More

    ಹೆಚ್ಚಿದ ಬ್ಲ್ಯಾಕ್ ಫಂಗಸ್ ಭಯ

    ಗದಗ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಆದರೆ. ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಜನರಲ್ಲಿ ಆತಂಕ ಶುರುವಾಗಿದೆ. ಮುಖ್ಯವಾಗಿ ಮಧುಮೇಹ ಸೇರಿ ಇತರೆ ಕಾಯಿಲೆಗಳಿಂದ ಬಳಲುತ್ತಿರುವರು, ಕರೊನಾ ಸೋಂಕಿತರು ಹಾಗೂ ಈಗಾಗಲೇ ಕರೊನಾ ಸೋಂಕಿನಿಂದ ಗುಣವಾದವರು ಕಪ್ಪು ಶಿಲೀಂಧ್ರದ ಅಬ್ಬರಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಔಷಧ ಕೊರತೆ ಜನರನ್ನು ಮತ್ತಷ್ಟು ಭಯಕ್ಕೆ ನೂಕಿದೆ.
    ಸದ್ಯ ಜಿಲ್ಲೆಯಲ್ಲಿ ಐವರು ಬ್ಲ್ಯಾಕ್ ಫಂಗಸ್​ಗೆ (ಮ್ಯೂಕರ್ ಮೈಕೋಸಿಸ್) ತುತ್ತಾಗಿದ್ದು ಎಲ್ಲರೂ ಜಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 22 ಜನರಿಗೆ (ಶಂಕಿತರು) ಕಪ್ಪು ಶಿಲೀಂಧ್ರ ಸೋಂಕು ತಗುಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕು ಮತ್ತಷ್ಟು ಜನರಿಗೆ ಕಾಡಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ.
    ಮೇ 19ರಂದು ಜಿಲ್ಲೆಯಲ್ಲಿ ಇಬ್ಬರಿಗೆ ಕಪ್ಪು ಶಿಲೀಂಧ್ರ ಸೋಂಕು ಇರುವುದು ದೃಢಪಟ್ಟಿತ್ತು. ಮೇ 21 ರಂದು ಒಬ್ಬರು ಮತ್ತು ಮೇ 27ಕ್ಕೆ ಇಬ್ಬರಿಗೆ ಬ್ಲಾ್ಯಕ್ ಫಂಗಸ್ ತಗುಲಿದೆ.
    ದಿನದಿಂದ ದಿನಕ್ಕೆ ಕಪ್ಪು ಶಿಲೀಂಧ್ರದ ಸೋಂಕಿನ ಉಪಟಳ ಹೆಚ್ಚಾಗುತ್ತಿದೆ. ಅಗತ್ಯ ಔಷಧ ಪೂರೈಕೆ ಇಲ್ಲ. ಕಪ್ಪು ಶಿಲೀಂಧ್ರಕ್ಕೆ ಬೇಕಿರುವ ‘ಲಿಫೋಸೋಮಲ್ ಆಂಫೋಟೆರಿಸಿನ್ ಬಿ’ ಔಷಧವನ್ನು ಮೊದಲ 10 ದಿನವಂತೂ ಕಡ್ಡಾಯವಾಗಿ ನೀಡಲೇಬೇಕು. ಆದರೆ, ಈ ಔಷಧ ಸದ್ಯ ಜಿಲ್ಲೆ ಸೇರಿ ರಾಜ್ಯದಲ್ಲಿ ದಾಸ್ತಾನಿಲ್ಲ. ಅಲ್ಲದೆ, ‘ಲಿಫೋಸೋಮಲ್ ಆಂಫೋಟೆರಿಸಿನ್ ಬಿ’ ಅತ್ಯಂತ ದುಬಾರಿಯಾಗಿದ್ದು, ಒಂದು ಡೋಸ್​ಗೆ 5ರಿಂದ 8 ಸಾವಿರ ರೂ. ದರವಿದೆ. ದಿನಕ್ಕೆ ಇಂತಹ ನಾಲ್ಕು ಇಂಜೆಕ್ಷನ್​ಗಳನ್ನು ರೋಗಿಗಳಿಗೆ ನೀಡಬೇಕು. ಸೋಂಕಿತರ ಪರಿಸ್ಥಿತಿ ಅವಲೋಕಿಸಿ ಕನಿಷ್ಠ ಹತ್ತು ದಿನಗಳಿಂದ ಒಂದೂವರೆ ತಿಂಗಳವರೆಗೂ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.
    ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಬ್ಲಾ್ಯಕ್ ಫಂಗಸ್ ಮೂಗಿನಲ್ಲಿ ಉತ್ಪತ್ತಿಯಾಗಿ ಕಣ್ಣು ಮತ್ತು ಮೆದುಳಿಗೆ ಲಗ್ಗೆ ಇಡುತ್ತದೆ. ಈ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದ್ದು, ಇದು ಕಂಡು ಬಂದ ಮೂರ್ನಾಲ್ಕು ದಿನಗಳಲ್ಲಿ ಅಗತ್ಯ ಚಿಕಿತ್ಸೆ ನೀಡಲೇಬೇಕು. ಈ ಸೋಂಕು ಆಕ್ರಮಿಸಿದ ಪ್ರದೇಶ ಕಪ್ಪಾಗುತ್ತದೆ. ಕಪ್ಪಾಗಿರುವ ಸ್ಥಳಕ್ಕೆ ಆಪರೇಷನ್ ಮಾಡಿ ಚಿಕಿತ್ಸೆ ನೀಡಬೇಕು. ಹಾಗೆ ಬಿಟ್ಟರೆ ಅಪಾಯ ಖಚಿತ ಎಂದು ವೈದ್ಯರು ತಿಳಿಸಿದ್ದಾರೆ.

    ಬ್ಲ್ಯಾಕ್ ಫಂಗಸ್​ಗೆ ಸಂಬಂಧಿಸಿದಂತೆ 20 ಜನರು ಆಸ್ಪತ್ರೆಯಲ್ಲಿ ಹಾಗೂ 7 ಜನರು ಹೋಂ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಜಿಲ್ಲೆಗೆ 20 ವೈಯಲ್ ಲಿಫೋಸೋಮಲ್ ಆಂಫೋಟೆರಿಸಿನ್ ಬಿ ಔಷಧ ಪೂರೈಕೆಯಾಗಿದ್ದು, ಜಿಮ್ಸ್​ನಲ್ಲಿರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಮತ್ತಷ್ಟು ಔಷಧಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ.
    | ಡಾ. ಸತೀಶ ಬಸರೀಗಿಡದ, ಜಿಲ್ಲಾ ಆರೋಗ್ಯಾಧಿಕಾರಿ, ಗದಗ


    307 ಜನರಿಗೆ ಸೋಂಕು, ಐವರ ಸಾವು
    ಗದಗ: ಜಿಲ್ಲೆಯಲ್ಲಿ ಶನಿವಾರ 307 ಜನರಿಗೆ ಕರೊನಾ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ. ಗದಗ ತಾಲೂಕಿನಲ್ಲಿ 126, ಮುಂಡರಗಿ 47 ನರಗುಂದ 26, ರೋಣ 30, ಶಿರಹಟ್ಟಿ 48 ಹಾಗೂ ಹೊರಜಿಲ್ಲೆಯ 10 ಜನರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.
    ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಇಬ್ರಾಹಿಂಪೂರ ನಿವಾಸಿ 43 ವರ್ಷದ ಪುರುಷ, ಗದಗ ತಾಲೂಕಿನ ಹನುಮಾನ ನಗರ ನಿವಾಸಿ 31 ವರ್ಷದ ಪುರುಷ, ಗದಗ ತಾಜ್ ನಗರ ನಿವಾಸಿ 76 ವರ್ಷದ ಪುರುಷ, ಗದಗ ತಾಲೂಕಿನ ಹೊಸೂರ ನಿವಾಸಿ 70 ವರ್ಷದ ಮಹಿಳೆ, ರೋಣ ತಾಲೂಕಿನ ಹೊನ್ನಾಪುರ ನಿವಾಸಿ 39 ವರ್ಷದ ಮಹಿಳೆ ಎಂದು ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ ಬಸರೀಗಿಡದ ತಿಳಿಸಿದ್ದಾರೆ.
    ಎಸ್ಪಿ ಸಿಟಿ ರೌಂಡ್ಸ್
    ಗದಗ: ಲಾಕ್​ಡೌನ್ ಜಾರಿ ಪರಿಶೀಲನೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ ಎನ್. ಹಾಗೂ ಡಿಎಸ್ಪಿ ವಿಜಯ ಬಿರಾದಾರ
    ಅವರು ಶನಿವಾರ ಬೆಳಗ್ಗೆ ಅವಳಿನಗರ ಸಿಟಿ ರೌಂಡ್ಸ್ ಹಾಕಿದರು. ನಗರದ ಹಳೆಯ ಡಿಸಿ ಆಫೀಸ್ ವೃತ್ತದಲ್ಲಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನಗಳ ಪರಿಶೀಲನೆ ನಡೆಸಿದರು. ಕಾರಣವಿಲ್ಲದೆ ಸಂಚರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts