More

    ಚಿಕ್ಕಮಗಳೂರು ಜಿಲ್ಲಾಸ್ಪತ್ರೆ: ನವೀಕರಣಗೊಂಡ ಅಪಘಾತ, ತುರ್ತು ಚಿಕಿತ್ಸಾ ಘಟಕ ಉದ್ಘಾಟನೆ

    ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯನ್ನು ಸುಸಜ್ಜಿತವಾದ ಆರೋಗ್ಯ ಚಿಕಿತ್ಸಾ ಘಟಕವನ್ನಾಗಿ ಬದಲಾವಣೆ ಮಾಡಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

    ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ನವೀಕರಣಗೊಂಡಿರುವ ನೂತನ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಈಗ ನಿರ್ಮಿಸಿರುವ ತುರ್ತು ಚಿಕಿತ್ಸಾ ಘಟಕದ ಒಳಗೆ ಬಂದಲ್ಲಿ ಯಾವುದೋ ಖಾಸಗಿ ಆಸ್ಪತ್ರೆಗೆ ಬಂದಿದ್ದೇವೆಂದು ಭಾಸವಾಗುತ್ತದೆ ಎಂದರು.
    ತುರ್ತು ಚಿಕಿತ್ಸಾ ಘಟಕದಲ್ಲಿ 12 ಮಂದಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಆಕ್ಸಿಜನ್ ಬೆಡ್‌ಗಳಿವೆ. ಅಷ್ಟೊಂದು ಉತ್ತಮವಾದ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಇಲ್ಲಿ ಕಲ್ಪಿಸಲಾಗಿದೆ. ಸರ್ಕಾರಿ ಆಸ್ಪತ್ರೆ ಎಂದರೆ ಯಾರಿಗೂ ಉದಾಸೀನ ಬೇಡ. ಇಲ್ಲಿ ಉತ್ತಮ ತಜ್ಞ ವೈದ್ಯರ ಸೇವೆ ಸಿಗಲಿದೆ. ಮುಂದಿನ ಎರಡು ತಿಂಗಳಲ್ಲಿ ಸುಸಜ್ಜಿತ ಹೊರರೋಗಿ ಚಿಕಿತ್ಸಾ ವಿಭಾಗ ಉದ್ಘಾಟನೆ ಮಾಡಲಾಗುವುದು ಎಂದರು.
    ಮುಂದಿನ ದಿನದಲ್ಲಿ ಅತ್ಯಾಧುನಿಕ ಲ್ಯಾಬ್ ತೆರೆಯಲಾಗುವುದು. ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 2024ರ ಅವಧಿಗೆ ಪೂರ್ಣಗೊಂಡಲ್ಲಿ ಎಲ್ಲ ಆರೋಗ್ಯ ಸೇವೆಗಳೂ ಲಭ್ಯವಾಗಲಿವೆ. ನಮ್ಮ ಸರ್ಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
    ಜಿಲ್ಲಾ ಸರ್ಜನ್ ಡಾ. ಮೋಹನ್‌ಕುಮಾರ್ ಮಾತನಾಡಿ, ಹಿಂದಿನ ಜನಸಂಖ್ಯೆ ಆಧರಿಸಿ ನಿರ್ಮಿಸಿದ್ದ ತುರ್ತು ಚಿಕಿತ್ಸಾ ಘಟಕ ಈಗಿನ ಕಾಲಕ್ಕೆ ಸರಿ ಹೊಂದುತ್ತಿರಲಿಲ್ಲ. ಇಕ್ಕಟ್ಟಾದ ಸ್ಥಿತಿಯಲ್ಲಿ ಚಿಕಿತ್ಸೆ ನೀಡಬೇಕಿತ್ತು. ಇದನ್ನು ಮನಗಂಡು ಈಗ ಸುಸಜ್ಜಿತ ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕ ನಿರ್ಮಿಸಿದ್ದೇವೆ. ಇಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ನಮ್ಮ ಕರ್ತವ್ಯ ಕೂಡ ಎಂದರು.
    ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ಜತೆಗೆ ಅವರ ಜತೆ ಗೌರವಪೂರ್ವಕವಾಗಿ ನಡೆದುಕೊಂಡರೆ ಅರ್ಧ ಕಾಯಿಲೆ ವಾಸಿಯಾದಂತೆ. ಹೀಗಾಗಿ ಸಾರ್ವಜನಿಕರೊಂದಿಗೆ ಉತ್ತಮವಾದ ಸಂವಹನ ಇರಲಿ ಎಂದು ಹೇಳಿದರು.
    ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಮೆಡಿಕಲ್ ಕಾಲೇಜ್ ಡೀನ್ ಡಾ.ಹರೀಶ್, ಆರ್‌ಎಂಒ ಕಲ್ಪನಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts