More

    ಸನಾತನ ಧರ್ಮದಲ್ಲಿ ಕ್ರೀಡೆಗಳ ಮಹತ್ವ

    ಬೃಹತ್ ಸಂಖ್ಯೆಯಲ್ಲಿರುವ ಯುವಜನರಿಗೆ ಅವರ ಶಕ್ತಿ-ಪ್ರತಿಭೆಗಳನ್ನು ಆರೋಗ್ಯಕರ ಕ್ರೀಡಾಸ್ಪರ್ಧೆಗಳಲ್ಲಿ ವ್ಯಕ್ತಪಡಿಸಲು ವಿಪುಲ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಇದರಿಂದ ಅವರು ಆಧುನಿಕ ಪ್ರಪಂಚದ ಮಾರಕ ದುರಭ್ಯಾಸಗಳಿಗೆ ಬಲಿಯಾಗುವುದಿಲ್ಲ. ಬದಲಿಗೆ, ತಮ್ಮ ಶಕ್ತಿ-ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಜೀವನಲಕ್ಷ್ಯದೆಡೆಗೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

    Amrutha Sinchanaಪ್ರಾಚೀನ ನಾಗರಿಕತೆಗಳ ಕಾಲದಿಂದಲೂ ದೈಹಿಕ ಕಸರತ್ತುಗಳು ಹಾಗೂ ಕ್ರೀಡಾ ಸ್ಪರ್ಧೆಗಳು ಜಗತ್ತಿನಾದ್ಯಂತ ಸಾಂಸ್ಕೃತಿಕ, ಧಾರ್ವಿುಕ, ಸಾಮಾಜಿಕ ಆಚರಣೆಗಳ ಅವಿಭಾಜ್ಯ ಅಂಗವಾಗಿದ್ದವ. ಕ್ರಿ.ಪೂ. 776ರಲ್ಲಿ ಪ್ರಾಚೀನ ಗ್ರೀಸ್ ದೇಶದಲ್ಲಿ ಪ್ರಾರಂಭವಾದ ಒಲಿಂಪಿಕ್ಸ್ ಕ್ರೀಡಾಕೂಟ, ಸುಸಂಘಟಿತ ಕ್ರೀಡಾಸ್ಪರ್ಧೆಗಳ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಅದೇ ರೀತಿ, ಪ್ರಾಚೀನ ಚೀನಾ, ಈಜಿಪ್ಟ್ ಮುಂತಾದ ದೇಶಗಳು ತಮ್ಮದೇ ಆದ ಸ್ಪರ್ಧಾತ್ಮಕ ದೈಹಿಕ ಕಸರತ್ತು-ಕ್ರೀಡೆಗಳನ್ನು ಹೊಂದಿದ್ದವು.

    ಹಿಂದಿನ ಕಾಲದಲ್ಲಿ ಸಾಮಾನ್ಯ ಜೀವನ ನಿರ್ವಹಣೆಗೆ ಅತ್ಯಗತ್ಯವಾಗಿದ್ದ ಬೇಟೆ ಅಥವಾ ಶತ್ರುಗಳಿಂದ ರಕ್ಷಿಸಿಕೊಳ್ಳಲು ಅಗತ್ಯವಾದ ಯುದ್ಧ ಕಲೆಗಳೇ ಕಾಲ ಕಳೆದಂತೆ ಸುಸಂಘಟಿತ ಕ್ರೀಡಾಸ್ಪರ್ಧೆಗಳಾಗಿ ಪರಿವರ್ತನೆಗೊಂಡು, ಮನರಂಜನೆ ಮತ್ತು ಸಾಮಾಜಿಕ ಸಾಮರಸ್ಯದ ಸಾಧನಗಳಾದವು. ಇಂದು ನಾವು ಜಾಗತಿಕವಾಗಿ ಕಾಣುವ ಕ್ರೀಡೆ, ಆಟೋಟ ಮತ್ತು ಇತರ ದೈಹಿಕ ಕಸರತ್ತುಗಳಿಗೆ, ಹಲವಾರು ಶತಮಾನಗಳಿಂದ ಪ್ರಪಂಚದ ಹಲವು ನಾಗರಿಕತೆಗಳು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತ ಬಂದಿವೆ.

    ಭಾರತದ ಹಿಂದು ಸಂಸ್ಕೃತಿಯಲ್ಲಿಯೂ, ಅದರ ವಿವಿಧ ತಾತ್ವಿಕ-ಆಧ್ಯಾತ್ಮಿಕ ವಿಷಯಗಳೊಂದಿಗೆ ಕ್ರೀಡೆಗಳು ಸುಲಭವಾಗಿ ಹೊಂದಿಕೆಯಾಗುವುದರಿಂದ, ಅವು ಪ್ರಮುಖ ಸ್ಥಾನವನ್ನು ಪಡೆದಿವೆ. ಕ್ರೀಡೆಗಳ ಅತಿ ಮುಖ್ಯ ಅಂಶಗಳಾದ ದೈಹಿಕ ಸದೃಢತೆ, ಶಿಸ್ತು ಮತ್ತು ಸಮೂಹದ ಎಲ್ಲ ಸದಸ್ಯರೊಂದಿಗೆ ಸಂಪೂರ್ಣ ಏಕತೆ-ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ಗುಣಗಳು ಭಾರತೀಯ ತತ್ವಗಳಾದ ಯೋಗ, ಸ್ವಯಂಶಿಸ್ತುಗಳನ್ನು ಪ್ರತಿಧ್ವನಿಸುತ್ತವೆ.

    ಸಕಲ ಸೃಷ್ಟಿಯು ಭಗವಂತನ ಲೀಲೆ. ಈ ಅದ್ಭುತ ಲೀಲೆಯಲ್ಲಿ ತೊಡಗಿ ಆನಂದಿ ಸುವ ಭಗವಂತನನ್ನು ಲೀಲಾವಿನೋದನೆಂದು ಕರೆಯಲಾಗಿದೆ. ಭಗವಂತನ ತದ್ರೂಪವಾದ ಮಾನವನೂ ತಾನು ಮಾಡುವ ಕರ್ಮಗಳಲ್ಲಿ, ಆಡುವ ಆಟಗಳಲ್ಲಿ ಆನಂದದಿಂದ ತಲ್ಲೀನನಾಗುವುದು ಒಂದು ಆಧ್ಯಾತ್ಮಿಕ ಅಭಿವ್ಯಕ್ತಿಯೇ ಆಗಿದೆ.

    ಭಾರತದಲ್ಲಿ ಕ್ರೀಡೆಗಳು ವೈವಿಧ್ಯಮಯವಾಗಿವೆ, ಸಹಸ್ರಾರು ವರ್ಷಗಳ ಶ್ರೀಮಂತ ಇತಿಹಾಸ ಹೊಂದಿವೆ. ರಾಮಾಯಣ, ಮಹಾಭಾರತದಲ್ಲಿ ಬಹಳಷ್ಟು ಕ್ರೀಡೆಗಳ, ದೈಹಿಕ ಕಸರತ್ತುಗಳ ಉಲ್ಲೇಖವನ್ನು ಕಾಣಬಹುದು. ಪ್ರಾಚೀನ ಭಾರತದಲ್ಲಿ ಸಾಂಪ್ರದಾಯಿಕ ಕ್ರೀಡೆಗಳಾದ ಕುಸ್ತಿ/ಮಲ್ಲಯುದ್ಧ, ಬಿಲ್ಲುಗಾರಿಕೆ, ಈಜು, ಬೇಟೆ, ರಥಗಳ ಓಟದ ಸ್ಪರ್ಧೆಗಳು ಜನಪ್ರಿಯವಾಗಿದ್ದವು. ಅಲ್ಲದೆ, ಸಮಾಜದ ಮೇಲಿನ ಅಂತಸ್ತಿಗೆ ಸೇರಿದ ಪುರುಷರೆಲ್ಲರೂ ಈ ವಿಭಾಗಗಳಲ್ಲದೆ, ಯುದ್ಧತಂತ್ರಗಳಲ್ಲಿಯೂ ನಿಪುಣತೆ ಸಾಧಿಸುವುದು ಕಡ್ಡಾಯವಾಗಿತ್ತು. ಯುದ್ಧ, ಬೇಟೆಯಲ್ಲಿ ಅಂದು ಉಪಯೋಗಿಸಲಾಗುತ್ತಿದ್ದ ಆಯುಧಗಳೆಂದರೆ ಖಡ್ಗ, ಬಿಲ್ಲುಬಾಣ, ಪರಶು (ಕೊಡಲಿ), ಗದೆ ಇತ್ಯಾದಿ.

    ನಮ್ಮ ಪ್ರಾಚೀನ ಗ್ರಂಥಗಳು ಸದಾಚಾರ ಅಥವಾ ಧರ್ಮ, ಶಿಸ್ತು ಮತ್ತು ಎದುರಾಳಿಗಳ ಮೇಲಿನ ಗೌರವ ಮುಂತಾದ ತತ್ವಗಳನ್ನು ಬೋಧಿಸುವ ಮೂಲಕ ನಿಜವಾದ ಕ್ರೀಡಾಮನೋಭಾವನೆಯ ಪ್ರಾಮುಖ್ಯವನ್ನು ಒತ್ತಿ ಹೇಳುತ್ತವೆ. ಮುಖ್ಯವಾಗಿ ಮಹಾಭಾರತವು, ಕ್ರೀಡಾಮನೋಭಾವದ ಸಾರವಾದ ಧರ್ಮ, ಕರ್ತವ್ಯದ ಬಗ್ಗೆ ಆಳವಾದ ಬೋಧನೆಯನ್ನೊಳಗೊಂಡಿದೆ. ಮಹಾಭಾರತದ ಭಾಗವಾದ ಭಗವದ್ಗೀತೆ ಪ್ರತಿಫಲದ ಆಸೆ ಬಿಟ್ಟು ಹೇಗೆ ನಮ್ಮ ಕರ್ತವ್ಯ ನಿರ್ವಹಿಸಬೇಕೆಂಬುದನ್ನು ಪರಿಣಾಮಕಾರಿಯಾಗಿ ಉಪದೇಶಿಸುತ್ತದೆ. ಈ ತತ್ವವನ್ನು ಕ್ರೀಡಾಲೋಕಕ್ಕೆ ಅನ್ವಯಿಸಿದಾಗ, ಅದು ನ್ಯಾಯಬದ್ಧ, ಪ್ರಾಮಾಣಿಕ ಪ್ರಯತ್ನ ಮತ್ತು ಸೋಲು-ಗೆಲುವುಗಳನ್ನು ಸಮತ್ವದಿಂದ ಸ್ವೀಕರಿಸುವ ಗುಣಗಳನ್ನು ಪ್ರತಿಪಾದಿಸುತ್ತದೆ. ಮಹಾಭಾರತದಲ್ಲಿನ ಯುಧಿಷ್ಠಿರ ಧರ್ಮವು ಎದುರಾಳಿಗಳು ಧರ್ಮಯುದ್ಧದಲ್ಲಿ ಪಾಲಿಸಬೇಕಾದ ಪರಸ್ಪರ ಗೌರವ, ನಿಷ್ಪಕ್ಷಪಾತ ವ್ಯವಹಾರ, ನ್ಯಾಯಯುತ ಸ್ಪರ್ಧೆಯ ಮೌಲ್ಯಗಳನ್ನು ಎತ್ತಿ ತೋರುತ್ತದೆ. ಇವು ಕ್ರೀಡಾ ಪ್ರಪಂಚದಲ್ಲಿಯೂ ಅತ್ಯಗತ್ಯವಾಗಿವೆ.

    ಭಗವದ್ಗೀತೆಯಲ್ಲಿ ಉಪದೇಶಿಸಿರುವಂತೆ:
    ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ |
    ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ || (2.38)
    ‘ಸುಖ-ದುಃಖ, ಲಾಭ-ನಷ್ಟ, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸು. ಕೇವಲ ಕರ್ತವ್ಯ ದೃಷ್ಟಿಯನ್ನಿಟ್ಟುಕೊಂಡು, ಯುದ್ಧದಲ್ಲಿ ಹೋರಾಡು. ಆಗ ನಿನಗೆ ಯಾವ ಪಾಪವೂ ಅಂಟುವುದಿಲ್ಲ’.

    ಈ ಮೇಲಿನ ಜೀವನ ದೃಷ್ಟಿಯೇ ಒಲಿಂಪಿಕ್ಸ್ ಕ್ರೀಡಾಕೂಟದ ಘೊಷಣೆ ಯಲ್ಲಿಯೂ ವ್ಯಕ್ತವಾಗಿದೆ. ಮಾನವ ಜೀವನದಲ್ಲಿ ಜಯಕ್ಕಿಂತ ಹೇಗೆ ಹೋರಾಟವೇ ಮುಖ್ಯವೋ, ಅಂತೆಯೇ ಒಲಿಂಪಿಕ್ಸ್​ನಲ್ಲಿ ಗೆಲುವಿಗಿಂತ ಭಾಗವಹಿಸುವಿಕೆಯೇ ಮುಖ್ಯ. ಗೆಲ್ಲುವುದಕ್ಕಿಂತ ನೀನು ಹೇಗೆ ಹೋರಾಡಿದ್ದೀಯೆಂಬುದೇ ಮುಖ್ಯ!

    ಭಗವದ್ಗೀತೆಯ ಇನ್ನೊಂದು ಪ್ರಸಿದ್ಧ ಬೋಧನೆಯೆಂದರೆ:
    ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
    ಮಾ ಕರ್ಮಫಲಹೇತುರ್ಭರ್ವ ತೇ ಸಂಗೋಸ್ತ ್ವ ಕರ್ಮಣಿ || (2.47)

    ‘ಕರ್ಮವನ್ನು ಆಚರಿಸುವುದಲ್ಲಿ ಮಾತ್ರ ನಿನಗೆ ಅಧಿಕಾರವಿದೆಯೇ ಹೊರತು, ಕರ್ಮಫಲದ ಮೇಲೆ ನಿನಗೆ ಯಾವ ಅಧಿಕಾರವೂ ಇಲ್ಲ. ಕರ್ಮಫಲಕ್ಕಾಗಿ ಕರ್ಮವನ್ನು ಮಾಡುವುದು ಸರಿಯಲ್ಲ. ಅಂತೆಯೇ, ಕರ್ಮವನ್ನು ತ್ಯಜಿಸಲೂ ನಿನಗೆ ಅಧಿಕಾರವಿಲ್ಲ’!

    ಈ ಸಿದ್ಧಾಂತವು ಕ್ರೀಡಾಲೋಕಕ್ಕೂ ಸಂಪೂರ್ಣವಾಗಿ ಸರಿಹೊಂದುತ್ತದೆ. ಎಲ್ಲ ಸುಪ್ರಸಿದ್ಧ ಯಶಸ್ವಿ ಕ್ರೀಡಾಪಟುಗಳೂ ಈ ಮನೋಭಾವವನ್ನೇ ತಮ್ಮ ಜೀವನದಲ್ಲಿ ಅನುಸರಿಸಿ ಸಾರಿದ್ದಾರೆ.

    ಪ್ರಾಚೀನ ಭಾರತದ ಹಲವು ಕ್ರೀಡೆಗಳು ಪರಿವರ್ತಿತ ರೂಪಗಳಲ್ಲಿ, ಇಂದಿನ ಆಧುನಿಕ ಕ್ರೀಡಾಲೋಕದಲ್ಲಿಯೂ ಸ್ಥಾನ ಪಡೆದಿವೆ. ಚದುರಂಗವು ಇಂತಹ ಒಂದು ಕ್ರೀಡೆ. ಇದು ಕ್ರಿ.ಶ. 6ನೇ ಶತಮಾನದಲ್ಲಿ ಗುಪ್ತರ ಆಳ್ವಿಕೆಯ ಕಾಲದಲ್ಲಿ ಉಗಮ ವಾಯಿತೆಂದು ಹೇಳಲಾಗಿದೆ. ಯುದ್ಧದ ಕಾರ್ಯತಂತ್ರವನ್ನು ಪ್ರತಿಬಿಂಬಿಸುವ ಈ ಆಟವು ಸೈನ್ಯದ ನಾಲ್ಕು ವಿಭಾಗಗಳಾದ ಪದಾತಿಸೈನ್ಯ (ಕಾಲಾಳು), ಅಶ್ವದಳ, ಗಜದಳ ಮತ್ತು ರಥಗಳನ್ನು ಹೊಂದಿದೆ. ನಮ್ಮ ಪುರಾತನ ದೇವಾಲಯಗಳ ನೆಲಹಾಸಿನ ಮೇಲೆ ಚದುರಂಗ ಮತ್ತು ಇತರ ಆಟಗಳ ಕ್ಷೇತ್ರಗಳ ಕೆತ್ತನೆಗಳನ್ನು ಕಾಣಬಹುದು. ಅಂದಿನ ಚದುರಂಗವೇ ಇಂದಿನ ಚೆಸ್ ಆಟದ ಮೂಲ.

    ಭಾರತದಲ್ಲಿ ಕ್ರಿ.ಶ. 6ನೇ ಶತಮಾನದಲ್ಲಿ ಉಗಮವಾದ ಪಚ್ಚೀಸಿಯೇ ಇಂದಿನ ಲೂಡೋ ಕ್ರೀಡೆಯ ಮೂಲ. ಇದನ್ನು ಮೊಘಲ್ ಸಾಮ್ರಾಟರು, ಇತರ ಗಣ್ಯ ವ್ಯಕ್ತಿಗಳು ಆಡುತ್ತಿದ್ದರು. ಇಬ್ಬರು ಆಟಗಾರರ ಎರಡು ತಂಡಗಳಿರುತ್ತಿದ್ದವು. ಇದು ಮಣೆ ಆಟಗಳ ಪೈಕಿ ಮೊದಲನೆಯದೆಂದು ಹೇಳಬಹುದು. ಭಾರತದಲ್ಲಿ ಇದನ್ನು ವಿಶಾಲ ವಸ್ತ್ರದ ಹಾಸಿನ ಮೇಲೆ ಆಡುತ್ತಿದ್ದರು. ಪುರಾಣಗಳಲ್ಲಿ ಶಿವನು ಪಾರ್ವತಿಯೊಂದಿಗೆ, ವಿಷ್ಣುವು ಲಕ್ಷ್ಮಿಯೊಂದಿಗೆ ದಾಳದ ಆಟಗಳನ್ನು ಆಡುತ್ತಿದ್ದರೆಂಬ ಉಲ್ಲೇಖವಿದೆ. ಹಾಗಾಗಿ ನಮ್ಮ ಹಲವಾರು ಆಚರಣೆಗಳ ಅಂಗವಾಗಿ ಮಣೆ ಆಟ, ಎಲೆ ಆಟಗಳು ಪ್ರಸಿದ್ಧವಾಗಿವೆ.

    ಕಬಡ್ಡಿಯನ್ನು ಪ್ರಾಚೀನ ಭಾರತದಲ್ಲಿ ಹು-ತು-ತು ಎಂದು ಕರೆಯುತ್ತಿದ್ದರು. ಕ್ರೀಡಾಪಟು ತನ್ನ ದೈಹಿಕ ಸಾಮರ್ಥ್ಯ, ಉಸಿರಾಟದ ಮೇಲಿನ ಹತೋಟಿ, ಕೈಚಳಕ, ಚುರುಕುತನ ಪ್ರದರ್ಶಿಸುವ ಆಟ ಇದು. ಆತ್ಮರಕ್ಷಣೆಯ ಕಲೆಯೂ ಹೌದು. ಆಟಗಾರರಲ್ಲಿ ದೈಹಿಕ ಸದೃಢತೆಯನ್ನು ಬೆಳೆಸುತ್ತದೆ. ಪ್ರಾಚೀನ ಭಾರತದ ಧನುರ್ವಿದ್ಯೆಯು ಇಂದಿನ ಬಿಲ್ಲುಗಾರಿಕೆಯ ಮೂಲ. ಇಂದಿನ ಹಾವು-ಏಣಿ ಆಟವನ್ನು ಪ್ರಾಚೀನ ಭಾರತದಲ್ಲಿ ಮೋಕ್ಷ ಪಥವೆಂದು ಕರೆಯುತ್ತಿದ್ದರು. ಈ ಆಟವು ಜೀವನದ ಏರಿಳಿತಗಳನ್ನು ಪ್ರತಿಬಿಂಬಿಸುತ್ತದೆ. ಮಲ್ಲಕಂಭವು ಕುಸ್ತಿಪಟುಗಳಿಗೆ, ಯುದ್ಧಯೋಧರಿಗೆ ಕ್ರಿ.ಶ. 12ನೇ ಶತಮಾನದಲ್ಲಿ ತರಬೇತಿಯ ವ್ಯಾಯಾಮವಾಗಿತ್ತು. ಹೆಸರೇ ಹೇಳುವಂತೆ, ಅದು ಮಲ್ಲರ ಕಂಭ. ನುಣುಪಾದ ಮರದ ಕಂಭಕ್ಕೆ ಎಣ್ಣೆ ಬಳಿದು, ಅದನ್ನು ಹತ್ತಿ-ಇಳಿಯುತ್ತ ಅನೇಕ ಭಂಗಿಗಳನ್ನು ಮಲ್ಲರು ಪ್ರದರ್ಶಿಸುತ್ತಿದ್ದರು.

    ಕೇರಳದಲ್ಲಿ ಕ್ರಿ.ಶ. 11ನೇ ಶತಮಾನದಲ್ಲಿ ಪ್ರಾರಂಭವಾದ ಭಾರತೀಯ ಸಮರಕಲೆಯೇ ಕಲರಿಪಯಟ್ಟು. ಕರ್ನಾಟಕದಲ್ಲಿ ಕಂಬಳವು ಕೋಣಗಳ ಓಟದ ಸ್ಪರ್ಧೆ. ಅದೇ ರೀತಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಎಂಬ ಎತ್ತುಗಳ ಓಟದ ಸ್ಪರ್ಧೆ ಇದೆ. ಅಂದಿನ ಜನರು ಗೂಳಿಕಾಳಗ, ಗೂಳಿಜಿಗಿತದಂತಹ ಕೃಷಿ ಸಂಬಂಧಿ ಕ್ರೀಡೆಗಳನ್ನು ಆಡುತ್ತಿದ್ದರೆಂದು ಹರಪ್ಪ ನಾಗರಿಕತೆ ಕಾಲದ ಮುದ್ರೆಗಳಿಂದ ತಿಳಿದುಬರುತ್ತದೆ.

    ಹಲವು ಪುರಾತನ ದೇವಾಲಯಗಳ ಗೋಡೆಗಳ ಮೇಲೆ ಮಲ್ಲಯುದ್ಧ ದೃಶ್ಯಗಳ ಕೆತ್ತನೆ ಇದೆ. ಗೊಲ್ಲರ ಮಧ್ಯೆ ಬೆಳೆದ ಕೃಷ್ಣನಿಗೆ ಕುಸ್ತಿ ಪ್ರಿಯವಾಗಿತ್ತು. ಕೃಷ್ಣನಿಗಿಂತ ಬಹು ಕಾಲದ ಹಿಂದೆ, ರಾಜಕುಟುಂಬದಲ್ಲಿ ಹುಟ್ಟಿ ಬೆಳೆದ ರಾಮ ಕುಸ್ತಿಯಾಡುವ ಚಿತ್ರ ಎಲ್ಲೂ ಕಾಣಸಿಗುವುದಿಲ್ಲ. ಆದರೆ, ಕೃಷ್ಣನ ಕಾಲದಲ್ಲಿ ಭೀಮ, ದುರ್ಯೋಧನರಿಬ್ಬರೂ ಮಲ್ಲಯುದ್ಧ ಪ್ರವೀಣರೂ, ಈಜುಗಾರರೂ ಆಗಿದ್ದರು. ನೀರಿನಲ್ಲಿ ಮುಳುಗಿ, ದೀರ್ಘಕಾಲ ಉಸಿರನ್ನು ನಿಯಂತ್ರಿಸುವ ಸಾಮರ್ಥ್ಯವೂ ಅವರಿಗೆ ಕರಗತವಾಗಿತ್ತು. ಗಿಲ್ಲಿ-ದಂಡ, ಕಬಡ್ಡಿ, ಲಗೋರಿ, ರಸ್ಸ-ಕಸ್ಸಿ (ಹಗ್ಗ ಜಗ್ಗಾಟ) ಮುಂತಾದವುಗಳನ್ನು ಕೌರವ-ಪಾಂಡವರು ಕಂಡು ಹಿಡಿದರೆಂದು ಜಾನಪದ ಕಥೆಗಳಿಂದ ತಿಳಿದುಬರುತ್ತದೆ.

    ಪೋಲೋ ಕ್ರೀಡೆಯನ್ನು ಸುಮಾರು 2000 ವರ್ಷ ಹಿಂದೆಯೇ ಮಣಿಪುರದಲ್ಲಿ ಆಡಲಾಗುತ್ತಿತ್ತು. ಇದನ್ನು ಆಗ ಸಾಗೋಲ್-ಕಾಂಗ್​ಜೈ ಎನ್ನುತ್ತಿದ್ದರು. ಬೋಧಿಧರ್ಮನೆಂಬ ಬೌದ್ಧ ಭಿಕ್ಷುವು ಕೇರಳದ ಸಮರ ಕಲೆಗಳನ್ನು ಚೀನಾದ ಶಾವೋಲಿನ್ ದೇವಾಲಯಕ್ಕೆ ಕೊಂಡೊಯ್ದನೆಂದು ಇತಿಹಾಸವು ತಿಳಿಸುತ್ತದೆ. 19ನೇ ಶತಮಾನದಲ್ಲಿ ಬ್ರಿಟಿಷರು ಕಲ್ಕತ್ತಾ ಕ್ರಿಕೆಟ್ ಕ್ಲಬ್ ಮತ್ತು ಇಂಡಿಯನ್ ಫುಟ್ಬಾಲ್ ಅಸೋಸಿಯೇಷನ್ ಸ್ಥಾಪಿಸುವ ಮೂಲಕ ಭಾರತಕ್ಕೆ ಆಧುನಿಕ ಕ್ರೀಡೆಗಳನ್ನು ಪರಿಚಯಿಸಿದರು.

    ಸ್ವಾತಂತ್ರೊ್ಯೕತ್ತರ ಕಾಲದಲ್ಲಿ, ಅಂತಾರಾಷ್ಟ್ರೀಯ ಕ್ರೀಡಾಕ್ಷೇತ್ರದಲ್ಲಿ ಭಾರತ ಕ್ರಮೇಣ ಉನ್ನತ ಹಂತಕ್ಕೇರುತ್ತಿದೆ. ಕ್ರಿಕೆಟ್, ಹಾಕಿ, ಬ್ಯಾಡ್ಮಿಂಟನ್, ಷೂಟಿಂಗ್, ಕುಸ್ತಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿದೆ. ಏಷ್ಯನ್ ಗೇಮ್್ಸ, ಕಾಮನ್ವೆಲ್ತ್ ಗೇಮ್ಸ್​ನಂತಹ ಜಾಗತಿಕ ಕ್ರೀಡಾವೇದಿಕೆಗಳು ಭಾರತೀಯ ಪ್ರತಿಭೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಸಹಾಯಕವಾಗಿವೆ.

    ನಮ್ಮ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಯೋಗ, ಕ್ರೀಡೆಗಳು ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿವೆ. 28 ವಿದ್ಯಾನಿವೇಶನಗಳ, ಸುಮಾರು 3000 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸತ್ಯಸಾಯಿ ಗ್ರಾಮದಲ್ಲಿ ನಡೆಯುವ ವಾರ್ಷಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ಅದು ಎಲ್ಲರೂ ಎದುರು ನೋಡುವ ಪ್ರಮುಖ ಕಾರ್ಯಕ್ರಮ. ಇದರ ವಿಶೇಷವೇನೆಂದರೆ, ಯಾವುದೇ ಕ್ರೀಡಾಸ್ಪರ್ಧೆಯಲ್ಲಿ, ಒಂದು ತಂಡದಲ್ಲಿ ಒಂದೇ ವಿದ್ಯಾನಿವೇಶನದ ವಿದ್ಯಾರ್ಥಿಗಳಿರುವುದಿಲ್ಲ; ವಿವಿಧ ನಿವೇಶನಗಳ ವಿದ್ಯಾರ್ಥಿಗಳನ್ನು ಮಿಶ್ರಮಾಡಿ ತಂಡಗಳನ್ನು ವಿಂಗಡಿಸಲಾಗುತ್ತದೆ. ಹೀಗಾಗಿ, ವಿವಿಧ ವಿದ್ಯಾನಿವೇಶನಗಳ ನಡುವೆ ವೈರ-ಮಾತ್ಸರ್ಯ ಭಾವನೆಗಳು ಮೂಡಿ ಬೆಳೆಯುವುದಿಲ್ಲ. ಈ ರೀತಿ ಮಿಶ್ರ ತಂಡಗಳನ್ನು ರಚಿಸುವ ಸಲಹೆ ನೀಡಿದವರು, ಶಿಕ್ಷಕರೂ ಅಲ್ಲ, ಆಡಳಿತವರ್ಗದವರೂ ಅಲ್ಲ; ವಿದ್ಯಾರ್ಥಿಗಳೇ ಈ ಸಲಹೆ ನೀಡಿದರು! ಇದರಿಂದ ವಿದ್ಯಾರ್ಥಿಗಳಲ್ಲಿ ಏಕತೆ ಬೆಳೆಯಲು ಸಹಾಯವಾಗಿದೆ.

    ಸಹಸ್ರಾರು ವರ್ಷಗಳಿಂದ ಕ್ರೀಡೆಗಳು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು, ಇಂದು 140 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯರು ವಿವಿಧ ಕ್ರೀಡೆಗಳನ್ನು ಪ್ರೀತಿಸುತ್ತಾರೆ. ಸ್ವತಃ ಆಡದೇ ಇದ್ದರೂ, ಆಟಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಳುಗಳನ್ನು ಪ್ರೋತ್ಸಾಹಿಸುವುದರಲ್ಲಿ ಆನಂದಿಸುತ್ತಾರೆ. ಬೃಹತ್ ಸಂಖ್ಯೆಯಲ್ಲಿರುವ ಯುವಜನರಿಗೆ ಅವರ ಶಕ್ತಿ-ಪ್ರತಿಭೆಗಳನ್ನು ಆರೋಗ್ಯಕರ ಕ್ರೀಡಾಸ್ಪರ್ಧೆಗಳಲ್ಲಿ ವ್ಯಕ್ತಪಡಿಸಲು ವಿಪುಲ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಇದರಿಂದ ಅವರು ಆಧುನಿಕ ಪ್ರಪಂಚದ ಮಾರಕ ದುರಭ್ಯಾಸಗಳಿಗೆ ಬಲಿಯಾಗುವುದಿಲ್ಲ. ಬದಲಿಗೆ, ತಮ್ಮ ಶಕ್ತಿ-ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಜೀವನಲಕ್ಷ್ಯದೆಡೆಗೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಖೇಲೋ ಇಂಡಿಯಾ ಎಂಬ ಭಾರತ ಸರ್ಕಾರದ ಪ್ರಭಾವಶಾಲಿ ಯೋಜನೆಯು, ನಮ್ಮ ಮಕ್ಕಳನ್ನು ವೀಡಿಯೋ ಗೇಮ್ಳಿಂದ ದೂರವಿಟ್ಟು, ಮೈದಾನಗಳಲ್ಲಿ ಸಾಮರಸ್ಯದಿಂದ ಎಲ್ಲರೊಡನೆ ಬೆರೆತು ಆಡಿ, ಸೋಲುಗೆಲುವುಗಳನ್ನು ಸಮತಾ ಭಾವದಿಂದ ಸ್ವೀಕರಿಸುವ ಒಂದು ಮುಖ್ಯ ಜೀವನಪಾಠವನ್ನು ಅವರಿಗೆ ಕಲಿಸುವಲ್ಲಿ ಉತ್ತಮ ಪಾತ್ರ ವಹಿಸುತ್ತಿದೆ.

    ಉತ್ತಮ ಕ್ರೀಡೆಗಳು ನಮ್ಮ ಯುವಪೀಳಿಗೆಯನ್ನು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಸದೃಢ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಅತ್ಯಂತ ಪರಿಣಾಮಕಾರಿ. ಜನಮನದಲ್ಲಿ ಸದಾ ಧೀಮಂತ ಯುವಕರಾಗಿಯೇ ಉಳಿದಿರುವ ಸ್ವಾಮಿ ವಿವೇಕಾನಂದರು, ಯುವಜನರಿಗೆ ನೀಡಿರುವ ಉದ್ಬೋಧಕ ಘೊಷಣೆಯೆಂದರೆ, ‘ನನ್ನ ಯುವಮಿತ್ರರೇ, ಶಕ್ತಿವಂತರಾಗಿ! ಇದುವೇ ನಿಮಗೆ ನನ್ನ ಬುದ್ಧಿವಾದ. ಗೀತೆಯ ಅಧ್ಯಯನ ಮಾಡುವುದಕ್ಕಿಂತಲೂ, ಫುಟ್ಬಾಲ್ ಆಡುವುದರ ಮೂಲಕ ನೀವು ಸುಲಭವಾಗಿ ಸ್ವರ್ಗವನ್ನು ಸಮೀಪಿಸಬಹುದು.’

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts