More

    ಭಾರತೀಯ ಮೂಲದ ಪಿಎಚ್​ಡಿ ವಿದ್ಯಾರ್ಥಿ ಅಮೆರಿಕದಲ್ಲಿ ಗುಂಡೇಟಿಗೆ ಬಲಿ

    ಓಹಿಯೋ: ಕೆಲವು ದಿನಗಳ ಹಿಂದೆ ಕಾರಿನ ಒಳಗಡೆ ಗುಂಡೇಟು ತಿಂದಿದ್ದ 26 ವರ್ಷದ ಭಾರತೀಯ ಮೂಲದ ಪಿಎಚ್​ಡಿ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಅಮೆರಿಕ ಓಹಿಯೋ ರಾಜ್ಯದಲ್ಲಿ ನಡೆದಿದೆ.

    ಮೃತ ವಿದ್ಯಾರ್ಥಿಯನ್ನು ಆದಿತ್ಯ ಅದ್ಲಾಖಾ ಎಂದು ಗುರುತಿಸಲಾಗಿದೆ. ಈತ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಮೊಲಿಕ್ಯುಲಾರ್​ ಅಂಡ್​ ಡೆವಲಪ್ಮೆಂಟಲ್ ಬಯಾಲಜಿ ಪ್ರೊಗ್ರಾಮ್​ನಲ್ಲಿ​ ಪಿಎಚ್​ಡಿ ವಿದ್ಯಾರ್ಥಿಯಾಗಿದ್ದ. ನ.9ರಂದು ಕಾರಿನ ಒಳಗೆ ಆದಿತ್ಯಗೆ ಗುಂಡಿಕ್ಕಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನ.18ರಂದು ವಿಶ್ವವಿದ್ಯಾಲಯದ ಮೆಡಿಕಲ್​ ಸೆಂಟರ್​ನಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಫಾಕ್ಸ್​ 19 ವರದಿ ಮಾಡಿದೆ.

    ವೆಸ್ಟರ್ನ್ ಹಿಲ್ಸ್ ವಯಾಡಕ್ಟ್‌ನಲ್ಲಿ ಗೋಡೆಗೆ ಡಿಕ್ಕಿ ಹೊಡೆದ ವಾಹನದೊಳಗೆ ಆದಿತ್ಯ ಗುಂಡೇಟು ತಿಂದಿರುವ ಸ್ಥಿತಿಯಲ್ಲಿ ಸಿನ್ಸಿನಾಟಿ ಪೊಲೀಸರ ಕಣ್ಣಿಗೆ ಪತ್ತೆಯಾಗಿದ್ದ. ನವೆಂಬರ್ 9 ರಂದು ಬೆಳಿಗ್ಗೆ 6.20ರ ಸುಮಾರಿಗೆ ಈ ಪ್ರದೇಶದಲ್ಲಿ ಗುಂಡಿನ ಶಬ್ದ ಕೇಳಿತು ಎಂದು ಸ್ಥಳೀಯರು ವರದಿ ಮಾಡಿದ್ದಾರೆ. ಅಲ್ಲದೆ, ಚಾಲಕನ ಬದಿಯ ಕಿಟಕಿಯಲ್ಲಿ ಕನಿಷ್ಠ ಮೂರು ಬುಲೆಟ್ ರಂಧ್ರಗಳಿವೆ. ಗಾಯಗೊಂಡಿದ್ದ ಆದಿತ್ಯನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಹಲವು ದಿನಗಳವರೆಗೆ ಗಂಭೀರ ಸ್ಥಿತಿಯಲ್ಲಿದ್ದ ಆದಿತ್ಯ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    ಈ ಗುಂಡಿನ ಘಟನೆಯು ಆದಿತ್ಯ ಅವರ ಸ್ನೇಹಿತರು ಮತ್ತು ಪರಿಚಯಸ್ಥರನ್ನು ಆಘಾತಗೊಳಿಸಿದ್ದು, ವಿಶ್ವವಿದ್ಯಾನಿಲಯವು ಇದನ್ನು “ಹಠಾತ್ ದುರಂತ ಮತ್ತು ಪ್ರಜ್ಞಾಶೂನ್ಯ” ಎಂದು ಕರೆದಿದೆ. ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ ಸಿನ್ಸಿನಾಟಿ ಕಾಲೇಜ್ ಆಫ್ ಮೆಡಿಸಿನ್‌ ಡೀನ್ ಆಂಡ್ರ್ಯೂ ಫಿಲಾಕ್, ಆದಿತ್ಯ ಅವರು ಹೆಚ್ಚು ಪ್ರೀತಿಪಾತ್ರರಾಗಿದ್ದರು ಮತ್ತು ಅತ್ಯಂತ ದಯೆ, ಹಾಸ್ಯಮಯ ಹಾಗೂ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು ಎಂದು ಹೇಳಿದ್ದಾರೆ.

    ದೆಹಲಿಯ ವಿಶ್ವವಿದ್ಯಾನಿಲಯದ ರಾಮಜಾಸ್ ಕಾಲೇಜಿನಲ್ಲಿ 2018ರಲ್ಲಿ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ, ಆದಿತ್ಯ ಅವರು ಸಿನ್ಸಿನಾಟಿಗೆ ತೆರಳುವ ಮೊದಲು 2020ರಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಶರೀರಶಾಸ್ತ್ರದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

    ಅವರ ಮೇಲಿನ ದಾಳಿಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ ಮತ್ತು ಇದುವರೆಗೂ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಸದ್ಯ ತನಿಖೆ ಮುಂದುವರಿದಿದೆ. ಆದಿತ್ಯ ಸಾವು ಅವರ ಕುಟುಂಬಸ್ಥರಿಗೆ ತೀವ್ರ ನೋವನ್ನು ಉಂಟು ಮಾಡಿದೆ. (ಏಜೆನ್ಸೀಸ್​)

    ವಂಚನೆ ಬಗ್ಗೆ ಗೊತ್ತಿದ್ದರೂ ತುಟಿ ಬಿಚ್ಚದ ನಟ ಪ್ರಕಾಶ್​ ರಾಜ್​ಗೆ ಇಡಿ ಶಾಕ್​!

    ಸಂಸತ್ತಿನ ವೆಬ್‌ಸೈಟ್ ಪ್ರವೇಶ ನಿಯಮ ಬದಲಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts