More

    ಜನರಿಂದ ಮಾಹಿತಿ ಪಡೆದು ಸಮಸ್ಯೆಗಳ ನಿವಾರಣೆ

    ಮಾನ್ವಿ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ 5.11 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಸದಸ್ಯರು ಒಪ್ಪಿಗೆ ನೀಡಿದರೆ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಪುರಸಭೆ ಆಡಳಿತಾಧಿಕಾರಿ ಮತ್ತು ಸಹಾಯಕ ಆಯುಕ್ತೆ ಮೆಹಬೂಬೀ ತಿಳಿಸಿದರು.

    ಪುರಸಭೆ ಸಭಾಂಗಣದಲ್ಲಿ ವಿಶೇಷ ಸಾಮಾನ್ಯ ಸಭೆಯಲ್ಲಿ ಗುರುವಾರ ಮಾತನಾಡಿದರು. 2023-24 ನೇ ಸಾಲಿನಲ್ಲಿ 15 ನೇ ಹಣಕಾಸು ಯೋಜನೆಯಡಿ 2.85 ಕೋಟಿ ರೂ. ಎಸ್.ಎಫ್.ಸಿ ಮುಕ್ತ ನಿಧಿಯಡಿ 1.2 ಕೋಟಿ ರೂ. ಎಸ್‌ಸಿಪಿ ಯೋಜನೆಯ 23 ಲಕ್ಷ ರೂ. ಹಾಗೂ ಟಿಎಸ್‌ಪಿ ಯೋಜನೆಯ 9 ಲಕ್ಷ ರೂ., 14 ನೇ ಹಣಕಾಸು ಯೋಜನೆಯಡಿ ಉಳಿತಯದ 32 ಲಕ್ಷ ರೂ., ಕಳೆದ 4 ವರ್ಷಗಳಲ್ಲಿ ಪುರಸಭೆಯ ವಿವಿಧ ಕಾಮಗಾರಿಗಳಲ್ಲಿ ಉಳಿತಾಯದ 60 ಲಕ್ಷ ರೂ. ಒಟ್ಟು 5.11 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಲು ಒಪ್ಪಿಗೆ ನೀಡಿದಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಾಮಗಾರಿಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

    ಕುಡಿವ ನೀರಿನ ಸಮಸ್ಯೆಯಾಗದಂತೆ ಕೊಳವೆ ಬಾವಿಗಳ ದುರಸ್ತಿಗೆ ಅದ್ಯತೆ ನೀಡಿ ಮುಕ್ತ ನಿಧಿ ಅನುದಾನದಲ್ಲಿ 13 ಕಾಮಗಾರಿಗಳನ್ನು ತಲಾ 22 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಬೀದಿ ದೀಪಗಳ ನಿರ್ವಹಣೆಗಾಗಿ 17 ಲಕ್ಷ ರೂ., ಸಾರ್ವಜನಿಕರ ಶೌಚಗೃಹ ನಿರ್ಮಾಣಕ್ಕೆ 22 ಲಕ್ಷ ರೂ. ನಿಗದಿಪಡಿಸಲಾಗುವುದು ಎಂದರು.

    ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಸದಸ್ಯರೊಂದಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿ ಸಮಸ್ಯೆಗಳ ಮಾಹಿತಿ ಪಡೆದು ನಿವಾರಣೆಗೆ ಕ್ರಮ ಕೈಗೊಳಲಾಗುವುದು ಎಂದು ಸಹಾಯಕ ಆಯುಕ್ತೆ ಮೆಹಬೂಬೀ ತಿಳಿಸಿದರು.
    ರಾಜಾ ಮಹೇಂದ್ರ ನಾಯಕ ಮಾತನಾಡಿ, ಸ್ವಚ್ಛ ಭಾರತ್ ಯೋಜನೆಯಡಿ ವೈಯಕ್ತಿಕ ಶೌಚಗೃಹಗಳನ್ನು ನಿರ್ಮಾಣ ಮಾಡಿಕೊಂಡವರಿಗೆ ಇದುವರೆಗೂ ಅನುದಾನ ನೀಡಿಲ್ಲ. ಪುರಸಭೆಯಿಂದ ನಿರ್ಮಾಣಗೊಂಡ ಹೈಟೆಕ್ ಶೌಚಗೃಹಗಳು ನೀರಿಲ್ಲದೆ ದುಸ್ತಿತಿಯಲ್ಲಿದ್ದು, ನೀರಿನ ವ್ಯವಸ್ಥೆ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು, ಪಟ್ಟಣದಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಟ್ರಾಫಿಕ್ ಸಿಗ್ನಲ್‌ಗಳು ಇದುವರೆಗೂ ಕಾರ್ಯನಿರ್ವಹಿಸುತ್ತಿಲ್ಲ ಎಂದರು.

    ಶೇಖ್ ಫರೀದ್ ಉಮ್ರಿ ಮಾತನಾಡಿ, ಪುರಸಭೆ ಅಧಿಕಾರಿಗಳು ಸದಸ್ಯರ ಮಾತು ಕೇಳುತ್ತಿಲ್ಲ. ಕರ್ತವ್ಯದ ಬಗ್ಗೆ ನಿರ್ಲಕ್ಷೃ ಮಾಡುತ್ತಿದ್ದಾರೆ ಎಂದು ದೂರಿದರು. ಎಸಿ ಮೆಹಬೂಬೀ ಮಾತನಾಡಿ, ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಿ ಎಂದು ಮುಖ್ಯಾಧಿಕಾರಿ ಗಂಗಾಧರಗೆ ಸೂಚಿಸಿದರು.

    ಮುಖ್ಯಾಧಿಕಾರಿ ಗಂಗಾಧರ ಮಾತನಾಡಿ, ಪಟ್ಟಣಕ್ಕೆ ಕುಡಿವ ನೀರು ಪೂರೈಕೆಗಾಗಿ ಅಮೃತ ಯೋಜನೆ-2 ರಲ್ಲಿ ಪುರಸಭೆಗೆ 61 ಕೋಟಿ ರೂ. ಮಂಜೂರು ಮಾಡಿದ್ದು, ವಿವಿಧ ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆಯ ಪೈಪ್‌ಲೈನ್ ಅಳವಾಡಿಕೆ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ತಿಳಿಸಿದರು.
    ಲಕ್ಷ್ಮೀದೇವಿ ನಾಯಕ ಮಾತನಾಡಿ, ಪಟ್ಟಣದಲ್ಲಿ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಾಹಿಸುತ್ತಿದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts