More

    ಹಲಗೇರಿಯಲ್ಲಿ ಮತ್ತೆ ಅಕ್ರಮ ಮದ್ಯ ಮಾರಾಟ

    ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

    ತಾಲೂಕಿನ ಹಲಗೇರಿ ಗ್ರಾಮ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಅಕ್ರಮ ಮದ್ಯ ಮಾರಾಟ ದಂಧೆ ಹೆಚ್ಚುತ್ತಿದ್ದು, ಕಳೆದ ನಾಲ್ಕು ತಿಂಗಳಿಂದ ಹಿಡಿತಕ್ಕೆ ಬಂದಿದ್ದ ದಂಧೆ ಇದೀಗ ಮತ್ತೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

    ಇದಕ್ಕೆ ಸಾಕ್ಷಿಯಂಬಂತೆ ಬುಧವಾರ ಒಂದೇ ದಿನ 20 ಸಾವಿರ ರೂ. ಮೌಲ್ಯದ 180 ಎಂ.ಎಲ್.ನ 37 ಪ್ಯಾಕೆಟ್, 90 ಎಂ.ಎಲ್.ನ 136 ಪ್ಯಾಕೆಟ್ ಮದ್ಯ, 48 ಬಿಯರ್ ಬಾಟಲ್, 36 ಬಿಯರ್ ಟಿನ್ ಬಾಟಲ್​ಗಳನ್ನು ಹಲಗೇರಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ನಿಟಪಳ್ಳಿ ಗ್ರಾಮದ ನಾಗರಾಜ ಉಜ್ಜಪ್ಪ ಗೊಂದಳೆ (40) ಎಂಬುವರು ಗ್ರಾಮದ ರಸ್ತೆ ಬದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. ಆರೋಪಿ ನಾಪತ್ತೆಯಾಗಿದ್ದಾನೆ.

    ಹಲಗೇರಿ ಪೊಲೀಸ್ ಠಾಣೆಯಲ್ಲಿ ಈ ಹಿಂದಿದ್ದ ಪಿಎಸ್​ಐ ಸಿದ್ಧಾರೂಢ ಬಡಿಗೇರ ಠಾಣೆ ವ್ಯಾಪ್ತಿಯಲ್ಲಿ ಬರುವ 52 ಗ್ರಾಮಗಳನ್ನು ಮದ್ಯ ಮುಕ್ತಗೊಳಿಸಲು ಪಣ ತೊಟ್ಟಿದ್ದರು. ಆದರೆ, ಅಕ್ರಮ ಮದ್ಯ ಮಾರಾಟಗಾರರು ಅವರನ್ನೇ ಎತ್ತಂಗಡಿ ಮಾಡಿಸಿದರು. ಇದರಿಂದಾಗಿ ಹಲಗೇರಿ ಠಾಣೆ ವ್ಯಾಪ್ತಿಯ ಗ್ರಾಮಗಳನ್ನು ಮದ್ಯ ಮುಕ್ತ ಮಾಡುವ ಕನಸು ಭಗ್ನವಾದಂತಾಗಿದೆ.

    ಇಷ್ಟೊಂದು ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವಾಗಿದೆ.

    ಈ ಹಿಂದಿದ್ದ ಪಿಎಸ್​ಐ ಸಿದ್ಧಾರೂಢ ಬಡಿಗೇರ ಅಕ್ರಮ ಮದ್ಯ ಮಾರಾಟ ಬಂದ್ ಮಾಡಿ ಹಾಗೂ ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಿ ಅನುಕೂಲ ಮಾಡಿಕೊಟ್ಟಿದ್ದರು. ಆದರೆ, ಅಕ್ರಮ ಮದ್ಯ ಮಾರಾಟಗಾರರು ಪಿಎಸ್​ಐ ಅವರನ್ನು ವರ್ಗಾವಣೆ ಮಾಡಿಸಿದರು. ಈಗ ಹೊಸದಾಗಿ ಬಂದಿರುವ ಪಿಎಸ್​ಐ ಅವರಾದರೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

    | ರೇಣುಕಾ ಎಸ್., ಬೆನಕನಕೊಂಡ ಗ್ರಾಮಸ್ಥೆ

    ಅಕ್ರಮ ಮದ್ಯ ಮಾರಾಟ ಮೊದಲು ಬಂದ್ ಮಾಡುತ್ತಿದ್ದೇವೆ. ನಂತರದಲ್ಲಿ ಅಬಕಾರಿ ಇಲಾಖೆಯವರು ನಾವು ಸೇರಿ ಮದ್ಯ ಮುಕ್ತ ಗ್ರಾಮ ಮಾಡುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತೇವೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು.

    | ಮಂಜುನಾಥ ಕುಪ್ಪೇಲೂರ, ಪಿಎಸ್​ಐ ಹಲಗೇರಿ ಠಾಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts