More

    ತರಕಾರಿ ವಾಹನಗಳಲ್ಲಿ ಬಂದ್ರು 15,000 ಜನ!: ಮುಂಬೈನಿಂದ ಮಂಡ್ಯಕ್ಕೆ ಅಕ್ರಮ ವಲಸೆ

    ಮಾದರಹಳ್ಳಿ ರಾಜು ಮಂಡ್ಯ

    ಏಪ್ರಿಲ್ 6ರವರೆಗೂ ಹಸಿರು ವಲಯದಲ್ಲಿದ್ದ ಮಂಡ್ಯ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 8 ಕರೊನಾ ಪ್ರಕರಣಗಳು ವರದಿಯಾಗಿದ್ದು, ಈ ಬೆಳವಣಿಗೆ ಹಿಂದಿರುವ ಮುಂಬೈನ ನಂಟು ಬಯಲಾಗಿದೆ. ದೇಶದ ಅತಿ ಹೆಚ್ಚು ಸೋಂಕಿತರಿರುವ ಮುಂಬೈನಿಂದ ಏ.5ರ ಬಳಿಕ 15 ಸಾವಿರಕ್ಕೂ ಹೆಚ್ಚು ಜನರು ತಲಾ 8ರಿಂದ 10 ಸಾವಿರ ರೂ. ಕೊಟ್ಟು ಹಾಲು, ಸೊಪು್ಪ, ತರಕಾರಿ, ಆಹಾರ ಪದಾರ್ಥ ಒಯ್ಯುವ ವಾಹನಗಳನ್ನೇರಿ ಮಂಡ್ಯಕ್ಕೆ ಬಂದಿದ್ದಾರೆಂಬ ಅಂಶ ಬೆಳಕಿಗೆ ಬಂದಿದೆ.

    ವಾಣಿಜ್ಯ ನಗರಿ ಮುಂಬೈನಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್. ಪೇಟೆ, ಮೇಲುಕೋಟೆ ಹಾಗೂ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸೇರಿ ಹಲವು ತಾಲೂಕುಗಳ ಸಾವಿರಾರು ಜನರು ವಿವಿಧ ಉದ್ಯಮ, ಉದ್ಯೋಗ

    ಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಕರೊನಾ ಹಿನ್ನೆಲೆ ಯಲ್ಲಿ ದೇಶಾದ್ಯಂತ ಲಾಕ್​ಡೌನ್ ಘೋಷಣೆ ಗೊಂಡ ಬಳಿಕ ಆರಂಭದಲ್ಲಿ ತಮ್ಮ ತಮ್ಮ ವಾಹನ ಹಾಗೂ ಇತರ ವಾಹನಗಳ ಮೂಲಕ ಜಿಲ್ಲೆಯ ಜನತೆ ಮುಂಬೈನಿಂದ ವಾಪಸಾಗಿ ಊರು ಸೇರಿಕೊಂಡಿದ್ದರು. ಆದರೆ ಮುಂಬೈನಲ್ಲಿ ಸೋಂಕು ಆರ್ಭಟಿಸಿ ಲಾಕ್​ಡೌನ್ ಬಿಗಿಗೊಂಡ ಬಳಿಕ ಉಳಿದವರೂ ತವರೂರಿಗೆ ತೆರಳಲು ಹಲವು ವಾಮಮಾರ್ಗ ಬಳಸಿಕೊಂಡಿದ್ದಾರೆ.

    ಅದಕ್ಕೆ ಮುಖ್ಯವಾಗಿ ಸಿಕ್ಕ ಅವಕಾಶ ಹಾಲು ಹಾಗೂ ಸೊಪ್ಪು, ತರಕಾರಿ, ಆಹಾರ ಪದಾರ್ಥಗಳನ್ನು ಒಯ್ಯುವ ವಾಹನಗಳು. ಆಹಾರ ಪದಾರ್ಥಗಳನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಗಿಸಬಹುದೆಂಬ ಅನುಮತಿ ಸಿಕ್ಕಿದ ಬಳಿಕ ಅನೇಕರು 8000 ದಿಂದ 10 ಸಾವಿರ ರೂ.ವರೆಗೆ ದುಡ್ಡುಕೊಟ್ಟು ಹಿಂದಿರುಗಿದ್ದಾರೆಂಬ ಮಾತುಗಳು ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಮೇಲುಕೋಟೆ ವ್ಯಾಪ್ತಿಯಲ್ಲಿ ಕೇಳಿಬರುತ್ತಿವೆ. ಪಾಂಡವಪುರ ಉಪವಿಭಾಗಕ್ಕೆ 15ಸಾವಿರಕ್ಕೂ ಹೆಚ್ಚು ಜನ ಬಂದಿರುವುದು ಆಶಾ ಕಾರ್ಯಕರ್ತರ ಮನೆ ಮನೆ ಸಮೀಕ್ಷೆಯಿಂದ ಗೊತ್ತಾಗಿದೆ ಎಂದು ಇತ್ತೀಚೆಗೆ ಉಪವಿಭಾಗಾಧಿಕಾರಿ ಶೈಲಜಾ ಹೇಳಿದ್ದರು.

    ಈಚೆಗೆ ಜಿ.ಪಂ.ನಲ್ಲಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ನಾಗಮಂಗಲ ಶಾಸಕ ಸುರೇಶ್ ಗೌಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.

    2 ಸಾವಿರ ರೂ.ಗೆ ಪಾಸ್!: ಜಿಲ್ಲೆಯಲ್ಲಿ ಪಾಸ್ ಕೊಡಿಸುವ ಏಜೆಂಟ್​ಗಳು ಸಕ್ರಿಯರಾಗಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ‘ವಿಜಯವಾಣಿ’ ರಿಯಾಲಿಟಿ ಚೆಕ್ ಮಾಡಿದಾಗ ವ್ಯಕ್ತಿಯೊಬ್ಬರು 2 ಸಾವಿರ ರೂ. ಕೊಟ್ಟರೆ ಪಾಸ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ನಮ್ಮ ಹೆಸರಿನಲ್ಲಿ ಕಾರು ಇಲ್ಲ, ಬೇರೆಯವರ ಹೆಸರಿಗೆ ಕೊಡಿಸಿ ಎಂದಾಗ, ‘ಡಬಲ್ ಬಾಡಿಗೆ ಕೊಟ್ಟರೆ ಸಾಕು, ನಾವೇ ನೀವು ಹೋಗಬೇಕಾದ ಜಾಗಕ್ಕೆ ಬಿಡುತ್ತೇವೆ’ ಎಂದು ಹೇಳಿದ್ದರು. ಬಳಿಕ ಅನುಮಾನ ಬಂದು ಸಂಪರ್ಕ ಕಡಿತಗೊಳಿಸಿದ್ದರು.

    ಪ್ರವೇಶ ಹೇಗೆ?

    ರಾಜ್ಯದಿಂದ ಆಹಾರ ಪದಾರ್ಥಗಳನ್ನು ತುಂಬಿಕೊಂಡು ಹೋಗುವ ವಾಹನಗಳಲ್ಲಿ ಚಾಲಕನಿಗಷ್ಟೇ ಅವಕಾಶವಿತ್ತು. ಇವರು ಜತೆಯಲ್ಲಿ ಕೊಳೆಬಟ್ಟೆಗಳನ್ನು ಒಯ್ಯುತ್ತಿದ್ದರು. ಅಲ್ಲಿ ತಮ್ಮ ಗ್ರಾಮಗಳಿಗೆ ವಾಪಸಾಗಬೇಕೆಂದಿರುವವರನ್ನು ಪತ್ತೆ ಹಚ್ಚಿ ಡೀಲ್ ಕುದುರಿಸಿ ಅವರಿಗೆ ಕೊಳೆಬಟ್ಟೆಗಳನ್ನು ಹಾಕಿಸಿ, ತಮ್ಮ ವಾಹನಗಳಲ್ಲಿ ಹತ್ತಿಸಿಕೊಳ್ಳುತ್ತಿದ್ದರು. ಚೆಕ್​ಪೋಸ್ಟ್​ಗಳಲ್ಲಿ ಕೇಳಿದರೆ ಕ್ಲೀನರ್, ತರಕಾರಿ ಬೆಳೆದಿದ್ದ ರೈತರು, ಕೂಲಿ ಕಾರ್ವಿುಕರು ಎಂದು ಹೇಳಿ, ‘ಕೈ ಬಿಸಿ’ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಹಾಲಿನ ಟ್ಯಾಂಕರ್​ಗಳಲ್ಲೂ ಹಲವರನ್ನು ಕರೆತಂದಿದ್ದಾರೆ. ಚೆಕ್​ಪೋಸ್ಟ್ ಗಳಲ್ಲಿ ಬಂದೋಬಸ್ತ್ ಇರದ ಸಮಯ ನೋಡಿಕೊಂಡು ಪಾರಾಗಿ ಬರುತ್ತಿದ್ದರು ಎನ್ನಲಾಗಿದೆ.

    ಹಲವು ಸಾಕ್ಷಿ

    ಚೆಕ್​ಪೋಸ್ಟ್​ಗಳಲ್ಲಿ ಭದ್ರತೆ ಇರಲಿಲ್ಲ ಎಂಬುದಕ್ಕೆ ಹಲವು ಘಟನೆಗಳು ಸಾಕ್ಷಿಯಾಗಿವೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡಿದ್ದ ಯುವತಿಯರ ಬಳಿ ಇದ್ದ ಪಾಸ್​ಗಳು ಮಂಡ್ಯ ಜಿಲ್ಲೆಯಿಂದ ಪಡೆದಿದ್ದವೆಂಬುದು ಗಮನಾರ್ಹ.

    ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ: ಮಾರಾಟಕ್ಕೆ ಸಿಕ್ತು ಪರ್ಮಿಷನ್; ಹಾಗಾದ್ರೆ ಯಾವಾಗಿಂದ ಶುರುವಾಗ್ತವೆ ಮದ್ಯದಂಗಡಿಗಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts