More

    ಕೃಷಿ ಸಖಿಯಿಂದ ರೈತರಿಗೆ ಬೆಳೆಗಳ ಮಾಹಿತಿ

    ಮೂಡಿಗೆರೆ: ಮಲೆನಾಡು ಭಾಗದಲ್ಲಿ ಕಾಫಿ, ಭತ್ತ, ಅಡಕೆ, ಬಾಳೆ, ಕಾಳುಮೆಣಸು ಸಹಿತ ಹತ್ತಾರು ಉಪಬೆಳೆಗಳಿವೆ. ಮಾಹಿತಿ ಕೊರತೆಯಿರುವ ರೈತರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರ ಆದಾಯವನ್ನು ಹೆಚ್ಚಿಸುವಲ್ಲಿ ಕೃಷಿ ಸಖಿಯರ ಪಾತ್ರ ಮುಖ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಟಿ.ಕೃಷ್ಣಮೂರ್ತಿ ಹೇಳಿದರು.
    ಕೃಷಿ ವಿಜ್ಞಾನ ಕೇಂದ್ರದ ಐಸಿಎಆರ್ ವಿಭಾಗ, ಸಂಜೀವಿನಿ ಕೌಶಲ್ಯಾಭಿವೃದ್ಧಿ ಘಟಕ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ದ ಕೃಷಿ ಸಖಿಯರ ಪ್ರಥಮ ತಂಡದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕೃಷಿ ವಿಶ್ವವಿದ್ಯಾಲಯ ಹಾಗೂ ರೈತರ ನಡುವಿನ ಕೊಂಡಿಯಾಗಿ ಕೃಷಿ ಸಖಿಯರು ಕೆಲಸ ಮಾಡುತ್ತಾರೆ. ವೈಜ್ಞಾನಿಕವಾಗಿ ನಡೆದ ಸಂಶೋಧನೆಗಳು ಕೃಷಿಯಲ್ಲಿ ನಡೆಯುವ ಹೊಸ ಆವಿಷ್ಕಾರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕಾಗುತ್ತದೆ. ಕೃಷಿಗಾಗಿ ವಿವಿಧ ಇಲಾಖೆಯ ಸೌಲಭ್ಯವನ್ನು ರೈತರಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ತಿಳಿಸಿದರು.
    ರೈತ ಉತ್ಪಾದಕ ಸಂಘದ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಬರಡು ಭೂಮಿಯಲ್ಲಿ ಚಿನ್ನದಂತ ಬೆಳೆ ಬೆಳೆಯುವ ರೈತರಿಗೆ ನೆರವಾಗುವುದು ಪುಣ್ಯದ ಕೆಲಸ. ಕೃಷಿ ಸಖಿ ತಮ್ಮ ವ್ಯಾಪ್ತಿಯಲ್ಲಿ ರೈತರ ಜೀವನ ಮಟ್ಟ ಸುಧಾರಿಸಿಕೊಳ್ಳುವಂತೆ ಕೃಷಿಯನ್ನು ಉತ್ತೇಜಿಸುವ ಕೆಲಸ ಮಾಡಬೇಕು. ಎಲ್ಲ ರೈತರಿಗೂ ಯಾಂತ್ರಿಕೃತ ಕೃಷಿಯಲ್ಲಿ ಸುಸ್ಥಿರ ಬೆಳವಣಿಗೆಯ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
    ಕೃಷಿ ವಿಜ್ಞಾನ ಕೇಂದ್ರದ ಸಹ ವಿಸ್ತರಣಾಧಿಕಾರಿ ಡಾ.ಎಂ.ಶಿವಪ್ರಸಾದ್ ಮಾತನಾಡಿ, ಸಣ್ಣ , ಅತಿ ಸಣ್ಣ ಹಾಗೂ ಮಹಿಳಾ ಕುಟುಂಬಗಳಿಗೆ ಕೃಷಿ ಸಖಿಯರ ನೆರವು ಅಗತ್ಯ. ವಿಸ್ತರಣಾ ಸೇವೆ ತಾಂತ್ರಿಕ ಜ್ಞಾನ ಹಾಗೂ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಬೇಕು. ಸ್ಥಳೀಯ ವಸ್ತುಗಳ ಉತ್ಪಾದನೆಗೂ ಉತ್ತಮ ಮಾರುಕಟ್ಟೆ ಲಭಿಸುವಂತೆ ಕೃಷಿ ಸಖಿಯರು ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
    ಮೇಲ್ವಿಚಾರಕ ನಂದಕುಮಾರ್, ರೈತ ಉತ್ಪಾದಕ ಸಂಘದ ಉಪಾಧ್ಯಕ್ಷ ಶಂಕರ್, ಕೆವಿಕೆ ವಿಜ್ಞಾನಿ ಡಾ.ಬಿ.ಸುರೇಶ್ ಕುಮಾರ್, ಡಾ.ಸ್ನೇಹಾ, ಡಾ. ಜಿ.ಎಂ.ಪ್ರಶಾಂತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts