More

    ಮಹಿಳೆಯರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಇಂದು ಭಾರತ ಕಣಕ್ಕೆ; ಪಾಕ್ ಎದುರು ಶುಭಾರಂಭದ ನಿರೀಕ್ಷೆ

    ಮೌಂಟ್ ಮೌಂಗನುಯಿ (ನ್ಯೂಜಿಲೆಂಡ್): ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ಮಿಥಾಲಿ ರಾಜ್ ಸಾರಥ್ಯದ ಭಾರತ ತಂಡ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಶುಭಾರಂಭಕ್ಕೆ ಸಜ್ಜಾಗಿದೆ. ಭಾನುವಾರ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

    2005 ಮತ್ತು 2017ರ ಆವೃತ್ತಿಯ ರನ್ನರ್‌ಅಪ್ ಭಾರತ ತಂಡ ಟೂರ್ನಿಗೂ ಮುನ್ನ ನ್ಯೂಜಿಲೆಂಡ್‌ನಲ್ಲೇ ನಡೆದ ಏಕದಿನ ಸರಣಿಯಲ್ಲಿ ಆತಿಥೇಯರ ವಿರುದ್ಧ 1-4ರಿಂದ ಸೋತು ಲಯ ತಪ್ಪಿತ್ತು. ಆದರೆ ಬಳಿಕ ನಡೆದ 2 ಅಭ್ಯಾಸ ಪಂದ್ಯಗಳಲ್ಲಿ ಜಯಿಸುವ ಮೂಲಕ ಭಾರತ ತಂಡ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಕಳೆದ 1 ತಿಂಗಳಿನಿಂದ ಕಿವೀಸ್‌ನಲ್ಲೇ ಇದ್ದು, ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡಿರುವುದು ಮಿಥಾಲಿ ಪಡೆಗೆ ಲಾಭದಾಯಕವೆನಿಸಿದೆ.

    ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ ಫಿಟ್ ಆಗಿದ್ದರೆ, ಉಪನಾಯಕಿ ಹರ್ಮಾನ್‌ಪ್ರೀತ್ ಕೌರ್ ಕೂಡ ರನ್‌ಗಳಿಸಲಾರಂಭಿಸಿದ್ದಾರೆ. ಇದರಿಂದ ಭಾರತದ ಬ್ಯಾಟಿಂಗ್ ವಿಭಾಗ ಉತ್ತಮ ಲಯದಲ್ಲಿದೆ. ಆದರೆ ಬೌಲಿಂಗ್ ವಿಭಾಗದ ಅಸ್ಥಿರ ನಿರ್ವಹಣೆ ಭಾರತಕ್ಕೆ ಹಿನ್ನಡೆ ತಂದಿದೆ.

    ಪಾಕ್ ಸುಲಭ ಎದುರಾಳಿ
    ಪುರುಷರಂತೆ ಮಹಿಳಾ ಕ್ರಿಕೆಟ್‌ನಲ್ಲಿ ಭಾರತಕ್ಕೆ ಪಾಕ್ ಯಾವತ್ತೂ ಸವಾಲೆನಿಸಿಲ್ಲ. ವಿಶ್ವಕಪ್‌ನ 3 ಮುಖಾಮುಖಿ ಸೇರಿದಂತೆ ಪಾಕ್ ವಿರುದ್ಧ ಈ ಹಿಂದೆ ಆಡಿದ 10 ಏಕದಿನ ಪಂದ್ಯಗಳಲ್ಲೂ ಭಾರತ ಮಹಿಳಾ ತಂಡ ಗೆಲುವು ದಾಖಲಿಸಿದ ಅಜೇಯ ದಾಖಲೆ ಹೊಂದಿದೆ. ಇನ್ನು ಪಾಕ್ ಮಹಿಳಾ ತಂಡ ಟೂರ್ನಿಗೆ ಕೊನೇ ಶ್ರೇಯಾಂಕಿತ ತಂಡವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. 2013, 2017ರ ವಿಶ್ವಕಪ್‌ಗಳಲ್ಲಿ ಪಾಕ್ ತಂಡ ಒಂದೂ ಪಂದ್ಯ ಗೆದ್ದಿರಲಿಲ್ಲ. ಕರೊನಾದಿಂದಾಗಿ ಅರ್ಹತಾ ಟೂರ್ನಿ ರದ್ದಾದ ಕಾರಣ ಪಾಕ್ ಈ ಬಾರಿ ಟೂರ್ನಿಗೆ ಅದೃಷ್ಟದ ಪ್ರವೇಶ ಪಡೆದಿದೆ. ಆದರೆ ಟೂರ್ನಿಗೆ ಮುನ್ನ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ಗೆ ಬಿಸ್ಮಾ ಮಾರೂಫ್​ ಸಾರಥ್ಯದ ಪಾಕ್ ತಂಡ ಸೋಲುಣಿಸಿರುವುದು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

    ಪಂದ್ಯ ಆರಂಭ: ಬೆಳಗ್ಗೆ 6.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಮುಖಾಮುಖಿ: 10
    ಭಾರತ: 10
    ಪಾಕಿಸ್ತಾನ: 0

    ಮಹಿಳಾ ವಿಶ್ವಕಪ್‌ನಲ್ಲಿ ಭಾರತ-ಪಾಕ್
    2009: ಭಾರತಕ್ಕೆ 10 ವಿಕೆಟ್ ಗೆಲುವು
    2013: ಭಾರತಕ್ಕೆ 6 ವಿಕೆಟ್ ಗೆಲುವು
    2017: ಭಾರತಕ್ಕೆ 95 ರನ್ ಗೆಲುವು

    *ನಾವು ಪಾಕಿಸ್ತಾನ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಪಾಕಿಸ್ತಾನವೂ ನಮ್ಮಂತೆ ಉತ್ತಮ ಸಿದ್ಧತೆಯೊಂದಿಗೆ ಆಗಮಿಸಿದೆ. ನಾವು ಟೂರ್ನಿಯ ಪ್ರತಿ ಪಂದ್ಯವನ್ನೂ ಗೆಲುವಿನ ಹಂಬಲದೊಂದಿಗೆ ಆಡಲಿದ್ದೇವೆ. ಟೂರ್ನಿಯುದ್ದಕ್ಕೂ ಉತ್ತಮ ಲಯ ಕಾಯ್ದುಕೊಳ್ಳಲು ಬಯಸಿದ್ದೇವೆ.
    | ಮಿಥಾಲಿ ರಾಜ್, ಭಾರತ ತಂಡದ ನಾಯಕಿ

    4: ಅನುಭವಿ ವೇಗಿ ಜೂಲನ್ ಗೋಸ್ವಾಮಿ 4 ವಿಕೆಟ್ ಕಬಳಿಸಿದರೆ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಸರ್ವಾಧಿಕ ವಿಕೆಟ್ ಕಬಳಿಸಿದ ಬೌಲರ್ ಎನಿಸಲಿದ್ದಾರೆ. ಆಸ್ಟ್ರೇಲಿಯಾದ ಲಿನ್ ಫುಲ್‌ಸ್ಟೋನ್ 39 ವಿಕೆಟ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ಜೂಲನ್ 36 ವಿಕೆಟ್ ಗಳಿಸಿದ್ದಾರೆ.

    ಮಿಥಾಲಿಗೆ ಸಚಿನ್ ಸ್ಫೂರ್ತಿ
    ಮಹಿಳಾ ಕ್ರಿಕೆಟ್ ದಿಗ್ಗಜೆ ಮಿಥಾಲಿ ರಾಜ್‌ಗೆ ಇದು 6ನೇ ಏಕದಿನ ವಿಶ್ವಕಪ್. ಪುರುಷರ ಕ್ರಿಕೆಟ್ ತಾರೆ ಸಚಿನ್ ತೆಂಡುಲ್ಕರ್ ಕೂಡ ತಾವಾಡಿದ 6ನೇ ವಿಶ್ವಕಪ್‌ನಲ್ಲೇ ಪ್ರಶಸ್ತಿ ಕೊರತೆ ನೀಗಿಸಿಕೊಂಡಿದ್ದರು. 39 ವರ್ಷದ ಮಿಥಾಲಿ ರಾಜ್ ಕೂಡ ಇದೀಗ ಅದೇ ರೀತಿ ತಮ್ಮ ಕೊನೇ ವಿಶ್ವಕಪ್‌ನಲ್ಲಾದರೂ ಪ್ರಶಸ್ತಿ ಗೆಲುವಿನ ಕನಸು ನನಸಾಗಿಸಿಕೊಳ್ಳುವ ಹಂಬಲದಲ್ಲಿದ್ದಾರೆ.

    ರವೀಂದ್ರ ಜಡೇಜಾ ಭರ್ಜರಿ ಶತಕ; ಮೊಹಾಲಿಯಲ್ಲಿ ಭಾರತ ಪ್ರಾಬಲ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts