More

    ಜಗತ್ತಿನಲ್ಲೇ ಭಾರತದ ಆರ್ಥಿಕತೆ ಭರ್ಜರಿ ಬೆಳವಣಿಗೆ: ಜಿಡಿಪಿ ದರ ಶೇಕಡಾ 7.3 ಎಂದು ಅಂದಾಜಿಸಿದೆ ಎನ್​ಎಸ್​ಒ

    ನವದೆಹಲಿ: ಮಾರ್ಚ್‌ನಲ್ಲಿ ಕೊನೆಗೊಳ್ಳುವ ಪ್ರಸಕ್ತ ಹಣಕಾಸು (2023-24) ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.3 ರಷ್ಟು  ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಇದು ಪ್ರಮುಖ ಜಾಗತಿಕ ಆರ್ಥಿಕತೆಗಳ ಪೈಕಿ ಅತ್ಯಧಿಕ ಬೆಳವಣಿಗೆ ದರವಾಗಿದೆ, ಇದು ಸರ್ಕಾರದ ಖರ್ಚು ಮತ್ತು ಉತ್ಪಾದನೆಯಲ್ಲಿನ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ ಎಂದು ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ನ್ಯಾಷನಲ್​ ಸ್ಟ್ಯಾಟಸ್ಟಿಕ್ ಆಫೀಸ್​- ಎನ್​ಎಸ್​ಒ) ಶುಕ್ರವಾರ ತಿಳಿಸಿದೆ.

    ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳೆದ ತಿಂಗಳು ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಈ ಹಿಂದಿನ ಅಂದಾಜಾದ ಶೇಕಡಾ 6.5ರಿಂದ ಶೇಕಡಾ 7ಕ್ಕೆ ಹೆಚ್ಚಿಸಿತ್ತು. ಇದಾದ ನಂತರ ಈಗ ಎನ್​ಎಸ್​ಒ ತನ್ನ ವಾರ್ಷಿಕ ಒಟ್ಟು ದೇಶೀಯ ಉತ್ಪನ್ನದ (ಗ್ರಾಸ್​ ಡೊಮೆಸ್ಟಿಕ್​ ಪ್ರೊಡಕ್ಟ್- ಜಿಡಿಪಿ) ಮೊದಲ ಮುಂಗಡ ಅಂದಾಜುಗಳನ್ನು ಪ್ರಕಟಿಸಿದೆ.

    ಇವು 2023-24 ರ ಆರಂಭಿಕ ಮುನ್ಸೂಚನೆಗಳಾಗಿವೆ” ಎಂದು ಎನ್​ಎಸ್​ಒ ಹೇಳಿಕೆಯಲ್ಲಿ ತಿಳಿಸಿದೆ, ಸುಧಾರಿತ ದತ್ತಾಂಶಗಳು, ನಿಜವಾದ ತೆರಿಗೆ ರಶೀದಿಗಳು ಮತ್ತು ರಾಜ್ಯ ಸಬ್ಸಿಡಿಗಳ ಮೇಲಿನ ಖರ್ಚು ಮುಂತಾದ ಸಂಗತಿಗಳು ಈ ಪರಿಷ್ಕರಣೆಯ ಮೇಲೆ ಪ್ರಭಾವ ಬೀರಿವೆ ಎಂದು ಅದು ಹೇಳಿದೆ.

    ಭಾರತದ ಆರ್ಥಿಕತೆಯು 2022-23 ರಲ್ಲಿ ಶೇಕಡಾ 7.2 ಮತ್ತು 2021-22 ರಲ್ಲಿ ಶೇಕಡಾ 8.7 ರಷ್ಟು ಬೆಳೆದಿದೆ.

    ಜಿಡಿಪಿಯ ಅಂದಾಜು 17 ಪ್ರತಿಶತದಷ್ಟು ಪಾಲನ್ನು ಹೊಂದಿರುವ ಉತ್ಪಾದನೆ ವಲಯವು 2023-24 ರಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 6.5 ವಿಸ್ತರಣೆಯಾಗಿದೆ ಎಂದು ಲೆಕ್ಕ ಹಾಕಲಾಗಿದೆ, ಒಂದು ವರ್ಷದ ಹಿಂದೆ ಇದು ಶೇಕಡಾ 1.3 ರಷ್ಟು ಹೆಚ್ಚಳವನ್ನು ದಾಖಲಿಸಿತ್ತು. ನಿರ್ಮಾಣ ವಲಯವು ಶೇಕಡಾ 10.7 ರಷ್ಟು ಬೆಳವಣಿಗೆ ಕಾಣಲಿದೆ. ಹಿಂದಿನ ವರ್ಷ ಈ ವಲಯವು 10 ಪ್ರತಿಶತದಷ್ಟು ಬೆಳವಣಿಗೆ ದಾಖಲಿಸಿತ್ತು ಎಂದು ಅಂಕಿಅಂಶಗಳು ತೋರಿಸಿವೆ.

    ಜಿಡಿಪಿಗೆ ಶೇಕಡಾ 15 ರಷ್ಟು ಪಾಲು ನೀಡುತ್ತಿರುವ ಕೃಷಿ ವಲಯದ ಬೆಳವಣಿಗೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 1.8 ಕ್ಕೆ ವೃದ್ಧಿ ಮಾತ್ರ ಕಾಣಲಿದೆ. ಇದು ಹಿಂದಿನ ವರ್ಷದಲ್ಲಿ ಶೇಕಡಾ 4 ರಿಂದ ಪ್ರಗತಿ ಸಾಧಿಸಿತ್ತು. ಈ ಕುಸಿತವು ಗ್ರಾಮೀಣ ವೇತನದ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.

    ಭಾರತವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 7.6 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಇದು ನಿರೀಕ್ಷೆಗಿಂತ ಅಧಿಕವಾಗಿದೆ, ಹಿಂದಿನ ತ್ರೈಮಾಸಿಕದಲ್ಲಿ 7.8 ರಷ್ಟು ಬೆಳೆವಣಿಗೆ ಕಂಡಿತ್ತು.

    ಎಸ್​ ಆ್ಯಂಡ್​ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆಯು ಭಾರತವು ಮುಂದಿನ ಮೂರು ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯುತ್ತದೆ ಎಂದು ನಿರೀಕ್ಷಿಸಿದೆ. 2030 ರ ವೇಳೆಗೆ ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದೂ ಅದು ಹೇಳಿದೆ.

    ಜಿಡಿಪಿ ವೃದ್ಧಿ ದರ ಎಂದರೇನು?:

    ಜಿಡಿಪಿ (ಗ್ರಾಸ್​ ಡೊಮೆಸ್ಟಿಕ್​ ಪ್ರೊಡಕ್ಟ್​. ಒಟ್ಟು ದೇಶೀಯ ಉತ್ಪನ್ನ) ಎಂದರೆ ಒಂದು ದೇಶವು ನಿರ್ದಿಷ್ಟ ಅವಧಿಯಲ್ಲಿ (ಸಾಮಾನ್ಯವಾಗಿ ಒಂದು ವರ್ಷದ ಅವಧಿಯಲ್ಲಿ) ಉತ್ಪಾದಿಸುವ ಸರಕುಗಳು ಮತ್ತು ಸೇವೆಗಳ ಒಟ್ಟು ಮೌಲ್ಯವಾಗಿದೆ. ಜಿಡಿಪಿ ವೃದ್ಧಿ ದರ ಅಥವಾ ಜಿಡಿಪಿ ಬೆಳವಣಿಗೆ ದರ ಎಂದರೆ ಒಂದು ವರ್ಷದಲ್ಲಿ ಜಿಡಿಪಿ ಮೌಲ್ಯವು ಹೆಚ್ಚಾಗುವ ಶೇಕಡಾವಾರು ಪ್ರಮಾಣವಾಗಿದೆ.

    ಸತತ ಎರಡನೇ ದಿನ ವಿವಿಧ ಸೂಚ್ಯಂಕಗಳ ಏರಿಕೆ: ಷೇರುಗಳ ಬೆಲೆ ಹೆಚ್ಚಳಕ್ಕೆ ಕಾರಣಗಳೇನು?

    ಸ್ಥಳೀಯ ಸಮುದಾಯದ ಪರ ಭಾವೋದ್ರೇಕಿತ ಭಾಷಣ: ನ್ಯೂಜಿಲೆಂಡ್ ಸಂಸದೆಯ ವಿಡಿಯೋ ವೈರಲ್ ಆಗಿದ್ದೇಕೆ?

    ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಲ್​ಇಟಿ ಉಗ್ರನ ಹತ್ಯೆಗೈದ ಸೇನಾಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts