ಅಥಣಿ ಗ್ರಾಮೀಣ: ಭಾರತ ಆಧ್ಯಾತ್ಮಿಕ ರಾಷ್ಟ್ರವಾಗಿದ್ದು, ಗುಡಿಸಲಿನಲ್ಲಿದ್ದರೂ ಕೂಡ ದೇವರು, ಧರ್ಮ ಕಾರ್ಯಕ್ಕೆ ಶಕ್ತಿ ಮೀರಿ ದಾನ ಮಾಡುವ ಗುಣ ಪ್ರತಿಯೊಬ್ಬ ನಾಗರಿಕನಲ್ಲಿದೆ ಎಂದು ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಹೇಳಿದರು.
ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಶ್ರೀ ಹನುಮ ದೇವಸ್ಥಾನ ಕಳಸಾರೋಹಣ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತ ದೇಶವನ್ನು ವಿದೇಶಿಯರು ಪವಿತ್ರವೆಂದು ಕರೆಯುತ್ತಿರುವುದು ಹೆಮ್ಮೆಯ ಸಂಗತಿ. ದೇವರಿಗಿಂತ ಭಕ್ತಿ ಶ್ರೇಷ್ಠ, ನಂಬಿಕೆಯಿಡುವ ಭಕ್ತನೇ ಶ್ರೇಷ್ಠ, ಭಕ್ತಿ ಮಾಡಿ ಶಕ್ತಿ ಪಡೆದು ಮುಕ್ತರಾಗೋಣ ಎಂದರು.
ಗುಣದಾಳ ಕಲ್ಯಾಣೇಶ್ವರ ಹಿರೇಮಠದ ಡಾ.ವಿವೇಕಾನಂದ ದೇವರು ಮಾತನಾಡಿ, ಪರಮಾತ್ಮ ಮತ್ತು ಭಕ್ತರನ್ನು ಸಂಪರ್ಕಿಸುವ ಕೊಂಡಿಯಾಗಿ ಶಿಖರ ಕೆಲಸ ಮಾಡುತ್ತದೆ. ಕಳಸವಿಲ್ಲದ ಗುಡಿಯೇ ಇಲ್ಲ. ಭಗವಂತನಿಗೆ ಬೇಕಿರುವುದು ಮುಡಿ, ನೈವೇದ್ಯಗಳಲ್ಲ. ಶುದ್ಧ, ನಿಷ್ಕಲ್ಮಶ ಭಕ್ತಿ ಯಾಗಿದೆ. ಧರ್ಮದಲ್ಲಿ ಜಾತಿ, ರಾಜಕೀಯ ಮಾಡದೇ ನಾವೆಲ್ಲರೂ ಒಂದೇ ಎನ್ನುವ ಬಾವ ಬಂದರೆ ನಮ್ಮ ದೇಶದ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.
ಶೇಗುಣಸಿ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ವಿಶ್ವ ಭೂಪುಟದಲ್ಲಿ ಭಾರತವೇ ಆಧ್ಯಾತ್ಮಿಕದ ಹೆಬ್ಬಾಗಿಲು. ಈ ಮಣ್ಣಿನ ಕಣ-ಕಣದಲ್ಲೂ ಭಕ್ತಿಯ ಲವತ್ತತೆ ಚಿಮ್ಮುತ್ತಿದೆ. ಭಾರತಿಯರಲ್ಲಿ ದೇವರನ್ನು ಪ್ರೀತಿ ಮಾಡುವ ಗುಣವಿದೆ. ಪ್ರತಿಲವಾಗಿ ಭಾರತ ದೇಶ ಇಂದು ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ ಎಂದರು.
ಗುರುಪಾದ ಶಿವಾಚಾರ್ಯ ಸ್ವಾಮೀಜಿ, ವಿಶಾಲ ಹಿರೇಮಠ, ಅರ್ಚಕ ಲಕ್ಷ್ಮಣ ಪೂಜಾರಿ, ಡಾ.ಶ್ರವಣಕುಮಾರ ಯತ್ನಾಳ, ಶ್ರೀಕಾಂತ ಗುರ್ಲಾಪುರ, ಡಾ.ಮುತ್ತುರಾಜ ಯತ್ನಾಳ, ಶ್ರೀಕಾಂತ ನಾಯಿಕ, ಮುತ್ತಪ್ಪ ಅಂಬಾಜಿ, ಲಕ್ಷ್ಮಣ ಆಸಂಗಿ, ಬಸಪ್ಪ ಕೋಳಂಬಿ, ಮದಕಪ್ಪ ಸವದಿ, ಜಗದೀಶ ಅವಟಿ ತರರು ಇದ್ದರು. ಅಶೋಕ ಅಂಬಾಜಿ ಸ್ವಾಗತಿಸಿದರು. ಸಂಭಾಜಿ ಗುರ್ಲಾಪುರ ನಿರೂಪಿಸಿ ವಂದಿಸಿದರು.