More

    ಕುಂದಾನಗರಿಯಲ್ಲಿ ಭಿಕ್ಷುಕರ ಜೀವ ಹಿಂಡುತ್ತಿದೆ ಹಸಿವು

    ಬೆಳಗಾವಿ: ‘ಒಂದು ಹೊತ್ತು ಸರಿಯಾಗಿ ಊಟ ಸಿಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ಬಾಯಾರಿಸಿಕೊಳ್ಳಲು ನೀರೂ ಸಿಗುತ್ತಿಲ್ಲ… ದೇವಸ್ಥಾನಗಳ ಮುಂದೆ ಕುಳಿತರೆ ಯಾರಾದರೂ ತಿನ್ನುವುದಕ್ಕೆ ಕೊಡುತ್ತಿದ್ದರು. ಈಗ ಎಲ್ಲವೂ ಬಂದ್ ಆಗಿವೆ. ಎರಡು ದಿನಗಳಿಂದ ಉಪವಾಸ ಇದ್ದೇವೆ. ನಮ್ಮ ಗೋಳು ಕೇಳೋರ‌್ಯಾರು…?’

    ಕರೊನಾ ವೈರಸ್ ರೆಡ್ ರೆನ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಬೆಳಗಾವಿ ಜಿಲ್ಲೆಯ ಅಂಗವಿಕಲ, ಭಿಕ್ಷುಕರ, ನಿರ್ಗತಿಕರ ಅಸಹಾಯಕತೆಯ ಮಾತುಗಳಿವು. ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚಾಗಿರುವುದರಿಂದ ಲಾಕ್‌ಡೌನ್‌ಅನ್ನು ಬಿಗಿಗೊಳಿಸಲಾಗಿದೆ. ಹೀಗಾಗಿ ಇವರೆಲ್ಲ ಆಹಾರವಿಲ್ಲದೇ ಪರದಾಡುತ್ತಿದ್ದಾರೆ.

    ಹಸಿವಿನಿಂದ ಕಂಗಾಲು: ಜಿಲ್ಲೆಯಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲೆಯನ್ನು ‘ರೆಡ್ ರೆನ್’ಗೆ ಸೇರಿಸಿದೆ. ಹೀಗಾಗಿ ನಗರದಲ್ಲಿ ಬಿಗಿ ಭದ್ರತೆ ಕಲ್ಪಿಸಿದ್ದು, ನಿರ್ಗತಿಕರಿಗೆ ದಿಕ್ಕು ತೋಚದಾಗಿದೆ. ಎಲ್ಲ ಹೋಟೆಲ್ ಮುಚ್ಚಲ್ಪಟ್ಟಿವೆ. ಇದರಿಂದ ಪಾರ್ಸಲ್ ಸಹ ಸಿಗುತ್ತಿಲ್ಲ. ದಾನಿಗಳೂ ಸಿಗುತ್ತಿಲ್ಲ. ಹೀಗಾಗಿ ಅತಿಯಾದ ಹಸಿವಿನಿಂದ ಬಳಲುತ್ತಿದ್ದಾರೆ.

    ಗಲ್ಲಿಗಳಲ್ಲಿ ಅಲೆದಾಟ: ನಗರದ ಖಾಸಭಾಗ, ಶಾಹು ನಗರದಲ್ಲಿ ನಿರ್ಗತಿಕರ ಕೇಂದ್ರಗಳಿವೆ. ಇಲ್ಲಿ ಕೆಲ ಭಿಕ್ಷುಕರು, ನಿರ್ಗತಿಕರು ವಾಸವಿದ್ದಾರೆ. ಪಾಲಿಕೆ ಅಧಿಕಾರಿಗಳು ಇವರಿಗೆ ಆಶ್ರಯ ಕಲ್ಪಿಸಿದ್ದಾರೆ. ಆದರೂ ನಗರದ ವಿವಿಧ ಪ್ರದೇಶಗಳ ಗಲ್ಲಿಗಳಲ್ಲಿ ನಿರ್ಗತಿಕರಿದ್ದು, ಆಹಾರವಿಲ್ಲದೆ ಪರಿತಪಿಸು ತ್ತಿದ್ದಾರೆ. ಇವರಿಗೆ ನಿರ್ಗತಿಕರ ಕೇಂದ್ರದ ಬಗ್ಗೆ ಪೂರ್ಣ ಮಾಹಿತಿಯಿಲ್ಲ. ಯಾರನ್ನು ಸಂಪರ್ಕ ಮಾಡಬೇಕು ಎನ್ನುವುದೂ ಗೊತ್ತಿಲ್ಲ.

    ಆಹಾರ ಸಮಸ್ಯೆ ಎದುರಿಸುತ್ತಿರುವ ಇಂಥವರು ಯಾರದಾದರೂ ಮನೆಗಳಿಗೆ ಹೋದರೆ ಬಾಗಿಲು ತೆರೆಯುವುದಿಲ್ಲ. ಮುಂದೆ ಹೋಗುವಂತೆ ಬಹುತೇಕರು ಅಬ್ಬರಿಸುತ್ತಾರೆ. ಹೀಗಾಗಿ ಬಿಕೋ ಎನ್ನುತ್ತಿರುವ ಪ್ರಮುಖ ರಸ್ತೆಗಳು, ಉದ್ಯಾನ, ವಿವಿಧ ಬಡಾವಣೆ, ಸಣ್ಣ ಓಣಿಗಳಲ್ಲಿ ನಿರ್ಗತಿಕರು ನಿತ್ಯ ಕಾಲ ಕಳೆಯುತ್ತಿದ್ದಾರೆ.

    ಎಲ್ಲೆಲ್ಲಿದ್ದಾರೆ ನಿರ್ಗತಿಕರು?: ನಗರದ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಕಪಿಲೇಶ್ವರ ಮಂದಿರ, ಚನ್ನಮ್ಮ ವೃತ್ತದ ಗಣಪತಿ ಗುಡಿ, ರಾಮದೇವ ಹೋಟೆಲ್ ಪಕ್ಕದ ಮಾರುತಿ ಮಂದಿರ ಸೇರಿ ವಿವಿಧೆಡೆ ಭಿಕ್ಷುಕರಿದ್ದಾರೆ. ಲಾಕ್‌ಡೌನ್ ಆರಂಭವಾದಗಿನಿಂದ ಪಾಲಿಕೆ ಅಧಿಕಾರಿಗಳು ಸುಮಾರು 40 ಭಿಕ್ಷುಕರನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿ ಆಹಾರ ನೀಡುತ್ತಿದ್ದಾರೆ. ನಗರದ ಖಾಸಬಾಗ, ಶಾಹು ನಗರದಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಸದ್ಯ 14 ಫುಲ್‌ಟೈಂ ಭಿಕ್ಷುಕರು, 8 ಪಾರ್ಟ್‌ಟೈಂ ಭಿಕ್ಷುಕರು ಇದ್ದಾರೆ.

    ನಿರ್ಗತಿಕರಿಗೆ ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ಸಮಸ್ಯೆ ಉಂಟಾಗಿರಬಹುದು. ಹೀಗಾಗಿ ಭಿಕ್ಷುಕರನ್ನು ಹುಡುಕಿ ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ಒಯ್ದು ಆಹಾರ ನೀಡುತ್ತೇವೆ. ಅವರ ಆರೋಗ್ಯ ತಪಾಸಣೆ ಮಾಡಲು ಕ್ರಮ ಕೈಗೊಳ್ಳುತ್ತೇವೆ.
    | ಕೆ.ಎಚ್. ಜಗದೀಶ ಪಾಲಿಕೆ ಆಯುಕ್ತ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts