More

  ಅಸ್ಪಶ್ಯತೆ ನಿವಾರಣೆಯಿಂದ ಸ್ವಾಸ್ಥ್ಯ ಸಮಾಜ

  ಐಮಂಗಲ: ಜಾತೀಯತೆ ನಿರ್ಮೂಲನೆ ಆಗದ ಹೊರತು ಸ್ವಾಸ್ಥೃ ಸಮಾಜ ನಿರ್ಮಾಣ ಅಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ ಹೇಳಿದರು.

  ಎಸ್ಸಿ, ಎಸ್ಟಿ ಸಮುದಾಯ ಮೇಲಿನ ದೌರ್ಜನ್ಯ ತಡೆ ಹಾಗೂ ಅಸ್ಪಶ್ಯತೆ ನಿವಾರಣೆ ಕುರಿತು ಹೋಬಳಿಯ ಮಲ್ಲಪ್ಪನಹಳ್ಳಿ ಹಾಗೂ ಐಮಂಗಲದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರಗೋಷ್ಠಿ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

  ಎಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಶ್ರೀಮಂತ-ಬಡವ, ದಲಿತ-ಶೋಷಿತ, ಮೇಲು-ಕೀಳು ಎಂಬ ಭಾವನೆ, ಉನ್ನತ-ಕನಿಷ್ಠ ಜಾತಿ ಎಂಬ ತಾರತಮ್ಯ ದೂರಾದರೆ ಅಸ್ಪಶ್ಯತೆ ನಿವಾರಣೆ ಸಾಧ್ಯವಾಗುತ್ತದೆ ಎಂದರು.

  ಡಾ.ಬಿ.ಆರ್.ಅಂಬೇಡ್ಕರ್, ಪ.ಜಾತಿ-ಪಂಗಡದವರಿಗೆ ಮಾತ್ರ ಅವಕಾಶ ಕಲ್ಪಿಸಲು ಸಂವಿಧಾನ ರಚಿಸಿಲ್ಲ. ಇದು ಸರ್ವ ಸಮುದಾಯದ ಆಸ್ತಿ. ಇದರಲ್ಲಿ ಎಲ್ಲರಿಗೂ ಸಮಾನ ಆದ್ಯತೆ ನೀಡಲಾಗಿದೆ. ಇಲ್ಲಿ ಶೋಷಿತರು, ಹಿಂದುಳಿದವರು ಎಂಬ ಯಾವುದೇ ಭೇದವಿಲ್ಲ ಎಂದು ತಿಳಿಸಿದರು.

  ಅಸ್ಪಶ್ಯತೆ ನಿವಾರಣೆಗಾಗಿ ಸರ್ಕಾರ ಎಸ್ಸಿ, ಎಸ್ಟಿ ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹಧನ, ಶಿಕ್ಷಣಕ್ಕೆ ಉತ್ತೇಜನ ನೀಡಲು ವಿದ್ಯಾರ್ಥಿ ವೇತನ, ಸರಳ ಸಾಮೂಹಿಕ ವಿವಾಹವಾದಲ್ಲಿ 10 ಜೋಡಿಗಳಿಗೆ ತಲಾ 50 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ದೊರೆತರೆ ಜಾತೀಯತೆ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದರು.

  ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ನಡೆಸಲಾಯಿತು. ಚನ್ನಗಿರಿಯ ವೆಂಕಟೇಶ್ ಹಾಗೂ ತಂಡದವರು ಬೀದಿ ನಾಟಕ ಪ್ರದರ್ಶಿಸಿದರು.

  ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಹರ್ತಿಕೋಟೆ ದಯಾನಂದ್, ಎಂ.ಡಿ.ಚಂದ್ರಶೇಖರ್, ಶ್ರೀಧರ್, ಕೇಶವಮೂರ್ತಿ, ಎಸ್.ಎಚ್.ನಾಗರಾಜ್, ಆಶಾಲತಾ, ಮಲ್ಲಪ್ಪನಹಳ್ಳಿ ಸಿದ್ದಪ್ಪ, ಅಭಿಷೇಕ್, ಪಿಡಿಒ ಚಿಕ್ಕಣ್ಣ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts