಿಲೆಗೆ ಯಾವುದು ಉಪಯುಕ್ತ ಎಂದು ಅರಿತು ಚಿಕಿತ್ಸೆ ನೀಡಬೇಕಿದೆ. ಈ ನಿಟ್ಟಿನಲ್ಲಿ ವೈದ್ಯರು ರೋಗಿಗಳ ಆರೋಗ್ಯ ದೃಷ್ಠಿಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ನಿಮ್ಹಾನ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ. ಮುರಳೀಧರನ್ ಕೇಶವನ್, ಸಂಯೋಜಿತ ಚಿಕಿತ್ಸಾ ಘಟಕದ ಮುಖ್ಯಸ್ಥ ಡಾ. ಕಿಶೋರ್ ಕುಮಾರ್, ತಾರುಣ್ಯ ಶಿಕ್ಷಣ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಮೋಹನ್, ಕರ್ನಾಟಕ ಆಯುರ್ವೇದ ಪ್ರಾಂಶುಪಾಲರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅಲ್ಲಮಪ್ರಭು ಇತರರು ಇದ್ದರು.

    ಮೂರು ದಿನಗಳ ಕಾರ್ಯಕ್ರಮದಲ್ಲಿ ಯೋಗ, ಆಯುರ್ವೇದ ಮತ್ತು ನರವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಚಿಕಿತ್ಸಾ ವಿಧಾನ, ಕೋರ್ಸ್ ಮತ್ತು ತರಬೇತಿ ಹಾಗೂ ಸಂಶೋಧನೆ ಕುರಿತು 170 ಪ್ರಬಂಧ ಮಂಡನೆಯ ಜೊತೆಗೆ 80 ಪ್ರೋಸ್ಟರ್‌ಗಳು ಬಿಡುಗಡೆಯಾದವು. ಬನಾರಸ್ ವಿಶ್ವವಿದ್ಯಾಲಯ, ಎಸ್-ವ್ಯಾಸ ಬೆಂಗಳೂರು ಸೇರಿ ಭಾರತ ಹಾಗೂ ವಿವಿಧ ದೇಶಗಳ ತಜ್ಞರು ಹಾಗೂ ಸಾವಿರಾರು ಪ್ರತಿನಿಧಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts