More

    ಅಕ್ರಮಗಳಿಗೆ ಬೇಕು ಕಡಿವಾಣ

    ಚುನಾವಣೆಗಳು ರಾಜಕೀಯ ಶುದ್ಧೀಕರಣದ ಮಾಧ್ಯಮಗಳಾಗಬೇಕೆ ಹೊರತು ಅಕ್ರಮ, ಅನೀತಿಯ ಸಾಧನಗಳಲ್ಲ. ಭಾರತ ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಸಾರ್ವತ್ರಿಕ ಚುನಾವಣೆಗಳ ಮೇಲೆ ಜಗತ್ತಿನ ಗಮನವಿರುತ್ತದೆ. ಈ ಬಾರಿಯಂತೂ, ಏಪ್ರಿಲ್​ನಿಂದ ಜೂನ್​ವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಪ್ರಕ್ರಿಯೆ ಆರಂಭವಾಗಿದ್ದು, ಪ್ರಚಾರ ಈಗಷ್ಟೇ ರಂಗೇರುತ್ತಿದೆ. ಕೆಲ ರಾಜ್ಯಗಳಲ್ಲಿ ಎರಡೇ ಹಂತಗಳಲ್ಲಿ ಮತದಾನ ಮುಗಿದರೆ, ಇನ್ನು ಹಲವು ರಾಜ್ಯಗಳಲ್ಲಿ ಏಳೂ ಹಂತಗಳಲ್ಲಿ ಮತದಾನ ನಡೆಯಲಿದೆ. ನೀತಿಸಂಹಿತೆ ಈಗಾಗಲೇ ಜಾರಿಯಲ್ಲಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಮತದಾರರನ್ನು ಒಲೈಸಲು ರಾಜಕೀಯ ಪಕ್ಷಗಳು ಆಮಿಶ ಒಡ್ಡುವುದು, ಅಡ್ಡಮಾರ್ಗಗಳನ್ನು ಅನುಸರಿಸುವುದು ಸರಿಯಲ್ಲ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ 79 ಸಾವಿರ ಪ್ರಕರಣಗಳು ಸಿ ವಿಜಿಲ್ ಆಪ್ ಮೂಲಕ ದಾಖಲಾಗಿದ್ದು, ಈ ಸಂಖ್ಯೆ ಗಾಬರಿ ಹುಟ್ಟಿಸುವಂತಿದೆ. ಮಾರ್ಚ್ ಅಂತ್ಯದೊಳಗೆ ಇಷ್ಟೊಂದು ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗಿರುವುದನ್ನು ನೋಡಿದರೆ, ರಾಜಕೀಯ ಪಕ್ಷಗಳು ಚುನಾವಣೆ ನೀತಿಸಂಹಿತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಸ್ಪಷ್ಟ.

    ನ್ಯಾಯಯುತ ಚುನಾವಣೆಗೆ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಒತ್ತು ನೀಡಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವದ ಆಶಯಕ್ಕೆ, ಜನರ ವಿಶ್ವಾಸಕ್ಕೆ ಧಕ್ಕೆ ಒದಗುತ್ತದೆ. ನಗದು ಹಣ, ಚಿನ್ನ, ಬೆಳ್ಳಿ, ಸೀರೆ, ಉಡುಗೊರೆಯ ಇತರ ವಸ್ತುಗಳು ಕಾರ್ಯಾಚರಣೆಯಲ್ಲಿ ಪತ್ತೆಯಾಗುತ್ತಿವೆ. ಎಲ್ಲ ಪಕ್ಷಗಳು ಸ್ಪರ್ಧೆಗೆ ಬಿದ್ದವರಂತೆ ನೀತಿಸಂಹಿತೆ ಉಲ್ಲಂಘಿಸುತ್ತಿರುವುದು ಶೋಚನೀಯ. ಪ್ರಚಾರ ಸೇರಿದಂತೆ ಯಾವುದಕ್ಕೆ ಎಷ್ಟು ವೆಚ್ಚ ಮಾಡಬೇಕು ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಹೀಗಿದ್ದರೂ, ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಏಕೆ? ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ರಾಜಕೀಯ ಪಕ್ಷಗಳು ಬದ್ಧತೆ ತೋರಬೇಕಿದೆ. ಈ ಮಧ್ಯೆ, ಚುನಾವಣಾ ಆಯೋಗ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಕೆಲವು ಅಮಾಯಕರು ಕೂಡ ಈ ಸಂಬಂಧದ ತಪಾಸಣೆಯಲ್ಲಿ ಸಿಕ್ಕಿಬಿದ್ದು ಒದ್ದಾಡುವ ಸನ್ನಿವೇಶಗಳು ಕಂಡುಬರುತ್ತಿವೆ. ಅಂಥ ಸನ್ನಿವೇಶಗಳಲ್ಲಿ ಅಧಿಕಾರಿಗಳು ಸಹಾನುಭೂತಿಯ ವರ್ತನೆ ತೋರುವುದು ಅಗತ್ಯ. ನಿರಪರಾಧಿಗಳು, ಅಮಾಯಕರು ಅನವಶ್ಯಕ ತೊಂದರೆಗೆ ಸಿಲುಕದಂತೆ ನೋಡಿಕೊಳ್ಳುವುದು ವ್ಯವಸ್ಥೆಯ ಜವಾಬ್ದಾರಿಯೂ ಹೌದು.

    ಅಲ್ಲದೆ, ಪ್ರಚಾರದ ಸಂದರ್ಭಗಳಲ್ಲಿ ಮಾತು ಸಭ್ಯತೆಯ ಗಡಿ ದಾಟುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ವೈಯಕ್ತಿಕ ಟೀಕೆ, ಆಧಾರವಿಲ್ಲದ ಆರೋಪಗಳು ಸೇರಿದಂತೆ ವಿವಾದಿತ ಹೇಳಿಕೆಗಳು ಮಾರ್ದನಿಸುತ್ತಿದ್ದು, ಇದರಿಂದ ರಾಜಕೀಯ ನಾಯಕರ ವರ್ಚಸ್ಸು ಕಡಿಮೆಯಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ವಿವಾದ ಸೃಷ್ಟಿಸುವ ಹೇಳಿಕೆಗಳಿಂದ ಜನರ ಮನಸ್ಸನ್ನು ಗೆಲ್ಲಲು, ಮತಗಳನ್ನು ಸೆಳೆಯಲು ಸಾಧ್ಯವಿಲ್ಲ. ವಿಷಯಾಧಾರಿತ ಮಾತು, ಪ್ರಚಾರಕ್ಕೆ ಆದ್ಯತೆ ನೀಡುವುದು ಅವಶ್ಯ. ಈ ವಿವೇಚನೆಯನ್ನು ಎಲ್ಲ ರಾಜಕಾರಣಿಗಳು ಪ್ರದರ್ಶಿಸಬೇಕಿದೆ.

    ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts