More

    ರವೀಂದ್ರ ಜಡೇಜಾ ಭರ್ಜರಿ ಶತಕ; ಮೊಹಾಲಿಯಲ್ಲಿ ಭಾರತ ಪ್ರಾಬಲ್ಯ

    ಮೊಹಾಲಿ: ಆಲ್ರೌಂಡರ್ ರವೀಂದ್ರ ಜಡೇಜಾ (175*ರನ್, 228 ಎಸೆತ, 17 ಬೌಂಡರಿ, 3 ಸಿಕ್ಸರ್) ಪಿಸಿಎ ಕ್ರೀಡಾಂಗಣದಲ್ಲಿ ಶನಿವಾರ ಭರ್ಜರಿ ಶತಕ ಸಿಡಿಸುವ ಮೂಲಕ ತಮ್ಮ ವೃತ್ತಿಜೀವನದ ಬೆಳವಣಿಗೆಯಲ್ಲಿ ಪ್ರಮುಖಪಾತ್ರ ನಿರ್ವಹಿಸಿರುವ ಆಸೀಸ್ ಸ್ಪಿನ್ ದಿಗ್ಗಜ ಶೇನ್ ವಾರ್ನ್‌ಗೆ ವಿಶೇಷ ಗೌರವ ಅರ್ಪಿಸಿದರು. ಈ ಮೂಲಕ ಭಾರತ ತಂಡ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಿಗಿಹಿಡಿತ ಸಾಧಿಸಿದೆ.

    6 ವಿಕೆಟ್‌ಗೆ 357 ರನ್‌ಗಳಿಂದ 2ನೇ ದಿನದಾಟ ಮುಂದುವರಿಸಿದ ಭಾರತ ತಂಡ, ನಿರೀಕ್ಷೆಗೂ ಮೀರಿದ ಬೃಹತ್ ಮೊತ್ತ ಪೇರಿಸಲು ಜಡೇಜಾ ಸಾಹಸ ನೆರವಾಯಿತು. ಚಹಾ ವಿರಾಮದವರೆಗೂ ಇನಿಂಗ್ಸ್ ವಿಸ್ತರಿಸಿದ ಭಾರತ 129.2 ಓವರ್‌ಗಳಲ್ಲಿ 4.43ರ ಸರಾಸರಿಯಲ್ಲಿ 8 ವಿಕೆಟ್‌ಗೆ 574 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಪ್ರತಿಯಾಗಿ ಶ್ರೀಲಂಕಾ ದಿನದಂತ್ಯಕ್ಕೆ 4 ವಿಕೆಟ್‌ಗೆ 108 ರನ್ ಗಳಿಸಿ ಸಂಕಷ್ಟದಲ್ಲಿದೆ. ಭಾರತ ಇನ್ನೂ 466 ರನ್ ಮುನ್ನಡೆಯಲ್ಲಿದ್ದು, ಲಂಕಾ ಾಲೋಆನ್ ತಪ್ಪಿಸಿಕೊಳ್ಳಲು ಇನ್ನೂ 267 ರನ್ ಗಳಿಸಬೇಕಾಗಿದೆ.

    ಲಂಕಾಗೆ ಅಶ್ವಿನ್ ಆಘಾತ
    ನಾಯಕ ದಿಮುತ್ ಕರುಣರತ್ನೆ (28) ಮತ್ತು ಲಹಿರು ತಿರಿಮನ್ನೆ (17) ಜೋಡಿ ಮೊದಲ ವಿಕೆಟ್‌ಗೆ ಎಚ್ಚರಿಕೆಯ ಜತೆಯಾಟವಾಡುವ ಭಾರತದ ಹೊಸ ಚೆಂಡಿನ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಆದರೆ ಆರ್. ಅಶ್ವಿನ್ (21ಕ್ಕೆ 2) ಸ್ಪಿನ್ ದಾಳಿಗೆ ಇಳಿಯುತ್ತಿದ್ದಂತೆ ಲಂಕಾ ಲಯ ತಪ್ಪಿತು. ತಿರಿಮನ್ನೆ ವಿಕೆಟ್ ಕಬಳಿಸಿ ಅಶ್ವಿನ್ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಬೆನ್ನಲ್ಲೇ ಕರುಣರತ್ನೆಗೆ ಜಡೇಜಾ ಪೆವಿಲಿಯನ್ ದಾರಿ ತೋರಿದರು. ದಿನದ ಕೊನೆಯಲ್ಲಿ ಏಂಜೆಲೊ ಮ್ಯಾಥ್ಯೂಸ್ (22) ಮತ್ತು ಧನಂಜಯ ಡಿಸಿಲ್ವ (1) ವಿಕೆಟ್ ಕೂಡ ಕಬಳಿಸುವ ಮೂಲಕ ಭಾರತ ಪೂರ್ಣ ಪ್ರಾಬಲ್ಯ ಸಾಧಿಸಿತು. ಪಥುಮ್ ನಿಸ್ಸಂಕ (26*) ಮತ್ತು ಚರಿತ್ ಅಸಲಂಕಾ (1*) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಜಡೇಜಾ ಜೀವನಶ್ರೇಷ್ಠ ಬ್ಯಾಟಿಂಗ್
    ಟೆಸ್ಟ್ ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್ ನಿರ್ವಹಣೆ ತೋರುವ ಮೂಲಕ 33 ವರ್ಷದ ರವೀಂದ್ರ ಜಡೇಜಾ ಮೊಹಾಲಿಯಲ್ಲಿ ಶನಿವಾರ ವಿಜೃಂಭಿಸಿದರು. ಕ್ರಮವಾಗಿ 45 ಮತ್ತು 10 ರನ್‌ನಿಂದ ದಿನದಾಟ ಆರಂಭಿಸಿದ ಜಡೇಜಾ-ಅಶ್ವಿನ್ ಜೋಡಿ, 7ನೇ ವಿಕೆಟ್ ಜತೆಯಾಟವನ್ನು 130 ರನ್‌ಗಳಿಗೆ ವಿಸ್ತರಿಸುವ ಮೂಲಕ ಲಂಕಾ ಬೌಲರ್‌ಗಳಿಗೆ ಸವಾಲೊಡ್ಡಿತು. ಅರ್ಧಶತಕ ಬಾರಿಸಿದ ಅಶ್ವಿನ್ (61ರನ್, 82 ಎಸೆತ, 8 ಬೌಂಡರಿ) ಜಡೇಜಾ ಶತಕದಿಂದ ಕೇವಲ 1 ರನ್ ದೂರವಿದ್ದಾಗ ಲಕ್ಮಲ್ ಎಸೆತದಲ್ಲಿ ಔಟಾದರು. ಬಳಿಕ ಜಯಂತ್ ಯಾದವ್ ಬೆಂಬಲದೊಂದಿಗೆ ಜಡೇಜಾ ಭೋಜನ ವಿರಾಮಕ್ಕೂ ಮೊದಲೇ ಶತಕ ಪೂರೈಸಿದರು. ಎಂದಿನಂತೆ ಖಡ್ಗ ಝಳಪಿಸುವ ರೀತಿಯಲ್ಲಿ ಬ್ಯಾಟ್ ತಿರುಗಿಸಿ ಜಡೇಜಾ ಶತಕವನ್ನು ಸಂಭ್ರಮಿಸಿದರು. ಜಯಂತ್ ಯಾದವ್ (2) ಹೆಚ್ಚು ಹೊತ್ತು ನಿಲ್ಲದೆ ನಿರ್ಗಮಿಸಿದರು. ಬಳಿಕ ಮತ್ತಷ್ಟು ಬಿರುಸಿನ ಬ್ಯಾಟಿಂಗ್‌ಗೆ ಇಳಿದ ಜಡೇಜಾ, ಮೊಹಮದ್ ಶಮಿ ಜತೆಗೂಡಿ ಮುರಿಯದ 9ನೇ ವಿಕೆಟ್‌ಗೆ 94 ಎಸೆತಗಳಲ್ಲೇ 103 ರನ್ ಸೇರಿಸಿದರು. ಇದರಲ್ಲಿ 71 ರನ್ ಜಡೇಜಾ ಬ್ಯಾಟ್‌ನಿಂದಲೇ ಸಿಡಿಯಿತು. ಐದೂವರೆ ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದ ಜಡೇಜಾ, ಲಂಕಾ ಬೌಲರ್‌ಗಳಿಗೆ ಕಗ್ಗಂಟಾಗಿಯೇ ಉಳಿದರು. ಮೊದಲ ದಿನ ಸ್ವಲ್ಪ ಹರಿತವಾಗಿದ್ದ ಲಂಕಾ ದಾಳಿ 2ನೇ ದಿನ ಸಂಪೂರ್ಣ ಮಂಕಾಗಿತ್ತು.

    ಕಪಿಲ್ ದಾಖಲೆ ಮುರಿದ ಜಡೇಜಾ
    ರವೀಂದ್ರ ಜಡೇಜಾ ಅಜೇಯ 175 ರನ್ ಬಾರಿಸುವ ಮೂಲಕ ಕಪಿಲ್ ದೇವ್ ಅವರ 35 ವರ್ಷ ಹಿಂದಿನ ದಾಖಲೆಯನ್ನು ಮುರಿದರು. ಜಡೇಜಾ 7ನೇ ಕ್ರಮಾಂಕದಲ್ಲಿ ಸರ್ವಾಧಿಕ ರನ್ ಗಳಿಸಿದ ಭಾರತೀಯರೆನಿಸಿದರು. ಕಪಿಲ್ ದೇವ್ 1986ರಲ್ಲಿ ಕಾನ್ಪುರ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧವೇ 163 ರನ್ ಬಾರಿಸಿದ್ದು ಹಿಂದಿನ ದಾಖಲೆ.

    ಹ್ಯಾಡ್ಲಿ ಹಿಂದಿಕ್ಕಿದ ಅಶ್ವಿನ್
    ಸ್ಪಿನ್ನರ್ ಆರ್. ಅಶ್ವಿನ್ (432) ದಿನದಾಟದಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ವಿಕೆಟ್ ಸಾಧಕರ ಪಟ್ಟಿಯಲ್ಲಿ ನ್ಯೂಜಿಲೆಂಡ್ ದಿಗ್ಗಜ ರಿಚರ್ಡ್ ಹ್ಯಾಡ್ಲಿ (431) ಅವರನ್ನು ಹಿಂದಿಕ್ಕಿದರು. ಭಾರತದ ಸಾಧಕ ಕಪಿಲ್ ದೇವ್ (434) ಅವರನ್ನು ಹಿಂದಿಕ್ಕಲು ಅಶ್ವಿನ್‌ಗೆ ಈಗ ಕೇವಲ 3 ವಿಕೆಟ್ ಅಗತ್ಯವಿದೆ. ಸದ್ಯ ಶ್ರೀಲಂಕಾದ ರಂಗನಾ ಹೆರಾತ್ (433) ಹಿಂದೆ ಅಶ್ವಿನ್ ಗರಿಷ್ಠ ವಿಕೆಟ್ ಸಾಧಕರ ಪಟ್ಟಿಯಲ್ಲಿ 11ನೇ ಸ್ಥಾನಕ್ಕೇರಿದ್ದಾರೆ. ಅನಿಲ್ ಕುಂಬ್ಳೆ (619) ಭಾರತದ ಗರಿಷ್ಠ ವಿಕೆಟ್ ಸಾಧಕರಾಗಿದ್ದಾರೆ.

    15 ವಯೋಮಿತಿ ಕ್ರಿಕೆಟ್‌ನಿಂದಲೂ ದ್ರಾವಿಡ್ ಜತೆ ಕೊಹ್ಲಿ ವಿಶೇಷ ನಂಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts