More

    ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನವಾಗಲಿ

    ಹಾವೇರಿ: ಪ್ರಸಕ್ತ ಬಜೆಟ್​ನಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಪ್ರಸ್ತಾಪದ ಬೆನ್ನಲ್ಲೇ ಯೋಜನೆಗೆ ಮರುಜೀವ ಸಿಕ್ಕಿದೆ. ಉತ್ತರ ಕನ್ನಡದಲ್ಲಿ ಯೋಜನೆಗೆ ವಿರೋಧ ಶುರುವಾಗಿದ್ದರೆ, ಉತ್ತರ ಕರ್ನಾಟಕದ ಇತರ ಕೆಲ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಯೋಜನೆಯನ್ನು ಶೀಘ್ರವೇ ಅನುಷ್ಠಾನ ಮಾಡಬೇಕು ಎಂಬುದು ಈ ಭಾಗದ ಜನರ ಅಭಿಪ್ರಾಯವಾಗಿದೆ.

    ನದಿ ಜೋಡಣೆ ಬಗ್ಗೆ ಕೇಂದ್ರ ಸರ್ಕಾರ ವಿಶೇಷ ಆಸಕ್ತಿ ತೋರುತ್ತಿರುವುದರ ಜತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚುತ್ತಿರುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಪಶ್ಚಿಮ ಘಟ್ಟದ ನದಿಗಳಿಂದ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಚಿಂತನೆ ಮೊದಲಿನಿಂದಲೂ ಚಾಲ್ತಿಯಲ್ಲಿತ್ತು. ಆದ್ದರಿಂದ ಈ ಹಿಂದೆ ಪ್ರಸ್ತಾಪಗೊಂಡಿದ್ದ ಯೋಜನೆಗೆ ಈಗ ಮರುಜೀವ ಬಂದಿದೆ. ಮಾ. 8ರಂದು ಸಿಎಂ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್​ನಲ್ಲಿ ಯೋಜನೆಯ ಬಗ್ಗೆ ಪ್ರಸ್ತಾಪಿಸಿ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ಎನ್​ಡಬ್ಲುಡಿಎ(ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ)ಗೆ ಮನವಿ ಮಾಡುವುದಾಗಿ ಘೊಷಿಸಿದ್ದಾರೆ. ಈ ಹಿಂದೆ ಯೋಜನೆ ಬಗ್ಗೆ ಆಗಾಗ ಪ್ರಸ್ತಾಪವಾಗುತ್ತಲೇ ಬಂದಿದ್ದರೂ, ಉತ್ತರ ಕನ್ನಡದ ಸೂಕ್ಷ್ಮ ಪರಿಸರದ ಉಳಿವಿಗಾಗಿ ಯೋಜನೆ ಕಾರ್ಯ ಸಾಧುವಲ್ಲ ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿತ್ತು. ಈಗಲೂ ವಿರೋಧ ವ್ಯಕ್ತವಾಗಿದೆ. ಆದರೆ, ಇದಕ್ಕೆ ಜಿಲ್ಲೆಯವರ ವಾದವೇ ಬೇರೆಯಾಗಿದೆ.

    ಬೇಡ್ತಿ, ವರದಾ ನದಿ ಜೋಡಣೆಯಡಿ 22 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶವಿದೆ. ಇಷ್ಟು ಪ್ರಮಾಣದ ನೀರು ಲಭಿಸಿದರೆ ಹಾವೇರಿ ಜಿಲ್ಲೆಯೂ ನೀರಾವರಿಯಲ್ಲಿ ಮತ್ತೊಂದು ಮಂಡ್ಯ ಜಿಲ್ಲೆಯಾಗಲಿದೆ. ಯೋಜನೆಯಿಂದ ಹಾವೇರಿ, ಹುಬ್ಬಳ್ಳಿ, ಗದಗ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ರಾಷ್ಟ್ರೀಯ ನದಿ ಜೋಡಣೆ ಸಮಿತಿಯ ಸಭೆಯಲ್ಲೂ ಯೋಜನೆ ಬಗ್ಗೆ ಈ ಹಿಂದೆಯೇ ಪ್ರಸ್ತಾಪವಾಗಿರುವುದರಿಂದ ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ತೋರುವ ಅವಶ್ಯಕತೆಯಿದೆ.

    ಬೇಡ್ತಿ ನದಿ ತಿರುವು ಯೋಜನೆ ಕುರಿತು 2003ರಲ್ಲಿಯೇ ಎನ್​ಡಬ್ಲುಡಿಎ ಅಧ್ಯಯನ ನಡೆಸಲು ಮುಂದಾಗಿತ್ತು. ಬೇಡ್ತಿ ನದಿ ತಿರುವು ಯೋಜನೆಯಲ್ಲಿ ಉಪನದಿಗಳಾದ ಶಾಲ್ಮಲಾ ಮತ್ತು ಇತರ ಹೊಳೆಗಳಿಗೆ ಅಣೆಕಟ್ಟು ನಿರ್ವಿುಸಿ ಸಂಗ್ರಹವಾದ ನೀರನ್ನು ಕಾಲುವೆಗಳ ಮೂಲಕ ವರದಾ ನದಿಗೆ ಸೇರಿಸುವುದಾಗಿದೆ. ಶಿರಸಿ ತಾಲೂಕಿನ ಹುಳಗೋಳ ಎಂಬಲ್ಲಿ 480 ಮೀಟರ್ ಎತ್ತರದ ಅಣೆಕಟ್ಟು ನಿರ್ವಣ, ಶಿರ್ಲೆಬೈಲು ಎಂಬಲ್ಲಿ ಪಟ್ಟಣದ ಹಳ್ಳಕ್ಕೆ 512.75 ಮೀಟರ್ ಎತ್ತರದ ಅಣೆಕಟ್ಟು ನಿರ್ವಿುಸಿ ಅಲ್ಲಿ ಸಂಗ್ರಹವಾಗುವ ನೀರನ್ನು ಬನವಾಸಿ ಬಳಿ ವರದಾ ನದಿಗೆ ಹರಿಸಿ ಹಾವೇರಿ, ಗದಗ ಅಲ್ಲದೆ, ಉತ್ತರ ಕರ್ನಾಟಕ ಭಾಗದ ಅನೇಕ ಜಿಲ್ಲೆಯ 60 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಬಹುದು ಎಂದು ಯೋಜನಾ ವರದಿ ರೂಪಿಸಲಾಗಿತ್ತು. ಆದರೆ, ದಶಕಗಳ ಕಾಲದ ಈ ಯೋಜನೆಗೆ ವಿರೋಧ ಸರಿಯಲ್ಲ. ಕೆಲವರು ರಾಜಕೀಯವಾಗಿ ಪ್ರಭಾವ ಬೆಳೆಸಿಕೊಳ್ಳಲು, ಜನರ ಹಾದಿ ತಪ್ಪಿಸಿ ವಿರೋಧ ಮಾಡಲು ಮುಂದಾಗಿದ್ದಾರೆ. ಏನೇ ಆದರೂ ಬರದ ನಾಡಿಗೆ ಬೇಡ್ತಿ ಹರಿದು ಬರಲೇಬೇಕು ಎಂಬ ಒತ್ತಾಯ ಜಿಲ್ಲೆಯ ಜನರದ್ದಾಗಿದೆ.

    ಯೋಜನೆ ವೈಜ್ಞಾನಿಕ ಹಾಗೂ ಸೂಕ್ತ

    ‘2005ರಿಂದಲೂ ನಾನು ಈ ಯೋಜನೆ ಜಾರಿಗೆ ಒತ್ತಾಯಿಸುತ್ತ ಬಂದಿದ್ದೇನೆ. ಈಗ ಬಜೆಟ್​ನಲ್ಲಿ ಡಿಪಿಆರ್ ತಯಾರಿಸಲು ಸೂಚಿಸಿರುವುದಕ್ಕೆ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ’ ಎನ್ನುತ್ತಾರೆ ಮಾಜಿ ಸಂಸದ ಮಂಜುನಾಥ ಕುನ್ನೂರ. ನಿರಂತರ 15 ವರ್ಷದಿಂದ ಈ ಕುರಿತು ಪ್ರಧಾನಿ, ಕೇಂದ್ರ ಸಚಿವರು, ಸಿಎಂಗಳಿಗೆ ಮನವಿ ಸಲ್ಲಿಸಿದ್ದೇನೆ. ಯೋಜನೆ ಜಾರಿಯಿಂದ ಹಾವೇರಿ ಜಿಲ್ಲೆ ಸಂಪೂರ್ಣವಾಗಿ ನೀರಾವರಿಯಾಗುತ್ತದೆ. ಉತ್ತರ ಕನ್ನಡ ಭಾಗದವರು ಯೋಜನೆ ಅವೈಜ್ಞಾನಿಕ ಎನ್ನುವುದಕ್ಕೆ ನನ್ನ ವಿರೋಧವಿದೆ. ಧರ್ವ ಮತ್ತು ವರದಾ ನದಿಗೆ ಬೇಡ್ತಿ ನೀರು ತರುವ ಯೋಜನೆ ವೈಜ್ಞಾನಿಕ ಹಾಗೂ ಸೂಕ್ತವಾಗಿದೆ. ಬೇಡ್ತಿಗೆ ಪೂರಕವಾಗಿ ಶಾಲ್ಮಲಾ, ಪಟ್ಟದ ಹಳ್ಳಗಳಿವೆ. ಇಲ್ಲಿ ನೀರು 12 ತಿಂಗಳ ಕಾಲ ಲಭ್ಯವಿರುತ್ತದೆ. 200 ಟಿಎಂಸಿ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತದೆ. ನಮ್ಮ ಭಾಗ ಬರಗಾಲಕ್ಕೆ ತುತ್ತಾಗಿದೆ. ನೀರಾವರಿ ಯೋಜನೆಗಳು ಬಹಳಷ್ಟಿಲ್ಲ. ಇದರ ಅವಶ್ಯಕತೆ ಬಹಳಷ್ಟಿದೆ. ಈ ಯೋಜನೆಯನ್ನು ಏತ ನೀರಾವರಿ ಎಂದು ಪರಿಗಣಿಸಿ ಚೆಕ್ ಡ್ಯಾಂ ಕಟ್ಟಿ ನೀರು ಸಂಗ್ರಹಿಸಿ, ಕೆರೆಗಳಿಗೆ ನೀರು ತುಂಬಿಸಬೇಕು. ಧರ್ವ ನದಿಯಲ್ಲಿ ನೀರು ಶೇಖರಣೆ ಮಾಡಬೇಕು. ಶಿರಸಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ತಪ್ಪು. ರಾಜಕೀಯ ಮೈಲೇಜ್​ಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿನ ಸ್ವಾಮೀಜಿಗಳಿಗೆ ತಪ್ಪು ಕಲ್ಪನೆ ನೀಡಿ ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಜನರ ದಾಹ ನೀಗಿಸುವ ಯೋಜನೆ. ಇದರಿಂದ ಯಾರಿಗೂ ಯಾವುದೇ ಅಪಾಯವಿಲ್ಲ. ಮನುಕುಲದ ಒಳಿತನ್ನು ಗಮನದಲ್ಲಿಟ್ಟುಕೊಂಡು ಯೋಚಿಸಬೇಕು. ಯೋಜನೆ ಜಾರಿಗೆ ಈಗಲೂ ಹೋರಾಟಕ್ಕೆ ಸಿದ್ಧನಿದ್ದೇನೆ. ಹಿಂದೆಯೂ ಜೈ ಕಿಸಾನ್ ನದಿಗಳ ಜೋಡಣೆ ಹಾಗೂ ನೀರಾವರಿ ಅಭಿವೃದ್ಧಿ ಹೋರಾಟ ಸಮಿತಿಯನ್ನು ರಚಿಸಿ ಹೋರಾಟ ನಡೆಸಲಾಗಿತ್ತು. ಅದಕ್ಕೆ ಇದೀಗ ಫಲ ದೊರೆತಿದೆ ಎಂದೂ ಅವರು ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts