More

    ಗೋಕರ್ಣ ಮಹಾಬಲೇಶ್ವರ ಮಂದಿರದ ಚಿನ್ನಾಭರಣ ಪರಿಶೀಲನೆ


    ಗೋಕರ್ಣ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಹಾಬಲೇಶ್ವರ ಮಂದಿರದ ಆಡಳಿತ ಹಸ್ತಾಂತರ ನಿಮಿತ್ತ ಶುಕ್ರವಾರ ಕುಮಟಾ ವಿಭಾಗೀಯ ಅಧಿಕಾರಿ ಅಜಿತ ಎಂ. ನೇತೃತ್ವದಲ್ಲಿ ಮಂದಿರದ ಚಿನ್ನಾಭರಣಗಳ ಪರಿಶೀಲನೆ ನಡೆಯಿತು.
    ಅಕ್ಕಸಾಲಿಗರ ಸಮಕ್ಷಮ ಮಂದಿರದ ಎಲ್ಲ ಬೆಳ್ಳಿ ಮತ್ತು ಚಿನ್ನಾಭರಣಗಳನ್ನು ತೂಗಿ ಪರಿಶೀಲನೆ ಮಾಡಲಾಯಿತು. ಈ ವೇಳೆ ಕುಮಟಾ ಸಿಪಿಐ ಶಿವಪ್ರಸಾದ ನಾಯ್ಕ, ಪಿಎಸ್​ಐ ನವೀನ ನಾಯ್ಕ, ಕಾರವಾರ ಮುಜರಾಯಿ ಇಲಾಖೆ ಅಧಿಕಾರಿಗಳು ಇದ್ದರು.
    ಈ ಬಗ್ಗೆ ವಿಭಾಗೀಯ ಅಧಿಕಾರಿ ಅಜಿತ ವಿವರಣೆ ನೀಡಿ, ಶುಕ್ರವಾರ ಮಂದಿರದಲ್ಲಿನ ಎಲ್ಲ ಚಿನ್ನಾಭರಣಗಳನ್ನು ಪರಿಶೀಲಿಸಲಾಗಿದೆ. ಶನಿವಾರ ಹಣಕಾಸು, ಬ್ಯಾಂಕ್ ವ್ಯವಹಾರ ಮತ್ತು ಇನ್ನುಳಿದ ಚರ-ಸ್ಥಿರ ವಸ್ತುಗಳನ್ನು ಪರಿಶೀಲಿಸಲಾಗುವುದು. ಶನಿವಾರ ಹಸ್ತಾಂತರ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಆ ತರುವಾಯ ಇದಕ್ಕೆ ಸಂಬಂಧಿಸಿದ ಅಧಿಕೃತ ಪತ್ರವನ್ನು ಮಂದಿರಕ್ಕೆ ನೀಡಲಾಗುವುದು ಎಂದರು.
    ಯಥಾಸ್ಥಿತಿ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮಂದಿರಕ್ಕೆ ಭಕ್ತರ ಪ್ರವೇಶವನ್ನು ಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಅನ್ನದಾನ ಮತ್ತು ಇತರ ನಿತ್ಯ ಸೇವೆಗಳ ವ್ಯವಸ್ಥೆ ರದ್ದಾಗಿದೆ. ಮಂದಿರದಲ್ಲಿ ನಿತ್ಯ ನೈಮಿತ್ತಿಕಗಳು ಮಾತ್ರ ನಡೆಯುತ್ತಿವೆ. ಕಾರಣ ಸದ್ಯದ ಮಟ್ಟಿಗೆ ಈಗಿರುವ ಸಿಬ್ಬಂದಿಯನ್ನೇ ಮುಂದುವರಿಯುವಂತೆ ಕೇಳಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ಅಧ್ಯಕ್ಷತೆಯಲ್ಲಿ ಸಮಿತಿಯ ಸಭೆ ನಡೆದು ಮಂದಿರಕ್ಕೆ ಪ್ರತ್ಯೇಕ ನಿರ್ವಹಣಾಧಿಕಾರಿ ಮತ್ತು ಇತರ ಅಗತ್ಯ ಏರ್ಪಾಟುಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
    ಸುಪ್ರೀಂ ಕೋರ್ಟ್ ಮಾರ್ಗದರ್ಶನ: ಈಗಿರುವ ಪರಿಸ್ಥಿತಿಯಲ್ಲಿ ಮಂದಿರದ ಆಡಳಿತದಲ್ಲಿ ಮುಜರಾಯಿ ಇಲಾಖೆಯ ಅಥವಾ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ. ಮಂದಿರದಲ್ಲಿ ಮುಂದೆ ಆಡಳಿತ ನಡೆಸಲಿರುವ ಸಮಿತಿ ನೇರವಾಗಿ ಸವೋಚ್ಚ ನ್ಯಾಯಾಲಯಕ್ಕೆ ಮಾತ್ರ ಉತ್ತರದಾಯಿಯಾಗಿದೆ. ಮತ್ತು ಮಂದಿರದ ಮುಂದಿನ ಎಲ್ಲ ನಿರ್ವಹಣೆಯ ನಿರ್ಧಾರವನ್ನು ಅದು ನಿಗದಿ ಮಾಡಲಿದೆ.’ ಎಂದರು. ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರ ಪರಿಶೀಲನೆ ನಡೆದಿದ್ದು ಶನಿವಾರವೂ ಇದು ಮುಂದುವರಿಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts