More

    ರೋಚಕ ಕಾದಾಟದಲ್ಲಿ ಇರಾನ್​ಗೆ ಸೋಲುಣಿಸಿದ ಭಾರತ: 8ನೇ ಬಾರಿ ಚಾಂಪಿಯನ್​ ಆದ ಕಬಡ್ಡಿ ತಂಡ

    ದೆಹಲಿ: ಭಾರತದ ಕಬಡ್ಡಿ ತಂಡವು ರೋಚಕ ಫೈನಲ್‌ನಲ್ಲಿ ಇರಾನ್ ತಂಡವನ್ನು ಸೋಲಿಸುವ ಮೂಲಕ ಎಂಟನೇ ಬಾರಿಗೆ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

    ಒಂಬತ್ತು ಆವೃತ್ತಿಗಳ ಪೈಕಿ ಎಂಟನೇ ಬಾರಿಗೆ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ವಶಪಡಿಸಿಕೊಂಡ ಭಾರತವು ಕಬಡ್ಡಿ ಜಗತ್ತಿನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ದೃಢಪಡಿಸಿದೆ. ಶುಕ್ರವಾರದಂದು ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿರುವ ಸಾಂಸ್ಕೃತಿಕ ಕೇಂದ್ರದಲ್ಲಿ ಈ ಬಹುನಿರೀಕ್ಷಿತ ಪಂದ್ಯದಲ್ಲಿ ಭಾರತವು ಇರಾನ್ ವಿರುದ್ಧ 42-32 ಅಂಕಗಳಿಂದ ಭರ್ಜರಿ ಜಯ ಸಾಧಿಸಿದೆ.

    ಇದನ್ನೂ ಓದಿ: ಅಕ್ಕಿಯನ್ನು ನೀಡಲು “ಕೈ”ಲಾಗದ ಸಿಎಂ, ತಮ್ಮ ತಪ್ಪನ್ನು ಅನ್ಯರ ಮೇಲೆ ಹಾಕಿ ಕೈ ತೊಳೆದುಕೊಳ್ಳುತ್ತಿದ್ದಾರೆ: ಬಿಜೆಪಿ

    ಆರಂಭಿಕ ಹಿನ್ನಡೆಯನ್ನು ಮೆಟ್ಟಿನಿಂತು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ ಭಾರತದ ಕಬಡ್ಡಿ ಪರಾಕ್ರಮ ಸಂಪೂರ್ಣ ಪ್ರದರ್ಶನಗೊಂಡಿತು. ಈ ಪಂದ್ಯದ ಆರಂಭಿಕ ಹಂತಗಳಲ್ಲಿ ಇರಾನ್ ಮುನ್ನಡೆ ಸಾಧಿಸಿ ಭಾರತ ತಂಡದ ಮೇಲೆ ಒತ್ತಡ ಹೇರಿತ್ತು. ಆದರೆ ಭಾರತದ ಡಿಫೆಂಡರ್‌ಗಳು ನಿರ್ಣಾಯಕ ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಪರಿಣಾಮಕಾರಿ ಆಟವಾಡಿದರು. ಜತೆಗೆ ಪವನ್ ಸೆಹ್ರಾವತ್ ಮತ್ತು ಅಸ್ಲಾಮ್ ಇನಾಮದಾರ್​ರ ಯಶಸ್ವಿ ರೈಡ್​ಗಳ ಮೂಲಕ ಮೊದಲಾರ್ಧದ ಮುಕ್ತಾಯದ ವೇಳೆಗೆ, ಭಾರತವು 23-11 ರಿಂದ ಪ್ರಭಾವಿ ಮುನ್ನಡೆ ಸಾಧಿಸಿತು.

    ದ್ವಿತೀಯಾರ್ಧದ ಆರಂಭದಲ್ಲಿ ಇರಾನ್‌ನ ಆಲ್‌ರೌಂಡರ್ ಮೊಹಮ್ಮದ್​​ ರೇಜಾ ಚಿಯಾನೆಹ್ ಉತ್ತಮ ಪ್ರದರ್ಶನ ನೀಡಿ ಎರಡು ಪಾಯಿಂಟ್ ರೇಡ್ ಮತ್ತು ಸೂಪರ್ ರೈಡ್‌ನೊಂದಿಗೆ ಇರಾನ್ ತಂಡದಲ್ಲಿ ಗೆಲುವಿನ ಆಸೆಯನ್ನು ಚಿಗುರಿಸಿದ್ದರು. ಆದರೆ ಹೈ-ವೋಲ್ಟೇಜ್​ನ ಈ ಪಂದ್ಯದಲ್ಲಿ ಹೋರಾಟದ ಹಾದಿ ಕಠಿಣವಾಗಿದ್ದು, ಕೊನೆಗೆ ಭಾರತವು ಗೆಲುವು ಸಾಧಿಸಿ ಎಂಟನೇ ಬಾರಿಗೆ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

    ಇದನ್ನೂ ಓದಿ: ರೀಲ್ಸ್‌ಗಾಗಿ ನಕಲಿ ಪಿಸ್ತೂಲ್ ಹಿಡಿದುಕೊಂಡು ಓಡಾಟ:ಇಬ್ಬರ ಬಂಧನ

    ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಜಯಭೇರಿ ಬಾರಿಸುವುದರೊಂದಿಗೆ ಭಾರತ ಈಗ ಮುಂಬರುವ ಏಷ್ಯನ್ ಗೇಮ್ಸ್‌ನತ್ತ ದೃಷ್ಟಿ ನೆಟ್ಟಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಈ ಟೂರ್ನಿ ನಡೆಯಲಿದೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts