More

    ಬಾಕ್ಸಿಂಗ್ ಡೇ ಟೆಸ್ಟ್‌ಗೆ ಹಂಗಾಮಿ ನಾಯಕನ ಸಾರಥ್ಯದಲ್ಲಿ ಭಾರತ ತಂಡ ಕಠಿಣ ಅಭ್ಯಾಸ

    ಮೆಲ್ಬೋರ್ನ್: ನಾಯಕ ವಿರಾಟ್ ಕೊಹ್ಲಿ ನಿರ್ಗಮನದ ನಡುವೆಯೂ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಟೆಸ್ಟ್ ಸರಣಿಯಲ್ಲಿ ದಿಟ್ಟ ತಿರುಗೇಟು ನೀಡಬೇಕಾದ ಸವಾಲು ಎದುರಿಸುತ್ತಿರುವ ಭಾರತ ತಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಎಂಸಿಜಿಯಲ್ಲಿ ಬುಧವಾರ ಅಭ್ಯಾಸ ಆರಂಭಿಸಿದೆ. ಉಪನಾಯಕ ಅಜಿಂಕ್ಯ ರಹಾನೆ ಹಂಗಾಮಿ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ಕೋಚ್ ರವಿಶಾಸಿ ಜತೆಗೂಡಿ, ಅಡಿಲೇಡ್ ಟೆಸ್ಟ್ ಪಂದ್ಯದ ಹೀನಾಯ ಸೋಲಿನ ಬಳಿಕ ತಂಡದಲ್ಲಿ ಮಾಡಬೇಕಿರುವ ಬದಲಾವಣೆಯ ಬಗ್ಗೆ ಚರ್ಚಿಸಿದ್ದಾರೆ.

    ಅಹರ್ನಿಶಿಯಾಗಿ ಸಾಗಿದ್ದ ಮೊದಲ ಟೆಸ್ಟ್‌ನಲ್ಲಿ ಪಿಂಕ್ ಬಾಲ್‌ನಲ್ಲಿ ಆಡಲಾಗಿದ್ದರೆ, ಇನ್ನುಳಿದ 3 ಟೆಸ್ಟ್‌ಗಳನ್ನು ಕೂಕಾಬುರ‌್ರಾ ಕೆಂಪು ಚೆಂಡಿನಲ್ಲಿ ಆಡಲಾಗುವುದು. ಹೀಗಾಗಿ ಇದಕ್ಕೆ ಹೊಂದಿಕೊಳ್ಳಲು ಭಾರತ ತಂಡದ ಆಟಗಾರರು ಆದ್ಯತೆ ನೀಡಿದ್ದಾರೆ.

    ಮಯಾಂಕ್ ಅಗರ್ವಾಲ್ ಜತೆಗೂಡಿ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಲ್ಲಿರುವ ಶುಭಮಾನ್ ಗಿಲ್ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ್ದು, ಟೆಸ್ಟ್ ಪದಾರ್ಪಣೆಯ ಅವಕಾಶ ಪಡೆಯುವುದು ಬಹುತೇಕ ನಿಶ್ಚಿತವೆನಿಸಿದೆ. ಕನ್ನಡಿಗ ಕೆಎಲ್ ರಾಹುಲ್ ಕೂಡ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಪಂದ್ಯಕ್ಕೆ ಫಿಟ್ ಆಗುವ ಬಗ್ಗೆ ಅನುಮಾನವಿರುವ ನಡುವೆಯೂ ಆಲ್ರೌಂಡರ್ ರವೀಂದ್ರ ಜಡೇಜಾ ನೆಟ್ಸ್‌ನಲ್ಲಿ ಒಂದು ಗಂಟೆ ಕಾಲ ಅಭ್ಯಾಸದಲ್ಲಿ ಪಾಲ್ಗೊಂಡರು. ಸೌರಾಷ್ಟ್ರದ ಸಹ-ಆಟಗಾರ ಚೇತೇಶ್ವರ ಪೂಜಾರಗೆ ಜಡೇಜಾ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದರು. ವೃದ್ಧಿಮಾನ್ ಸಾಹಗಿಂತ ಮೊದಲಾಗಿ ರಿಷಭ್ ಪಂತ್ ಬ್ಯಾಟಿಂಗ್ ಅಭ್ಯಾಸ ನಡೆಸಿರುವುದರಿಂದ ಅವರೂ ಆಡುವ ಸಾಧ್ಯತೆ ಹೆಚ್ಚಾಗಿದೆ.

    ಇದನ್ನೂ ಓದಿ: ಸೌಹಾರ್ದ ಪಂದ್ಯದಲ್ಲಿ ಗಂಗೂಲಿ ತಂಡವನ್ನು ಮಣಿಸಿದ ಜಯ್ ಷಾ ಇಲೆವೆನ್

    2ನೇ ಟೆಸ್ಟ್‌ಗೂ ವಾರ್ನರ್ ಅಲಭ್ಯ
    ಆಸ್ಟ್ರೇಲಿಯಾದ ಸ್ಟಾರ್ ಆರಂಭಿಕ ಡೇವಿಡ್ ವಾರ್ನರ್ ಮತ್ತು ವೇಗಿ ಸೀನ್ ಅಬೋಟ್ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣದಿರುವುದರಿಂದ ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಇದರಿಂದ ಆಸೀಸ್ ಹಿನ್ನಡೆ ಎದುರಿಸಿದೆ. ವಾರ್ನರ್ ಏಕದಿನ ಸರಣಿಯ ವೇಳೆ ತೊಡೆಸಂಧು ಗಾಯಕ್ಕೊಳಗಾಗಿದ್ದರೆ, ಅಬೋಟ್‌ಗೆ ಟಿ20 ಪಂದ್ಯದ ವೇಳೆ ಮೀನಖಂಡದ ಗಾಯವಾಗಿತ್ತು. ಇಬ್ಬರೂ ಸದ್ಯ ತಂಡದ ಬಯೋ-ಬಬಲ್‌ನಿಂದ ಹೊರಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಡ್ನಿಯ ಕರೊನಾತಂಕದಿಂದಾಗಿ ಇಬ್ಬರೂ ಈಗಾಗಲೆ ಮೆಲ್ಬೋರ್ನ್‌ಗೆ ತಲುಪಿದ್ದರೂ, ಪಂದ್ಯ ಆಡಲು ಲಭ್ಯರಿಲ್ಲ. ಇವರಿಬ್ಬರ ಬದಲಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಇನ್ನೂ ಬದಲಿ ಆಟಗಾರರನ್ನು ಆರಿಸಿಲ್ಲ ಮತ್ತು 3ನೇ ಟೆಸ್ಟ್ ಪಂದ್ಯದ ವೇಳೆಗೆ ಇವರಿಬ್ಬರು ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ಸಿಡ್ನಿಯಲ್ಲಿ ಕೊನೇ 2 ಟೆಸ್ಟ್?
    ಭಾರತ-ಆಸೀಸ್ ನಡುವಿನ ಟೆಸ್ಟ್ ಸರಣಿಯ ಕೊನೇ ಎರಡೂ ಪಂದ್ಯಗಳು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ನಡೆಯುವ ಸಾಧ್ಯತೆ ಇದೆ. ಹಾಲಿ ವೇಳಾಪಟ್ಟಿಯ ಪ್ರಕಾರ 3ನೇ ಟೆಸ್ಟ್ ಸಿಡ್ನಿಯಲ್ಲಿ ನಡೆದರೆ, 4ನೇ ಹಾಗೂ ಅಂತಿಮ ಟೆಸ್ಟ್ ಬ್ರಿಸ್ಬೇನ್‌ನಲ್ಲಿ ನಡೆಯಬೇಕಾಗಿದೆ. ಆದರೆ ಸದ್ಯ ಸಿಡ್ನಿಯಲ್ಲಿ (ನ್ಯೂ ಸೌತ್ ವೇಲ್ಸ್) ಕರೊನಾ ಪ್ರಕರಣಗಳ ಏರಿಕೆಯಾಗಿರುವುದರಿಂದ ತಂಡಗಳು ಇಲ್ಲಿ ಆಡಿ ಬ್ರಿಸ್ಬೇನ್‌ಗೆ ಹೊರಟಾಗ ಅಲ್ಲಿನ ಕ್ವೀನ್ಸ್‌ಲ್ಯಾಂಡ್ ಸರ್ಕಾರ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲು ನಿರಾಕರಿಸಿದರೆ, ಜನವರಿ 15ರಿಂದ ಅಂತಿಮ ಟೆಸ್ಟ್ ನಡೆಸುವುದು ಅಸಾಧ್ಯವಾಗುತ್ತದೆ. ಅಲ್ಲದೆ ಒಂದು ವೇಳೆ ಕ್ವೀನ್ಸ್‌ಲ್ಯಾಂಡ್ ಸರ್ಕಾರ, ನ್ಯೂ ಸೌತ್ ವೇಲ್ಸ್‌ನ ಗಡಿಯನ್ನು ಬಂದ್ ಮಾಡಿದರೆ ಆಗಲೂ ತಂಡಗಳಿಗೆ ಸಿಡ್ನಿಯಿಂದ ಬ್ರಿಸ್ಬೇನ್‌ಗೆ ಪ್ರಯಾಣಿಸುವುದು ಅಸಾಧ್ಯವಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲೂ ಕೊನೇ ಎರಡೂ ಟೆಸ್ಟ್‌ಗಳನ್ನು ತಾನೇ ಆಯೋಜಿಸಲು ಸಿದ್ಧವಿರುವುದಾಗಿ ಎಸ್‌ಸಿಜಿ ತಿಳಿಸಿದೆ. ಜನವರಿ 7ರಿಂದ ನಡೆಯುವ ನ್ಯೂ ಇಯರ್ ಟೆಸ್ಟ್‌ನ ಆತಿಥ್ಯ ಉಳಿಸಿಕೊಳ್ಳುವುದಕ್ಕಾಗಿ ಎಸ್‌ಸಿಜಿ ಈ ಆರ್ ಇಟ್ಟಿದೆ. ಇದಲ್ಲದೆ ಕರೊನಾ ಭೀತಿಯಿಂದಾಗಿ ಸಿಡ್ನಿಯಲ್ಲಿ ಪಂದ್ಯ ನಡೆಸುವುದು ಕಷ್ಟವಾದರೆ, ಆಗ 3ನೇ ಪಂದ್ಯವನ್ನೂ ತಾನೇ ಆಯೋಜಿಸುವುದಾಗಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ಕೂಡ ಈಗಾಗಲೆ ಆರ್ ನೀಡಿದೆ.

    ಪಿತೃತ್ವ ರಜೆ ವಿಚಾರದಲ್ಲಿ ಕೊಹ್ಲಿ-ನಟರಾಜನ್ ನಡುವೆ ಬಿಸಿಸಿಐ ತಾರತಮ್ಯ, ಗಾವಸ್ಕರ್ ಆರೋಪ

    ಕ್ರಿಕೆಟ್ V/s ಪಿತೃತ್ವ ರಜೆ; ಕ್ರಿಕೆಟಿಗರ ಪಿತೃತ್ವ ರಜೆ ಹೊಸದಲ್ಲ!

    ಟೀಮ್​ ಇಂಡಿಯಾ ಕೋಚ್ ರವಿಶಾಸ್ತ್ರಿ ವಜಾಗೊಳಿಸಲು ಕ್ರಿಕೆಟ್ ಪ್ರೇಮಿಗಳ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts