More

    ಇಸ್ರೇಲ್​ನಲ್ಲಿದ್ದಾರೆ 20 ಸಾವಿರಕ್ಕೂ ಅಧಿಕ ಭಾರತೀಯರು: ರಕ್ಷಣೆಗಾಗಿ ಆಪರೇಷನ್​ ಅಜಯ್​ ಶುರು

    ನವದೆಹಲಿ: ಯುದ್ಧ ಪೀಡಿತ ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ತವರಿಗೆ ಕರೆತರಲು ಕೇಂದ್ರ ಸರ್ಕಾರ ಬುಧವಾರ (ಅ.11) ಆಪರೇಷನ್​ ಅಜಯ್​ ಕಾರ್ಯಾಚರಣೆ ಆರಂಭಿಸಿರುವುದಾಗಿ ವಿದೇಶಾಂಗ ಸಚಿವ ಜೈಶಂಕರ್​ ತಿಳಿಸಿದ್ದಾರೆ. ಸ್ಥಳದಲ್ಲಿ ವಿಶೇಷ ವಿಮಾನಗಳು ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

    ನಿನ್ನೆ (ಅ.11) ರಾತ್ರಿ ಟ್ವೀಟ್​ ಮಾಡಿರುವ ಜೈಶಂಕರ್​, ಇಸ್ರೇಲ್​ನಲ್ಲಿ ಸಿಲುಕಿರುವ ನಮ್ಮವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಆಪರೇಷನ್​ ಅಜಯ್​ ಕಾರ್ಯಾಚರಣೆ ಆರಂಭಿಸಿದ್ದೇವೆ. ವಿಶೇಷ ವಿಮಾನಗಳು ಮತ್ತು ಅಗತ್ಯವಾಗಿ ಬೇಕಾದಂತಹ ಎಲ್ಲ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ವಿದೇಶದಲ್ಲಿರುವ ನಮ್ಮ ಪ್ರಜೆಗಳ ಸುರಕ್ಷತೆ ಮತ್ತು ಒಳಿತಿಗಾಗಿ ನಾವು ಬದ್ಧರಾಗಿದ್ದೇವೆ ಎಂದು ಜೈಶಂಕರ್​ ಅವರು ಎಕ್ಸ್​ನಲ್ಲಿ ತಿಳಿಸಿದ್ದಾರೆ.

    20 ಸಾವಿರಕ್ಕೂ ಅಧಿಕ ಭಾರತೀಯರು
    ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರು ಅ.7ರ ಶನಿವಾರ ಮುಂಜಾನೆ ದಿಢೀರ್​ ದಾಳಿ ನಡೆಸಿದ ಬಳಿಕ ಹಮಾಸ್​ ಮತ್ತು ಇಸ್ರೇಲ್​ ನಡುವೆ ಯುದ್ಧ ಶುರವಾಗಿದೆ. ಸದ್ಯ ಇಸ್ರೇಲ್​ನಲ್ಲಿ 20 ಸಾವಿರಕ್ಕೂ ಅಧಿಕ ಭಾರತೀಯರು ವಾಸವಿದ್ದಾರೆ. ಆದರೆ, ಇಸ್ರೇಲ್​ನಲ್ಲಿ ಎಷ್ಟು ಮಂದಿ ಸಿಲುಕಿದ್ದಾರೆ ಎಂದು ನಿಖರವಾಗಿ ಗೊತ್ತಿಲ್ಲ ಎಂದು ಮುಂಬೈನಲ್ಲಿರುವ ಇಸ್ರೇಲ್ ಕಾನ್ಸುಲ್ ಜನರಲ್ ಕೊಬ್ಬಿ ಶೊಶಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕೇರಳ ಸಿಎಂ ಪತ್ರ
    ತಮ್ಮ ರಾಜ್ಯದಿಂದ ಸುಮಾರು 7 ಸಾವಿರ ಮಂದಿ ಇಸ್ರೇಲ್​ನಲ್ಲಿ ಸಿಲುಕಿದ್ದು, ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಅವರ ಸುರಕ್ಷತೆಯನ್ನು ಖಚಿತಪಡಿಸಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಮಂಗಳವಾರ (ಅ.10) ವಿದೇಶಾಂಗ ಸಚಿವ ಜೈಶಂಕರ್​ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.

    ನಮ್ಮ ರಾಜ್ಯದ 84ಕ್ಕೂ ಅಧಿಕ ಮಂದಿ ಇಸ್ರೇಲ್​ನಲ್ಲಿ ಸಿಲುಕಿದ್ದಾರೆ ಎಂದು ತಮಿಳುನಾಡು ಸಹ ಹೇಳಿಕೆ ನೀಡಿದೆ. ಸಿಲುಕಿರುವ ಎಲ್ಲರು ವಿದ್ಯಾಭ್ಯಾಸ, ಉದ್ಯಮ ಮತ್ತು ಪ್ರವಾಸದ ಉದ್ದೇಶದಿಂದ ಇಸ್ರೇಲ್​ಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬಾಲಿವುಡ್​ ನಟಿ ನುಶ್ರತ್ ಭರುಚ್ಚ ಅವರು ಇಸ್ರೇಲ್‌ನಲ್ಲಿ ಸಿಲುಕಿದ ಬಳಿಕ ಅಕ್ಟೋಬರ್ 8 ರಂದು ಮುಂಬೈಗೆ ಸುರಕ್ಷಿತವಾಗಿ ಹಿಂತಿರುಗಿದರು. ಯುದ್ಧ ಪ್ರಾರಂಭವಾದಾಗ ಅವರು ಹೈಫಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಹಲವು ಸಮಯಗಳವರೆಗೆ ಅವರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಅಂತಿಮವಾಗಿ ಅವರೇ ಸಂಪರ್ಕಿಸಿ ಸುರಕ್ಷಿತವಾಗಿ ಇರುವುದಾಗಿ ತಿಳಿಸಿ, ಇಸ್ರೇಲ್​ ವಿಮಾನ ನಿಲ್ದಾಣವನ್ನು ತಲುಪಿ ಭಾರತಕ್ಕೆ ವಾಪಸ್ಸಾದರು.

    ಭಾರತೀಯರಿಗೆ ಸಹಾಯವಾಣಿ
    ಇಸ್ರೇಲ್ – ಹಮಾಸ್ ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತೀಯರಿಗೆ ನೆರವು ನೀಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ 24 ಗಂಟೆಗಳ ಸಹಾಯ ವಾಣಿ ಸ್ಥಾಪಿಸಿದೆ. 1800118797 (ಟೋಲ್ ಫ್ರೀ), +91-11 23012113, +91-11-23014104, +91-11-23017905 ಮತ್ತು +919968291988ಗೆ ಸಂಪರ್ಕ ಮಾಡಬಹುದು. ಅಥವಾ room.gov.gov ಗೆ ಇ ಮೇಲ್ ಮಾಡಬಹುದು. ಟೆಲ್ ಅವಿವ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹ 24 ಗಂಟೆಗಳ ಸಹಾಯವಾಣಿ ಸ್ಥಾಪಿಸಿದೆ. ಅಗತ್ಯ ಇರುವವರು +972- 35226748, +972-543278392ಗೆ ಸಂರ್ಪಸಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?
    ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.

    ಗಾಜಾ ಪಟ್ಟಿ ಎಂದರೇನು? : ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ. (ಏಜೆನ್ಸೀಸ್​)

    ಕಾಫಿಯಲ್ಲಿ ತೆಂಗಿನೆಣ್ಣೆ ಬೆರೆಸಿ ಸೇವಿಸಿದರೆ ಇಷ್ಟೆಲ್ಲಾ ಲಾಭಗಳಿವೆಯಾ? ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ….

    ಏಷ್ಯಾಡ್​ ಪದಕ ಸಾಧಕರಿಗೆ ಈಗ ತವರಿನ ಸನ್ಮಾನದ ಸಂಭ್ರಮ, ಸಡಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts