More

    ಸ್ವಾವಲಂಬಿ ಜೀವನಕ್ಕೆ ಬ್ಯಾಂಕ್ ಸೌಲಭ್ಯ ಸಹಕಾರಿ ; ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿಮತ

    ತಿಪಟೂರು: ಬ್ಯಾಂಕುಗಳಲ್ಲಿ ಹೆಚ್ಚು ವ್ಯವಹಾರ ನಡೆಸಿದಷ್ಟೂ ಗೌರವ ಹೆಚ್ಚುತ್ತೆ. ಸ್ವಾವಲಂಬಿ ಜೀವನ ನಡೆಸಲು ಬ್ಯಾಂಕ್ ಸೌಲಭ್ಯ ಸಹಕಾರಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

    ನಗರದ ಆರ‌್ಯಬಾಲಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಶಿಶು ಅಭಿವೃದ್ದಿ ಯೋಜನೆ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಉದ್ಯೋಗಿನಿ ಹಾಗೂ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ಹಾಗೂ ಪ್ರೋತ್ಸಾಹಧನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಹಲವಾರು ವರ್ಷಗಳಿಂದ ಬೀದಿ ಬದಿಯಲ್ಲಿ ಹಣ್ಣು, ತರಕಾರಿ ವ್ಯಾಪಾರ ಮಾಡುವವರು ಬೆಳಗ್ಗೆ ಬಡ್ಡಿ, ಚಕ್ರಬಡ್ಡಿಗೆ ಹಣ ತಂದು, ಹಣ್ಣು, ತರಕಾರಿ ಖರೀದಿಸಿ ಮಾರಿ, ಸಂಜೆ 900 ರೂ. ಅಸಲಿಗೆ 100 ರೂ. ಸೇರಿಸಿ 1 ಸಾವಿರ ವಾಪಸ್ ನೀಡಬೇಕಿತ್ತು. ಅಂದಿನ ವ್ಯಾಪಾರದಲ್ಲಿ ಲುಕ್ಸಾನಾಗಿ ಹಣ ಕಟ್ಟಲಾಗದಿದ್ದರೆ ಮರುದಿನ ಚಕ್ರಬಡ್ಡಿ ಸೇರಿ ಕಟ್ಟಬೇಕಿತ್ತು.

    ಸಾಲದ ಸುಳಿಯಲ್ಲಿ ಸಿಲುಕಿ ಪರಿತಪಿಸುತ್ತಿದ್ದವರಲ್ಲಿ ಸ್ವಾಭಿಮಾನ ಮತ್ತು ಸ್ವಾವಲಂಬಿ ಜೀವನ ರೂಪಿಸುವ ಸಲುವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಪರಿಣಾಮವಾಗಿ ಇಂದಿನ ದಿನಗಳಲ್ಲಿ ಮಹಿಳಾ ಉದ್ಯೋಗಿನಿ ಹಾಗೂ ಸಮೃದ್ದಿ ಯೋಜನೆಯಡಿ 10 ಸಾವಿರದಿಂದ 50 ಸಾವಿರ ರೂಪಾಯಿವರೆಗೂ ಸಹಾಯಧನ ಮತ್ತು ಬ್ಯಾಂಕ್ ಸಾಲ ನೀಡಲಾಗುತ್ತಿದೆ ಎಂದರು.

    ಮೊದಲು ನಮ್ಮ ವ್ಯವಹಾರ ಪ್ರಾಮಾಣಿಕವಾಗಿರಬೇಕು. ಬ್ಯಾಂಕ್ ಸಾಲ ಕೊಡುವಾಗ ನಿಮ್ಮ ಮುಖ ನೋಡಲ್ಲ. ನಿಮ್ಮ ಬ್ಯಾಂಕ್ ಪಾಸ್ ಬುಕ್ ನೋಡುತ್ತದೆ. ನಿಮ್ಮ ಬ್ಯಾಂಕ್ ವ್ಯವಹಾರ ಸರಿ ಇದ್ದರೆ ಎಂತಹ ಕಷ್ಟ ಕಾಲದಲ್ಲೂ ಬ್ಯಾಂಕ್ ನಿಮ್ಮ ಕೈ ಹಿಡಿಯುತ್ತೆ. ಬ್ಯಾಂಕ್‌ನಷ್ಟು ಕಡಿಮೆ ಬಡ್ಡಿಯ ಸಾಲ ಬೇರೆಲ್ಲೂ ಸಿಗಲ್ಲ ಎಂದು ಹೇಳಿದರು. ರಾಜ್ಯ ಮಹಿಳಾ ಅಬಿವೃದ್ದಿ ನಿಗಮದ ನಿರೀಕ್ಷಕಿ ಎಸ್. ಜಾಹ್ನವಿ. ಅಂಗನವಾಡಿ ಮೇಲ್ವಿಚಾರಕಿ ಬಿ.ಎನ್. ಪ್ರೇಮ ಇತರರಿದ್ದರು.

    ಸಕಾಲಕ್ಕೆ ಸಾಲ ತೀರಿಸಿ: ಬೀದಿಬದಿ ವ್ಯಾಪಾರ ಮಾಡುವ ಬಡ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಸಹಾಯಧನ ಮತ್ತು ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ಸೌಲಭ್ಯ ನೀಡಲಾಗುತ್ತಿದೆ. ಸಕಾಲದಲ್ಲಿ ಸಾಲ ಮರುಪಾವತಿಸಿ, ಇನ್ನೂ ಹೆಚ್ಚಿನ ಸಾಲ ಪಡೆದು ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವ ಮೂಲಕ ಆರ್ಥಿಕ ಸಬಲರಾಗಿ, ಮತ್ತು ತಾವು ದುಡಿದ ಹಣವನ್ನು ಪೋಲು ಮಾಡದೇ ಆದಾಯೋತ್ಪನ್ನ ಚಟುವಟಿಕೆಗಳಿಗೆ ಬಳಸಿ ಎಂದು ಸಿಡಿಪಿಒ ಪಿ.ಓಂಕಾರಪ್ಪ ಕರೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts