More

    ಭಾರತದ ಸಂಸ್ಕೃತಿ ಜಗತ್ತಿಗೆ ಆದರ್ಶ

    ಕಳಸ: ನಾವು ಜೀವನದ ಮೌಲಗಳನ್ನು ಅಳವಡಿಸಿಕೊಂಡು ನಡೆಯುತ್ತಿರುವುದರಿಂದ ನಮ್ಮ ಸಂಸ್ಕೃತಿ ಜಗತ್ತಿಗೆ ಆದರ್ಶವಾಗಿದೆ ಎಂದು ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಮಠದ ಅನಂತ ಶ್ರೀವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಹೇಳಿದರು.
    ಕಳಸದ ಯಡದಾಳು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಕಾಳಿಕಾಂಬಾ ದೇವರ ನೂತನ ಶಿಲಾಮಯ ದೇವಸ್ಥಾನದ ಉದ್ಘಾಟನೆ ಪುನಃ ಪ್ರತಿಷ್ಠೆ, ಅಷ್ಟಬಂಧ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ಮತ್ತು ಆಶೀರ್ವಚನ ನೀಡಿದ ಅವರು, ಪ್ರಾಚೀನ ಕಾಲದಿಂದ ಇಂದಿನವರೆಗೆ ಈ ಶಿಲ್ಪಿಗಳ ಕೊಡುಗೆ ಆಮೋಘವಾಗಿದೆ ಎಂದರು.
    ಅಂದಿನ ಅಮರ ಶಿಲ್ಪಿ ಜಕಣಾಚಾರ್ಯರಿಂದ ಹಿಡಿದು ಇಂದಿನ ಆಯೋಧ್ಯೆ ರಾಮನ ವಿಗ್ರಹ ನಿರ್ಮಾಣ ಮಾಡಿದ ಅರುಣ್ ಯೋಗಿರಾಜ್‌ವರೆಗೆ ನಡೆದು ಬಂದಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇರುವ ಶಿಲ್ಪ ಕಲಾ ಕೇಂದ್ರಗಳ ನಿರ್ಮಾತೃಗಳು ವಿಶ್ವ ಬ್ರಾಹ್ಮಣ ಶಿಲ್ಪಿಗಳು ಎಂದರು.
    ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಮಿತಿ ಅಧ್ಯಕ್ಷ ಪಿ.ಎ.ಕುಮಾರಸ್ವಾಮಿ ಮಾತನಾಡಿ, ಗ್ರಾಮದಲ್ಲಿ ಒಂದು ದೇವಸ್ಥಾನ ನಿರ್ಮಾಣವಾದರೆ ಅಲ್ಲಿ ಸಮಾಜ ಒಗ್ಗೂಡುತ್ತಿದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ನಮ್ಮ ಸಂಸ್ಕೃತಿ ವಿಕಸನಗೊಳ್ಳುವ ಜತೆಗೆ ಅಲ್ಲಿ ನಡೆಯುವ ಹೋಮ ಹವನಗಳಿಂದ ದುಷ್ಟ ಶಕ್ತಿಗಳು ದೂರವಾಗಿ ರೋಗ ರುಜಿನಗಳು ದೂರವಾಗುವುದರೊಂದಿಗೆ ಸಮಾಜಕ್ಕೆ ಒಂದು ಶಕ್ತಿಯಾಗುತ್ತದೆ ಎಂದು ಹೇಳಿದರು.
    ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿ ಹಾಗೂ ಹೊರನಾಡು ಅನ್ನಪೂಣೇಶ್ವರೀ ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮತ್ತು ರಾಜಲಕ್ಷ್ಮೀ ಜೋಷಿ ಇವರ ಉಪಸ್ಥಿತಿಯಲ್ಲಿ ಬ್ರಹ್ಮಕಲಶೋತ್ಸವ ಸಮಾರಂಭ ನೆರವೇರಿತು.
    ಶ್ರೀದೇವಿಗೆ ಮಹಾಕುಂಭಾಭಿಷೇಕ, ದೇವಾಲಯದ ಕಲಶ ಪ್ರತಿಷ್ಠೆ, ಕಲಶಾರಾಧನೆ, ಶ್ರೀ ಚಂಡಿಕಾ ಹೋಮ, ರಕ್ಷಾ ಧಾರಣೆ, ಬಲಿಹರಣ, ಮಂಗಳ ದ್ರವ್ಯ ದರ್ಶನ, ಅಷ್ಟಾವಧಾನ, ಮಹಾ ನಿವೇದನೆ ನೆರವೇರಿದವು.
    ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಜಿ.ವಾಸುದೇವ ಆಚಾರ್ಯ ಆಳಗೋಡು, ಉಡದಾಳು ಶ್ರೀ ಕಾಳಿಕಾಪರಮೇಶ್ವರೀ ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಎ.ಎನ್.ಪುಟ್ಟಾ ಆಚಾರ್ಯ, ಗೌರವಾಧ್ಯಕ್ಷ ನಾರಾಯಣ ಆಚಾರ್ಯ, ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ, ಸದಸ್ಯೆ ಶ್ರೀಮತಿ ಸುಜಯ ಸದಾನಂದ, ನಾಗಭೂಷಣ ಶಂಭುವಿನ ಹಿತ್ಲು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts