More

    ಬೆಂಗಳೂರಿಗೆ ಟೇಕಾಫ್​ ಆಗಬೇಕಿದ್ದ ಇಂಡಿಗೋ ವಿಮಾನದಲ್ಲಿ ಬೆಂಕಿ: ತಪ್ಪಿದ ಭಾರಿ ಅನಾಹುತ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಬೆಂಗಳೂರಿಗೆ ಇನ್ನೇನು ಟೇಕಾಫ್​ ಆಗಬೇಕಿದ್ದ ಇಂಡಿಗೋ ವಿಮಾನದ ಇಂಜಿನ್​ ಒಂದಕ್ಕೆ ಬೆಂಕಿ ತಗುಲಿದ ಪರಿಣಾಮ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಿದ ಘಟನೆ ವರದಿಯಾಗಿದೆ.

    ಇಂಡಿಗೋ ವಿಮಾನ 6ಇ-2131 ರಲ್ಲಿದ್ದ ವಿಮಾನದ ಸಿಬ್ಬಂದಿ ಸೇರಿ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿ 184 ಮಂದಿ ಇದ್ದರು. ಶುಕ್ರವಾರ ರಾತ್ರಿ 9.45ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿ ತಗುಲಿದ ತಕ್ಷಣ ಪ್ರಯಾಣಿಕರನೆಲ್ಲ ಸ್ಥಳಾಂತರ ಮಾಡಿ, ರಾತ್ರಿ 11 ಗಂಟೆಗೆ ಮತ್ತೊಂದು ವಿಮಾನದಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಪ್ರಯಾಣಿಕರಲ್ಲಿ ಒಬ್ಬರಾದ ಪ್ರಿಯಾಂಕಾ ಕುಮಾರ್​ ಎಂಬುವರು ಘಟನೆಯ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ವಿಮಾನದ ಇಂಜಿನ್​ಗಳಲ್ಲಿ ಒಂದಕ್ಕೆ ಬೆಂಕಿ ಹೊತ್ತಿಕೊಂಡು, ಕಿಡಿಗಳು ಹಾರುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

    ಐದರಿಂದ ಏಳು ಸೆಕೆಂಡ್​ಗಳಲ್ಲಿ ವಿಮಾನ ಟೇಕಾಫ್​ ಆಗಬೇಕಿತ್ತು. ಈ ವೇಳೆ ದಿಢೀರನೇ ಬೆಂಕಿ ಕಾಣಿಸಿಕೊಂಡು ರೆಕ್ಕೆಗಳಿಂದ ಬೆಂಕಿಯ ಕಿಡಿಗಳು ಹೊರ ಬರುತ್ತಿತ್ತು. ಅದು ಭಾರಿ ಪ್ರಮಾಣದ ಬೆಂಕಿಯಾಗಿ ಬದಲಾಯಿತು. ತಕ್ಷಣ ವಿಮಾನವನ್ನು ನಿಲ್ಲಿಸಲಾಯಿತು. ಇಂಜಿನ್​ನಲ್ಲಿ ಕೆಲವೊಂದು ದೋಷವುಂಟಾಗಿದೆ ಎಂದು ಪೈಲಟ್​ ತಿಳಿಸಿದರು. ನಾವು ಆ ಸಮಯದಲ್ಲಿ ಇನ್ನೂ ವಿಮಾನದಲ್ಲಿ ಇದ್ದೆವು. ಏಕೆಂದರೆ, ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು. ನಂತರ ವಿಮಾನವನ್ನು ಪಾರ್ಕಿಂಗ್ ಜಾಗಕ್ಕೆ ಕೊಂಡೊಯ್ಯಲಾಯಿತು ಮತ್ತು ಇಂಡಿಗೋ ನಮಗೆ ಮತ್ತೊಂದು ವಿಮಾನವನ್ನು ವ್ಯವಸ್ಥೆಗೊಳಿಸಿದೆ ಎಂದು ಎಂದು ಪ್ರಿಯಾಂಕಾ ಕುಮಾರ್​ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

    ಆರಂಭದಲ್ಲಿ ಎಲ್ಲರು ಭಯಭೀತರಾಗಿದ್ದರು. ಆದರೆ, ಸಿಬ್ಬಂದಿ ನಮಗೆ ಧೈರ್ಯ ತುಂಬಿದರು. ನಮಗೆ ನೀರು ನೀಡಿದರು. ಸುತ್ತಲೂ ಸಾಕಷ್ಟು ವಯಸ್ಸಾದ ಜನರು ಮತ್ತು ಮಕ್ಕಳು ಇದ್ದರು. ಸದ್ಯ ಎಲ್ಲರೂ ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಅಪಾಯ ಸಂಭವಿಸಲಿಲ್ಲ ಎಂದು ಪ್ರಿಯಾಂಕಾ ನಿಟ್ಟುಸಿರು ಬಿಟ್ಟರು.

    ಘಟನೆಯ ಬೆನ್ನಲ್ಲೇ ಇಂಡಿಗೋ ವಿಮಾನ ಸಂಸ್ಥೆ ಸ್ಪಷ್ಟನೆ ನೀಡಿದ್ದು, ದೆಹಲಿಯಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿದ್ದ ವಿಮಾನ 6ಇ-2131 ಟೇಕಾಫ್ ರೋಲ್ ಸಮಯದಲ್ಲಿ ಎಂಜಿನ್ ಸ್ಥಗಿತಗೊಂಡಿತು. ತಕ್ಷಣ ಟೇಕಾಫ್ ನಿಲ್ಲಿಸಿ, ವಿಮಾನವು ಸುರಕ್ಷಿತವಾಗಿ ಪಾರ್ಕಿಂಗ್​ ಜಾಗಕ್ಕೆ ಕರೆತರಲಾಯಿತು ಎಂದು ಹೇಳಿದೆ. ಅಲ್ಲದೆ, ಎಲ್ಲ ಪ್ರಯಾಣಿಕರಿಗೆ ಪರ್ಯಾಯ ವಿಮಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಕಂಪನಿ ಕ್ಷಮೆಯಾಚಿಸಿದೆ. (ಏಜೆನ್ಸೀಸ್​)

    ಪುನೀತ್ ಮೊದಲ ವರ್ಷದ ಪುಣ್ಯತಿಥಿ; ಚಾಮುಂಡಿ ತಾಯಿಗೆ ಅಶ್ವಿನಿ ಪೂಜೆ

    ಅಪೌಷ್ಟಿಕ ಮಕ್ಕಳಿಗೆ ಆಯುಷ್ ಆಸರೆ!; ಚಿಣ್ಣರ ತೂಕ ಹೆಚ್ಚಳ, ರಾಜ್ಯಕ್ಕೆ ಮಾದರಿಯಾದ ದಾವಣಗೆರೆ

    ಜನವರಿಗೆ ಪ್ರಿಪೇಯ್ಡ್​ ಮೀಟರ್, ಸರ್ಕಾರಿ ಕಚೇರಿಗಳಿಗೆ ಅಳವಡಿಕೆ: ಸಚಿವ ಸುನೀಲ್​ಕುಮಾರ್ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts