More

    ಸರ್ಕಾರಗಳು ರೈತರ ಬದುಕ ನಾಶ ಮಾಡುತ್ತಿವೆ; ಜಸ್ಟೀಸ್ ಗೋಪಾಲಗೌಡ ಆರೋಪ

    ಬೆಂಗಳೂರು: ಕೈಗಾರಿಕೆ, ಅಭಿವೃದ್ಧಿ ಹೆಸರಿನಲ್ಲಿ ರೈತರ ಬದುಕನ್ನು ಎಲ್ಲ ಸರ್ಕಾರಗಳು ನಾಶ ಮಾಡುತ್ತಿವೆ ಎಂದು ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ ಆರೋಪಿಸಿದ್ದಾರೆ. ಗಾಂಧಿಭವನದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಂಟಿಯಾಗಿ ಆಯೋಜಿಸಿದ್ದ ‘ಭೂಮಿ ಹಕ್ಕು’ ರೈತ – ಕೃಷಿಕೂಲಿಕಾರರಿಗೋ ? ಕಾರ್ಪೊರೇಟ್ ಬಕಾಸುರರಿಗೋ ? ಬದಲಾಗುತ್ತಿರುವ ಭೂ ನೀತಿ ಹಾಗೂ ಸಂಬಂಧಗಳು ಎಂಬ ರಾಜ್ಯಮಟ್ಟದ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಸಂವಿಧಾನದ ಅರಿವಿಲ್ಲದವರು ಜನಪ್ರತಿನಿಧಿಗಳಾಗುತ್ತಿದ್ದಾರೆ. ಸಂವಿಧಾನ ಬದ್ದ ,ಶಾಸನ ಬದ್ದ ಕರ್ತವ್ಯಗಳನ್ನು ಸರಿಯಾಗಿ ಸರ್ಕಾರಗಳು ನಿರ್ವಹಿಸುತ್ತಿಲ್ಲ. ಗ್ರಾಮಗಳ ಅಭಿವೃದ್ಧಿ ಕಡೆಗಣಿಸಿ ವಿವೇಚನಾ ರಹಿತ ನಗರೀಕರಣವನ್ನು ಪ್ರೊತ್ಸಾಹಿಸುತ್ತಿವೆ. ಇದರಿಂದ ಪ್ರತಿ ಹಳ್ಳಿಗಳು ಕೊಳಗೇರಿಗಳಾಗುತ್ತಿವೆ. ಭೂ ರಹಿತ ಕೃಷಿಕರಿಗೆ ಭೂಮಿ ಒದಗಿಸುವ ಮೂಲಕ ರೈತರ ಬದುಕಿಗೆ ಭದ್ರತೆ ಒದಗಿಸಬೇಕು. ಆದರೆ ಬಗರ್ ಹುಕುಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ಭೂಮಿ ಹಕ್ಕು ನೀಡಲು ಸರ್ಕಾರ ಮುಂದಾಗುತ್ತಿಲ್ಲ.

    ನಮ್ಮ ರೈತರಿಗೆ ನ್ಯಾಯಬದ್ಧ ಭೂಮಿ ಹಕ್ಕು ಒದಗಿಸಿಕೊಡುವುದಕ್ಕಾಗಿ ಸಂವಿಧಾನ ಜಾರಿಯಾದ ಒಂದೇ ವರ್ಷದಲ್ಲಿ 31ನೇ ಅನುಚ್ಛೇದಕ್ಕೆ ಪ್ರಥಮ ತಿದ್ದುಪಡಿ ಮಾಡಲಾಗಿತ್ತು. ಆದರೆ ರೈತ ವಿರೋಧಿ, ಕಾರ್ಮಿಕ ವಿರೋಧಿ ನಿಲುವು ಅನುಸರಿಸುವಲ್ಲಿ ಎಲ್ಲ ಸರ್ಕಾರಗಳ ಪಾಲಿದೆ. ಸಂವಿಧಾನ, ಸಮಾನತೆ, ಜಾತ್ಯಾತೀತತೆ, ಸಮಾಜವಾದದ ಬಗ್ಗೆ ರಾಜಕಾರಣಿಗಳಿಗೆ ಅರಿವಿಲ್ಲ.

    ಸರ್ಕಾರ ಎಂದರೆ ಕೇವಲ ಚುನಾಯಿತ ಪ್ರತಿನಿಧಿಗಳಲ್ಲ. ಅಧಿಕಾರಿಗಳ ಪಾತ್ರ ಪ್ರಮುಖವಾದದ್ದು. ಆದರೆ ಜನರ ಸೇವೆ ಮಾಡಬೇಕಾದ ಅಧಿಕಾರಿಗಳು ಬಂಡವಾಳಶಾಹಿಗಳ ಏಜೆಂಟರಂತೆ ವರ್ತಿಸುತ್ತಿರುವುದು ರೈತರ, ಕೃಷಿಕೂಲಿಕಾರರ ಇಂದಿನ ಸ್ಥಿತಿಗೆ ಕಾರಣ ಎಂದು ಅವರು ವಿವರಿಸಿದರು.

    ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಪಾಧ್ಯಕ್ಷ ಜಿ.ಎನ್. ನಾಗರಾಜ್, ಕೆಪಿಆರ್‌ಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ರೈತರು, ಕೂಲಿಕಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಹೋರಾಟ ಒಂದೇ ಪರಿಹಾರ : ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಕೋರ್ಟ್, ಕಾನೂನಿನಲ್ಲಿ ಪರಿಹಾರ ಸಾಧ್ಯವಿಲ್ಲ. ಹೋರಾಟ ಒಂದೇ ಪರಿಹಾರ. ಇತ್ತೀಚಿನ ದಿನಗಳಲ್ಲಿ ರೈತರ ಹೋರಾಟಕ್ಕೂ ಜಾತಿಬಣ್ಣ ಕಟ್ಟುತ್ತಿದ್ದಾರೆ. ರೈತರಿಗೆ ಜಾತಿ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡುವ ಮೂಲಕ ಎಂತಹುದ್ದೇ ಬಲಿಷ್ಠ ಸರ್ಕಾರವನ್ನು ಮಣಿಸಬಹುದು ಎಂಬುದಕ್ಕೆ ದಿಲ್ಲಿಯಲ್ಲಿ ನಡೆದ ರೈತರ ಹೋರಾಟವೇ ಸಾಕ್ಷಿ.

    ರೈತರ ಭೂ ಮಂಜೂರಾತಿ ಚುರುಕುಗೊಳ್ಳಲು ತಾಲೂಕು ಮಟ್ಟದ ಸಮಿತಿ ರಚನೆಯಾಗಬೇಕು. ಮೊದಲು ಸಮಿತಿ ರಚನೆಗೆ ಒತ್ತಾಯಿಸಿ ಎಲ್ಲೆಡೆ ಹೋರಾಟ ಮಾಡುವಂತೆ ಜಸ್ಟೀಸ್ ಗೋಪಾಲಗೌಡ ರೈತರಿಗೆ ಕರೆ ನೀಡಿದರು.

    ರೈತರ ಭೂಮಿ ಕಬಳಿಕೆ ಯತ್ನ : ರೈತರ ಭೂಮಿಯನ್ನು ಕಬಳಿಸಲು ಸರ್ಕಾರ, ಕಾರ್ಪೊರೇಟ್ ಕಂಪನಿಗಳು, ಬಂಡವಾಳಶಾಹಿಗಳಿಂದ ನಿರಂತರ ಪ್ರಯತ್ನ ನಡೆಯುತ್ತಿದೆ. ಇದರ ವಿರುದ್ಧ ಸಂಘಟನಾತ್ಮಕ ಹೋರಾಟದ ಅಗತ್ಯವಿದೆ. ಜನಶಕ್ತಿ, ಹೋರಾಟಗಳಿಂದ ಮಾತ್ರ ರೈತರು ತಮ್ಮ ಭೂಮಿ ಉಳಿಸಿಕೊಳ್ಳಲು ಸಾಧ್ಯ. ಎಂದು ಕೆಪಿಆರ್‌ಎಸ್ ರಾಜ್ಯಾಧ್ಯಕ್ಷ, ಬಿ.ಸಿ.ಬಯ್ಯಾರೆಡ್ಡಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts