More

    ಎಪಿಎಂಸಿಯಲ್ಲಿ ಆಮೆಗತಿ ಕಾಮಗಾರಿ, ಮುಗಿಯದ ಕಿರಿಕಿರಿ!

    ಅಕ್ಕಪ್ಪ ಮಗದುಮ್ಮ ಬೆಳಗಾವಿ

    ಎಲ್ಲೆಂದರಲ್ಲಿ ಬಾಯಿ ತೆರೆದ ಗುಂಡಿಗಳು… ಅರೆಬರೆ ಅಗೆದಿರುವ ರಸ್ತೆಗಳು… ಅಲ್ಲಲ್ಲಿ ತುಂಡಾಗಿ ಬಿದ್ದಿರುವ ಪೈಪ್‌ಗಳು, ಕಬ್ಬಿಣದ ಸರಳುಗಳು… ಒಡೆದು ಹೋದ ನೀರಿನ ಪೈಪ್‌ಲೈನ್‌ಗಳು…
    ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ.

    ಬೆಳಗಾವಿ ಎಪಿಎಂಸಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಬಾರ್ಡ್‌ನ ಡಬ್ಲುೃಐಎಫ್ ಯೋಜನೆಯಡಿ ಸುಮಾರು 15 ಕೋಟಿ ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಆಮೆವೇಗದಲ್ಲಿ ಕಾಮಗಾರಿ ಸಾಗುತ್ತಿದೆ. ಕಾಮಗಾರಿ ಆರಂಭವಾಗಿ ವರ್ಷ ಕಳೆಯುತ್ತ ಬಂದರೂ ಪೂರ್ಣಗೊಂಡಿಲ್ಲ. ಇದರಿಂದ ದೂರದ ಊರುಗಳಿಂದ ಬರುವ ರೈತರು ಹಾಗೂ ವ್ಯಾಪಾರಸ್ಥರು ಮುಖ್ಯ ತರಕಾರಿ ಮಾರುಕಟ್ಟೆ ತಲುಪಲು ತೊಂದರೆ ಅನುಭವಿಸುವಂತಾಗಿದೆ.

    ಧೂಳುಮಯ: ಎಪಿಎಂಸಿಯ ಮುಖ್ಯ ದ್ವಾರದಿಂದ ಪ್ರಮುಖ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸಲು ನೂತನ ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆ ಹಾಗೂ ಹೊಸ ಚರಂಡಿ ನಿರ್ಮಿಸುವ ಉದ್ದೇಶಕ್ಕೆ ಒಳರಸ್ತೆಯನ್ನೂ ಅಗೆಯಲಾಗಿದೆ. ಆದರೆ, ಈವರೆಗೆ ಎಲ್ಲಿಯೂ ಸುಸಜ್ಜಿತ ರಸ್ತೆ ನಿರ್ಮಿಸಿರುವುದು ಕಾಣುತ್ತಿಲ್ಲ. ಯಾವುದೇ ರಸ್ತೆಯಲ್ಲಿ ಹೆಜ್ಜೆ ಹಾಕಿದರೂ ವಿಘ್ನಗಳೇ ಗೋಚರಿಸುತ್ತವೆ. ಮಾರುಕಟ್ಟೆಯಲ್ಲಿನ ಅರೆಬರೆ ಕಾಮಗಾರಿಯಿಂದ ಎಲ್ಲಿ ನೋಡಿದರಲ್ಲಿ ಧೂಳಿನ ಅಭಿಷೇಕವಾಗುತ್ತಿದೆ. ಜೋರಾಗಿ ಗಾಳಿ ಬೀಸಿದಾಗಲೆಲ್ಲ ಸಾರ್ವಜನಿಕರು ಮುಖಕ್ಕೆ ಬಟ್ಟೆಕಟ್ಟಿಕೊಂಡೇ ಸಂಚರಿಸುವಂತಾಗಿದೆ.

    ಹೊತ್ತು ತರಬೇಕು ತರಕಾರಿ: ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಲ್ಲಲ್ಲಿ ರಸ್ತೆ ಅಗೆದಿರುವುದರಿಂದ ರೈತರು 100-200 ಮೀಟರ್ ದೂರದಲ್ಲೇ ತಮ್ಮ ವಾಹನ ನಿಲ್ಲಿಸಿ ತರಕಾರಿ ಚೀಲ ಹೊತ್ತು ಮುಖ್ಯ ಮಾರುಕಟ್ಟೆಗೆ ಬರುವಂತಾಗಿದೆ. ಕೆಲವೆಡೆ ಒಳಚರಂಡಿಗಳಿಗೆ ಸ್ಲಾೃಬ್ ಅಳವಡಿಸಿಲ್ಲ. ಇದರಿಂದ ತರಕಾರಿ ಹೊತ್ತು ಬರುವ ರೈತರು ಜೀವ ಕೈಯಲ್ಲಿ ಹಿಡಿದುಕೊಂಡೇ ಮುಂದೆ ಸಾಗಬೇಕಾಗಿದೆ. ಪ್ರತಿದಿನ ಮಾರುಕಟ್ಟೆಗೆ ತರಕಾರಿ ತರುವ ನಾವು ಇಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಮಳೆಗಾಲ ಆರಂಭಕ್ಕೂ ಮುನ್ನ ಕೆಲಸ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ ಒತ್ತಾಯಿಸಿದ್ದಾರೆ.

    ಎಪಿಎಂಸಿ ಅಧಿಕಾರಿಗಳ ವಿಭಿನ್ನ ಹೇಳಿಕೆ: ನೂತನ ರಸ್ತೆ ನಿರ್ಮಾಣದ ಬಗ್ಗೆ ಎಪಿಎಂಸಿ ಜಂಟಿ ನಿರ್ದೇಶಕರನ್ನು ಕೇಳಿದರೆ, ‘ಕಳೆದ ವರ್ಷ ಸುರಿದ ಮಳೆಯಿಂದ ಕೆಲಸ ವಿಳಂಬವಾಗಿದೆ. ಸರ್ಕಾರದಿಂದ 15 ಕೋಟಿ ರೂ. ಅನುದಾನ ಮಂಜೂರಾಗಿದೆ. ಆದರೆ, 13.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ನೀಡಲಾಗಿದೆ. ಗುತ್ತಿಗೆದಾರರ ಕೆಲಸಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ಸರ್ಕಾರದ ಅನುದಾನ ಬಿಡುಗಡೆಯಾಗಲು ವಿಳಂಬವಾದರೆ ಮಾರುಕಟ್ಟೆಗೆ ಸೆಸ್ ರೂಪದಲ್ಲಿ ಬಂದ ಹಣ ನೀಡುತ್ತೇವೆ’ ಎನ್ನುತ್ತಾರೆ. ಎಪಿಎಂಸಿ ಎಇಇ ಅಶೋಕ ಹರಕುಣಿ ಅವರು, ‘ಮಾರುಕಟ್ಟೆ ಆವರಣದಲ್ಲಿರುವ ಜಾಗ ಕಲ್ಲುಬಂಡೆಯಿಂದ ಕೂಡಿದ್ದರಿಂದ ನೆಲ ಅಗೆಯುವಾಗ ತೊಂದರೆಯಾಗಿ ಕಾಮಗಾರಿಗೆ ವೇಗ ದೊರೆತಿಲ್ಲ. ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎನ್ನುತ್ತಾರೆ. ಎಪಿಎಂಸಿ ಹಾಲಿ ಮತ್ತು ಮಾಜಿ ನಿರ್ದೇಶಕರು, ‘ರಸ್ತೆ ನಿರ್ಮಾಣ ಕಾಮಗಾರಿಯನ್ನು ವಿಜಯಪುರ ಮೂಲದ ಸಿದ್ದಪ್ಪ ಭೀಮಶಿ ಬಿರಾದಾರ ಎಂಬುವವರು ಗುತ್ತಿಗೆ ಪಡೆದಿದ್ದಾರೆ.

    ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ’ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಮನ್ವಯದ ಕೊರತೆಯಿಂದ ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ.

    ಒಳಚರಂಡಿ ಹಾಗೂ ರಸ್ತೆ ಕಾಮಗಾರಿ ಏಕಕಾಲಕ್ಕೆ ನಡೆಯುತ್ತಿರುವುದರಿಂದ ಸ್ವಲ್ಪ ವಿಳಂಬವಾಗಿದೆ. ಆದರೆ, ಕೆಲಸಕ್ಕೆ ಆರ್ಥಿಕ ತೊಂದರೆ ಇಲ್ಲ. ಬರುವ ಮೇ ತಿಂಗಳ ಒಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ.
    | ಆನಂದ ಕೃಷ್ಣ ಪಾಟೀಲ ಅಧ್ಯಕ್ಷ, ಎಪಿಎಂಸಿ ಬೆಳಗಾವಿ

    ಈ ವರ್ಷ ಸತತವಾಗಿ ಸುರಿದ ಮಳೆಯಂದ ರಸ್ತೆ ನಿರ್ಮಾಣದಲ್ಲಿ ಸ್ವಲ್ಪ ವಿಳಂಬವಾಗಿದೆ. ಕಾಮಗಾರಿಗೆ ಯಾವುದೇ ಹಣಕಾಸಿನ ತೊಂದರೆಯಿಲ್ಲ. 2-3 ತಿಂಗಳಲ್ಲಿ ಪೂರ್ಣಗೊಳಿಸಿ ರೈತರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲಾಗುವುದು.
    | ಡಾ. ಕೆ.ಕೋಡಿಗೌಡ ಜಂಟಿ ನಿರ್ದೇಶಕ, ಎಪಿಎಂಸಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts