More

    ಜಾರಿಯಾಗಲಿ ಅಕ್ಕಿಆಲೂರ ಏತ ನೀರಾವರಿ

    ಅಕ್ಕಿಆಲೂರ: ಅಕ್ಕಿಆಲೂರ ಏತ ನೀರಾವರಿ ಯೋಜನೆಯು ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ರೈತರ ಹಲವು ದಶಕಗಳ ಕನಸು. ಈ ಯೋಜನೆ ಜಾರಿಯಿಂದ 20 ಸಾವಿರ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಜಮೀನಿಗೆ ಶಾಶ್ವತ ನೀರಾವರಿ ಒದಗಿಬರುತ್ತದೆ. ರೈತರು ವರ್ಷಕ್ಕೆ ಎರಡು ಬೆಳೆ ಬೆಳೆಯುವಂತಾಗಿ ಆರ್ಥಿಕವಾಗಿ ಸದೃಢವಾಗುವ ಭಾಗ್ಯ ಲಭಿಸುತ್ತದೆ.

    ಅಕ್ಕಿಆಲೂರಿನ ಕಲ್ಲಾಪುರ ರಸ್ತೆಯಲ್ಲಿರುವ ಈಶ್ವರ ಕೆರೆಗೆ ಮಲಗುಂದ ಗ್ರಾಮದ ಬಳಿ ಹಾಯ್ದು ಹೋಗಿರುವ ವರದಾ ನದಿಯಿಂದ ನೀರು ಹರಿಸಬೇಕೆಂಬುದೇ ಅಕ್ಕಿಆಲೂರ ಏತ ನೀರಾವರಿ ಯೋಜನೆ. ಈ ಯೋಜನೆ ಜಾರಿಗೊಳಿಸಬೇಕೆಂಬ ಕೂಗು ಕಳೆದ 20 ವರ್ಷಗಳಿಂದ ಕೇಳಿಬರುತ್ತಿದೆ.

    ಬೇಸಿಗೆಯಲ್ಲಿ ಈಶ್ವರ ಕೆರೆ ಬರಿದಾಗಿ, ಸುತ್ತಲಿನ ಸಾವಿರಾರು ಎಕರೆ ಕೃಷಿ ಭೂಮಿ ನೀರಾವರಿ ಸೌಲಭ್ಯದಿಂದ ವಂಚಿತವಾಗುತ್ತಿದೆ. ಇದರಿಂದ ರೈತರು ವರ್ಷಕ್ಕೆ ಒಂದೇ ಬೆಳೆ ಬೆಳೆಯುಂತಾಗಿದೆ. ಎರಡು ವರ್ಷಗಳ ಹಿಂದೆ ಈ ಕೆರೆಯ ಸುತ್ತಲೂ ಒಣಗಿದ್ದ ಅಡಕೆ ತೋಟಗಳನ್ನು ವೀಕ್ಷಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ತ ಪರಿಹಾರದ ಭರವಸೆ ನೀಡಿದ್ದರು.

    ಶಿವಮೊಗ್ಗ ಜಿಲ್ಲೆಯಿಂದ ಹರಿಯುವ ವರದಾ ನದಿಯು ಹಾವೇರಿ ಜಿಲ್ಲೆ ಮೂಲಕ ಬಳ್ಳಾರಿ ಜಿಲ್ಲೆಗೆ ಸಾಗುತ್ತದೆ. ಅಕ್ಕಿಆಲೂರಿನಿಂದ 7 ಕಿಲೋ ಮೀಟರ್ ದೂರದ ಮಲಗುಂದ ಗ್ರಾಮದ ಬಳಿ ಈ ನದಿ ಹರಿದುಹೋಗುತ್ತದೆ.

    ಮಲಗುಂದ ಗ್ರಾಮದ ಬಳಿ ವರದಾ ನದಿಯಿಂದ ಪೈಪ್​ಲೈನ್ ಮೂಲಕ 160 ಹೆಕ್ಟೇರ್ ವಿಸ್ತೀರ್ಣದ ಅಕ್ಕಿಆಲೂರ ಈಶ್ವರ ಕೆರೆಗೆ ನೀರು ಹರಿಸುವ ಅಕ್ಕಿಆಲೂರ ಏತ ನೀರಾವರಿ ಯೋಜನೆ ಜಾರಿಗೊಳಿಸಿದರೆ ಈ ಭಾಗದ ರೈತರು ವರ್ಷಪೂರ್ತಿ ಕೃಷಿ ಚಟುವಟಿಕೆ ನಡೆಸಬಹುದು. ಹಾನಗಲ್ಲ ತಾಲೂಕಿನ ಒಟ್ಟು 49100 ಹೆಕ್ಟೇರ್ ಕೃಷಿ ಭೂಮಿ ಪೈಕಿ, ಅಕ್ಕಿಆಲೂರ ಹೋಬಳಿ ವ್ಯಾಪ್ತಿಯಲ್ಲಿರುವ 17800 ಹೆಕ್ಟೇರ್ ಕೃಷಿ ಮತ್ತು 3 ಸಾವಿರ ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಜಮೀನಿಗೆ ವರ್ಷಪೂರ್ತಿ ಇದರಿಂದ ನೀರಾವರಿ ಸೌಲಭ್ಯ ದೊರೆಯುತ್ತದೆ. ಅಲ್ಲದೆ, ರೈತರು ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸದೃಢಗೊಳ್ಳಬಹುದು. ಹೀಗಾಗಿ, ಶೀಘ್ರವೇ ಈ ಯೋಜನೆ ಅನುಷ್ಠಾನವಾಗಲಿ ಎಂಬುದು ಈ ಭಾಗದ ಸಾರ್ವಜನಿಕರ ಒತ್ತಾಸೆಯಾಗಿದೆ.

    ಅಕ್ಕಿಆಲೂರ ಏತ ನೀರಾವರಿ ಭವಿಷ್ಯದಲ್ಲಿ ನಮ್ಮ ವ್ಯವಸಾಯ ಜೀವನ ಉತ್ತಮಗೊಳಿಸಬಲ್ಲ ಯೋಜನೆ. ಶೀಘ್ರದಲ್ಲೇ ಅಕ್ಕಿಆಲೂರ ಏತ ನೀರಾವರಿ ಯೋಜನೆ ಜಾರಿಯಾಗಬೇಕು.
    | ಮಹೇಶ ವಿರುಪಣ್ಣವರ, ಅಕ್ಕಿಆಲೂರ ರೈತ ಸಂಘದ ಅಧ್ಯಕ್ಷ

    ಅಕ್ಕಿಆಲೂರ ಏತ ನೀರಾವರಿ ಯೋಜನೆ ಜಾರಿಗೆ ಈ ಹಿಂದೆಯೂ ಒತ್ತಾಯ ಕೇಳಿ ಬಂದಿತ್ತು. ವರದಾ ನದಿಯ ನೀರನ್ನು ಸದುಪಯೋಗ ಮಾಡಿಕೊಳ್ಳುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಶೀಘ್ರದಲ್ಲೇ ಯೋಜನೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.
    | ಸಿ.ಎಂ. ಉದಾಸಿ ಶಾಸಕ, ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts