More

    ಸುಕೇಶ್​​ಗೆ ಸೇರಿದ 11 ಐಷಾರಾಮಿ ವಾಹನಗಳ ಹರಾಜು! ಯಾವ್ಯಾವ ಕಾರುಗಳು? ಬೆಲೆ ಎಷ್ಟು? ಇಲ್ಲಿದೆ ಮಾಹಿತಿ…

    ನವದೆಹಲಿ: ಅಕ್ರಮ ಆಸ್ತಿ ವರ್ಗಾವಣೆ, 200 ಕೋಟಿ ರೂ. ಸುಲಿಗೆ ಪ್ರಕರಣ ಸೇರಿದಂತೆ ಹಲವಾರು ವಂಚನೆ ಪ್ರಕರಣದಲ್ಲಿ ಬಂಧನವಾಗಿರುವ ಮಹಾ ವಂಚಕ ಸುಕೇಶ್​ ಚಂದ್ರಶೇಖರ್​ಗೆ ಸಂಬಂಧಿಸಿದ ಉನ್ನತ ಮಟ್ಟದ ಮತ್ತು ಐಷಾರಾಮಿ ವಾಹನಗಳ ಹರಾಜು ಮುಂದಿನ ವಾರ ನಡೆಯಲಿದೆ.

    ಹಲವಾರು ಸಂಸ್ಥೆಗಳಿಗೆ ನೀಡಬೇಕಾದ ಬಾಕಿ ಹಣವನ್ನು ವಸೂಲಿ ಮಾಡುವ ಪ್ರಯತ್ನದ ಭಾಗವಾಗಿ ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯು ಸುಕೇಶ್​ ಅವರ ವಾಹನಗಳನ್ನು ಹರಾಜು ಹಾಕಲಿದೆ ಎಂದು ಐಟಿ ಮೂಲಗಳು ಗುರುವಾರ ತಿಳಿಸಿವೆ.

    ಐಟಿ ಮೂಲಗಳ ಪ್ರಕಾರ 11 ಕಾರುಗಳು ಮತ್ತು ಒಂದು ಲಕ್ಷುರಿ ಬೈಕ್​ ಅನ್ನು ನವೆಂಬರ್​ 28ರಂದು ಹರಾಜು ಹಾಕಲಾಗುತ್ತದೆ. ಬಿಎಂಡಬ್ಲ್ಯು ಎಂ5, ಟೊಯೊಟಾ ಪ್ರಡೋ, ರೇಂಜ್​ ರೋವರ್​, ಲ್ಯಾಂಬೋರ್ಗಿನಿ, ಜಾಗ್ವಾರ್​ ಎಕ್ಸ್​ಕೆಆರ್​ ಕೋಪ್​, ರೋಲ್ಸ್​ ರೊಯ್ಸ್​, ಬೆಂಟ್ಲಿ, ಇನ್ನೋವಾ ಕ್ರಿಸ್ಟಾ, ಟೊಯೊಟಾ ಫಾರ್ಚುನರ್​, ನಿಸಾನ್​ ತೇನಾ ಮತ್ತು ಪೋರ್ಸೆ ಕಾರುಗಳು ಹರಾಜಾಗಲಿವೆ. ಈ 11 ಕಾರುಗಳಲ್ಲದೆ, ಸ್ಪೋರ್ಟ್ಸ್ ಕ್ರೂಸರ್ ಬೈಕ್ – ಡುಕಾಟಿ ಡಯಾವೆಲ್ ಅನ್ನು ಸಹ ಐಟಿ ಇಲಾಖೆ ಹರಾಜು ಮಾಡಲಿದೆ.

    ಈ ವಾಹನಗಳ ಬೆಲೆ 2.03 ಲಕ್ಷ ರೂ.ನಿಂದ 1.74 ಕೋಟಿ ರೂಪಾಯಿವರೆಗೂ ಇರಲಿದೆ. ಈ ವಾಹನಗಳನ್ನು ತಮಿಳುನಾಡು ಮತ್ತು ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಐಟಿ ಇಲಾಖೆ ವಶಕ್ಕೆ ಪಡೆಯಿತು. ಇದೀಗ ಆನ್​​ಲೈನ್​ ಮೂಲಕ ಹರಾಜು ಹಾಕಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಈ ವಾಹನಗಳು ಸುಸ್ಥಿತಿಯಲ್ಲಿದ್ದು, ಕೇಂದ್ರ ಆದಾಯ ತೆರಿಗೆ ಕಟ್ಟಡದಲ್ಲಿ ತಪಾಸಣೆಗಾಗಿ ಇಡಲಾಗಿದೆ.

    ಏನಿದು ಕೇಸ್​? ಯಾರೀ ಸುಕೇಶ್ ಚಂದ್ರಶೇಖರ್?
    ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರ ಕುಟುಂಬದಿಂದ ತಾನು ಬಂದವನು ಎಂದು ಹೇಳಿಕೊಂಡಿದ್ದ ಈ ಸುಕೇಶ್‌ ಚಂದ್ರಶೇಖರ್‌ ಜಾಕ್ವೆಲಿನ್ ಜತೆ ಸ್ನೇಹ ಬೆಳೆಸಲು ಮುಂದಾಗಿದ್ದ. ತನ್ನ ಹೆಸರನ್ನು ಸುರೇಶ್‌ ಎಂದು ಹೇಳಿಕೊಂಡಿದ್ದ. ಜಾಕ್ವೆಲಿನ್‌ ಜತೆ ಸ್ನೇಹ ಬೆಳೆಸುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಈತ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಕಚೇರಿ ಸಂಖ್ಯೆಯನ್ನು ನಕಲು ಮಾಡಿ ಜಾಕ್ವೆಲಿನ್‌ ಅವರನ್ನು ಸಂಪರ್ಕಿಸಿದ್ದಾನೆ. ನಂತರ ಆಕೆಯ ಸ್ನೇಹ ಬೆಳೆಸಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಕುರಿತಂತೆ ಜಾಕ್ವೆಲಿನ್ ಅವರ ಹೇಳಿಕೆಯನ್ನೂ ಪಡೆದುಕೊಳ್ಳಲಾಗಿದೆ. ‘ನಾನು ನಿಮ್ಮ ದೊಡ್ಡ ಅಭಿಮಾನಿ, ದಕ್ಷಿಣದ ಚಲನಚಿತ್ರೋದ್ಯಮದಲ್ಲಿ ಸಿನಿಮಾ ಮಾಡಬೇಕು. ಸನ್ ಟಿವಿಯಾಗಿ ನಾನು ಅನೇಕ ಯೋಜನೆಗಳನ್ನು ಹೊಂದಿದ್ದೇನೆ. ನಾನು ಜಯಲಲಿತಾ ಕುಟುಂಬಸ್ಥ, ಚೆನ್ನೈನಲ್ಲಿ ವಾಸವಾಗಿದ್ದೇನೆ’ ಎಂದು ಈತ ಜಾಕ್ವೆಲಿನ್‌ಗೆ ಹೇಳಿದ್ದಾನೆ. ನಂತರ ಆಕೆಯ ಮೇಕಪ್ ಆರ್ಟಿಸ್ಟ್‌ಗೆ ಗೃಹ ಸಚಿವ ಅಮಿತ್ ಷಾ ಅವರ ಕಚೇರಿಯಿಂದ ಕರೆ ಬಂದಂತೆ ಕರೆ ಮಾಡಿದ್ದಾನೆ. ಆ ಮೂಲಕ ಸುಕೇಶ್ ಸರ್ಕಾರದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದಾನೆ ಎಂದು ಜಾಕ್ವೆಲಿನ್‌ ತಿಳಿದುಕೊಂಡು ಮೋಸ ಹೋಗಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

    ಸುಕೇಶ್‌ ಚಂದ್ರಶೇಖರ್ ರೋಹಿಣಿ ಜೈಲಿನಲ್ಲಿದ್ದಾಗ, ಫೋನ್ ವಂಚನೆ ತಂತ್ರಜ್ಞಾನವನ್ನು ಬಳಸಿಕೊಂಡು ಸುಲಿಗೆ ದಂಧೆಯನ್ನು ನಡೆಸುತ್ತಿದ್ದ. ಈತ ವಂಚನೆಯ ಮಾಸ್ಟರ್‌ಮೈಂಡ್. 17 ನೇ ವಯಸ್ಸಿನಿಂದಲೂ ಅಪರಾಧ ಜಗತ್ತಿನ ಭಾಗವಾಗಿದ್ದಾರೆ. ಅವರ ವಿರುದ್ಧ ಅನೇಕ ಎಫ್‌ಐಆರ್‌ಗಳಿವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ. ಜೈಲಿನಲ್ಲಿ ಇರುವಾಗಲೂ ತಂತ್ರಜ್ಞಾನದ ಸಹಾಯದಿಂದ ಜನರನ್ನು ವಂಚಿಸುತ್ತಿದ್ದ. ಕರೆ ಮಾಡಿದ ಫೋನ್ ಸಂಖ್ಯೆಯ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು ಎಂಬಂತೆ ಕರೆ ಮಾಡಿದವರಿಗೆ ನಂಬರ್‌ ಡಿಸ್​​ಪ್ಲೇ ಆಗುತ್ತಿತ್ತು. ಇದರಿಂದ ಎಲ್ಲರೂ ಮೋಸ ಹೋಗುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಜಾಕ್ವೆಲಿನ್​ ಜನ್ಮದಿನಕ್ಕೆ ಕೈ ಬರಹದ ಪ್ರೇಮಪತ್ರ ರವಾನಿಸಿದ ಸುಕೇಶ್​ ಚಂದ್ರಶೇಖರ್​

    ಪ್ರಧಾನಿ ಮೋದಿ ಒಬ್ಬ ಪಾಪಿ ನಮ್ಮ ಆಟಗಾರರಿಗೆ ಕೇಸರಿ ಬಟ್ಟೆ ಧರಿಸುವಂತೆ ಮಾಡಿದ್ದಾನೆ: ಮಮತಾ ಬ್ಯಾನರ್ಜಿ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts