More

    ಅಕ್ರಮ ಮರಳುಗಾರಿಕೆ ಕಠಿಣ ಕ್ರಮ

    ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಕುಂದಾಪುರ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಕಟ್ಟುನಿಟ್ಟಿನ ತಪಾಸಣಾ ಕಾರ್ಯ ಕೈಗೊಳ್ಳುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದರು.
    ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಮರಳು ಸಮಸ್ಯೆ ಮತ್ತು ಕೋವಿಡ್-19 ಪ್ರಸ್ತುತ ಪರಿಸ್ಥಿತಿ ಕುರಿತ ಪರಿಶೀಲನಾ ಸಭೆ ನಡೆಸಿದರು.

    ಮರಳುಗಾರಿಕೆ ಪ್ರದೇಶಗಳ ಮೇಲೆ ದಿಢೀರ್ ದಾಳಿ ನಡೆಸಬೇಕು. ನಿರಂತರ ಪರಿಶೀಲನೆ ಮೂಲಕ ಅಕ್ರಮ ಮರಳು ಸಾಗಾಟ ತಡೆಯಬೇಕು. ಎಲ್ಲ ತಾಲೂಕುಗಳಲ್ಲಿ ತಂಡ ರಚಿಸುವಂತೆ ಹಾಗೂ ತಂಡದಲ್ಲಿ ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳನ್ನು ನಿಯೋಜಿಸುವಂತೆ ನಿರ್ದೇಶಿಸಿದರು. ಸಿಆರ್‌ಜಡ್‌ನಲ್ಲಿ ಮರಳು ಸಾಗಾಟಕ್ಕೆ ಸಂಬಂಧಿಸಿ ಯಾವುದೇ ವಾಹನ ಕಂಡುಬಂದಲ್ಲಿ ಕೂಡಲೇ ಮುಟ್ಟುಗೋಲು ಹಾಕಿಕೊಂಡು ಎಫ್‌ಐಆರ್ ದಾಖಲಿಸಬೇಕು. ಮರಳುಗಾರಿಕೆ ನಡೆಸಲು ಅನುಮತಿ ಪಡೆದು ನಿಯಮ ಉಲ್ಲಂಘಿಸಿರುವ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್, ಕುಂದಾಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು ಇದ್ದರು.

    ಶೇ.92 ಸೋಂಕಿತರು ಚೇತರಿಕೆ: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಚೇತರಿಕೆ ಪ್ರಮಾಣ ಶೇ.63 ಇದೆ. ಆದರೆ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ.92. ಸೋಂಕಿತರ ಮರಣ ಪ್ರಮಾಣ ರಾಜ್ಯದಲ್ಲಿ ಶೇ.1.6 ಇದ್ದರೆ, ಜಿಲ್ಲೆಯಲ್ಲಿ 0.2 ಇದೆ. ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಪರ್ಕದವರ ಟ್ರೇಸಿಂಗ್ ಕಾರ್ಯ ಉತ್ತಮವಾಗಿ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಕಾರ್ಯವನ್ನು ಮಹೇಶ್ವರ ರಾವ್ ಅಭಿನಂದಿಸಿದರು. ಜಿಲ್ಲೆಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 3 ಮಂದಿಯ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ. ಕ್ವಾರಂಟೈನ್ ಆ್ಯಪ್‌ನಲ್ಲಿ ದಾಖಲಿಸುವ ಕಾರ್ಯದಲ್ಲಿ ಜಿಲ್ಲೆಯಲ್ಲಿ ಶೇ.92 ಸಾಧನೆ ಮಾಡಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು. ಐಎಲ್‌ಐ ಮತ್ತು ಸಾರಿ ಪ್ರಕರಣಗಳ ಕುರಿತಂತೆ ಪ್ರತಿದಿನ ವರದಿ ಪಡೆಯಲಾಗುತ್ತಿದೆ, 13840 ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಪ್ರಸ್ತುತ 116 ಸಕ್ರಿಯ ಪ್ರಕರಣಗಳಿವೆ ಎಂದು ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಮಾಹಿತಿ ನೀಡಿದರು.

    ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ವರದಿ
    ಬಜೆ ಡ್ಯಾಂ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲು ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

    ಈ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಯಾಗಿ ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ಸ್ವರ್ಣ ನದಿ ಹೂಳೆತ್ತುವ ಸಂದರ್ಭ ಆಯಾ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಕೋವಿಡ್-19 ವಿಷಮ ಸ್ಥಿತಿ ಅವಧಿಯಲ್ಲಿ ಜಿಲ್ಲೆಯ ಎಲ್ಲ ನದಿಗಳ ಮರಳು ಕಾಯಲು ಸಾಧ್ಯವಿಲ್ಲ. ಅಧೀನದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದು, ಅವರಲ್ಲಿ ಯಾರು ಕರ್ತವ್ಯ ಲೋಪ ಮಾಡಿದ್ದಾರೋ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಮರಳು ಲೂಟಿ ಆರೋಪಿಗಳ ವಿರುದ್ಧ ಜಿಲ್ಲಾಡಳಿತವು ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. 5 ವಾಹನಗಳನ್ನು ವಶಪಡಿಸಿಕೊಂಡಿದ್ದು, ನಿರ್ಲಕ್ಷೃ ವಹಿಸಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು. ವಶಪಡಿಸಿಕೊಳ್ಳಲಾದ ಮರಳನ್ನು ಮತ್ತೆ ಕಳವು ಮಾಡಿ ಸಾಗಾಟಕ್ಕೆ ಪ್ರಯತ್ನಿಸಿದವರ ವಿರುದ್ಧ ಹಿರಿಯಡ್ಕ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲು ಮಾಡಲಾಗಿದೆ. ಲೋಕಾಯುಕ್ತ ತನಿಖೆಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts