More

  ಪಟ್ಟಾ ನೀಡದಿದ್ದರೆ ಮತದಾನ ಬಹಿಷ್ಕಾರ

  ತಾಲೂಕು ಆಡಳಿತಕ್ಕೆ ಆನೆಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಎಚ್ಚರಿಕೆ

  ಗಂಗಾವತಿ: ಮನೆ ಮತ್ತು ನಿವೇಶನ ಪಟ್ಟಾ ವಿತರಣೆ ಒತ್ತಾಯಿಸಿ ತಾಲೂಕಿನ ಆನೆಗೊಂದಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಲೋಕಸಭೆ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದು, ಸಮಸ್ಯೆ ಇತ್ಯರ್ಥಕ್ಕಾಗಿ ನಗರದ ತಾಲೂಕಾಡಳಿತ ಸೌಧದದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

  ಆನೆಗೊಂದಿ, ಸಣಾಪುರ, ಮಲ್ಲಾಪುರ, ಸಂಗಾಪುರ, ಚಿಕ್ಕರಾಂಪುರ 1 ಮತ್ತು ಚಿಕ್ಕರಾಂಪುರ 2 ಇತರ ಗ್ರಾಮಗಳ ನಿವಾಸಿಗಳು ಪಟ್ಟಾ ನೀಡುವಂತೆ ಆಗ್ರಹಿಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.

  ಚಿಕ್ಕರಾಂಪುರದ ನೀಲಪ್ಪ ಮಾತನಾಡಿ, 70 ವರ್ಷಗಳ ಹಿಂದೆ ವಿವಿಧೆಡೆಯಿಂದ ಆನೆಗೊಂದಿ ಭಾಗದ ಚಿಕ್ಕರಾಂಪುರ, ಹನುಮನಹಳ್ಳಿ, ಮುದುಕರಪ್ಪನ ಕ್ಯಾಂಪ್, ಜಂಗ್ಲಿ, ಅಂಜಿನಹಳ್ಳಿಯಲ್ಲಿ ವಾಸವಾಗಿದ್ದು, ಸರ್ಕಾರಿ ಮತ್ತು ಡೀಮ್ಡ್ ಅರಣ್ಯ ಪ್ರದೇಶದಲ್ಲಿ ವಾಸದಮನೆಗಳಿವೆ. ಹಲವು ವರ್ಷಗಳಿಂದ ಪಟ್ಟಾಕ್ಕಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯಡಿ ಎರಡು ಬಾರಿ ಸರ್ವೇ ನಡೆಸಿದರೂ ಪಟ್ಟಾ ವಿತರಿಸಿಲ್ಲ. ಹಿಂದಿನ ಚುನಾವಣೆಯಲ್ಲೂ ಬಹಿಷ್ಕಾರದ ಬಗ್ಗೆ ಪ್ರಸ್ತಾಪಿಸಿದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಪಟ್ಟಾ ತೊಂದರೆಯಿಂದ ಅರಣ್ಯ, ಕಂದಾಯ, ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಿರುಕುಳ ಹೆಚ್ಚುತ್ತಿದೆ.

  ಸಿಸಿ ರಸ್ತೆ, ಚರಂಡಿ, ಕುಡಿವ ನೀರಿನ ವ್ಯವಸ್ಥೆ, ವಿದ್ಯುತ್, ರಸ್ತೆ, ಸರ್ಕಾರಿ ಶಾಲೆ, ಅಂಗನವಾಡಿ ಸೇರಿ ಎಲ್ಲ ಸೌಕರ್ಯಗಳಿವೆ. ಪಟ್ಟಾ ಇಲ್ಲದಿದ್ದರೂ ವಾಸದ ಮನೆಗಳಿಗೆ ಗ್ರಾಪಂಗೆ ತೆರಿಗೆ ಭರಿಸಲಾಗುತ್ತಿದೆ. ಅಧಿಕಾರಿಗಳು ಮಧ್ಯಪ್ರವೇಶಿಸಿ ಪಟ್ಟಾ ವಿತರಿಸಬೇಕೆಂದು ಒತ್ತಾಯಿಸಿದರು. ವಿವಿಧ ಗ್ರಾಮದ ನಿವಾಸಿಗಳಾದ ಉಡಚಮ್ಮ, ಯಮನಮ್ಮ, ದೊಡ್ಡಮ್ಮ, ಚೌರಪ್ಪ, ಲಕ್ಷ್ಮಣನಾಯ್ಕ, ಗಾಳೆಮ್ಮ, ಗೋಪಾಲ, ಅಂಜಿನಿ, ಜ್ಯೋತಿ, ಕಲ್ಲಯ್ಯಸ್ವಾಮಿ, ಸೋಮರಾಜ, ಮಂಜುನಾಥ, ವೆಂಕೋಬಿ, ಪರಶುರಾಮ, ನಾರಾಯಣ, ರಾಮನಾಯ್ಕ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts