More

    ಭಾರತ-2047: ಭರವಸೆಯ ದಿಕ್ಕು, ಹೊಸ ಹೊಳಹು..

    ಭಾರತವು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈವರೆಗೆ ಸವೆಸಿದ ಹಾದಿಯ ಅವಲೋಕನದ ಜತೆಗೆ, ಮುಂದಿನ 25 ವರ್ಷಗಳಲ್ಲಿ, ಅಂದರೆ ಸ್ವಾತಂತ್ರ್ಯದ ಶತಮಾನೋತ್ಸವದ ಹೊತ್ತಿಗೆ, ದೇಶದ ಸ್ಥಿತಿಗತಿ ಹೇಗಿರಬಹುದು? ಯಾವ ಸವಾಲುಗಳು ಎದುರಾಗಬಹುದು? ಪರಿಹಾರವೇನು ಇತ್ಯಾದಿ ಸಂಗತಿಗಳನ್ನು ರ್ಚಚಿಸುವ ನಿಟ್ಟಿನಲ್ಲಿ ವಿಜಯವಾಣಿ ಸಂವಾದ ಏರ್ಪಡಿಸಿತ್ತು. ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ ಪ್ರೊ. ಚಂಬಿ ಪುರಾಣಿಕ್ ಹಾಗೂ ಏಮ್ ಹೈ ಕನ್ಸಲ್ಟಿಂಗ್ ಸಿಇಒ ಹಾಗೂ ಖ್ಯಾತ ಸಂವಹನ ಸಲಹೆಗಾರ ಎನ್.ರವಿಶಂಕರ್ ಅವರು ಭಾಗವಹಿಸಿ ಚಿಂತನೆಗಳನ್ನು, ಒಳನೋಟಗಳನ್ನು ಹಂಚಿಕೊಂಡರು.
    • ಕಳೆದ 75 ವರ್ಷದಲ್ಲಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂಬ ಅಭಿಪ್ರಾಯವಿದೆ. ಈ ನಡುವೆಯೂ ಜಾತ್ಯತೀತ ರಾಷ್ಟ್ರವಾಗಿ ಭಾರತ ಮಾದರಿಯಾದ ಹೆಮ್ಮೆ ಇದೆ. ನೀವು ಯಾವ ದೃಷ್ಟಿಕೋನದಲ್ಲಿ ನೋಡುತ್ತೀರಿ?

    ರವಿಶಂಕರ್: 75 ವರ್ಷದಲ್ಲಿ ಒಂದು ದೇಶದ ಪ್ರಗತಿ ಅಥವಾ ಸಮಾಜವನ್ನು ಮೇಲಕ್ಕೆ ತರುವುದಕ್ಕೆ ಅತೀ ಚಿಕ್ಕ ಅವಧಿ. ರಾಜಕೀಯ ಪಕ್ಕಕ್ಕಿಟ್ಟು ಈ ಅವಧಿಗೆ ಗ್ರೇಡಿಂಗ್ ಕೊಡುವುದಾದರೆ ‘ಎ’ ಗ್ರೇಡ್ ಕೊಡಬೇಕಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿರುವ ಹೊತ್ತಿನಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ನಾವು ಬೀಗುತ್ತಿದ್ದೇವೆ, ವೈವಿಧ್ಯಮಯ ದೇಶ ಒಟ್ಟಾಗಿದೆ ಎಂದರೆ ಹೆಮ್ಮೆಯ ವಿಷಯವೇ. ಮುಂದಿನ ಇಪ್ಪತೆôದು ವರ್ಷದಲ್ಲಿ ಇವತ್ತಿಗಿಂತಲೂ ಹೆಚ್ಚು ಹೆಮ್ಮೆಯಿಂದ ಇರುವುದು ಹೇಗೆ ಎಂದು ಚಿಂತಿಸಬೇಕು. ದೇಶದ ಎಲ್ಲ ಸಮಸ್ಯೆಗೆ ಪರಿಹಾರ ಇರುವುದು ನವೋದ್ಯಮಗಳಲ್ಲಿ, ಉದ್ಯಮಶೀಲತಾ ಮನೋಭಾವದಲ್ಲಿ.

    ಇಷ್ಟು ಬೃಹತ್ ಜನಸಂಖ್ಯೆ ಇರುವ ದೇಶದಲ್ಲಿ ಸರ್ಕಾರ ಅಥವಾ ಕೆಲವು ಕಂಪನಿಗಳು ಎಲ್ಲರಿಗೂ ಕೆಲಸ ಕೊಡುವುದು, ಎಲ್ಲವನ್ನೂ ಹೊಂದಿಸಿಕೊಡಲು ಅಸಾಧ್ಯ. ಹಾಗೆಯೇ, ಪಾಶ್ಚಿಮಾತ್ಯ ಆರ್ಥಿಕತೆ ಮಾಡೆಲ್ ಇಲ್ಲಿ ಕೆಲಸ ಮಾಡಲ್ಲ ಎಂಬ ಅರಿವಿದ್ದೇ, ಸಹಕಾರ ತತ್ತ್ವದ ಆಧಾರದಲ್ಲಿ ಅಂದರೆ ಆಲ್ ಫಾರ್ ಒನ್ ಒನ್ ಫಾರ್ ಆಲ್ ಆಧಾರದಲ್ಲಿ ದೇಶ ಕಟ್ಟಲಾಯಿತು. ಹಾಗೆಯೇ ಕಾಲಕಾಲಕ್ಕೆ ಆರ್ಥಿಕ ನಿಲುವುಗಳು ಬದಲಾಯಿತು. ಉದಾರೀಕರಣ ಮೂಲಕ ಸರಿಯಾದ ಕಾಲಕ್ಕೆ ಭಾರತ ಪ್ರಪಂಚಕ್ಕೆ ತೆರೆದುಕೊಂಡಿತು.

    ಇಂದು 75 ಸಾವಿರ ನೋಂದಾಯಿತ ಸ್ಟಾರ್ಟಪ್​ಗಳು ಇವೆ. ನೋಂದಾವಣೆ ಆಗದ ಸ್ಟಾರ್ಟಪ್​ಗಳು ಇದರ ಹತ್ತು ಪಟ್ಟು ಇರಬಹುದು. ಇನ್ನು ಐದು ವರ್ಷಗಳಲ್ಲಿ ನವೋದ್ಯಮಗಳು ಸೃಷ್ಟಿಸುವ ಉದ್ಯೋಗ ಸಂಘಟಿತ ವಲಯಕ್ಕಿಂತ ಹೆಚ್ಚಿರುತ್ತದೆ. ನವೋದ್ಯಮಕ್ಕೆ ಹೊಸ ವೇಗ ಹುಮ್ಮಸ್ಸು, ಉಮೇದು ದೊರಕಿದೆ. ಉದ್ಯೋಗಕ್ಕೆ ಪರ್ಯಾಯವಾಗಿ ನವೋದ್ಯಮ ಆಯ್ಕೆ ಮಾಡಿಕೊಳ್ಳುವುದು ಮತ್ತು ಶಾಲೆ ಹಂತದಲ್ಲೇ ಉದ್ಯೋಗಿಯಾಗುವ ಬದಲು ಉದ್ಯೋಗದಾತನಾಗಬೇಕೆಂಬ ಕಲ್ಪನೆ ರೂಢಿಯಾಗುತ್ತಿದೆ. ಸಾಮಾಜಿಕ, ಆರ್ಥಿಕ ಬದಲಾವಣೆಗಳು ಕಾಣಿಸಿ, ಜನರಲ್ಲಿ ರಾಜಕೀಯದ ನಾನ್ಸೆನ್ಸ್ ಬಗ್ಗೆ ಆಸಕ್ತಿ ಕಡಿಮೆ ಆಗಿ, ಅವರ ಜೀವನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ನವೋದ್ಯಮವಾಗಿರುತ್ತದೆ, ನವೋದ್ಯಮದಿಂದ ನವಭಾರತದೆಡೆಗೆ ಹೋಗುತ್ತೇವೆ ಎಂಬ ವಿಶ್ವಾಸವಿದೆ.

    ಚಂಬಿ ಪುರಾಣಿಕ್: ಇಲ್ಲಿಯವರೆಗೆ ಅತ್ಯದ್ಭುತ ಸಾಧನೆ ಆಗಿದೆ ಎನ್ನಲಾಗದು. ಸಂವಿಧಾನದಲ್ಲಿರುವಂತೆ ಪ್ರಜೆಗಳ ಪ್ರಭುತ್ವ ಎಂಬುದರ ಅರ್ಥವನ್ನು ನಂಬಬೇಕೊ ಬೇಡವೋ ಎಂಬ ರೀತಿ ವ್ಯಥೆ ಆಗುತ್ತದೆ. ಆದರೆ, ಆಗಿರುವ ಬೆಳವಣಿಗೆಗಳು ಮುಂದಿನ 25 ವರ್ಷಗಳಿಗೆ ಒಳ್ಳೆಯ ತಳಪಾಯ ಆಗುತ್ತದೆ.

    ಚುನಾವಣೆಗಳ ಮೂಲಕ ನೋಡುವುದಾದರೆ, ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಸ್ಥಿರತೆ ತೋರಿಸಿದ್ದೇವೆ. ಆದರೆ, ಜನಪ್ರತಿನಿಧಿಗಳ ಆಯ್ಕೆ ವಿಷಯದಲ್ಲಿ ಎಡವಿದ್ದೇವೆ. ಶಾಸನಸಭೆಯಲ್ಲಿ ಪಾಲ್ಗೊಳ್ಳಲು ಬೇಕಾದ ಉನ್ನತವಾದ ಆದರ್ಶವನ್ನು ಹೊಂದಿದ ಅಭ್ಯರ್ಥಿಗಳನ್ನು ರಾಜಕೀಯ ಪಕ್ಷಗಳು ಸ್ಪರ್ಧೆಗಿಳಿಸುತ್ತಿಲ್ಲ. ಆದರ್ಶಮಯ ರಾಜಕಾರಣ ಕಾಣುತ್ತಿಲ್ಲ. ವಿಧೇಯಕಗಳು ಶಾಸನಸಭೆಯಲ್ಲಿ ಮಂಡನೆಯಾದಾಗ ಚರ್ಚೆಯಾಗದೇ ಒಪ್ಪಿಗೆ ಪಡೆದುಕೊಳ್ಳಲಾಗುತ್ತಿದೆ.

    ನ್ಯಾಯಾಂಗದಲ್ಲಿ ಕೂಡ ವಿಳಂಬ ನ್ಯಾಯದಾನವಾಗುತ್ತಿದೆ. ಇದು ಸರಿಯಾಗಬೇಕು. ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ ಯಾದವ್ ಅವರಿಗೆ ಮೇವು ಹಗರಣದಲ್ಲಿ ಶಿಕ್ಷೆಯಾಗುವಾಗ 18-20 ವರ್ಷ ಕಳೆದಿತ್ತು.

    ಶಾಸಕಾಂಗದಂತೆ ಕಾರ್ಯಾಂಗ ಕೂಡ ಕುಸಿಯುತ್ತಿದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡುವಿನ ಒಳ ಒಪ್ಪಂದ ವ್ಯವಸ್ಥೆಯನ್ನು ಹಾಳುಗೆಡವುತ್ತಿದೆ. ಆದರೆ, ಮುಂದಿನ 25 ವರ್ಷಗಳಲ್ಲಿ ಇವು ಸರಿ ಆಗಬಹುದೆಂಬ ವಿಶ್ವಾಸವಿದೆ. ಜನಪ್ರತಿನಿಧಿ ಬಾಸ್ ಅಲ್ಲ, ಆತ ಸರ್ವೆಂಟ್ ಎಂಬುದು ಜನರ ಮನಸ್ಸಿನಲ್ಲಿರಬೇಕು.

    ಮುಂದುವರಿದ ಹಾಗೂ ಸ್ಥಿರತೆ ಹೊಂದಿರುವ ದೇಶದೊಂದಿಗೆ ಭಾರತದ ಪ್ರಜಾಪ್ರಭುತ್ವವನ್ನು ಹೋಲಿಕೆ ಮಾಡುವುದು ತಪ್ಪಾಗುತ್ತದೆ. ವಿದೇಶದ ಅನೇಕ ಕಡೆ ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಇದೆ. ನಮ್ಮಲ್ಲೂ ಜನರ ಪಾಲ್ಗೊಳ್ಳುವಿಕೆಯಿಂದ, ಡಿಜಿಟಲೀಕರಣದಿಂದ ಪಾರದರ್ಶಕತೆ ಹೆಚ್ಚಾಗುತ್ತದೆ. ಯುಎಸ್​ನಲ್ಲಿ ಎರಡು ಅವಧಿಗೆ ಮಾತ್ರ ಜನಪ್ರತಿನಿಧಿ ಆಯ್ಕೆಯಾಗಬಹುದು, ಅಂತಹ ವ್ಯವಸ್ಥೆ ಇಲ್ಲಿ ಬರಬೇಕು. ಶಾಸಕರನ್ನು ಖರೀದಿಸಿ ಸರ್ಕಾರ ರಚಿಸುವ ವಾತಾವರಣದಲ್ಲಿ ನಾವಿದ್ದೇವೆ.

    | ಪ್ರೊ. ಚಂಬಿ ಪುರಾಣಿಕ್

    ಭ್ರಷ್ಟ್ಟಾಚಾರಕ್ಕೆ ತಂತ್ರಜ್ಞಾನ ಸಿದ್ಧೌಷಧ

    • ರಾಜಕೀಯ ಮಾಲಿನ್ಯದ ನಡುವೆ ಡಿಜಿಟಲ್ ವರ್ಲ್ಡ್ ಪರಿಸ್ಥಿತಿ ಹೇಗಿದೆ, ಅದರ ಭವಿಷ್ಯವೇನು?

    ರವಿಶಂಕರ್: ಭಾರತವು ರಾಜಕೀಯದ ಹೊರತಾಗಿಯೂ ಬೆಳೆಯುತ್ತದೆ. ಯಾವ ಹಂತದಲ್ಲಿ ಜನರು ರಾಜಕೀಯ ಘಟನೆಗಳ ಬಗ್ಗೆ ಚರ್ಚೆ ಮಾಡುವುದನ್ನು ನಿಲ್ಲಿಸಿ, ಹೊಸ ಹೊಸ ಐಡಿಯಾ, ಕಲ್ಪನೆ, ಆಲೋಚನೆ, ಹೊಸ ಹೊಮ್ಮುಗೆಯ ವಿಷಯ ಮಾತನಾಡಲು ಆರಂಭಿಸುತ್ತಾರೆಯೋ ಅದು ದೇಶದ ಟರ್ನಿಂಗ್ ಪಾಯಿಂಟ್.

    ಹಿಂದೆ ಜನರು ಕ್ರಿಕೆಟ್, ಚಲನಚಿತ್ರದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಇಂದು ರಾಜಕೀಯ ಕಾಲಹರಣದ ಸಾಧನ ಆಗಿದೆ. ಆದರೂ ಇದು ಸ್ಯಾಚುರೇಷನ್ ಪಾಯಿಂಟ್ ಸಮೀಪಿಸಿದೆ ಎನಿಸಿದೆ. ರಾಜಕೀಯದಿಂದ ತಮ್ಮ ಬದುಕಿನಲ್ಲಿ ಬದಲಾವಣೆ ಆಗಲ್ಲ ಎಂದು ಜನರಿಗೆ ಅನಿಸಲು ಆರಂಭವಾಗಿದೆ. ರಾಜಕೀಯದ ಬಗ್ಗೆ ಹೆಚ್ಚೆಚ್ಚು ಚರ್ಚೆ ಮಾಡಿಷ್ಟು ರಾಜಕೀಯ ವ್ಯಕ್ತಿಗಳಿಗೆ ಶಕ್ತಿ ಕೊಟ್ಟಂತೆ. ಶಕ್ತಿ ಕೊಟ್ಟರೆ ಭ್ರಷ್ಟಚಾರದಂತಹ ಸಮಸ್ಯೆಗೆ ಕಾರಣವಾಗುತ್ತದೆ.

    ಭ್ರಷ್ಟ್ಟಾಚಾರಕ್ಕೆ ಟೆಕ್ನಾಲಜಿ ಸಿದ್ಧೌಷಧ. ತಂತ್ರಜ್ಞಾನದಿಂದ ಪಾರದರ್ಶಕತೆ ಬರುತ್ತದೆ. ಕ್ಷಿಪ್ರಗತಿಯ ಡಿಜಿಟಲೀಕರಣದಿಂದ ಇದೆಲ್ಲ ಸಾಧ್ಯವಿದೆ ಮತ್ತು ಆ ದಿಕ್ಕಿನತ್ತ ನಾವು ಈಗಾಗಲೇ ಪ್ರಯಾಣ ಮಾಡುತ್ತಿದ್ದೇವೆ. ಮುಂದಿನ 10-15 ವರ್ಷಗಳಲ್ಲಿ ಉತ್ತಮ ಸ್ಥಿತಿಯಲ್ಲಿ ಇರುತ್ತೇವೆ. ಡಿಜಿಟಲ್ ಸ್ಕಿಲ್ ಪಡೆಯಲು ಕೆಲವು ಕಡೆ ಸಮಸ್ಯೆ ಇದೆ; ಮೂಲಸೌಕರ್ಯದ ಕೊರತೆ ಇದೆ. ಮುಂದಿನ 3-4 ವರ್ಷದಲ್ಲಿ ಇದು ಒಂದು ಹದಕ್ಕೆ ಬರಲಿದೆ.

    ಗಿಗ್ ಎಕಾನಮಿ ವೇಗ ಪಡೆದುಕೊಳ್ಳಲಿದೆ. ಸಾಮಾನ್ಯ ಆರ್ಥಿಕತೆಗಿಂತ ಪರ್ಯಾಯ ಕೆಲಸದ ವ್ಯವಸ್ಥೆ ಹೆಚ್ಚಾಗಲಿದೆ. ಅಂದರೆ ಕಾಯಂ ಕೆಲಸದ ಕಲ್ಪನೆ ಹೋಗಿ ತನಗಿರುವ ಕೌಶಲಕ್ಕೆ ಕನ್ಸಲ್ಟೆಂಟ್ ರೂಪದಲ್ಲಿ ಪ್ರಾಜೆಕ್ಸ್, ಅಸೈನ್​ವೆುಂಟ್ ಬೇಸ್ ಕೆಲಸ ಹೆಚ್ಚಾಗುವುದು. ವಿವಿಧ ವೇದಿಕೆಯಲ್ಲಿ ತನ್ನ ಕೌಶಲ ಸಹಿತ ಮಾಹಿತಿ ನೊಂದಾಯಿಸಿಕೊಂಡು ಬೇಕಾದನ್ನು ಆಯ್ಕೆ ಮಾಡಿಕೊಂಡು ಹಣ ಪಡೆಯುವ ವ್ಯವಸ್ಥೆ ಬರುತ್ತದೆ.

    ಉತ್ಪಾದನಾ ಕ್ಷೇತ್ರದಲ್ಲಿ ಚೀನಾಗೆ ಹೋಲಿಸಿದರೆ ಕೌಶಲದ ಕೊರತೆ ಎದ್ದು ಕಾಣಿಸುತ್ತದೆ. ಆದರೆ ಮುಂದಿನ ದಿನಗಳಲ್ಲಿ ಇದು ಸರಿ ಆಗಬಹುದು. 2047ರ ವೇಳೆಗೆ ಮೋದಿಯವರ ಕನಸಿನ ಆತ್ಮ ನಿರ್ಭರತೆ, ಗಾಂಧೀಜಿಯವರ ಸ್ವಾವಲಂಬನೆ ಕನಸು ಸಾಕಾರದ ದಿಕ್ಕಿನತ್ತ ಪ್ರಯಾಣ ಬೆಳೆಸಲು ಸಾಧ್ಯವಾಗುತ್ತದೆ.

    ಡಿಜಿಟಲ್ ಕಂದಕ: ನಮ್ಮಲ್ಲಿ ಡಿಜಿಟಲ್ ಡಿವೈಡ್ ಇದೆಯೇ? ಇದಕ್ಕೆ ಏನು ಪರಿಹಾರ? 5ಜಿಯಿಂದ ಏನು ಅನುಕೂಲ ಆಗಬಹುದು ಎಂಬ ಪ್ರಶ್ನೆಗೆ ರವಿಶಂಕರ್ ಉತ್ತರಿಸಿದ್ದು ಹೀಗೆ: 1.4 ಬಿಲಿಯನ್ ಜನಸಂಖ್ಯೆಯ ದೇಶದಲ್ಲಿ ಡಿಜಿಟಲ್ ಡಿವೈಡ್ ಇದೆಯೆ ಎಂಬುದು ಪ್ರಶ್ನೆಯಲ್ಲ, ಎಷ್ಟಿದೆ ಎಂಬುದು ಪ್ರಶ್ನೆ. ಸ್ಮಾರ್ಟ್ ಫೋನ್- ಫೀಚರ್ ಫೋನ್ ಅನುಪಾತ 8-6 ರಷ್ಟಿದೆ. ಕೊರತೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಫೋನ್​ಗಳು ಸ್ಮಾರ್ಟ್ ಫೋನ್​ಗಳೇ ಆಗಿರುತ್ತವೆ, ಮುಂದೆ 5ಜಿ ಫೀಚರ್ ಕೂಡ ಹೊಂದಿರುತ್ತದೆ. ನಮ್ಮ ದೇಶದಲ್ಲಿ ಡಿಜಿಟಲ್ ಡಿವೈಡ್ ಅಳಿಸಿಹಾಕಲು, ಶಿಕ್ಷಣ, ಜ್ಞಾನ, ಆರೋಗ್ಯ ಕ್ಷೇತ್ರದ ಅನುಕೂಲ ಆಗಬೇಕೆಂದರೆ ಡಿಜಿಟಲ್ ಹೈವೇ ಬೇಕು. ಮುಂದಿನ ದಿನಗಳಲ್ಲಿ ಈ ಅಂತರ ಕಡಿಮೆ ಆಗುತ್ತದೆ ಎಂಬ ವಿಶ್ವಾಸವಿದೆ ಎಂದರು ರವಿಶಂಕರ್.

    2047ರ ಹೊತ್ತಿಗೆ ದೇಶ ಆರೋಗ್ಯದಾಯಕ, ಸಂತೋಷಕರವಾಗಿರುತ್ತದೆ ಎಂಬ ಬಲವಾದ ನಂಬಿಕೆ ಇದೆ. ಗಿಗ್ ಎಕಾನಮಿ ಮೂಲಕ ತಮಗಿಷ್ಟ ಬಂದ ಕೆಲಸ ಮಾಡುವುದರಿಂದ ಒತ್ತಡ ಕಡಿಮೆ ಇರುತ್ತದೆ. ಇದರಿಂದ ಸಂತೃಪ್ತ ಜೀವನ ಸಾಧ್ಯ. ಭೇದಭಾವ ಇರುವುದೇ ಇಲ್ಲ ಎನ್ನಲ್ಲ. ಆದರೆ, ಅದು ಸಾಕಷ್ಟು ಕಡಿಮೆ ಆಗಬಹುದು. ಹಾಗೇ, ಗಿಗ್ ಎಕಾನಮಿಯಿಂದ ಕೆಲಸಗಳು ಲಭ್ಯ ಆಗಿ ಲಿಂಗ ಅಸಮಾನತೆ ಇಳಿಕೆಯಾಗುತ್ತದೆ. ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿದಂತೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ.

    | ಎನ್. ರವಿಶಂಕರ್

    ರಾಜಕಾರಣಿಗಳಿಗೆ ತರಬೇತಿ

    ರಾಜಕಾರಣಿಗಳಿಗೆ ಶೈಕ್ಷಣಿಕ ಅರ್ಹತೆ ಇರಬೇಕು ಎಂಬ ವಾದದ ಬಗ್ಗೆ ಚಂಬಿ ಪುರಾಣಿಕ್ ಹೇಳಿದ್ದು ಹೀಗೆ: ಎಲ್ಲರಿಗೂ ಮತದಾನದ ಹಕ್ಕು ನೀಡಿರುವುದೇ ನಮ್ಮ ಸಂವಿಧಾನದ ಸೌಂದರ್ಯ. ಸಂವಿಧಾನ ರಚನೆ ಸಂದರ್ಭದಲ್ಲಿ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಚರ್ಚೆಯಾಗಿತ್ತು. ಅಂದು ಶೈಕ್ಷಣಿಕ ಅರ್ಹತೆ ನಿಗದಿ ಮಾಡಿದ್ದರೆ ಜನಪ್ರತಿನಿಧಿಗಳೇ ಸಿಗುತ್ತಿರಲಿಲ್ಲ. ಶೈಕ್ಷಣಿಕ ಅರ್ಹತೆ ಕಡ್ಡಾಯದ ಬದಲು ತರಬೇತಿ ಕೊಡುವ ವ್ಯವಸ್ಥೆ ಆಗಬೇಕು. ಆದರೆ, ಇಂದು ಚಲಾವಣೆಯಾದ ಮತಗಳ ಪೈಕಿ ಶೇ. 30-35 ಮತ ಪಡೆದವನೂ ಆಯ್ಕೆಯಾಗುತ್ತಾನೆ. ಶೇ.50 ಮತ ಪಡೆಯಬೇಕೆಂದು ಕಡ್ಡಾಯ ಮಾಡಬಹುದು. ಶೇ.50 ಮತ ಪಡೆಯದೇ ಇದ್ದರೆ ಮತ್ತೆ ಚುನಾವಣೆ ನಡೆಸಬೇಕೇ ಎಂದು ಕೇಳಿದರೆ ಹೌದು ಎನ್ನಬಹುದು. ಮೊದಲ ಚುನಾವಣೆಯಲ್ಲಿ ಟಾಪ್-2 ಬಂದ ಇಬ್ಬರಿಗೆ ಎರಡನೇ ಬಾರಿ ಚುನಾವಣೆ ಮಾಡಿ ಆಯ್ಕೆ ಮಾಡಬಹುದು.

    • ಚುನಾವಣೆ ಸುಧಾರಣೆ ಮುಂದಿನ ದಿನಗಳಲ್ಲಿ ಚುನಾವಣೆ ವ್ಯವಸ್ಥೆ ಯಾವ ರೀತಿ ಬದಲಾಗಬೇಕು?

    ಚಂಬಿ ಪುರಾಣಿಕ್: ರಾಜಕೀಯ ಪಕ್ಷಗಳು ನೀಡಿದ ಪ್ರಣಾಳಿಕೆ ಈಡೇರಿಸದಿದ್ದರೆ, ಜನ ಪ್ರತಿನಿಧಿ ಕ್ಷೇತ್ರದ ಜನರ ನಿರೀಕ್ಷೆ ಹುಸಿಗೊಳಿಸಿದರೆ ಆತನನ್ನು ರೀಕಾಲ್ ಮಾಡುವ ಅವಕಾಶ ಜನರಿಗಿರಬೇಕು. ಇದರಿಂದ ಉತ್ತರದಾಯಿತ್ವ ಬರುತ್ತದೆ. ಇದನ್ನು ತರಲು ಸಂವಿಧಾನ ತಿದ್ದುಪಡಿ ಅಗತ್ಯವಿಲ್ಲ. ಮನಸ್ಸಿದ್ದರೆ ಮಾರ್ಗವಿದೆ. ಒಬ್ಬ ಟಿ.ಎನ್.ಶೇಷನ್ ಇಡೀ ಚುನಾವಣೆ ವ್ಯವಸ್ಥೆಯನ್ನು ಅಲ್ಲಾಡಿಸಿದ್ದನ್ನು ನಾವು ಮರೆಯಬಾರದು.

    ರವಿಶಂಕರ್: ಡಿಜಿಟಲ್ ಮಾರ್ಗದಲ್ಲಿ ಪರ್ಯಾಯ ಹುಡುಕಬಹುದು. ಬೇರೆ ದೇಶದಲ್ಲಿ ಅಪ್ರೂವಲ್ ರೇಟಿಂಗ್ ವಿಧಾನವಿದೆ. ಜನರು ನೀಡುವ ರೇಟಿಂಗ್ ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸುತ್ತದೆ. ಮುಂದಿನ ಚುನಾವಣೆಯಲ್ಲಿ ಅವರ ಬಗೆಗಿನ ವಿಶ್ವಾಸ ಕಡಿಮೆ ಆಗುತ್ತಿದೆ ಎಂಬುದನ್ನು ರೇಟಿಂಗ್​ನಲ್ಲಿ ತಿಳಿದುಕೊಂಡುಬಿಡುತ್ತಾರೆ. ಎಲ್ಲರೂ ಒಪ್ಪಬಹುದಾದ ಅಪ್ರೂವಲ್ ರೇಟಿಂಗ್ ಕೆಲವು ವರ್ಷಗಳಲ್ಲಿ ನಮ್ಮಲ್ಲಿಯೂ ಬರಬಹುದು. ಅದೊಂದು ರೀತಿ ಡೈಲಿ ಸ್ಕೋರ್ ಕಾರ್ಡ್ ಆಗಲಿದೆ, ಜನಪ್ರತಿನಿಧಿಗಳನ್ನು ಜಾಗೃತಾವಸ್ಥೆಯಲ್ಲಿ ಇಡಲಿದೆ ಎಂಬ ನಂಬಿಕೆ ಇದೆ.

    • ಸಾಂಕ್ರಾಮಿಕದಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರಿ ಉದ್ಯೋಗ ನಷ್ಟವಾಗಿದೆ. ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಬಳಕೆ ಹೆಚ್ಚಾದಾಗ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆಯೇ? ಇದಕ್ಕೆ ಪರಿಹಾರವೇನು?

    ರವಿಶಂಕರ್: ತಂತ್ರಜ್ಞಾನ ಮತ್ತು ಆರ್ಥಿಕತೆ ವಿಷಯದಲ್ಲಿ ಹೀಗೇ ನಡೆಯಬಹುದೆಂದು ಹೇಳುವುದು ಸರಿಯಾಗಲಿಕ್ಕಿಲ್ಲ. ರಿಪಿಟಿಟಿವ್ ಆಗುವಂತಹ ಕೆಲಸಗಳನ್ನು ಅಥವಾ ಟೆಂಪ್ಲೆಟ್, ಸಣ್ಣ ವಿವರಣೆ ಭರ್ತಿ ಮಾಡುವ ಕಡೆಗಳಲ್ಲಷ್ಟೇ ತಂತ್ರಜ್ಞಾನ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಪರಿಹಾರದ ದಿಕ್ಕು ತೋರಿಸುತ್ತದೆ. ಸ್ವಂತ ಬುದ್ಧಿ ಉಪಯೋಗಿಸಿ ಕೆಲಸ ಮಾಡುವ ಕಡೆ ರೀಪ್ಲೇಸ್ ಮಾಡಲು ಆಗಲ್ಲ. ಆದರೂ ಎಐ ಬಳಕೆಯಿಂದ ಒಂದಷ್ಟು ಉದ್ಯೋಗ ನಷ್ಟ ಆಗಿ ನೋವು ಇದ್ದೇ ಇರುತ್ತದೆಯಾದರೂ ಉದ್ಯಮಶೀಲತೆಯನ್ನು ಕಿತ್ತುಕೊಳ್ಳಲು ಆಗಲ್ಲ. ಮುಂದಿನ ದಿನಗಳಲ್ಲಿ ಉದ್ಯೋಗಕ್ಕಿಂತ ಉದ್ಯಮಶೀಲತೆಯೆಡೆಗೆ ಹೆಜ್ಜೆ ಇರುತ್ತದೆ.

    ಹಿಮಪಾತಕ್ಕೆ ಸಿಲುಕಿದ್ದ ಯೋಧನ ಅವಶೇಷ 38 ವರ್ಷಗಳ ಬಳಿಕ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts