More

    ನೀರಿಗಾಗಿ ಸಂಚಾರ ತಡೆದು ರೈತರಿಂದ ಆಕ್ರೋಶ

    ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಕೊನೆಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ನಗರದ ಹೊರವಲಯದ ಸಾಥ್‌ಮೈಲ್ ಕ್ರಾಸ್‌ನಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ರೈತರು ಸಂಚಾರ ತಡೆ ನಡೆಸುತ್ತಿದ್ದು, ಹೋರಾಟ ರಾತ್ರಿಯೂ ಮುಂದುವರೆದಿದೆ.
    ಕಾಲುವೆಗೆ ನೀರು ಹರಿಸಿ ನೂರು ದಿನಗಳು ಗತಿಸಿದರೂ ಕೊನೆಭಾಗಕ್ಕೆ ನೀರು ಹರಿಸಲಾಗಿಲ್ಲ. ಹೋರಾಟದ ನಂತರ ಕೇವಲ ನಾಲ್ಕು ದಿನ ಮೈಲ್ 104ರ ನಂತರ ನೀರು ಹರಿಸಿ ನಂತರ ಬಂದ್ ಮಾಡಲಾಗಿದ್ದು, ಗಣೇಕಲ್ ಜಲಾಶಯವನ್ನು ತುಂಬಿಸದೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.
    ಕೆಳಭಾಗದಲ್ಲಿ ರೈತರು ಬೆಳೆದ ಹತ್ತಿ, ಭತ್ತ, ತೊಗರಿ ಸೇರಿದಂತೆ ಇನ್ನಿತರ ಬೆಳೆಗಳು ನೀರಿಲ್ಲದೆ ಒಣಗುವ ಸ್ಥಿತಿಗೆ ತಲುಪಿದ್ದು, ಐಸಿಸಿ ತೀರ್ಮಾನದಂತೆ ನ.31ರವರೆಗೆ ಕಾಲುವೆಗೆ ನೀರು ಹರಿಸಿ ಕೊನೆಭಾಗಕ್ಕೆ ನೀರು ಹರಿಯುವಂತೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.
    ಹೆದ್ದಾರಿಯಲ್ಲಿ ಟೆಂಟ್ ಹಾಕಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಸಿಂಧನೂರು, ಲಿಂಗಸುಗೂರಿಗೆ ಹೋಗುವ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಜತೆಗೆ ಕುಡಿ ಮಾರ್ಗವಾಗಿ ರಾಯಚೂರಿಗೆ ಬರುವ ವಾಹನಗಳನ್ನು ದಿನ್ನಿ ಮತ್ತು ಮಟಮಾರಿಯಲ್ಲಿ ರೈತರು ತಡೆಯುತ್ತಿರುವುದರಿಂದ ಪ್ರಯಾಣಿಕರು ಮಧ್ಯದಲ್ಲಿ ಸಿಲುಕಿ ಸಮಸ್ಯೆ ಎದುರಿಸುವಂತಾಗಿದೆ.
    ಜಿಲ್ಲಾಡಳಿತ ಮತ್ತು ಜನಪ್ರತಿನಿಗಳ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ರೈತರು ಗ್ರಾಮಾಂತರ ಪ್ರದೇಶದ ರಸ್ತೆಗಳನ್ನು ಟ್ರಾಕ್ಟರ್ ಟ್ರಾಲಿ ಮತ್ತು ಬಂಡಿಗಳನ್ನು ನಿಲ್ಲಿಸಿ ವಾಹನಗಳು ಸಂಚರಿಸದಂತೆ ಮಾಡಿದ್ದು, ಬಸ್ ಮತ್ತು ಖಾಸಗಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ.
    ಪೊಲೀಸರು ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿಯೇ ತಡೆಯುತ್ತಿದ್ದು, ತಾಲೂಕಿನ ಕಲ್ಮಲಾ ಹಾಗೂ ದೇವದುರ್ಗ ತಾಲೂಕಿನ ಗಬ್ಬೂರು, ಮಾನ್ವಿಯಲ್ಲಿಯೂ ವಾಹನಗಳು ಮುಂದೆ ಹೋಗದಂತೆ ಪೊಲೀಸರು ತಡೆದು ವಾಪಸ್ ತೆರಳುವಂತೆ ಸೂಚಿಸುತ್ತಿದ್ದರು.
    ಪ್ರತಿಭಟನೆ ವೇಳೆ ಬಂದ ಆಂಬುಲೆನ್ಸ್‌ನ್ನು ಮಾತ್ರ ಬಿಡಲಾಗಿದ್ದು, ದ್ವಿಚಕ್ರ ವಾಹನ ಸವಾರರು ಹೊಲದಲ್ಲಿನ ಕಾಲ್ನಡಿಗೆ ದಾರಿಯಲ್ಲಿ ಹೋಗುತ್ತಿರುವುದು ಸಾಮಾನ್ಯವಾಗಿತ್ತು. ಮಹಿಳಾ ಪ್ರಯಾಣಿಕರು ಒಂದೆರಡು ಕಿ.ಮೀ. ದೂರ ನಡೆದು ಖಾಸಗಿ ವಾಹನಗಳಲ್ಲಿ ತಾವು ಹೋಗಬೇಕಾದ ಸ್ಥಳಕ್ಕೆ ತೆರಳಿದರು.
    ಪ್ರತಿಭಟನೆಯಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ಎ.ಪಾಪಾರೆಡ್ಡಿ, ಹೋರಾಟ ಸಮಿತಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ಕಾರ್ಯದರ್ಶಿ ಸಿದ್ದನಗೌಡ ನೆಲಹಾಳ, ಮುಖಂಡರಾದ ಪಾರಸಮಲ್ ಸುಖಾಣಿ, ರಾಘವೇಂದ್ರ ಕುಷ್ಟಗಿ, ಚಾಮರಸ ಮಾಲಿಪಾಟೀಲ್, ಶರಣಪ್ಪ ಕಲ್ಮಲಾ, ಬೆಲ್ಲಂ ನರಸರೆಡ್ಡಿ, ಅನಿತಾ ಬಸವರಾಜ, ನಾಗನಗೌಡ ಹರವಿ, ವಿಷ್ಣುವರ್ಧನರೆಡ್ಡಿ ಸೇರಿದಂತೆ ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts