More

    ಚುನಾವಣೆ 2ನೇ ಸ್ವಾತಂತ್ರೃ ಹೋರಾಟವಿದ್ದಂತೆ, ಸಿಎಂ ಸಿದ್ದರಾಮಯ್ಯ

    ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನ ನೀಡಿದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು ಬಿಜೆಪಿ 200 ಸ್ಥಾನ ಗೆಲ್ಲುವುದೂ ಕಷ್ಟವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
     ಅಂಬೇಡ್ಕರ್ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ಅದಕ್ಕೆ ವಿರುದ್ಧವಾಗಿ ಬಿಜೆಪಿಯವರು ನಡೆಯುತ್ತಿದ್ದಾರೆ.  ದುರ್ಬಲರಿಗೆ ಶಕ್ತಿ ತುಂಬುವ ಸಲುವಾಗಿಯೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಇದರಿಂದ ಜನರಿಗೆ ವಿಶ್ವಾಸ ಬಂದಿದೆ. ಬಿಜೆಪಿಯವರು ಮೊದಲು ನಮ್ಮ ಗ್ಯಾರಂಟಿ ಆಡಿಕೊಂಡರು. ಬಳಿಕ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಸುಳ್ಳು ಹರಡಿದರು. ಲೋಕಸಭಾ ಚುನಾವಣೆ ತನಕ ಮಾತ್ರ ನೀಡಿ, ನಂತರ ನಿಲ್ಲಿಸುತ್ತಾರೆ ಎಂಬ ಸುಳ್ಳು ಸೃಷ್ಟಿಸಿದ್ದಾರೆ. ಬಜೆಟ್‌ನಲ್ಲಿ ಗ್ಯಾರಂಟಿಗಳಿಗೆ 52,009 ಕೋಟಿ ರೂ. ಇಟ್ಟಿದ್ದೇವೆ. ಅಭಿವೃದ್ಧಿ ಕೆಲಸಗಳಿಗೆ 68 ಸಾವಿರ ಕೋಟಿ ರೂ. ಸೇರಿ 2024-25 ರಲ್ಲಿ ಒಟ್ಟು 1.20 ಲಕ್ಷ ಕೋಟಿ ಇಟ್ಟಿದ್ದೇವೆ ಎಂದು ವಿವರಿಸಿದರು.
     ಮೋದಿ ಅವರು ದ್ವೇಷದ ಭಾಷಣ ಮಾಡುತ್ತಿದ್ದಾರೆ. ಮತಗಳ ಕ್ರೋಢೀಕರಣ, ಧರ್ಮ ಕ್ರೋಢೀಕರಣ ಕೆಲಸ ಮಾಡುತ್ತಿದ್ದಾರೆ. ಅದ್ದರಿಂದ ರಾಹುಲ್ ಗಾಂಧಿ ಅವರು ದೇಶದ ಉದ್ದಗಲಕ್ಕೂ ಪಾದಯಾತ್ರೆ ಹಾಗೂ ನ್ಯಾಯ ಯಾತ್ರೆ ಮಾಡಿದರು. ದೇಶ ವಿಭಜನೆ ಮಾಡಲು ಮೋದಿ ಮಾಡಿರುವ ಪ್ರಯತ್ನಗಳಿಂದ ಬೇಸತ್ತಿದ್ದ ಜನರ ಒಡೆದ ಮನಸ್ಸನ್ನು ಒಗ್ಗೂಡಿಸಲು ಯಾತ್ರೆ ಕೈಗೊಂಡು ಯಶಸ್ವಿಯಾದರು ಎಂದರು.
     ಮೋದಿ ರೈತರ ಸಾಲ ಮನ್ನಾ ಮಾಡಲಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡಲಿಲ್ಲ. ಆದರೆ ಅಂಬಾನಿ, ಅದಾನಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದರು. ಸಂಸದ ತೇಜಸ್ವಿ ಸೂರ್ಯ, ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ಒಳಿತಲ್ಲ ಎಂದಿದ್ದಾರೆ. ರೈತರ ಸಾಲ ಮನ್ನಾ ಮಾಡಬಾರದೆನ್ನುವುದು ಬಿಜೆಪಿಯ ಹಿಡನ್ ಅಜೆಂಡಾ ಎಂದರು.
     ಕರ್ನಾಟಕಕ್ಕೆ ಮೋದಿ ದೊಡ್ಡ ಅನ್ಯಾಯ ಮಾಡಿದ್ದಾರೆ. ರಾಜ್ಯದಿಂದ 4.30 ಲಕ್ಷ ಕೋಟಿ ತೆರಿಗೆ ಹೋಗುತ್ತದೆ. ಆದರೆ ರಾಜ್ಯಕ್ಕೆ 100 ರೂ. ಗೆ ಕೇವಲ 13 ರೂ. ಮರಳಿ ಬರುತ್ತಿರುವುದು ನಮಗಾಗಿರುವ ಅನ್ಯಾಯ. 11,495 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಕ್ಕೆ ನೀಡಬೇಕು ಎಂದು 15ನೇ ಹಣಕಾಸು ಆಯೋಗ ನಿರ್ಧರಿಸಿತ್ತು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಲು ತಿಳಿಸಿದ್ದರೂ ಅವರು ಮಾಡಲಿಲ್ಲ. ರಾಜ್ಯಕ್ಕಾಗಿರುವ ಇಷ್ಟೆಲ್ಲ ಅನ್ಯಾಯವನ್ನು ರಾಜ್ಯದ 25 ಸಂಸದರಲ್ಲಿ ಯಾರೊಬ್ಬರೂ ಧ್ವನಿ ಎತ್ತಲಿಲ್ಲ. ಮೋದಿಯವರ ಎದುರು ನಿಂತು ಮಾತನಾಡಲು ಹೆದರುತ್ತಾರೆ. ಆದರೆ ಡಿ.ಕೆ.ಸುರೇಶ್ ಮಾತ್ರ ಪ್ರಶ್ನಿಸಿದರು ಎಂದರು.
     ರಾಜ್ಯದ ಜನರಿಗೆ ಮೋದಿ ಅವರ ಆಡಳಿತ ಬದಲಿಸಲು ಅವಕಾಶ ಸಿಕ್ಕಿದೆ. ಕರ್ನಾಟಕಕ್ಕೆ ಮೋದಿ ಅವರು ಕೇವಲ ಚೊಂಬು ನೀಡಿದ್ದಾರೆ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜನರು ತಮ್ಮ ಮತಗಳ ಮೂಲಕ ಛಾಟಿ ಬೀಸುತ್ತಾರೆ. ಈ ಬಾರಿ ಜನ ಕಾಂಗ್ರಸ್ ಮೆಲೆ ವಿಶ್ವಾಸ ಇಟ್ಟಿದ್ದಾರೆ. ರಾಜ್ಯದಿಂದ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ಮೋದಿ ಅವರಿಗೆ ಜನ ತಕ್ಕ ಪಾಠ ಕಲಿಸಬೇಕು ಎಂದರು.
     ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ಗ್ಯಾರಂಟಿ ಯೋಜನೆ ಜಾರಿಗೊಳಿಸಿದ  ಖುಷಿಯೊಂದಿಗೆ ನಾವು ಬಹಿರಂಗ ಪ್ರಚಾರಕ್ಕೆ ಅಂತ್ಯ ಹಾಡುತ್ತಿದ್ದೇವೆ. ಈ ಚುನಾವಣೆ ಕಾಂಗ್ರೆಸ್ ಭರವಸೆ ಅನುಷ್ಠಾನ ವರ್ಸಸ್ ಬಿಜೆಪಿ ಬುರುಡೆ ಎಂದು ವ್ಯಂಗ್ಯವಾಡಿದರು. ಇಡೀ ದೇಶದಲ್ಲಿ ಕರ್ನಾಟಕ ಮಾದರಿಯಾಗಿದೆ. ಜನರ ಬದುಕಿನ ಬಗ್ಗೆ ನಾವು ಕಾಳಜಿ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿಗಳನ್ನು ಮೋದಿ ನಕಲು ಮಾಡಿದ್ದಾರೆ. ಕರೊನಾ ಸಮಯದಲ್ಲಿ ಬಹಳಷ್ಟು ಭ್ರಷ್ಟಾಚಾರ ಸರ್ಕಾರದಿಂದ ಆಗಿದೆ. ದಿ. ಸುರೇಶ ಅಂಗಡಿ ಅವರ ಮೃತದೇಹವನ್ನೂ ಇವರಿಂದ ತರಲಾಗಲಿಲ್ಲ ಎಂದು ದೂರಿದರು. ಕ್ರಿಯಾಶೀಲ ಯುವಕ ಮೃಣಾಲ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
     ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್, ಶಾಸಕರಾದ ಆಸೀಫ್ ಸೇಠ್, ಅಶೋಕ ಪಟ್ಟಣ, ಪುಷ್ಪಾ ಅಮರನಾಥ, ಲಕ್ಷ್ಮಣರಾವ್ ಚಿಂಗಳೆ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts