More

    ಉಜ್ಜಯಿನಿ ದೇಗುಲದಲ್ಲಿ ಭಸ್ಮಾರತಿ ವೇಳೆ ಅಗ್ನಿ ಅವಘಡ; 14 ಜನರಿಗೆ ಗಾಯ

    ಬೆಂಗಳೂರು: ಭಾರತದ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ವಿಶ್ವಪ್ರಸಿದ್ಧ ಉಜ್ಜಯಿನಿ ಮಹಾಕಾಲೇಶ್ವರ ದೇಗುಲದಲ್ಲಿ ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಪ್ರಮುಖ ಅರ್ಚಕರು ಸೇರಿದಂತೆ 14 ಜನ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ನ ಅರಬಿಂದೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಅವಘಡ ಸಂಭವಿಸಿದಾಗ ಮಧ್ಯಪ್ರದೇಶದ ಸಿಎಂ ಡಾ.ಮೋಹನ್ ಯಾದವ್ ಅವರ ಪುತ್ರ ವೈಭವ್ ಮತ್ತು ಪುತ್ರಿ ಡಾ.ಆಕಾಂಕ್ಷಾ ಗರ್ಭಗುಡಿಯ ಮುಂದಿನ ನಂದಿ ಸಭಾಂಗಣದಲ್ಲಿ ಕುಳಿತು ಪೂಜೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಘಟನೆಯ ಬಗ್ಗೆ ಉಜ್ಜಯಿನಿ ಜಿಲ್ಲಾಧಿಕಾರಿ ನೀರಜ್ ಸಿಂಗ್ ತನಿಖೆಗೆ ಆದೇಶಿಸಿದ್ದಾರೆ.

    ಘಟನೆಯ ಹಿನ್ನೆಲೆ : ಉಜ್ಜಯನಿ ಮಹಾಕಾಲೇಶ್ವರ ದೇವಾಲಯದಲ್ಲಿ ಬೆಳಗಿನ ಜಾವ ನಡೆಯುವ ಭಸ್ಮಾರತಿ ವಿಶ್ವಪ್ರಸಿದ್ಧವಾಗಿದ್ದು, ಸೋಮವಾರ ಬೆಳಗ್ಗೆ ಯಥಾಪ್ರಕಾರ ಭಸ್ಮ ಆರತಿ ವೇಳೆಯೇ ಗರ್ಭಗುಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಹಾಕಾಲೇಶ್ವರ ಬೃಹತ್ ಶಿವಲಿಂಗಕ್ಕೆ ಸುದೀರ್ಘವಾಗಿ ಭಸ್ಮಾಭಿಷೇಕ ಮಾಡಿ ಕೊನೆಯಲ್ಲಿ ಆರತಿ ಮಾಡುವ ವೇಳೆ ಕರ್ಪೂರ ಹಚ್ಚುವಾಗ ಈ ಅಗ್ನಿ ಅವಘಡ ಸಂಭವಿಸಿದೆ.

    ಸೋಮವಾರ ಹೋಳಿ ಹಬ್ಬದ ನಿಮಿತ್ತ ಅರ್ಚಕರು ದೇವರಿಗೆ ಆರತಿ ವೇಳೆ ಗುಲಾಲ್ ಅರ್ಪಿಸುತ್ತಿದ್ದರು. ಆರತಿ ತಟ್ಟೆಯಲ್ಲಿ ಉರಿಯುತ್ತಿದ್ದ ಕರ್ಪೂರಕ್ಕೆ ಗುಲಾಲ್ ಬಿದ್ದು ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಜೊತೆಗೆ ದೇವಾಲಯದಲ್ಲಿ ದೇವರಿಗೆ ಬೆಳ್ಳಿ ಲೇಪಿತ ವಸ್ತದಿಂದ ಅಲಂಕಾರ ಮಾಡಿದ್ದರಿಂದ ಬೆಂಕಿ ತೀವ್ರಗತಿಯಲ್ಲಿ ವ್ಯಾಪಿಸಲು ಕಾರಣವಾಗಿದೆ ಎಂದು ಹೇಳಲಾಗಿದೆ.

    ಗಣ್ಯರ ವಿಚಾರಣೆ : ಘಟನೆ ಸಂಭವಿಸಿದ ಕೂಡಲೇ ಮಧ್ಯಪ್ರದೇಶದ ಸಿಎಂ ಡಾ.ಮೋಹನ್ ಯಾದವ್ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ಸಿಎಂ ಡಾ.ಮೋಹನ್ ಯಾದವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts