More

    ಸಮುದ್ರಕ್ಕೆ ಬಿದ್ದ ಇಂಡೋನೇಷ್ಯಾ ವಿಮಾನ; ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ

    ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿದ್ದ ಜೆಟ್ ವಿಮಾನ (ಬೋಯಿಂಗ್ 737-524) ಜಾವಾ ಸಮುದ್ರಕ್ಕೆ ಅಪ್ಪಳಿಸಿದೆ ಎನ್ನಲಾಗಿದೆ. ಈ ವಿಮಾನದಲ್ಲಿದ್ದ 62 ಪ್ರಯಾಣಿಕರ ಸ್ಥಿತಿಗತಿಗಳ ಬಗ್ಗೆ ಇಂಡೋನೇಷ್ಯಾ ಸರ್ಕಾರ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. 62 ಪ್ರಯಾಣಿಕರ ಜತೆಗೆ 12 ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ಇಂಡೋನೇಷ್ಯಾ ಸಾರಿಗೆ ಸಚಿವ ಬುದಿ ಕಾರ್ಯ ತಿಳಿಸಿದ್ದಾರೆ.

    ಜಕಾರ್ತ ವಿಮಾನ ನಿಲ್ದಾಣದಿಂದ ಶ್ರೀವಿಜಯ ಏರ್ ಫ್ಲೈಟ್ 182 ಮಧ್ಯಾಹ್ನ 2.40ಕ್ಕೆ ಪೊಂಟಿಯಾನಕ್ ನಗರಕ್ಕೆ ಪ್ರಯಾಣ ಆರಂಭಿಸಿತ್ತು. ನಿಲ್ದಾಣದಿಂದ ಹಾರಿದ ನಾಲ್ಕೇ ನಿಮಿಷಕ್ಕೆ ವಿಮಾನ ತನ್ನ ಸಂಪರ್ಕ ಕಳೆದುಕೊಂಡಿತ್ತು. ಮಳೆ ಜೋರಾಗಿ ಸುರಿಯುತ್ತಿದ್ದ ಮಧ್ಯೆ ಹಾರಿದ್ದ ವಿಮಾನ 60 ಸೆಕೆಂಡುಗಳಲ್ಲಿ 10 ಸಾವಿರ ಅಡಿ ಎತ್ತರದಲ್ಲಿತ್ತು. ಅದಾಗಿ, ಕೆಲವೇ ಕ್ಷಣಗಳಲ್ಲಿ ಜಾವಾ ಸಮುದ್ರಕ್ಕೆ ಬಿದ್ದಿದೆ. ಮೀನುಗಾರನೊಬ್ಬ ಇದನ್ನು ನೋಡಿದ್ದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾನೆ.

    ವಿಮಾನ ನಾಪತ್ತೆಯಾದ ಬಳಿಕ ಇಂಡೋನೇಷ್ಯಾ ಸರ್ಚ್ ಆ್ಯಂಡ್ ರೆಸ್ಕ್ಯೂ ಏಜೆನ್ಸಿ ಶೋಧನೆ ಕಾರ್ಯ ಶುರುಮಾಡಿತ್ತು. ಅದಾಗಿ ನಾಲ್ಕೈದು ಗಂಟೆ ಬಳಿಕ ಜಕಾರ್ತದ ವಾಯವ್ಯ ದಿಕ್ಕಿನಲ್ಲಿರುವ ಜಾವಾ ಸಮುದ್ರದ ತೌಸಂಡ್ ಐಲ್ಯಾಂಡ್ ಎಂಬ ದ್ವೀಪದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿರುವ ಬಗ್ಗೆ ಏಜೆನ್ಸಿ ಮಾಹಿತಿ ನೀಡಿದೆ. ಸುತ್ತಮುತ್ತ ಸಂಪೂರ್ಣ ಕತ್ತಲೆ ಆವರಿಸಿದ್ದರಿಂದ ತ್ವರಿತಗತಿಯಲ್ಲಿ ಶೋಧ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. ವಿಮಾನಕ್ಕೆ ಸಂಬಂಧಿಸಿದ ಕೆಲ ಅವಶೇಷಗಳು ಸಿಕ್ಕಿವೆ. ಆದರೆ, ಇವು ನಾಪತ್ತೆಯಾದ ವಿಮಾನಕ್ಕೆ ಸೇರಿದ್ದಾಗಿವೆಯೇ ಎಂಬುದು ಇನ್ನೂ ಅಧಿಕೃತವಾಗಿಲ್ಲ ಎಂದು ಏಜೆನ್ಸಿ ಅಧಿಕಾರಿ ಅಗಸ್ ಹರ್ಯೂನೋ ತಿಳಿಸಿದ್ದಾರೆ. ಕೇಬಲ್​ಗಳು, ಹರಿದ ಜೀನ್ಸ್ ಪ್ಯಾಂಟಿನ ತುಂಡು, ಲೋಹದ ಅವಶೇಷಗಳು ನೀರಿನಲ್ಲಿ ತೇಲುತ್ತಿದ್ದವು ಎಂದು ಭದ್ರತಾ ಅಧಿಕಾರಿ ಜುಲ್ಕಿಫ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ ಥೌಸಂಡ್ ದ್ವೀಪ ಪ್ರದೇಶದ ಮೀನುಗಾರ ನೂರ್ಹಾಸನ್ ದ್ವೀಪದಲ್ಲಿ ಲೋಹದ ತುಂಡುಗಳು ಪತ್ತೆಯಾಗಿವೆ ಎಂದು ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದ.

    26 ವರ್ಷಗಳ ಹಳೆಯ ವಿಮಾನ

    26 ವರ್ಷಗಳ ಹಳೆಯ ವಿಮಾನ ಇದಾಗಿದ್ದು, 2018ರಲ್ಲಿ ಜಕಾರ್ತದಲ್ಲಿ ಅಪಘಾತಕ್ಕೀಡಾಗಿದ್ದ ಲಯನ್ ಏರ್ ಫ್ಲೈಟ್​ನ 737 ಮ್ಯಾಕ್ಸ್ ಮಾಡೆಲ್​ಗಿಂತಲೂ ಹಿಂದಿನದ್ದಾಗಿದೆ. ಸಾವಿರಾರು ದ್ವೀಪಗಳಿಂದ ಕೂಡಿರುವ ಇಂಡೋನೇಷ್ಯಾದಲ್ಲಿ ವಿಮಾನ ದುರಂತಗಳು ಹೊಸತೇನಲ್ಲ. ಇಂಥದ್ದೇ ರೀತಿಯ ಹಲವು ದುರ್ಘಟನೆಗಳಿಗೆ ದೇಶ ಸಾಕ್ಷಿಯಾಗಿದೆ. 2018ರಲ್ಲಿ ಜಕಾರ್ತದಿಂದ ಹಾರಿದ್ದ ವಿಮಾನ ಜಾವಾ ಸಮುದ್ರಕ್ಕೆ ಅಪ್ಪಳಿಸಿದ್ದರಿಂದ ಅದರಲ್ಲಿದ್ದ ಎಲ್ಲಾ 189 ಪ್ರಯಾಣಿಕರು ಮೃತಪಟ್ಟಿದ್ದರು. ಇದಾದ ಎರಡು ವರ್ಷದ ಬಳಿಕ ಮತ್ತೊಂದು ಕರಾಳ ಘಟನೆಗೆ ಸುಮಾರು 74 ಮಂದಿ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. 2014ರಲ್ಲಿ ಇಂಡೋನೇಷ್ಯಾದ ಸುರಬಯಾದಿಂದ ಸಿಂಗಾಪುರಕ್ಕೆ ತೆರಳಿದ್ದ ಏರ್ ಏಷ್ಯಾ ವಿಮಾನ ಸಮುದ್ರಕ್ಕೆ ಅಪ್ಪಳಿಸಿ 162 ಮಂದಿ ಸಾವಿಗೀಡಾಗಿದ್ದರು. 1997ರಲ್ಲಿ ಸುಮಾತ್ರಾ ದ್ವೀಪಕ್ಕೆ ಇಂಡೋನೇಷ್ಯಾ ವಿಮಾನ ಅಪ್ಪಳಿಸಿ 237 ಮಂದಿ ಮೃತಪಟ್ಟಿದ್ದು ಇಂಡೋನೇಷ್ಯಾ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಎಂದು ದಾಖಲಾಗಿದೆ.

    ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

    ವಾಟ್ಸ್​ಆ್ಯಪ್​ಗೆ ಬಾಯ್​ ಬಾಯ್​, ಟೆಲಿಗ್ರಾಮ್​ಗೆ ಹಾಯ್​ ಹಾಯ್​: ಯಾಕೆ, ಏನಾಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts