ವಂಚನೆ ಬಗ್ಗೆ ಗೊತ್ತಿದ್ದರೂ ತುಟಿ ಬಿಚ್ಚದ ನಟ ಪ್ರಕಾಶ್​ ರಾಜ್​ಗೆ ಇಡಿ ಶಾಕ್​!

Prakash Raj
Prakash Raj
Published on

ನವದೆಹಲಿ: ಆಭರಣ ವ್ಯಾಪಾರಿಯೊಬ್ಬರಿಗೆ ಲಿಂಕ್​ ಇರುವ 100 ಕೋಟಿ ರೂ. ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಹುಭಾಷ ನಟ ಪ್ರಕಾಶ್​ ರಾಜ್​ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಸಮನ್ಸ್​ ನೀಡಿದೆ.

ಪ್ರಕಾಶ್​ ರಾಜ್​ ಅವರು ಹಗರಣದ ಆರೋಪ ಹೊತ್ತಿರುವ ಪ್ರಣವ್​ ಜ್ಯುವೆಲರ್ಸ್​ನ ರಾಯಭಾರಿಯಾಗಿದ್ದರು. ಚೆನ್ನೈ ಸೇರಿದಂತೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಲವು ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿರುವ ತಿರುಚ್ಚಿ ಮೂಲದ ಪ್ರಣವ್​ ಜ್ಯುವೆಲರ್ಸ್​ ಸರಣಿ ಶಾಖೆಗಳ ಮೇಲೆ ಇಡಿ ಈ ಹಿಂದೆ ದಾಳಿ ನಡೆಸಿತ್ತು. ಹೂಡಿಕೆದಾರರಿಗೆ 100 ಕೋಟಿ ರೂ. ವಂಚನೆ ಮಾಡಿರುವ ಆರೋಪದ ಮೇಲೆ ದಾಳಿ ನಡೆಸಿ ಪರೀಶಿಲನೆ ನಡೆಸಿತ್ತು.

ಪ್ರಣವ್​ ಜ್ಯುವೆಲರ್ಸ್​ಗೆ ಪ್ರಕಾಶ್​ ರಾಜ್​ ಅವರು ಕೆಲವು ಕಾಲ ರಾಯಭಾರಿಯಾಗಿದ್ದರು. ಆದರೆ, ಈ ಹಗರಣ ಬಗ್ಗೆ ಇದುವರೆಗೂ ಯಾವುದೇ ಕಾಮೆಂಟ್​ ಮಾಡಿಲ್ಲ. ಹೀಗಾಗಿ ಇಡಿ ಪ್ರಕಾಶ್​ ರಾಜ್​ ಅವರಿಗೆ ನೋಟಿಸ್​ ವಿಚಾರಣೆಗೆ ಹಾಜರಾಗಲು ತಿಳಿಸಿದೆ.

ಅಕ್ರಮ ನಡೆದಿರುವುದು ಕಂಡುಬಂದ ಬೆನ್ನಲ್ಲೇ ಪ್ರಣವ್ ಜ್ಯುವೆಲರ್ಸ್ ನಡೆಸುತ್ತಿದ್ದ ಮಳಿಗೆಗಳನ್ನು ಅಕ್ಟೋಬರ್‌ನಲ್ಲಿ ಮುಚ್ಚಲಾಯಿತು. ಸಾಕುಷ್ಟು ದೂರುಗಳು ಬಂದ ಆಧಾರದ ಮೇಲೆ ತಮಿಳುನಾಡಿನ ತಿರುಚ್ಚಿಯ ಆರ್ಥಿಕ ಅಪರಾಧಗಳ ವಿಭಾಗವು ಮಾಲೀಕ ಮದನ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಈ ತಿಂಗಳ ಆರಂಭದಲ್ಲಿ ಮಾಲೀಕರು ಮತ್ತು ಅವರ ಪತ್ನಿ ವಿರುದ್ಧ ಲುಕ್‌ಔಟ್ ನೋಟಿಸ್ ಕೂಡ ಜಾರಿ ಮಾಡಿದೆ.

ಈ ಆಭರಣ ಮಳಿಗೆ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂದು ನಂಬಿಸಿ, ಹೂಡಿಕೆದಾರರ ಬಳಿ 100 ಕೋಟಿ ರೂ. ಸಂಗ್ರಹಿಸಿದೆ. ಆದರೆ, ಯಾವುದೇ ಲಾಭವನ್ನು ನೀಡಿಲ್ಲ ಮತ್ತು ಹೂಡಿಕೆ ಮಾಡಿದ ಮೊತ್ತವನ್ನು ಸಹ ಯಾರಿಗೂ ಹಿಂತಿರುಗಿಸಿಲ್ಲ ಎಂದು ಇಡಿ ನಿನ್ನೆ (ನ.23) ಪತ್ರಿಕಾ ಹೇಳಿಕೆಯನ್ನು ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net