More

    ಇಂದಿನಿಂದ ಭಾರತ-ಇಂಗ್ಲೆಂಡ್ ನಿರ್ಣಾಯಕ ಟೆಸ್ಟ್ ಪಂದ್ಯ

    ಅಹಮದಾಬಾದ್: ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲುಂಡರೂ ನಂತರದ ಎರಡು ಟೆಸ್ಟ್‌ಗಳಲ್ಲಿ ಗೆದ್ದು ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ದಿಟ್ಟ ತಿರುಗೇಟು ನೀಡಿರುವ ಭಾರತ ತಂಡ ಇದೀಗ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಿದೆ. 4ನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯ ಗುರುವಾರದಿಂದ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಸದ್ಯ 2-1 ಮುನ್ನಡೆಯಲ್ಲಿರುವ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಳ್ಳುವ ಹಂಬಲದಲ್ಲಿದೆ. ವಿರಾಟ್ ಕೊಹ್ಲಿ ಪಡೆ ಕನಿಷ್ಠ ಡ್ರಾ ಮಾಡಿಕೊಂಡರೂ, ಸರಣಿ ಜಯಿಸುವ ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್‌ಗೇರಲಿದೆ.

    ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಲ್ಲಿನ ವೇಗದ ಬೌಲಿಂಗ್ ಪಿಚ್‌ಗಳಲ್ಲಿ ಆತಿಥೇಯ ತಂಡವನ್ನು ಮಣಿಸಿ ಬೀಗಿರುವ ಭಾರತ ತಂಡ ಇದೀಗ ತವರಿನ ಸ್ಪಿನ್ ಪಿಚ್‌ಗಳಲ್ಲೂ ಆಂಗ್ಲರನ್ನು ಕಂಗೆಡಿಸಿದೆ. ಈ ಯಾವುದೇ ರೀತಿಯ ಸವಾಲನ್ನು ಗೆದ್ದು ನಿಲ್ಲುವ ಛಲವನ್ನು ಪ್ರದರ್ಶಿಸಿದೆ. ಸ್ಪಿನ್-ಸ್ನೇಹಿ ಪಿಚ್ ಬಗ್ಗೆ ಕೆಲವೆಡೆಯಿಂದ ಟೀಕೆಗಳು ವ್ಯಕ್ತವಾಗಿರುವ ನಡುವೆಯೂ, ಅಂತಿಮ ಟೆಸ್ಟ್ ಪಂದ್ಯಕ್ಕೂ ಸ್ಪಿನ್ ಪಿಚ್ ಸಿದ್ಧಗೊಂಡಿದೆ. ಇದು ಮತ್ತೊಮ್ಮೆ ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಐಸಿಸಿ ಫೆಬ್ರವರಿ ತಿಂಗಳ ಪ್ರಶಸ್ತಿ ರೇಸ್‌ನಲ್ಲಿದ್ದಾರೆ ಅಶ್ವಿನ್, ನೀವೂ ವೋಟ್ ಮಾಡಿ…

    ಡ್ರಾ ಸಾಧಿಸಿ ಸರಣಿ ಗೆಲ್ಲುವ ಅವಕಾಶವಿದ್ದರೂ ಭಾರತ ತಂಡ ಗೆಲುವಿನತ್ತ ಚಿತ್ತ ಹರಿಸುವುದು ನಿಶ್ಚಿತ. ನಾಯಕ ಕೊಹ್ಲಿ ಮತ್ತು ಕೋಚ್ ರವಿಶಾಸಿ ಅವರ ಆಕ್ರಮಣಕಾರಿ ಮನೋಭಾವ ಇದಕ್ಕೆ ಕಾರಣ. ಆಸ್ಟ್ರೇಲಿಯಾದಲ್ಲಿ ನಿರ್ಣಾಯಕ ಬ್ರಿಸ್ಬೇನ್ ಟೆಸ್ಟ್‌ನಲ್ಲೂ ಅಂತಿಮ ದಿನ ಡ್ರಾ ಸಾಧಿಸಿ ಸರಣಿ ಗೆಲ್ಲುವ ಅವಕಾಶವಿದ್ದರೂ, ಭಾರತ ತಂಡ 328 ರನ್‌ಗಳ ಸವಾಲು ಬೆನ್ನಟ್ಟಿ ಬೀಗಿದ್ದು ಇದಕ್ಕೆ ಪುಷ್ಠಿಯಾಗಿದೆ. ತನ್ನ ಆಟಗಾರರ ಆವರ್ತನ ಪದ್ಧತಿಯಿಂದಾಗಿ ಈಗಾಗಲೆ ಕೈಸುಟ್ಟುಕೊಂಡಿರುವ ಇಂಗ್ಲೆಂಡ್ ತಂಡಕ್ಕೆ ಈಗ ಸರಣಿ ಗೆಲುವಿನ ಅವಕಾಶವಿಲ್ಲ. ಕನಿಷ್ಠ ಸರಣಿ ಸಮಬಲಗೊಳಿಸುವ ಮೂಲಕ ಪ್ರತಿಷ್ಠೆ ಉಳಿಸಿಕೊಳ್ಳುವ ಬಾಗಿಲಷ್ಟೇ ತೆರೆದಿದೆ. ಇಂಗ್ಲೆಂಡ್‌ಗೆ ಗೆದ್ದರೂ, ತವರಿನ ಲಾರ್ಡ್ಸ್ ಮೈದಾನದಲ್ಲಿ ಜೂನ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ಗೇರಲು ಸಾಧ್ಯವಿಲ್ಲ. ತನ್ನ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ತಂಡ ಫೈನಲ್‌ಗೇರಲು ನೆರವಾಗಬಹುದಷ್ಟೇ.

    *ಆರಂಭ: ಬೆಳಗ್ಗೆ 9.30
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಟೀಮ್ ನ್ಯೂಸ್:

    ಭಾರತ: ಈ ಸಲವೂ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆಯ ನಿರೀಕ್ಷೆ ಇಲ್ಲ. ಆದರೆ ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಅಲಭ್ಯತೆಯಿಂದ, ಮತ್ತೋರ್ವ ವೇಗಿ ಉಮೇಶ್ ಯಾದವ್ ಆ ಸ್ಥಾನವನ್ನು ತುಂಬಲಿದ್ದಾರೆ. ಮತ್ತೊಂದೆಡೆ ಇಶಾಂತ್ ಶರ್ಮಗೆ ವಿಶ್ರಾಂತಿ ನೀಡಿ ಮೊಹಮದ್ ಸಿರಾಜ್‌ರನ್ನು ಕಣಕ್ಕಿಳಿಸಿದರೂ ಅಚ್ಚರಿ ಇಲ್ಲ. ವಾಷಿಂಗ್ಟನ್ ಸುಂದರ್ ಬದಲಿಗೆ ಕುಲದೀಪ್ ಆಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

    ಇಂಗ್ಲೆಂಡ್: ಪಿಂಕ್ ಟೆಸ್ಟ್‌ನಲ್ಲಿ 2ನೇ ತಜ್ಞ ಸ್ಪಿನ್ನರ್ ಕಣಕ್ಕಿಳಿಸದೆ ಎಡವಟ್ಟು ಮಾಡಿಕೊಂಡಿದ್ದ ಇಂಗ್ಲೆಂಡ್ ತಂಡ ಮತ್ತೊಮ್ಮೆ ಅದೇ ತಪ್ಪು ಮಾಡುವ ಸಾಧ್ಯತೆ ಇಲ್ಲ. ಹೀಗಾಗಿ ಈ ಬಾರಿ ಜಾಕ್ ಲೀಚ್‌ಗೆ ಸಮರ್ಥ ಬೆಂಬಲ ನೀಡಲು ಮತ್ತೋರ್ವ ಸ್ಪಿನ್ನರ್ ಡೊಮಿನಿಕ್ ಬೆಸ್‌ರನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ. ಬೆಸ್ ಚೆನ್ನೈನ ಮೊದಲ ಟೆಸ್ಟ್‌ನಲ್ಲಿ ಉತ್ತಮ ನಿರ್ವಹಣೆಯನ್ನೇ ತೋರಿದ್ದರೂ, ನಂತರ ತಂಡದಿಂದ ಹೊರಬಿದ್ದಿದ್ದರು. ಅವರಿಗೆ ಸ್ಟುವರ್ಟ್ ಬ್ರಾಡ್ ಸ್ಥಾನ ಬಿಟ್ಟುಕೊಡಬಹುದು. ಜ್ರೋಾ ಆರ್ಚರ್ ಬದಲಿಗೆ ಒಲ್ಲಿ ಸ್ಟೋನ್ ಮತ್ತೊಮ್ಮೆ ಕಣಕ್ಕಿಳಿಯಬಹುದು.

    ಇದನ್ನೂ ಓದಿ: ಮದುವೆ ಸಿದ್ಧತೆಗಾಗಿ ಕ್ರಿಕೆಟ್‌ನಿಂದ ರಜೆ ಬಿಡುವು ಪಡೆದರೇ ಬುಮ್ರಾ?

    ಮತ್ತೆ ಸ್ಪಿನ್ ಅಸ್ತ್ರ ಬಳಕೆ
    ಮೊಟೆರಾದಲ್ಲಿ ಪಿಂಕ್ ಬಾಲ್‌ನಲ್ಲಿ ಆಡಿದ 3ನೇ ಟೆಸ್ಟ್ ಪಂದ್ಯವನ್ನು ಎರಡೇ ದಿನಗಳಲ್ಲಿ ಗೆದ್ದುಕೊಂಡ ವಿರಾಟ್ ಕೊಹ್ಲಿ ಪಡೆ, ಈ ಬಾರಿ ಕೆಂಪು ಚೆಂಡಿನಲ್ಲೂ ಆಂಗ್ಲರಿಗೆ ಸ್ಪಿನ್ ಬಲೆ ಬೀಸುವ ಹುರುಪಿನಲ್ಲಿದೆ. ಅಶ್ವಿನ್ 3 ಟೆಸ್ಟ್‌ಗಳಲ್ಲಿ 24 ವಿಕೆಟ್ ಕಬಳಿಸಿದ್ದರೆ, ಅಕ್ಷರ್ ಪಟೇಲ್ ಎರಡೇ ಟೆಸ್ಟ್‌ಗಳಲ್ಲಿ 18 ವಿಕೆಟ್ ಕಬಳಿಸಿ ಆಂಗ್ಲರನ್ನು ಕಂಗೆಡಿಸಿದ್ದಾರೆ. ಸರಣಿಯಲ್ಲಿ ಇದುವರೆಗೆ ಉರುಳಿದ ಆಂಗ್ಲರ 60 ವಿಕೆಟ್‌ಗಳಲ್ಲಿ 49 ಸ್ಪಿನ್ನರ್‌ಗಳ ಪಾಲಾಗಿವೆ. ಭಾರತ ತಂಡ 2012ರ ಬಳಿಕ ತವರಿನ ಯಾವುದೇ ಟೆಸ್ಟ್ ಸರಣಿಯಲ್ಲಿ ಒಂದಕ್ಕಿಂತ ಹೆಚ್ಚು ಪಂದ್ಯ ಸೋತಿಲ್ಲ. 2012ರ ಬಳಿಕ ಭಾರತ ತವರಿನಲ್ಲಿ ಆಡಿದ ಎಲ್ಲ ಸರಣಿಗಳಲ್ಲಿ ಜಯಿಸಿದ ದಾಖಲೆಯನ್ನೂ ಹೊಂದಿದೆ.

    ಭಾರತಕ್ಕೆ ಬ್ಯಾಟಿಂಗ್ ಚಿಂತೆ
    ಬೌಲಿಂಗ್‌ನಲ್ಲಿ ಬಲಿಷ್ಠ ನಿರ್ವಹಣೆ ತೋರುತ್ತಿದ್ದರೂ, ಭಾರತ ತಂಡ ಸರಣಿಯುದ್ದಕ್ಕೂ ಬ್ಯಾಟಿಂಗ್ ವಿಭಾಗದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ರೋಹಿತ್ ಶರ್ಮ (3 ಪಂದ್ಯಗಳಲ್ಲಿ 296 ರನ್) ಹೊರತಾಗಿ ಇತರರಿಂದ ಸ್ಥಿರ ನಿರ್ವಹಣೆ ಬಂದಿಲ್ಲ. ಅಹರ್ನಿಶಿ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತ ಕೇವಲ 145 ರನ್‌ಗೆ ಆಲೌಟ್ ಆಗಿತ್ತು. ಒಂದು ವೇಳೆ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 200ಕ್ಕಿಂತ ಹೆಚ್ಚು ರನ್ ಸೇರಿಸಿದ್ದರೆ ಆಗ ಲಿತಾಂಶವೇ ಬದಲಾಗುವ ಅಪಾಯವಿತ್ತು. ಹೀಗಾಗಿ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಇಲ್ಲಿ ಲಯ ಕಂಡುಕೊಳ್ಳಬೇಕಾಗಿದೆ.

    ಪಿಚ್ ರಿಪೋರ್ಟ್
    ಮೂರನೇ ಟೆಸ್ಟ್ ಆಡಿದಂಥ ಕೆಂಪು ಮಣ್ಣಿನ ಪಿಚ್ ಈ ಪಂದ್ಯಕ್ಕೂ ಇರಲಿದೆ. ಆದರೆ ಕೆಂಪು ಚೆಂಡಿನಲ್ಲಿ ಆಡಲಾಗುವ ಈ ಪಂದ್ಯ ಮೂರು ಅಥವಾ ಅದಕ್ಕಿಂತ ಹೆಚ್ಚು ದಿನ ನಡೆಯುವ ನಿರೀಕ್ಷೆ ಇಡಬಹುದು. ಪಿಂಕ್ ಚೆಂಡಿನಲ್ಲಿ ಸ್ಕಿಡ್ ಆಗಿ ಬರುತ್ತಿದ್ದ ಎಸೆತಗಳನ್ನು ಎದುರಿಸುವುದು ಬ್ಯಾಟ್ಸ್‌ಮನ್‌ಗಳಿಗೆ ಕಠಿಣವಾಗಿತ್ತು. ಆದರೆ ಕೆಂಪು ಚೆಂಡಿನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಅಷ್ಟು ಕಠಿಣ ಸವಾಲು ಎದುರಾಗುವ ಸಾಧ್ಯತೆ ಇಲ್ಲ.

    ಮ್ಯಾಕ್ಸ್‌ವೆಲ್ ಸಿಕ್ಸರ್ ಆರ್ಭಟಕ್ಕೆ ಮುರಿದ ಪ್ರೇಕ್ಷಕರ ಆಸನ, ಉತ್ತಮ ಕೆಲಸಕ್ಕೆ ನೆರವಾಯಿತು!

    ಕತಾರ್ ಓಪನ್‌ನಲ್ಲಿ ಸೆಮಿಫೈನಲ್‌ಗೇರಿದ ಸಾನಿಯಾ ಮಿರ್ಜಾ ಜೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts