More

    ಗ್ರಾಮೀಣರ ಜೀವ ಹಿಂಡುತ್ತಿದೆ ಸೋಂಕು

    ಗದಗ: ಕೋವಿಡ್-19 ಎರಡನೇ ಅಲೆ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದ್ದು, ಜನರ ಜೀವ ಹಿಂಡತೊಡಗಿದೆ. ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಸೋಂಕು ಹಳ್ಳಿಗಳ ಮೇಲೂ ದಾಳಿ ಇಟ್ಟಿದ್ದರಿಂದ ಜನರು ನಲುಗುತ್ತಿದ್ದಾರೆ.

    ಜಿಲ್ಲಾಡಳಿತ ಕರೊನಾ ಸೋಂಕು ನಿಯಂತ್ರಣಕ್ಕಾಗಿ ಅನೇಕ ಕ್ರಮ ಕೈಗೊಂಡಿದೆ. ಆದರೆ, ಜನ ನಮಗೇನೂ ಆಗಲ್ಲ ಎಂದು ಉದಾಸೀನತೆ ತೋರಿ ಜೀವಕ್ಕೆ ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ. ಪರಿಣಾಮ ಕೆಲ ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ಮತ್ತೊಂದೆಡೆ ಸ್ಥಳೀಯರು ಮುನ್ನೆಚ್ಚರಿಕೆ ವಹಿಸಿದ್ದರಿಂದ ಸುಮಾರು 59ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕರೊನಾ ಸುಳಿವೇ ಇಲ್ಲ ಎಂಬುವುದು ವಿಶೇಷ. ಜಿಲ್ಲೆಯಲ್ಲಿ ಒಟ್ಟು 23,037 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಎರಡನೇ ಅಲೆಯಲ್ಲಿ ಜನವರಿಯಿಂದ ಮೇ 29ರವರೆಗೆ 11,521 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲೂ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೋಂಕು ಹರಡಿದ್ದು, ಗ್ರಾಮೀಣ ಪ್ರದೇಶಕ್ಕೂ ಚಾಚಿಕೊಂಡಿದೆ. ಜಿಲ್ಲೆಯ ಹುಲಕೋಟಿ ಮತ್ತು ಲಕ್ಕುಂಡಿ ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ 150ಕ್ಕೂ ಹೆಚ್ಚಿದೆ.

    40ಕ್ಕಿಂತ ಹೆಚ್ಚು ಸೋಂಕಿತರ ಗ್ರಾಮಗಳು: ಗದಗ ತಾಲೂಕಿನ ಲಕ್ಕುಂಡಿ 122, ಹುಲಕೋಟಿ 323, ಬಿಂಕದಕಟ್ಟಿ 63, ಮುಳಗುಂದ 40, ಕುರ್ತಕೋಟಿ 42, ಕಳಸಾಪುರ 43, ಹರ್ತಿ 43, ಮಲ್ಲಸಮುದ್ರ 34, ಮುಂಡರಗಿ ತಾಲೂಕಿನ ಡಂಬಳ 85, ಹಮ್ಮಿಗಿ 49, ಪೇಠಾಲೂರು-40, ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ 90 ಹಾಗೂ ಶಿರಹಟ್ಟಿ ತಾಲೂಕಿನ ಸೂರಣಗಿ 59ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ರೋಣ ತಾಲೂಕಿನ ಅತಿದೊಡ್ಡ ಗ್ರಾಮಗಳಾಗಿರುವ ಹೊಳೆಆಲೂರಿನಲ್ಲಿ 50, ಅಬ್ಬಿಗೇರಿ 57, ಬೆಳವಣಿಕೆ 68 ಪ್ರಕರಣಗಳು ದೃಢಪಟ್ಟಿವೆ. ಗಜೇಂದ್ರಗಡ ತಾಲೂಕಿನ ಸೂಡಿಯಲ್ಲಿ 44 ಪ್ರಕರಣಗಳು ಕಂಡು ಬಂದಿದೆ. ನರಗುಂದ ತಾಲೂಕಿನ ಚಿಕ್ಕನರಗುಂದ ಹಾಗೂ ಹದ್ಲಿ ಗ್ರಾಮಗಳಲ್ಲಿ ಕ್ರಮವಾಗಿ 90 ಮತ್ತು 45 ಪ್ರಕರಣಗಳು ಖಚಿತವಾಗಿವೆ. ಹಲವಾರು ಗ್ರಾಮಗಳಲ್ಲಿ 20-30 ಸೋಂಕಿತರ ಸಂಖ್ಯೆ ಸಾಮಾನ್ಯವಾಗಿವೆ. ದಿನದಿಂದ ದಿನಕ್ಕೆ ಅಂಕಿ-ಅಂಶಗಳಲ್ಲಿ ಬದಲಾಗುತ್ತಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಕಡಿಮೆ ಕೇಸ್​ಗಳಿರುವ ಗ್ರಾಮಗಳು: ಗದಗ ತಾಲೂಕಿನ ಪಾಪನಾಶಿ ತಾಂಡಾ 2, ಅಡವಿಸೋಮಾಪೂರ ತಾಂಡಾ 5, ಶಿರೋಳ 4, ಯಲಿಶಿರುಂಜ 1, ಎಚ್.ಎಸ್. ವೆಂಕಟಾಪುರ 5, ದುಂದೂರು 4, ಮಹಲಿಂಗಪುರ, ಚಿಕ್ಕೊಪ್ಪ, ಕಲ್ಲೂರ, ನೀರಲಗಿ 2, ಮದಗಾನೂರ 3, ಕಬಲಾಯನಕಟ್ಟಿ 4, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ 8ಕ್ಕಿಂತ ಕಡಿಮೆ ಸೋಂಕಿತರ ಗ್ರಾಮಗಳೇ ಹೆಚ್ಚು. ರೋಣ, ಗಜೇಂದ್ರಗಡ ಹಾಗೂ ನರಗುಂದ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ 2ರಿಂದ 8ರಷ್ಟು ಪ್ರಕರಣಗಳಿವೆ.

    ಕೇಸ್ ದಾಖಲಾಗದ ಗ್ರಾಮಗಳು: ಗದಗ ತಾಲೂಕಿನ ಹಂಗನಕಟ್ಟಿ, ವೆಂಕಟಾಪುರ, ಮುಂಡರಗಿ ತಾಲೂಕಿನ ಡ.ಸ. ರಾಮೇನಹಳ್ಳಿ, ಯಕ್ಲಾಸಪುರ, ತಿಪ್ಪಾಪುರ, ನರಗುಂದ ತಾಲೂಕಿನ ಕಣಕಿಕೊಪ್ಪ, ಸಂಕದಾಳ, ಕಪ್ಪಲಿ, ಲಕಮಾಪುರ, ರೋಣ ತಾಲೂಕಿನ ಕರಕೀಕಟ್ಟಿ, ಮೇಲ್ಮಠ, ಅಮರಗೋಳ, ಕುರವಿನಕೊಪ್ಪ ಹಾಗೂ ಗಜೇಂದ್ರಗಡ ತಾಲೂಕಿನ ವೀರಾಪುರ, ಚಿಲ್​ರೆರಿ, ಮಾಟರಂಗಿ, ನಾಗರಸಿನಕೊಪ್ಪ ತಾಂಡಾ, ಮಲ್ಲಾಪುರ, ಬೊಮ್ಮಸಾಗರ, ದಿಂಡೂರ, ಕಾಲಕಾಲೇಶ್ವರ, ನೆಲ್ಲೂರ ಪ್ಯಾಟಿ ಸೇರಿ ಜಿಲ್ಲೆಯ 40ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಕರೊನಾ ಸೋಂಕಿನ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಅಲ್ಲದೆ, ಪರ ಊರುಗಳಿಂದ ಬಂದವರ ಮೇಲೆ ನಿಗಾ, ಪಟ್ಟಣಗಳಿಂದ ವಾಪಸಾಗಿರುವ ಕಾರ್ವಿುಕರ ಕುಟುಂಬಗಳಿಗೆ ಗ್ರಾಪಂಗಳು ಕಟ್ಟುನಿಟ್ಟಾಗಿ ಹೋಂ ಕ್ವಾರಂಟೈನ್ ವಿಧಿಸಿದ್ದಾರೆ. ಜನರು ಗುಂಪುಗೂಡದಿರುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಈ ರೀತಿಯ ಸಾಮಾನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕಿನಿಂದ ಗೆಲುವು ಸಾಧಿಸಿದ್ದಾರೆ.

    ಜಿಲ್ಲೆಯಲ್ಲಿನ 59 ಗ್ರಾಮಗಳು ಕರೊನಾ ಸೋಂಕು ಮುಕ್ತವಾಗಿವೆ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಸಮನ್ವಯದೊಂದಿಗೆ ಅಧಿಕಾರಿಗಳ ಸಕ್ರಿಯ ಪ್ರಯತ್ನದಿಂದ ಎಲ್ಲ ಗ್ರಾಮಗಳನ್ನು ಕರೊನಾ ಮುಕ್ತವಾಗಿಸುವಲ್ಲಿ ಶ್ರಮಿಸಲಾಗಿದೆ. ಜತೆಗೆ ಜಿಪಂ ವತಿಯಿಂದ ಕರೊನಾ ತಡೆ ಕಾರ್ಯಪಡೆ ರಚಿಸಲಾಗಿದ್ದು, ಪ್ರತಿ ತಂಡಗಳು ಗ್ರಾಮಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಕರೊನಾ ನಿಯಂತ್ರಣಕ್ಕಾಗಿ ರೂಪಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಲಾಗುವುದು.

    | ಭರತ್ ಎಸ್., ಗದಗ ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts