More

    ವನ್ಯಜೀವಿಗಳ ಆವಾಸ ಸ್ಥಾನ ಅತಿಕ್ರಮಣ ಹೆಚ್ಚಳ

    ಶಿವಮೊಗ್ಗ: ಅರಣ್ಯಗಳಿಂದ ಕೇವಲ ವನ್ಯಜೀವಿಗಳಿಗೆ ಮಾತ್ರ ಪ್ರಯೋಜನ ಆಗುವುದಿಲ್ಲ. ಬದಲಿಗೆ ವನ್ಯಜೀವಿ ಸಂಪತ್ತು ಭೂಮಂಡಲದ ಸಮತೋಲನವನ್ನು ಕಾಪಾಡುವ ಜೀವಸೆಲೆಯಾಗಿದೆ. ಹೀಗಾಗಿ ವನ್ಯಜೀವಿಗಳ ಆವಾಸ ಸ್ಥಾನಗಳನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆ ನಾಗರಿಕ ಸಮಾಜದ ಮೇಲಿದೆ ಎಂದು ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ ತಿಳಿಸಿದರು.

    ಕುವೆಂಪು ವಿವಿ ವನ್ಯಜೀವಿ ಮತ್ತು ನಿರ್ವಹಣೆ ವಿಭಾಗದಿಂದ ಏರ್ಪಡಿಸಿದ್ದ ವನ್ಯಜೀವಿ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ವನ್ಯಜೀವಿಗಳು, ಮರ-ಗಿಡಗಳು, ಸರೀಸೃಪಗಳು, ಕ್ರಿಮಿ-ಕೀಟಗಳು ಹೀಗೆ ಒಟ್ಟಾರೆ ವನ್ಯಜೀವಿ ಸಂಪತ್ತು ನೀರಿನ ಶುದ್ಧೀಕರಣ, ಕಾರ್ಬನ್ ಹೀರುವಿಕೆ, ಪರಾಗಸ್ಪರ್ಶ ಮತ್ತಿತರ ಮುಖ್ಯವಾದ ಪ್ರಕ್ರಿಯೆಯನ್ನು ನಡೆಸುವ ಮೂಲಕ ಜೀವವೈವಿಧ್ಯತೆಯನ್ನು ಉಳಿಸುವುದರ ಜತೆಗೆ ಮಾನವ ಜನಾಂಗದ ಆರೋಗ್ಯಕರ ಬದುಕಿಗೆ ಪೂರಕವಾದ ಕಾರ್ಯ ನಿರ್ವಹಿಸುತ್ತವೆ ಎಂದರು.
    ವನ್ಯಜೀವಿಗಳ ಆವಾಸ ಸ್ಥಾನಗಳನ್ನು ಅತಿಕ್ರಮಿಸುವ ಚಟುವಟಿಕೆಗಳು ಹೆಚ್ಚುತ್ತವೆ. ಅರಣ್ಯ ನಾಶ, ನಗರೀಕರಣ ಮತ್ತು ಕೈಗಾರಿಕೆಗಳ ವಿಸ್ತರಣೆಗೆ ಅರಣ್ಯ ಮತ್ತು ಅರಣ್ಯ ಸಂಪತ್ತನ್ನು ನಾಶಪಡಿಸುತ್ತಿದ್ದೇವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂರಕ್ಷಿತ ಅರಣ್ಯ ಪ್ರದೇಶ, ವನ್ಯಜೀವಿ ಕಾರಿಡಾರ್‌ಗಳಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
    ಪ್ರಾಧ್ಯಾಪಕ ಪ್ರೊ.ಜೆ.ನಾರಾಯಣ ಮಾತನಾಡಿ, 15 ವರ್ಷಗಳ ಹಿಂದೆ ಭದ್ರಾ ಅಭಯಾರಣ್ಯ ಮತ್ತು ಇಲ್ಲಿನ ಜೀವವೈವಿಧ್ಯದ ರಕ್ಷಣೆಯ ಧ್ಯೇಯದೊಂದಿಗೆ ಈ ವಿಭಾಗ ಆರಂಭವಾಗಿತ್ತು. ಕೇವಲ ನೌಕರಿಗಾಗಿ ವಿದ್ಯಾಭ್ಯಾಸ ನೀಡದೆ, ತನ್ನ ಉದ್ದೇಶದಂತೆ ವನ್ಯಜೀವಿಗಳ ಉಳಿವು ಮತ್ತು ಸಂರಕ್ಷಣೆಗಾಗಿ ಉನ್ನತ ಅಧ್ಯಯನಗಳನ್ನು ವಿಭಾಗ ಕೈಗೊಂಡಿದೆ. ಆನೆ ಮತ್ತು ಮಾನವ ಸಂಘರ್ಷ, ಕೃಷ್ಣ ಮೃಗಗಳ ಸಮಸ್ಯೆ, ಹಾವುಗಳ ಜೀವ ವೈವಿಧ್ಯತೆ, ನೀರು ನಾಯಿಗಳ ಜೀವನ ವಿಧಾನ, ಕರಡಿಗಳ ಅಹಾರಕ್ರಮ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಂಶೋಧನೆಗಳು ನಡೆದಿವೆ ಎಂದರು.
    ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ರಾಹುಲ್ ಆರಾಧ್ಯ, ವನ್ಯಜೀವಿ ನಿರ್ವಹಣಾ ವಿಭಾಗದ ಡಾ.ವಿಜಯ್‌ಕುಮಾರ, ಪ್ರೊ.ಬಿ.ತಿಪ್ಪೇಸ್ವಾಮಿ ಮುಂತಾದವರಿದ್ದರು.
    ಸಭಾ ಕಾರ್ಯಕ್ರಮಕ್ಕೂ ಮುನ್ನ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ವಿಭಾಗಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾ ನಡೆಸಿ ವನ್ಯಜೀವಿ ಸಂಪತ್ತು ಉಳಿಸುವ ಕುರಿತು ಅರಿವು ಮೂಡಿಸಿದರು. ವನ್ಯಜೀವಿಗಳಿಗೆ ಎದುರಾಗಿರುವ ಅಪಾಯಗಳು, ಪರಿಹಾರ ಕ್ರಮಗಳು, ಕೊಡಗಿನ ಪ್ರಕೃತಿ ವಿಕೋಪ ಪರಿಸ್ಥಿತಿ, ಜಾಗತಿಕ ಹವಾಮಾನ ವೈಪರೀತ್ಯಗಳು ಸೇರಿದಂತೆ ವಿವಿಧ ಪರಿಸರ ಸಂಬಂಧಿ ಸಮಸ್ಯೆಗಳ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts