More

    ಗೋಕರ್ಣ ಭಾಗದಲ್ಲಿ ಭತ್ತಕ್ಕೆ ಕಪ್ಪು ಕೀಟ ಕಾಟ

    ಗೋಕರ್ಣ: ಗೋಕರ್ಣ ಸೇರಿದಂತೆ ಈ ಭಾಗದ ಬರ್ಗಿಯಿಂದ ಗಂಗಾವಳಿ ನದಿ ತೀರದ ವರೆಗಿನ 21 ಹಳ್ಳಿಗಳು ಮಳೆಗಾಲದಲ್ಲಿ ಭತ್ತದ ಬೆಳೆಗೆ ಪ್ರಸಿದ್ಧವಾಗಿವೆ. ಆದರೆ, ಈ ವರ್ಷ ಭತ್ತದ ಬೆಳೆ ಇಬ್ಬದಿಯ ಸಂಕಟಕ್ಕೆ ತುತ್ತಾಗಿದೆ.

    ಮಾನ್ಸೂನ್ ಪ್ರಧಾನ ಕೊಡುಗೆಗಳಾದ ಆಶ್ಲೇಷ, ಮಘಾ, ಹುಬ್ಬಾ ಮಳೆ ನಕ್ಷತ್ರಗಳು ಆಗಸ್ಟ್ ತಿಂಗಳ ಪೂರ್ತಿ ಕೈಕೊಟ್ಟವು. ಇದರ ಪರಿಣಾಮವಾಗಿ ಭತ್ತದ ಗದ್ದೆಗಳು ಒಣಗಿ ತಳಭಾಗ ಬಿರುಕು ಬಿಡುವ ವಿಪತ್ತು ಎದುರಾಯಿತು. ಸೆಪ್ಟೆಂಬರ್​ನಲ್ಲಿ ತಕ್ಕ ಮಟ್ಟಿನ ಮಳೆ ಸುರಿದಿದ್ದರಿಂದ ಹಳದಿಯಾದ ಸಸಿಗಳಲ್ಲಿ ಮತ್ತೆ ಹಸಿರುಕ್ಕಿ ರೈತರಲ್ಲಿ ಬೆಳೆ ಚಿಗುರುವ ಆಸೆ ಮೂಡಿಸಿತ್ತು.

    ಆದರೆ, ಕಳೆದ ಒಂದೆರಡು ವಾರದಿಂದ ಈ ಭಾಗದ ವಿಶಾಲ ಹರವಿನಲ್ಲಿ ಒಂದೇ ಕಡೆ ವ್ಯಾಪಿಸಿಕೊಂಡಿರುವ ನೂರಾರು ಗದ್ದೆಗಳಲ್ಲಿ ಭತ್ತದ ಸಸಿಗಳಿಗೆ ಕಪ್ಪು ಕೀಟದ ಬಾಧೆ ಕಂಡು ಬಂದು ಕೃಷಿಕರಲ್ಲಿ ಆತಂಕ ಮೂಡಿಸಿದೆ.

    ಎಲೆ ಭಕ್ಷಕ ಕೀಟ

    ತಾರಮಕ್ಕಿಯಲ್ಲಿರುವ ಭತ್ತದ ಸಸಿಗಳಲ್ಲಿ ಕಪ್ಪು ಕೀಟಗಳು ಮುತ್ತಿಕೊಂಡು ಸಸಿಗಳ ಎಲೆಗಳನ್ನು ಭಕ್ಷಿಸುತ್ತಿರುವುದು ಕಂಡು ಬಂದಿದೆ. ಈ ಕೀಟಗಳು ಗದ್ದೆಯಿಂದ ಗದ್ದೆಗೆ ವ್ಯಾಪಿಸುತ್ತಿವೆ. ಕೀಟದ ಕಾಟದಿಂದ ಸಸಿಗಳಲ್ಲಿನ ಎಲೆಗಳು ನಾಶವಾಗಿ ದಂಟು ಮಾತ್ರ ಉಳಿಯುವಂತಾಗಿದೆ.

    ಈಗಾಗಲೇ ಕೆಲ ಗದ್ದೆಗಳಲ್ಲಿ ಭತ್ತ ಹಾಲು ತುಂಬಿಕೊಳ್ಳುವ ಕ್ರಮ ಪ್ರಾರಂಭವಾಗಿತ್ತು. ಇಂತಹ ಸಸಿಗಳನ್ನು ಸಹ ಮುತ್ತಿಕ್ಕಿದ ಕೀಟಗಳು ಭತ್ತದ ಬೀಜಗಳನ್ನು ಜೊಳ್ಳಾಗಿಸುತ್ತಿವೆ! ಕೀಟದ ಆಪತ್ತಿನಿಂದ ಈ ಬಾರಿಯ ಪೈರು ಕೈ ತಪ್ಪಿ ಹೋಗುವ ಲಕ್ಷಣಗಳು ದಟ್ಟವಾಗುತ್ತಿವೆ.

    ಮೇವಿಗೂ ತತ್ವಾರ?

    ಭತ್ತ ತೆಗೆದ ಮೇಲೆ ಉಳಿಯುವ ಜೊಂಡುಹುಲ್ಲು ಪಶುಗಳಿಗೆ ಉತ್ತಮವಾದ ಮೇವು. ಪ್ರಸ್ತುತ ಮೇವಿಗೂ ಉತ್ತಮ ಬೆಲೆಯಿದೆ. ಮಳೆಗಾಲದ ನಂತರದ ಐದಾರು ತಿಂಗಳು ಪಶು ಸಾಕಣೆದಾರರು ಈ ಹುಲ್ಲನ್ನೇ ಮುಖ್ಯ ಆಹಾರವಾಗಿ ಪಶುಗಳಿಗೆ ನೀಡುವುದರಿಂದ ಹುಲ್ಲು ಮೇವು ಸಹ ಬೆಳೆಗಾರರಿಗೆ ಸಾಕಷ್ಟು ಆದಾಯ ತರಬಲ್ಲುದಾಗಿದೆ. ಆದರೆ ಈಗ ಕಾಡಿದ ಕೀಟದಿಂದಾಗಿ ಎಲೆ ಉದುರುವ ಜತೆಗೆ ಭತ್ತದ ಜೊಂಡು ಕೂಡಾ ಕಹಿಯಾಗುತ್ತದೆ. ಪಶುಗಳು ತಿನ್ನಲಾಗದ ಪರಿಸ್ಥಿತಿ ಎದುರಾಗಿ ಮೇವಿಗೂ ತತ್ವಾರ ಉಂಟಾಗಲಿದೆ ಎಂಬ ಕೊರಗು ರೈತರದು.

    ನಾಶವಾದ ಬದ್ರಾ ಅಥವಾ ಪಾಂಡ್ಯ

    ಕೃಷಿ ಇಲಾಖೆಯ ಅಂದಾಜಿನಂತೆ ಎರಡೂವರೆ ಸಾವಿರದಿಂದ ಮೂರು ಸಾವಿರ ಎಕರೆ ಗದ್ದೆಗಳಲ್ಲಿ ಬದ್ರಾ ಅಥವಾ ಪಾಂಡ್ಯ, ಜಯಾ, ಕಗ್ಗ ಮತ್ತು ಹೈಬ್ರೀಡ್ ತಳಿ ಭತ್ತ ಬೆಳೆಯಲಾಗುತ್ತದೆ. ಈ ಪೈಕಿ ಬದ್ರಾ ಅಥವಾ ಪಾಂಡ್ಯ ತಳಿಯ ಭತ್ತದ ಸಸಿಗಳು ಕೀಟದ ದಾಳಿಗೆ ತುತ್ತಾಗಿ ವಿನಾಶದ ಅಂಚಿನಲ್ಲಿವೆ. ಇಲ್ಲಿನ 21 ಹಳ್ಳಿಗಳ ಪೈಕಿ 1500ದಿಂದ 2000 ಎಕರೆಗೂ ಹೆಚ್ಚಿನ ಗದ್ದೆಗಳಲ್ಲಿ ರೈತರು ಜಯಾ ತಳಿಯನ್ನು ಬಿತ್ತುತ್ತಾರೆ. ಪಾಂಡ್ಯದ ತಳಿಯನ್ನು ಹಾಳು ಮಾಡಿದ ಕೀಟಗಳು ಈಗ ಜಯಾ ತಳಿಯ ಸಸಿಗಳ ಮೇಲೂ ಆಕ್ರಮಣ ಆರಂಭಿಸಿವೆ. ತಾರಮಕ್ಕಿ, ದಂಡೆಭಾಗ, ಬೇಲೆಹಿತ್ತಲಿನ ಗದ್ದೆಗಳ ನಂತರ ಹತ್ತಿರದ ಬಾವಿಕೊಡ್ಲ, ಹೊಸ್ಕೇರಿ ಮುಂತಾದೆಡೆ ಜಯಾ ತಳಿಗಳ ಮೇಲೂ ಕೀಟ ಬಾಧೆ ಆವರಿಸಿದೆ.

    ವಿಜ್ಞಾನಿಗಳ ಭೇಟಿ

    ರೈತರ ದೂರಿಗೆ ತಕ್ಷಣ ಸ್ಪಂದಿಸಿದ ಇಲ್ಲಿನ ಕೃಷಿ ಇಲಾಖೆಯ ಆತ್ಮಾ ಯೋಜನೆ ಸಿಬ್ಬಂದಿ ಬುಧವಾರ ತಾರಮಕ್ಕಿಯ ಗದ್ದೆಗಳನ್ನು ಪರಿಶೀಲಿಸಿ ಕಪ್ಪು ಕೀಟಗಳನ್ನು ಪತ್ತೆ ಹಚ್ಚಿದ್ದಾರೆ. ಈಗಾಗಲೇ ಕೀಟಗಳು ನಾಶ ಮಾಡಿರುವ ಸಸಿಗಳನ್ನು ಉಳಿಸಿಕೊಳ್ಳುವ ಸಾಧ್ಯತೆ ಕ್ಷೀಣವಾಗಿದೆ. ಅದರೆ, ಬೆಳೆದು ನಿಂತ ಇತರ ಗದ್ದೆಗಳನ್ನು ಕೀಟಗಳು ವ್ಯಾಪಿಸದಂತೆ ತಡೆಯುವ ಬಗ್ಗೆ ಶಿರಸಿಯ ಕೃಷಿ ವಿಜ್ಞಾನಿಗಳು ಗದ್ದೆಗಳನ್ನು ಗುರುವಾರ ವೀಕ್ಷಿಸಲಿದ್ದಾರೆ. ಅಲ್ಲದೆ, ಕೀಟ ನಾಶಕ ಬಳಕೆ ಬಗ್ಗೆ ರೈತರಿಗೆ ಮಾಹಿತಿ ನೀಡಲಿದ್ದಾರೆ.

    ಗೋಕರ್ಣದ ತಾರಮಕ್ಕಿ ಹಾಗೂ ಸುತ್ತಲಿನ ಬೇಲೆಗದ್ದೆ, ಹೊಸ್ಕೇರಿ, ಬಾವಿಕೊಡ್ಲ ಗ್ರಾಮಗಳಲ್ಲಿ ರೈತರು ಕೀಟ ಬಾಧೆಯ ಬಗ್ಗೆ ದೂರಿದ್ದಾರೆ. ಈ ಬಗ್ಗೆ ಶಿರಸಿಯ ಕೃಷಿ ವಿಜ್ಞಾನಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮಕ್ಕೆ ವಿನಂತಿಸಲಾಗಿದೆ. ಕೃಷಿ ಇಲಾಖೆ ವತಿಯಿಂದ ಗದ್ದೆಗಳನ್ನು ಪರಿಶೀಲಿಸಲಾಗಿದೆ. ಅಸಮರ್ಪಕ ಮಳೆ ಚಕ್ರ ಹಾಗೂ ಹವಾಮಾನ ವೈಪರೀತ್ಯ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳ ಸಂದರ್ಶನದ ನಂತರ ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.

    | ನಂದಿತಾ ಪಟಗಾರ, ಕೃಷಿ ಇಲಾಖೆ ಅಧಿಕಾರಿ ಗೋಕರ್ಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts