More

    ಟೆಸ್ಟ್ ವಿಶ್ವಕಪ್‌ಗೆ ಇಂದು ಕ್ಲೈಮ್ಯಾಕ್ಸ್, ಕಿವೀಸ್‌ಗೆ ಸಣ್ಣ ಮುನ್ನಡೆ, ಭಾರತ ದಿಟ್ಟ ಆಟ

    ಸೌಥಾಂಪ್ಟನ್: ಮಂದಬೆಳಕು, ಮಳೆಕಾಟದ ಕಣ್ಣಾ ಮುಚ್ಚಾಲೆಯಲ್ಲೇ ಮುಳುಗಿದ್ದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ 5ನೇ ದಿನ ಕೊಂಚ ಕುತೂಹಲಕಾರಿ ಆಟ ಸಾಗಿತು. ಮಂದ ಬೆಳಕಿನಿಂದಾಗಿ ಸುಮಾರು ಒಂದು ಗಂಟೆ ತಡವಾಗಿ ಆರಂಭಗೊಂಡ ಆಟದಲ್ಲಿ ಭಾರತದ ವೇಗಿಗಳಾದ ಮೊಹಮದ್ ಶಮಿ (76ಕ್ಕೆ 4) ಹಾಗೂ ಇಶಾಂತ್ ಶರ್ಮ (48ಕ್ಕೆ 3) ಮಾರಕ ದಾಳಿ ಮೂಲಕ ಗಮನಸೆಳೆದರು. ಭಾರತದ ಕರಾರುವಾಕ್ ದಾಳಿ ನಡುವೆಯೂ ನಾಯಕ ಕೇನ್ ವಿಲಿಯಮ್ಸನ್ (49ರನ್, 177 ಎಸೆತ, 6 ಬೌಂಡರಿ) ತಾಳ್ಮೆಯ ಬ್ಯಾಟಿಂಗ್ ಫಲವಾಗಿ ನ್ಯೂಜಿಲೆಂಡ್ ತಂಡ 32 ರನ್‌ಗಳ ಅಲ್ಪಮುನ್ನಡೆ ಸಾಧಿಸಿತು. ಬಳಿಕ ಎರಡನೇ ಸರದಿಯ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ಎಚ್ಚರಿಕೆ ಆರಂಭದ ನಡುವೆಯೂ ಯುವ ಬ್ಯಾಟ್ಸ್‌ಮನ್ ಶುಭಮಾನ್ ಗಿಲ್ (8) ಹಾಗೂ ರೋಹಿತ್ ಶರ್ಮ (30ರನ್, 81 ಎಸೆತ, 2 ಬೌಂಡರಿ) ನಿರಾಸೆ ಅನುಭವಿಸಿದರು. ಬಳಿಕ ಅನುಭವಿ ಚೇತೇಶ್ವರ ಪೂಜಾರ (12*ರನ್, 55 ಎಸೆತ 2 ಬೌಂಡರಿ) ಹಾಗೂ ನಾಯಕ ವಿರಾಟ್ ಕೊಹ್ಲಿ (8* ರನ್, 12 ಎಸೆತ) ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಭಾರತ ತಂಡ 30 ಓವರ್‌ಗಳಲ್ಲಿ 2 ವಿಕೆಟ್‌ಗೆ 64 ರನ್‌ಗಳಿಸಿದ್ದು, ಕಿವೀಸ್ ತಂಡದ ಇನಿಂಗ್ಸ್ ಮುನ್ನಡೆ ಚುಕ್ತಾಗೊಳಿಸಿ, 32 ರನ್ ಮುನ್ನಡೆ ಗಳಿಸಿದೆ.

    ಮೀಸಲು ದಿನದ ಕುತೂಹಲ: ಪಂದ್ಯ ಬಹುತೇಕ ಡ್ರಾ ಹಾದಿಯಲ್ಲಿದ್ದರೂ ಕುತೂಹಲ ಮಾತ್ರ ಮೀಸಲು ದಿನಕ್ಕೆ ವಿಸ್ತರಣೆಗೊಂಡಿದೆ. ಅಂತಿಮ ದಿನದಾಟದಲ್ಲಿ ಮಂದಬೆಳಕು, ಮಳೆಯಾಟ ನಡೆಯದೆ, ನಾಟಕೀಯ ತಿರುವು ಪಡೆದರೆ ನಿಚ್ಚಳ ಫಲಿತಾಂಶದ ಅವಕಾಶವೂ ಇದೆ. ಬುಧವಾರದ 98 ಓವರ್‌ಗಳ ಆಟದಲ್ಲಿ ಬ್ಯಾಟ್ಸ್‌ಮನ್‌ಗಳು ಸಾಹಸ ಮೆರೆದರೂ ಪಂದ್ಯ ಡ್ರಾಗೊಂಡು ಟ್ರೋಫಿ ಉಭಯ ತಂಡಗಳಿಗೂ ಹಂಚಿಕೆಯಾಗಲಿದೆ. ಮಂಗಳವಾರ 2 ವಿಕೆಟ್‌ಗೆ 101 ರನ್‌ಗಳಿಂದ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 249ರನ್‌ಗಳಿಗೆ ಸರ್ವಪತನ ಕಂಡಿತು. ಮಳೆಯಿಂದಾಗಿ ನಾಲ್ಕನೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು.
    ಭಾರತ ಮೊದಲ ಇನಿಂಗ್ಸ್ 217ರನ್ ಗಳಿಸಿತ್ತು.

    ಆಧರಿಸಿದ ನಾಯಕ ಕೇನ್ ವಿಲಿಯಮ್ಸನ್
    ನಾಯಕ ಕೇನ್ ವಿಲಿಯಮ್ಸನ್ ಮಂದಗತಿ ಬ್ಯಾಟಿಂಗ್ ಮೂಲಕ ಇನಿಂಗ್ಸ್ ಕಟ್ಟಲು ಯತ್ನಿಸಿದರು. 12 ರನ್‌ಗಳಿಂದ ವಿಲಿಯಮ್ಸನ್ ಹಾಗೂ ಖಾತೆ ತೆರೆಯದ ಅನುಭವಿ ಬ್ಯಾಟ್ಸ್ ಮನ್ ರಾಸ್ ಟೇಲರ್ ಜೋಡಿ ದಿನದ ಆರಂಭದಲ್ಲೇ ಸಂಪೂರ್ಣ ಮಂದಗತಿ ಬ್ಯಾಟಿಂಗ್ ನಡೆಸಿತು. ಭಾರತದ ವೇಗಿಗಳ ಮಾರಕ ದಾಳಿಯನ್ನು ನಿರ್ಭಯವಾಗಿ ಎದುರಿಸಿದ ಈ ಜೋಡಿ ಆರಂಭಿಕ ಓವರ್‌ಗಳಲ್ಲಿ ರನ್‌ಗಳಿಸುವ ಬದಲಿಗೆ ಕ್ರೀಸ್‌ನಲ್ಲಿ ನಿಲ್ಲಲಷ್ಟೇ ಯತ್ನಿಸಿತು. ಸುಮಾರು 15 ಓವರ್ ಎದುರಿಸಿದರೂ ಕೇವಲ 16 ರನ್‌ಗಳನ್ನಷ್ಟೇ ಗಳಿಸಿತು. ಮೊಹಮದ್ ಶಮಿ ಎಸೆತದಲ್ಲಿ ಶುಭಮಾನ್ ಗಿಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಟೇಲರ್ ಔಟಾದರು. ಟೇಲರ್ ವಿಕೆಟ್ ಕಬಳಿಸುವ ಮೂಲಕ ಭಾರತದ ಬೌಲರ್‌ಗಳು ಕಿವೀಸ್ ಮೇಲೆ ಒತ್ತಡ ಹೇರಿದರು. ಬಳಿಕ ಬಂದ ಹೆನ್ರಿ ನಿಕೋಲಸ್ (7) ಹಾಗೂ ಬಿಜೆ ವಾಟ್ಲಿಂಗ್ (1) ಕ್ರಮವಾಗಿ ಇಶಾಂತ್ ಹಾಗೂ ಶಮಿಗೆ ವಿಕೆಟ್ ನೀಡಿದರು. ಭೋಜನ ವಿರಾಮದ ವೇಳೆಗೆ ಕಿವೀಸ್ ತಂಡ 5 ವಿಕೆಟ್‌ಗೆ 135 ರನ್ ರನ್‌ಗಳಿಸಿತು. ಇದರಿಂದ ಇನಿಂಗ್ಸ್ ಮುನ್ನಡೆಯ ಕನಸಿನಲ್ಲಿದ್ದ ಭಾರತ ತಂಡಕ್ಕೆ ವಿಲಿಯಮ್ಸನ್ ತಿರುಗೇಟು ನೀಡಲು ಯತ್ನಿಸಿದರು. ಕಾಲಿನ್ ಡಿ ಗ್ರಾೃಂಡ್‌ಹೋಮ್ (13), ಕೈಲ್ ಜೇಮಿಸನ್ (21) ಜತೆಗೂಡಿ ವಿಲಿಯಮ್ಸನ್ ಇನಿಂಗ್ಸ್ ಕಟ್ಟಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ತಾಳ್ಮೆಯ ಬ್ಯಾಟಿಂಗ್ ಮೂಲಕ ತಂಡಕ್ಕೆ ವಿಲಿಯಮ್ಸನ್ ಆಸರೆಯಾದರು. ಬಾಲಂಗೋಚಿಗಳ ನೆರವಿನಿಂದ ತಂಡಕ್ಕೆ ಇನಿಂಗ್ಸ್ ಮುನ್ನಡೆ ಕೊಡಿಸಿದ ವಿಲಿಯಮ್ಸನ್, ಇಶಾಂತ್ ಶರ್ಮ ಎಸೆತದಲ್ಲಿ ಸ್ಲೀಪ್‌ನಲ್ಲಿದ್ದ ಕೊಹ್ಲಿಗೆ ಕ್ಯಾಚ್ ನೀಡಿದರು. ಬಳಿಕ ಟಿಮ್ ಸೌಥಿ (30*ರನ್, 46 ಎಸೆತ, 1 ಬೌಂಡರಿ, 2ಸಿಕ್ಸರ್) ಕಡೇ ಹಂತದಲ್ಲಿ ಸ್ಫೋಟಿಸಿ ತಂಡದ ಮುನ್ನಡೆಯನ್ನು ಹಿಗ್ಗಿಸಿದರು.

    ಭಾರತ : 217 ಮತ್ತು 30 ಓವರ್‌ಗಳಲ್ಲಿ 2 ವಿಕೆಟ್‌ಗೆ 64 (ರೋಹಿತ್ ಶರ್ಮ 30, ಚೇತೇಶ್ವರ್ ಪೂಜಾರ 12*, ಟಿಮ್ ಸೌಥಿ 17ಕ್ಕೆ 2), ನ್ಯೂಜಿಲೆಂಡ್: 249 (ಕೇನ್ ವಿಲಿಯಮ್ಸನ್ 49, ರಾಸ್ ಟೇಲರ್ 11, ಗ್ರಾೃಂಡ್‌ಹೋಮ್ 13, ಕೈಮ್ ಜೇಮಿಸನ್ 21, ಟೀಮ್ ಸೌಥಿ 30, ಮೊಹಮದ್ ಶಮಿ 76ಕ್ಕೆ 4, ಇಶಾಂತ್ ಶರ್ಮ 48ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts