More

    ರನ್​ವೇನಲ್ಲಿ ಕುಳಿತು ಪ್ರಯಾಣಿಕರಿಂದ ಆಹಾರ ಸೇವನೆ: ಇಂಡಿಗೋಗೆ ಬಿತ್ತು 1.2 ಕೋಟಿ ರೂ. ದಂಡ

    ಮುಂಬೈ: ವಿಮಾನ ಹಾರಾಟ ವಿಳಂಬವಾದ ಬಳಿಕ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ರನ್​ವೇನಲ್ಲೇ ಊಟ, ತಿಂಡಿ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ ಇಂಡಿಗೋ ವಿಮಾನ ಮತ್ತು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ರಮವಾಗಿ 1.2 ಕೋಟಿ ಮತ್ತು 90 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

    ಡೈರೆಕ್ಟರೇಟ್​ ಜನರಲ್​ ಆಫ್​ ಸಿವಿಲ್​ ಏವಿಯೇಷನ್​ (ಡಿಜಿಸಿಎ) ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್​) ದಂಡವನ್ನು ವಿಧಿಸಿದೆ. ಇಂಡಿಗೋ ವಿಮಾನ ವಿಳಂಬವಾದ ಕಾರಣ ಪ್ರಯಾಣಿಕರು ರನ್​ವೇನಲ್ಲಿ ಕುಳಿತು ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಇಂಡಿಗೋ ಮತ್ತು ಮುಂಬೈ ಏರ್​ಪೋರ್ಟ್​ಗೆ ಶೋಕಾಸ್​ ನೋಟಿಸ್​ ನೀಡಿ ಉತ್ತರಿಸುವಂತೆ ಕೇಳಿತ್ತು.

    ಈ ಪ್ರಕರಣ ಭಾರಿ ವಿವಾದ ಹುಟ್ಟು ಹಾಕಿದ ಹಿನ್ನೆಲೆಯಲ್ಲಿ ಇದೀಗ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಬಿಸಿಎಎಸ್​, ಇಂಡಿಗೋ ವಿಮಾನ ಸಂಸ್ಥೆಗೆ 1.2 ಕೋಟಿ ಮತ್ತು ಮುಂಬೈ ಏರ್​ಪೋರ್ಟ್​ಗೆ 60 ಲಕ್ಷ ದಂಡ ವಿಧಿಸಿದರೆ, 30 ಲಕ್ಷ ರೂ. ದಂಡ ಪಾವತಿ ಮಾಡುವಂತೆ ಡಿಜಿಸಿಎ ಮುಂಬೈ ಏರ್ಪೋರ್ಟ್​ ಅನ್ನು ಕೇಳಿದೆ.

    ಸಕ್ರಿಯ ರನ್​ವೇನಲ್ಲಿ ತುಂಬಾ ಸಮಯದವರೆಗೆ ಪ್ರಯಾಣಿಕರು ಇದ್ದಿದ್ದು, ನಿಯಮಗಳಿಗೆ ವಿರುದ್ಧವಾಗಿದೆ. ಪ್ರಯಾಣಿಕರು ಮತ್ತು ವಿಮಾನ ಅಪಾಯಕ್ಕೆ ಸಿಲುಕಬಹುದಿತ್ತು ಎಂದು ಮುಂಬೈ ಏರ್​ಪೋರ್ಟ್​ಗೆ DGCA ಹೇಳಿದೆ. ಇದಕ್ಕೆ ಉತ್ತರ ನೀಡಿರುವ ಏರ್​ಪೋರ್ಟ್​, ಗೋವಾದಿಂದ ದೆಹಲಿಗೆ ತೆರಳಬೇಕಿದ್ದ ವಿಮಾನ ವಿಳಂಬವಾದಾಗಲೇ ಪ್ರಯಾಣಿಕರು ನಿರಾಶೆಗೊಂಡಿದ್ದರು ಮತ್ತು ಮಂಜಿನಿಂದಾಗಿ ವಿಮಾನವನ್ನು ಮುಂಬೈಗೆ ತಿರುಗಿಸಿದಾಗ, ಪ್ರಯಾಣಿಕರು ರನ್​ವೇ ಮೇಲೆ ಧಾವಿಸಿದರು ಎಂದು ಮುಂಬೈ ವಿಮಾನ ನಿಲ್ದಾಣವು ಸ್ಪಷ್ಟನೆ ನೀಡಿತ್ತು. ಆದರೆ, ಮುಂಬೈ ಏರ್​ಪೋರ್ಟ್​ ಮಾತನ್ನು ಒಪ್ಪದ ಡಿಜಿಸಿಎ ದಂಡವನ್ನು ವಿಧಿಸಿದೆ.

    ನಿನ್ನೆಯಷ್ಟೇ ಇಂಡಿಗೋ ಮತ್ತು ಮುಂಬೈ ಏರ್​ಪೋರ್ಟ್​ಗೆ ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ) ಶೋಕಾಸ್​ ನೋಟಿಸ್​ ನೀಡಿತು. ಇಂಡಿಗೋ ವಿಮಾನ ಮತ್ತು ಮುಂಬೈ ವಿಮಾನ ನಿಲ್ದಾಣ ಎರಡೂ ಕೂಡ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಪ್ರಯಾಣಿಕರಿಗೆ ಸೂಕ್ತವಾದ ಅನುಕೂಲ ವ್ಯವಸ್ಥೆಗಳನ್ನು ನೀಡುವಲ್ಲಿ ವಿಫಲವಾಗಿದೆ. ವಿಶ್ರಾಂತಿ ಕೊಠಡಿಗಳು ಮತ್ತು ಟರ್ಮಿನಲ್‌ನಲ್ಲಿ ಉಪಹಾರ ವ್ಯವಸ್ಥೆಯಂತಹ ಸಾಮಾನ್ಯ ಸೌಲಭ್ಯಗಳನ್ನೂ ಪ್ರಯಾಣಿಕರಿಗೆ ನೀಡಿಲ್ಲ ಎಂದು ಸಚಿವಾಲಯ ಅಸಮಾಧಾನ ಹೊರಹಾಕಿತು.

    ಏನಿದು ಪ್ರಕರಣ?
    ಕಾರ್ಯಾಚರಣೆಯ ಸಮಸ್ಯೆಯಿಂದಾಗಿ ಗೋವಾದಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ಇದಾದ ಬಳಿಕ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರು ನೆಲದ ಮೇಲೆ ಕುಳಿತು ಆಹಾರ ಸೇವಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಇದರ ಬೆನ್ನಲ್ಲೇ ಕೇಂದ್ರ ವಿಮಾನಯಾನ ಸಚಿವಾಲಯ ಇಂಡಿಗೋ ವಿಮಾನ ಮತ್ತು ಏರ್​ಪೋರ್ಟ್​ ಆಡಳಿತ ಮಂಡಳಿಗೆ ನೋಟಿಸ್​ ನೀಡಿತು. ಇದೀಗ ಬಿಸಿಎಎಸ್​ ಮತ್ತು ಡಿಜಿಸಿಎ ದಂಢ ವಿಧಿಸಿದೆ. (ಏಜೆನ್ಸೀಸ್​)

    ರನ್​ವೇನಲ್ಲಿ ಕುಳಿತು ಪ್ರಯಾಣಿಕರಿಂದ ಆಹಾರ ಸೇವನೆ: ಇಂಡಿಗೋ, ಮುಂಬೈ ಏರ್​ಪೋರ್ಟ್​ಗೆ ಕೇಂದ್ರದ ನೋಟಿಸ್​

    ಜನಸಂಖ್ಯೆ ಇಳಿಕೆ, ಚೀನಾಗೆ ಆರ್ಥಿಕ ಹೊಡೆತ; 75 ವರ್ಷಗಳಲ್ಲಿ ಜನನ ಪ್ರಮಾಣ ಕನಿಷ್ಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts