More

    ಹೋರಾಟದ ಧ್ಯೇಯ ನಮ್ಮೆಲ್ಲರನ್ನು ಒಂದಾಗಿಸಿದೆ : ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಸ್ತುವಾರಿ ಸಚಿವ ನಾಗೇಶ್ ಅಭಿಪ್ರಾಯ

    ಕೋಲಾರ: ಸ್ವಾತಂತ್ರ್ಯ ಹೋರಾಟದ ಧ್ಯೇಯ ಇಡೀ ಭಾರತೀಯರನ್ನು ಒಂದಾಗಿಸಿದ ರೀತಿಯಲ್ಲೇ ಪ್ರಕೃತಿ ವಿಕೋಪ ಹಾಗೂ ಕರೊನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಮ್ಮೊಳಗಿನ ಭ್ರಾತೃತ್ವವನ್ನು ಗಟ್ಟಿಗೊಳಿಸಿ ಸಹಬಾಳ್ವೆಗೆ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಹೇಳಿದರು.

    ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಶನಿವಾರ ಆಯೋಜಿಸಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನೂರಾರು ವರ್ಷ ಬ್ರಿಟಿಷರ ಆಳ್ವಿಕೆಗೆ ಸಿಲುಕಿದ್ದ ದೇಶವನ್ನು ಮಹನೀಯರು ಹೋರಾಟ, ತ್ಯಾಗ ಹಾಗೂ ಬಲಿದಾನದಿಂದ ಮುಕ್ತಗೊಳಿಸಿ ಸ್ವತಂತ್ರ ದೇಶವನ್ನಾಗಿಸಿದ್ದಾರೆ ಎಂದು ಸ್ಮರಿಸಿದರು.

    ಜಿಲ್ಲೆಯಲ್ಲಿ ಕುಗ್ಗದ ಆಶಯಗಳೊಂದಿಗೆ ಬರದ ನೆರಳಲ್ಲಿ ಬದುಕುತ್ತಿರುವ ಜನತೆ ಬರದ ಕಪ್ಪು ಛಾಯೆಯೊಂದಿಗೆ ಸೆಣೆಸಾಡುತ್ತಿದ್ದಾರೆ. ಸೂಕ್ಷ್ಮಪರಿಸ್ಥಿತಿಯಲ್ಲಿ ನೊಂದವರ ಜೀವನ ಕಟ್ಟಿಕೊಡಲು ಸಹಕರಿಸಬೇಕು, ದ್ವೇಷ, ಅಸೂಯೆ ಹಿಮ್ಮೆಟ್ಟಿ ಸೌಹಾರ್ದಯುತ ಬಾಳು ನಡೆಸಬೇಕು ಎಂದರು.

    ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ 830, ಖಾಸಗಿಯಲ್ಲಿ 1845, ರೋಗ ಲಕ್ಷಣವಿಲ್ಲದ ಸೋಂಕಿತರ ಐಸೋಲೇಷನ್‌ಗೆ 3806 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿದ್ದು, ಒಟ್ಟು 6481 ಹಾಸಿಗೆ ಸಿದ್ಧಪಡಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ಆರ್‌ಟಿಪಿಸಿಆರ್ ಯಂತ್ರ, ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್, 60 ಹಾಸಿಗೆಗಳ ಸೆಂಟ್ರಲ್ ಆಕ್ಸಿಜನೇಷನ್‌ಗೆ 40 ಲಕ್ಷ ರೂ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸೆಂಟ್ರಲ್ ಆಕ್ಸಿಜನ್ ಅಳವಡಿಕೆಗೆ 1.60 ಕೋಟಿ ರೂ. ವ್ಯಯಿಸಲಾಗಿದೆ. ಟಾಟಾ ಸನ್ಸ್‌ನಿಂದ ಸಿಎಸ್‌ಆರ್‌ನಡಿ ಜಿಲ್ಲಾಸ್ಪತ್ರೆಯಲ್ಲಿ 5 ಕೋಟಿ ರೂ. ಮೌಲ್ಯ ಯಂತ್ರೋಪಕರಣ ಒದಗಿಸಿದೆ ಎಂದರು.
    ಸಂಸದ ಎಸ್. ಮುನಿಸ್ವಾಮಿ, ಶಾಸಕರಾದ ಕೆ.ಶ್ರೀನಿವಾಸಗೌಡ, ಇಂಚರ ಗೋವಿಂದರಾಜು, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋದಮ್ಮ, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸ್ಪಿ ಕಾರ್ತಿಕ್‌ರೆಡ್ಡಿ, ಎಡಿಸಿ ಬಿ.ಶಿವಸ್ವಾಮಿ, ಎಎಸ್ಪಿ ಜಾಹ್ನವಿ, ಎಸಿ ಸೋಮಶೇಖರ್, ತಹಸೀಲ್ದಾರ್ ಆರ್.ಶೋಭಿತಾ, ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್, ಡಿಡಿಪಿಐ ಕೆ.ಎಂ. ಜಯರಾಮರೆಡ್ಡಿ, ಡಿಎಚ್‌ಒ ಡಾ.ಎಸ್.ಎನ್. ವಿಜಯಕುಮಾರ್, ಜಿಲ್ಲಾ ಸರ್ಜನ್ ಡಾ. ಎಸ್.ಜಿ.ನಾರಾಯಣಸ್ವಾಮಿ, ಕುಡಾ ಸದಸ್ಯೆ ಮಮತಮ್ಮ ಇತರರಿದ್ದರು.

    ಆಕರ್ಷಕ ಪಥಸಂಚಲನ : ಆರ್‌ಪಿಐ ಡಿವೈಎಸ್ಪಿ ರಘು ನೇತೃತ್ವದಲ್ಲಿ ಕೋಲಾರ, ಮುಳಬಾಗಿಲು ಉಪ ವಿಭಾಗದ ಪೊಲೀಸ್, ಗೃಹರಕ್ಷಕ ದಳ ಸೇರಿ 6 ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು, ಪೊಲೀಸ್ ವಾದ್ಯವೃಂದ ವಾದ್ಯ ನುಡಿಸಿದರೆ, ಸುಗುಣ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು ನಾಡಗೀತೆ, ರೈತಗೀತೆ, ಕರೊನಾ ಗೀತೆ, ವೀರ ಯೋಧರ ಗೀತೆ ಹಾಗೂ ದೇಶಭಕ್ತಿ ಗೀತೆ ಹಾಡಿದರು. ನಿವೃತ್ತ ಯೋಧರ ಟ್ರಸ್ಟ್ ಅಧ್ಯಕ್ಷ ಎಚ್. ಜಗನ್ನಾಥನ್ ನೇತೃತ್ವದಲ್ಲಿ ಮಾಜಿ ಯೋಧರು 70 ಅಡಿಗಳ ತ್ರಿವರ್ಣ ಧ್ವಜ ಪ್ರದರ್ಶಿಸಿದರು.

    ಸಾಧಕರಿಗೆ ಪುರಸ್ಕಾರ: ಯುಪಿಎಸ್ಸಿ ಸಾಧಕರಾದ ಕೆ.ಆರ್.ಭರತ್, ಡಾ. ವಿವೇಕರೆಡ್ಡಿ, ಎಸ್ಸೆಸ್ಸೆಲ್ಸಿ ಟಾಪರ್ಸ್‌ಗಳಾದ ರಚನಾ, ಕುಶಾಲ್‌ಗೌಡ, ಸಾಯಿ ಮೇಘನಾ, ದೀಕ್ಷಾ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕೆ.ಎಸ್. ಶ್ರೇಯಸ್, ದ್ವಿತೀಯ ಪಿಯುಸಿಯಲ್ಲಿ ತುಷಾರಾ ಎನ್.ಶೆಟ್ಟಿ, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಗೌಸ್‌ಖಾನ್, ಎಚ್. ಜಗನ್ನಾಥನ್, ವೆಂಕಟೇಶ್, ತರಬೇತುದಾರ ಅಂಚೆ ಅಶ್ವತ್ಥ್, ರಾಜ್ಯ ಪುರಸ್ಕಾರಕ್ಕೆ ಪಾತ್ರರಾದ ಸ್ಕೌಟ್ಸ್-ಗೈಡ್ಸ್ ಸುಹಾಸ್‌ಗೌಡ, ಸುಧಾ ಅವರನ್ನು ಗೌರವಿಸಲಾಯಿತು.

    ಸೋಂಕುಮುಕ್ತೆಗೆ ಸನ್ಮಾನ : ಕರೊನಾ ವಾರಿಯರ್ಸ್‌ಗಳಾದ ಡಾ.ರಾಧಿಕಾ, ನಂದೀಶ್‌ಕುಮಾರ್, ಪ್ರಸನ್ನ ಕುಮಾರ್, ಕೆಎಸ್‌ಆರ್‌ಟಿಸಿ ಚಾಲಕ ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆ ಎಸ್. ಸುನೀತಾ, ಪೊಲೀಸ್ ಇಲಾಖೆಯ ರೇಣುಕಾದೇವಿ, ರಮಾದೇವಿ, ಅಪ್ಪಿ ನಾರಾಯಣಸ್ವಾಮಿ, ಪೌರಾಯುಕ್ತ ಶ್ರೀಕಾಂತ್, ಶಿವಣ್ಣ, ಜಿಲ್ಲೆಯ ಮೊದಲ ಕರೊನಾ ಸೋಂಕಿತೆಯಾಗಿ ಗುಣವಾದ 70 ವರ್ಷದ ಮಮ್ತಾಜ್‌ಬೇಗಂ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts