More

    ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಭಾರತ 

    ಅಡಿಲೇಡ್: ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ನಿರ್ವಹಣೆಗೆ ಸಾಕ್ಷಿಯಾದ ವಿರಾಟ್ ಕೊಹ್ಲಿ ಬಳಗ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಹರ್ನಿಶಿ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು 8 ವಿಕೆಟ್‌ಗಳಿಂದ ಶರಣಾಯಿತು. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-1 ರಿಂದ ಹಿನ್ನಡೆ ಅನುಭವಿಸಿತು. ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸುವ ಮೂಲಕ ಪಂದ್ಯದಲ್ಲಿ ದಿಟ್ಟ ನಿರ್ವಹಣೆ ತೋರಿದ್ದ ಭಾರತ ತಂಡ ಕೇವಲ ಎರಡೂವರೆ ದಿನಕ್ಕೆ ಸೋಲಪ್ಪಿಕೊಂಡಿತು. 88 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿದ ಕುಖ್ಯಾತಿಗೆ ಒಳಗಾಯಿತು.

    ಇದನ್ನೂ ಓದಿ: ಕಪಿಲ್ ದೇವ್ ದಾಖಲೆ ಹಿಂದಿಕ್ಕಿದ ಆರ್.ಅಶ್ವಿನ್.

    ಅಡಿಲೇಡ್ ಓವೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 1 ವಿಕೆಟ್‌ಗೆ 9 ರನ್‌ಗಳಿಂದ ಶನಿವಾರ ಎರಡನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ, ಜೋಸ್ ಹ್ಯಾಸಲ್‌ವುಡ್ (8ಕ್ಕೆ 5) ಹಾಗೂ ಪ್ಯಾಟ್ ಕಮ್ಮಿನ್ಸ್ (21ಕ್ಕೆ 4) ಜೋಡಿಯ ಮಾರಕ ದಾಳಿ ಎದುರು ನಲುಗಿ 36 ರನ್‌ಗಳಿಗೆ ಸರ್ವಪತನ ಕಂಡಿತು. ಗಾಯದ ಸಮಸ್ಯೆಯಿಂದ ಮೊಹಮದ್ ಶಮಿ ಕಣದಿಂದ ನಿವೃತ್ತರಾದರು. ಮೊದಲ ಇನಿಂಗ್ಸ್‌ನಲ್ಲಿ 53 ರನ್ ಮುನ್ನಡೆ ಸಾಧಿಸಿದ್ದ ಭಾರತ, ಆಸೀಸ್ ತಂಡಕ್ಕೆ 90 ರನ್ ಗೆಲುವಿನ ಗುರಿ ನೀಡಿತು. ಬಳಿಕ ಅಲ್ಪಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ 2 ವಿಕೆಟ್‌ಗೆ 93 ರನ್ ಗಳಿಸಿ ಜಯದ ನಗೆ ಬೀರಿತು. ಭಾರತ ಮೊದಲ ಇನಿಂಗ್ಸ್ 244 ರನ್‌ಗಳಿಸಿದ್ದರೆ, ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 191 ರನ್ ಗಳಿಸಿತ್ತು.

    * 6: ಪೃಥ್ವಿ ಷಾ ಹಾಗೂ ಮಯಾಂಕ್ ಅಗರ್ವಾಲ್ ಇದುವರೆಗೂ ಇನಿಂಗ್ಸ್ ಆರಂಭಿಸಿದ 6 ಬಾರಿಯೂ ಭಾರತ ತಂಡ ಸೋಲನುಭವಿಸಿದೆ.

    * 36: ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ದಾಖಲಿಸಿದ ಅತ್ಯಂತ ಕಡಿಮೆ ಮೊತ್ತ ಇದಾಗಿದೆ. 1974ರಲ್ಲಿ ಇಂಗ್ಲೆಂಡ್ ಎದುರು 42 ರನ್ ಗಳಿಸಿದ್ದು ಭಾರತದ ಇದುವರೆಗಿನ ಕಡಿಮೆ ಮೊತ್ತವಾಗಿತ್ತು.

    * ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಭಾರತದ ಎಲ್ಲ ಆಟಗಾರರು ಒಂದಂಕಿ ಮೊತ್ತಕ್ಕೆ ಔಟಾದರು.

    * 26: ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಟಾಸ್ ಜಯಿಸಿದ 26 ಪಂದ್ಯಗಳಲ್ಲಿ ಅನುಭವಿಸಿದ ಮೊದಲ ಸೋಲು ಇದಾಗಿದೆ.

    *7: ಟೀಮ್ ಪೇನ್, ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಜಯಿಸಿದ 7ನೇ ನಾಯಕ ಎನಿಸಿಕೊಂಡರು. ಎಂಎಸ್ ಧೋನಿ, ಸ್ಟೀವನ್ ಸ್ಮಿತ್ (ತಲಾ 2), ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್, ಮೈಕಲ್ ಕ್ಲಾರ್ಕ್, ಸ್ಟೀವ್ ವಾ (ತಲಾ1) ಈ ಹಿಂದಿನ ಸಾಧಕರು.

    ಭಾರತ : 244 ಮತ್ತು 36 (ಮಯಾಂಕ್ ಅಗರ್ವಾಲ್ 9, ಪೂಜಾರ 0, ವಿರಾಟ್ ಕೊಹ್ಲಿ 4, ಅಜಿಂಕ್ಯ ರಹಾನೆ 0, ಹನುಮ ವಿಹಾರಿ 8, ಸಾಹ 4, ಪ್ಯಾಟ್ ಕಮ್ಮಿನ್ಸ್ 21ಕ್ಕೆ 4, ಜೋಸ್ ಹ್ಯಾಸಲ್‌ವುಡ್ 8ಕ್ಕೆ 5). ಆಸ್ಟ್ರೇಲಿಯಾ: 191 ಮತ್ತು 2 ವಿಕೆಟ್‌ಗೆ 93 (ಮ್ಯಾಥ್ಯೂ ವೇಡ್ 33, ಜೋ ಬರ್ನ್ಸ್ 51*, ಆರ್.ಅಶ್ವಿನ್ 16ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts